ರಥಸಪ್ತಮಿ
ರಥಸಪ್ತಮಿ ಭಾರತೀಯರಿಗೆ ಒಂದು ಪ್ರಮುಖ ಹಬ್ಬ . ಇದುಮಾಘ ಮಾಸದ ಶುಕ್ಲ ಸಪ್ತಮಿಯಂದು ಬರುತ್ತದೆ . ಈ ವರ್ಷ ಫೆಬ್ರವರಿ ೩ ರಂದು ಆಚರಿಸಲಾಗುತ್ತದೆ . ಇದನ್ನು ಸೂರ್ಯನ ಜನ್ಮದಿನವೆಂದು , ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ . ಸೂರ್ಯನು ಅದಿತಿ , ಕಶ್ಶ್ಯಪರ ಮಗನೆಂದು ಆದಿತ್ಯ ಎಂಬ ಹೆಸರಿನಿಂದ ಕರೆಯುತ್ತಾರೆ . ರಥಸಪ್ತಮಿ ಋತು ಪರಿವರ್ತನೆಯ ಪರ್ವಕಾಲವೂ ಕೂಡ . ಹೇಮಂತ ಋತು ಮುಗಿದು ಶಿಶಿರ ಋತುವಿನ ಆರಂಭ . ರೈತರಿಗೆ ನೂತನ ವರ್ಷಾರಂಭ ಕೂಡ . ಸೂರ್ಯನ ರಥಕ್ಕೆ ೭ ಕುದುರೆಗಳು ಮತ್ತು ೧೨ ಚಕ್ರಗಳು .ಇವು ವಾರದ ೭ ದಿನಗಳ ಮತ್ತು ೧೨ ತಿಂಗಳ ಸಂಕೇತ. ಏಳು ಕುದುರೆಗಳು ಏಳು ಬಣ್ಣಗಳನ್ನುಸೂಚಿಸುತ್ತದೆ. ಏಳು ಬಣ್ಣಗಳ ಮಿಲನ ಬಿಳಿಯ ಬಣ್ಣ. ೧೨ ತಿಂಗಳುಗಳು ೧೨ ರಾಶಿಗಳನ್ನು ತಿಳಿಸುತ್ತದೆ. ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯನ್ನು ಪ್ರವೇಶಿಸುತ್ತಾನೆ . ಸೂರ್ಯನ ಜನ್ಮ ಸ್ಥಾನ ಸಿಂಹರಾಶಿ . ರಥಸಪ್ತಮಿ ಮುಂಬರುವ ಬೇಸಿಗೆ ಕಾಲವನ್ನು ಸೂಚಿಸುತ್ತದೆ. ಸೂರ್ಯನ ಪೂಜೆ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ. ವಿಪ್ರರು ಸೂರ್ಯನ ಕುರಿತಾದ ಗಾಯತ್ರಿ ಜಪವನ್ನು ಪ್ರತಿನಿತ್ಯ ತ್ರಿಕಾಲದಲ್ಲಿ ಜಪಿಸುತ್ತಾರೆ. ಈ ಮಂತ್ರ ಸಕಲ ರೋಗ ನಿವಾರಕ,ಭಯ ನಿವಾರಕ ಮತ್ತು ಪಾಪ ಪರಿಹಾರವೆಂದು ನಂಬಲಾಗಿದೆ. ಸೂರ್ಯನ ಕುರಿತಾದ ಅತಿ ಪ್ರಸಿದ್ಧವಾದ ಸ್ತೋತ್ರವೆಂದರೆ ಅಗಸ್ತ್ಯ ಮುನಿ ಪ್ರಣೀತವಾದ ಆದಿತ್ಯಹೃದಯ ಸ್ತೋತ್ರ.
ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಂ ,
ಜಯಾವಹಂ ಜಪೇನ್ನಿತ್ಯಮ್ ಅಕ್ಶಯಮ್ ಪರಂ ಶಿವಂ
ಸರ್ವ ಮಂಗಳ ಮಾಂಗಲ್ಯಮ್ ಸರ್ವ ಪಾಪ ಪ್ರಣಾಶನಂ
ಚಿಂತಾಶೋಕ ಪ್ರಶಮನಂ ಆಯುರ್ವರ್ಧನಂ ಉತ್ತಮಮ್
ಎಂದು ಸ್ತುತಿಸಲಾಗುತ್ತದೆ .
ಸೂರ್ಯನ ದೇವಾಲಯಗಳು ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ಕಾಣ ಸಿಗುತ್ತದೆ. ಆದರೆ ಕೋನಾರ್ಕ್ ನಲ್ಲಿರುವ ಸೂರ್ಯ ದೇವಾಲಯ ಅತಿ ಪ್ರಸಿದ್ಧವಾದದ್ದು . ಇಲ್ಲಿ ಕಾಣಸಿಗುವ ಕಲಾಕೃತಿಗಳು ವಿಶ್ವಪ್ರಸಿದ್ಧ . ದೇವಾಲಯದ ರಚನೆ ಸೂರ್ಯನ ಗತಿಯನ್ನು ನಿಖರವಾಗಿ ಸೂಚಿಸುತ್ತದೆ.
ಸೂರ್ಯನನ್ನು ವಿಷ್ಣು ಸ್ವರೂಪವೆಂದು ಸೂರ್ಯ ನಾರಾಯಣನೆಂದೂ ಪೂಜಿಸುತ್ತಾರೆ. ದೇವಾಲಯಗಳಲ್ಲಿ ರಥ ಸಪ್ತಮಿಯಂದು ಸೂರ್ಯ ಪ್ರಭ ವಾಹನ ಉತ್ಸವ ನಡೆಸಲಾಗುತ್ತದೆ. ಕಳಲೆಯಲ್ಲಿಯೂ ಅಂದು ಸೂರ್ಯ ಮಂಡಲ ಉತ್ಸವ ನಡೆಯುತ್ತದೆ.
ಮಾಘ ಕೃಷ್ಣ ಚತುರ್ದಶಿಯನ್ನು ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಇದು ಫೆಬ್ರವರಿ ೨೪ ರಂದು ಬರುತ್ತದೆ.
ಶ್ರೀನಿವಾಸ ಪ್ರಸಾದ್ .ಕೆ ವಿ.
No comments:
Post a Comment