Thursday, April 20, 2017

ಸನ್ಮಾನ ಪತ್ರ  


ಭಗವಾನ್ ರಾಮಾನುಜರ ನಂತರ ಪ್ರಖ್ಯಾತರಾದವರು ಸ್ವಾಮಿ ವೇದಾಂತ ದೇಶಿಕರು ಅಥವಾ ವೆಂಕಟನಾಥರು . ರಾಮಾನುಜರ ತತ್ವ ಪ್ರತಿಪಾದನೆಗಾಗಿ ಸುಮಾರು ೧೦೦ ಕೃತಿಗಳನ್ನು ರಚಿಸಿ ಕವಿಸಿಂಹ ಎಂದು ಪ್ರಖ್ಯಾತರಾದವರು . ಸಂಸ್ಕೃತ ಮತ್ತು ತಮಿಳಿನಲ್ಲಿ ರಚನೆಗಳನ್ನು ಮಾಡಿ ಉಭಯವೇದಾಂತ ಪ್ರವರ್ತಕರೆನಿಸಿಕೊಂಡವರು . ಇವರು ಜನಿಸಿ ಸುಮಾರು ೭೫೦ ವರುಷಗಳೇ ಆದರೂ ಇಂದಿಗೂ ಅವರ ರಚನೆಗಳು ಅಜರಾಮರಗಳಾಗಿವೆ . ದೇಶಿಕರ  ಕೈಂಕರ್ಯಗಳನ್ನು ಅನವರತ ನಡೆಸಿಕೊಂಡು ಬರಲು ೧೯೧೭ ರಲ್ಲಿ ಸ್ಥಾಪಿತವಾದ ಸಂಸ್ಥೆ ಮೈಸೂರಿನ ವೆಂಕಟೇಶ ಸಭೆ. ವಿದ್ವಾನ್ ಕಳಲೆ ಶ್ರೀನಿವಾಸ ಅಯ್ಯಂಗಾರ್ಯರಿಂದ ಆರಂಭವಾದ ಸಂಸ್ಥೆ ಇಂದಿಗೂ ಮೈಸೂರಿನ ಅರಮನೆ ದೇವಸ್ಥಾನಗಳಲ್ಲಿ ದೇಶಿಕರ ಜನ್ಮ ದಿನವನ್ನು ಕೊಂಡಾಡುತ್ತಾ ಬಂದಿದೆ . 
ತೊಡಕಾ, ವೇದ ಪಾರಾಯಣ ,ಗಂಧಹುಡಿ ಉತ್ಸವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ . ಕೆಲವು ವರ್ಷಗಳಿಂದ ಪುಸ್ತಕ ಪ್ರಕಾಶನ ಉಪನ್ಯಾಸ ಮತ್ತು ಚಿಣ್ಣರಿಗಾಗಿ ಸ್ತೋತ್ರ ಪಾಠ ಸ್ಪರ್ಧೆ ಗಳನ್ನೂ ನಡೆಸುತ್ತಾ ಬಂದಿದೆ . ಕಳೆದ ಸಂವತ್ಸರದಿಂದ  ವೇದ ವಿದ್ವಾಂಸರ ಸನ್ಮಾನ ಕಾರ್ಯಕ್ರಮವನ್ನೂ ಆರಂಭಿಸಿದೆ . 

ಈ ಸಂವತ್ಸರ ಸನ್ಮಾನಿತರಾಗುವವರು ವೇದ ವಿದ್ವಾಂಸರಾದ ,ಪಂಡಿತ ಮಣಿ,ಶಾಸ್ತ್ರ ಕಲಾಧಾರ, ವೇದಶಾಸ್ತ್ರ ವಿಶಾರದ,ವಿದ್ಯಾ ವಾಚಸ್ಪತಿ ಮುಂತಾದ ಬಿರುದಾಂಕಿತರಾದ ಚಕ್ರವರ್ತಿ ಶ್ರೀನಿವಾಸಾಚಾರ್ ಗೋಪಾಲಾಚಾರ್ . ೧೯೨೭ ರಲ್ಲಿ ಹೆಡತಲೆ ಶ್ರೀನಿವಾಸಾಚಾರ್ ಮತ್ತು ಲಕ್ಷ್ಮಮ್ಮ ದಿವ್ಯ ದಂಪತಿಗಳಿಗೆ ಜನಿಸಿದ ಇವರು ತಮ್ಮ ವಿದ್ವತ್ತನ್ನು ಬೆಂಗಳೂರಿನ ಸಂಸ್ಕೃತ ಕಾಲೇಜಿನಿಂದ ಪಡೆದರು.ಯಜುರ್ವೇದ ,ಪ್ರಶ್ನ ,ಸೂಕ್ತಗಳನ್ನು ವಿದ್ವಾನ್ ಸ್ವಚ್ಛಂದಮ್ ಅನಂತಾಚಾರ್ಯರಿಂದ ಅಭ್ಯಸಿಸಿದ್ದಾರೆ.  ಉಪನ್ಯಾಸ ವೃತ್ತಿಯಲ್ಲಿ ಸುಮಾರು ಮೂರು ದಶಕ ಗಳಿಗಿಂತಲೂ ಹೆಚ್ಚು ಸೇವೆಸಲ್ಲಿಸಿದ್ದಾರೆ .ತಮ್ಮ ನಿವೃತ್ತಿಯ ನಂತರವೂ ಅನೇಕ ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯೆಯನ್ನು ಧಾರೆ  ಎರೆದಿದ್ದಾರೆ . ಪೌರೋಹಿತ್ಯ ವೃತ್ತಿಯಲ್ಲಿಯೂ ತೊಡಗಿಸಿಕೊಂಡ ಇವರು ತಮ್ಮ ೮೯ ನೇ ವಯಸ್ಸಿನಲ್ಲಿಯೂ ವಿದ್ಯಾ ಪ್ರಸಾರಕ್ಕೆ ಅನವರತ ಶ್ರಮಿಸುತ್ತಿದ್ದಾರೆ . 

ಇಂತಹ ವಿದ್ವನ್ಮಣಿ ಯನ್ನು ವೇದಾಂತ ದೇಶಿಕರ ಜನ್ಮದಿನದವಸರದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯೆನಿಸಿದೆ. ಭಗವಂತನು ಇವರಿಗೆ ಆಯುರಾರೋಗ್ಯವನ್ನು ದಯಪಾಲಿಸಲಿ ಎಂಬುದೇ ನಮ್ಮ ಹಾರೈಕೆ . 

No comments:

Post a Comment