Tuesday, April 25, 2017


ನನ್ನ ಜೀವನ ಚರಿತೆ ಭಾಗ ೫

ಆಸ್ತಿ ವಿಭಜನೆ ಎಂಬುದು ತುಂಬಾ ದುಃಖಕರವಾದದ್ದು .ಆದರೆ ಅನಿವಾರ್ಯವಾಗಿತ್ತು . ಒಂದು ಕಡೆ ಲಕ್ಷಗಟ್ಟಲೆ ಸಾಲ . ಮತ್ತೊಂದೆಡೆ ತಮ್ಮನ ಬೇಜವಾಬ್ಧಾರಿ . ತಮ್ಮನಾದರೋ ನಮ್ಮ ತಂದೆ ೧೯೭೦ರಲ್ಲಿ ಆರಂಭಿಸಿದ್ದ ಸುಧರ್ಮಾ ಪತ್ರಿಕೆಗೆ ಸಂಪಾದಕನಾಗಿ ಸ್ವಯಂ ಘೋಷಿಸಿಕೊಂಡಿದ್ದ . ಮುದ್ರಣಾಲಯವನ್ನು ತನ್ನದೆಂದು ಘೋಷಿಸಿಕೊಂಡಿದ್ದ . ಸಾಲ ಮಾತ್ರ ನನ್ನ ಜವಾಬ್ಧಾರಿ ಎನ್ನುತ್ತಿದ್ದ . ತಂಗಿಯರು ಯಾರೂ ಸಹಾಯಕ್ಕೆ ಧಾವಿಸಲಿಲ್ಲ. ಮಧ್ಯೆ ನನ್ನ ತಮ್ಮನ ಮಡದಿಯ ಉಪದ್ರವ . ದಾರಿ ಕಾಣದಾಯಿತು. ನಾನು ದೂರದ ಮಂಗಳೂರಿನಲ್ಲಿದ್ದೆ . ಮನೆ ಶಿಥಿಲವಾಗಿತ್ತು ಮಳೆಯಲ್ಲಿ ಹಿಂದಿನ ಭಾಗ ಕುಸಿಯತೊಡಗಿತ್ತು. ಆದರೆ ತಂದೆಗೆ ಮಾತು ಕೊಟ್ಟಿದ್ದೆ. ತಮ್ಮನ ಜೀವನಕ್ಕೆ ಉಪಾಯ ಮಾಡುವೆನೆಂದು. ಅವನಿಗೆ ಕಂಪ್ಯೂಟರ್ ಉದ್ಯಮಕ್ಕೆ ಸಾಲ ಬ್ಯಾಂಕ್ನಿಂದ ಕೊಡಿಸಿದ್ದೆ. ಅವನ ಇತ್ತೀಚಿನ ಧೋರಣೆ ಭಯ ಮೂಡಿಸಿತ್ತು. ಆ ಸಾಲವು ನನ್ನ ತಲೆಯ ಮೇಲೆ ಬಂದರೆ ನನ್ನ ಮಕ್ಕಳ ಗತಿ ಏನು ಎಂಬ ಚಿಂತೆ ಕಾಡ ತೊಡಗಿತು. ತಂಗಿಯರೂ ಆಸ್ತಿ ವಿಭಜನೆಯೇ ಸೂಕ್ತ ಎಂದು ತಿಳಿಸಿ ಎಲ್ಲರೂ ಒಪ್ಪಿಗೆ ಕೊಟ್ಟರು.

ತಮ್ಮನ ಹಿತವನ್ನು ಗಮನದಲ್ಲಿರಿಸಿ ಒಪ್ಪಿದೆ. ಅವನ ಜೀವನಕ್ಕೆ ಅಗತ್ಯವಾದ ಮುದ್ರಣಾಲಯ,ಪತ್ರಿಕೆ ಎಲ್ಲವನ್ನೂ ತಮ್ಮನಿಗೇ ಬಿಟ್ಟುಕೊಟ್ಟು ಮನೆಯನ್ನು ಉತ್ತರ ದಕ್ಷಿಣವಾಗಿ ಇಬ್ಬಾಗ ಮಾಡಿ , ಉದ್ಯಮದ ಸಾಲ ಅವನ ಸಂಪಾದನೆಯಿಂದಲೇ ತೀರಿಸಬೇಕೆಂದು ತಿಳಿಯ ಹೇಳಿ ೧೯೯೩ ರಲ್ಲಿ ಆಸ್ತಿ ವಿಭಜನೆ ಮಾಡಿ ನೋಂದಾಯಿಸಿ ತಮ್ಮನ ಭಾಗದ ಪಾತ್ರವನ್ನು ನೀಡಿ ಸ್ವತಂತ್ರನನ್ನಾಗಿಸಿದೆ. ತಂಗಿಯ ಮದುವೆಗೆ ಮಾಡಿದ್ದ ಸಾಲ ಮತ್ತು ತಂದೆಯವರ ಆಸ್ಪತ್ರೆಯ ವೆಚ್ಚದ  ಸಾಲವನ್ನು ಆಪ್ತರಿಗೆ ಕಂತಿನಲ್ಲಿ ಮರು ಪಾವತಿ ಮಾಡಿದೆ. ತಂದೆಯ ಚಿತ್ರದಡಿಯಲ್ಲಿ ಅತ್ತೆ . ತಂದೆಯ ಕ್ಷಮೆ ಯಾಚಿಸಿದೆ. ಎಲ್ಲವೂ ದೈವ ನಿರ್ಣಯದಂತೆ ನಡೆದು ಹೋಗಿತ್ತು.

ನಾನು ಉದ್ಯೋಗದಲ್ಲಿ ಮುಂದುವರಿದೆ. ಮಂಗಳೂರಿನಲ್ಲಿ ೧೯೯೬ ರವರೆವಿಗೂ ಇದ್ದೆ. ಮಕ್ಕಳ ವಿದ್ಯಾಭ್ಯಾಸ ಒಳ್ಳೆಯ ತಳಹದಿಯ ಮೇಲೆ ನಡೆಯಿತು. ಮಂಗಳೂರು ವಿದ್ಯಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಹಾಗಾಗಿ ಇಬ್ಬರು ಮಕ್ಕಳಿಗೂ ಒಳ್ಳೆಯ ವಿದ್ಯೆ ದೊರೆಯಿತು. ಮಕ್ಕಳು ಒಳ್ಳೆಯ ಹೆಸರು ಮಾಡಿದರು. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಭಾಗವಹಿಸಿ ಒಳ್ಳೆಯ ಹೆಸರು ತಂದರು. ಒಳ್ಳೆಯ ಅಂಕ ಪಡೆದು ಶಾಲೆಯಲ್ಲಿಯೂ ಉತ್ತಮ ವಿದ್ಯಾರ್ಥಿಗಳೆಂದು ಹೆಮ್ಮೆ ತಂದರು. ತಂದೆಗೂ ತಾತನಿಗೂ ಕೀರ್ತಿ ತಂದರು. ವಂಶದ ಹೆಸರನ್ನು ಉಳಿಸಿದರು.

ಈ ಮಧ್ಯೆ ತಂದೆಯವರ ನಿಧನದ ಸಂದರ್ಭದಲ್ಲಿ ಅವರು ೧೯೬೩ ರಲ್ಲಿ ಆರಂಭಿಸಿ ಅಭಿವೃದ್ಧಿ ಪಡಿಸಿದ್ದ ಶ್ರೀ ಕಾಂತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸ್ಥಾನವನ್ನು ವಹಿಸಿಕೊಳ್ಳಬೇಕೆಂದು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಒತ್ತಡ ತಂದರು. ನಾನು ಆಡಳಿತದಲ್ಲಿ ಅನುಭವವಿಲ್ಲವೆಂದು ಎಷ್ಟು ಹೇಳಿದರೂ ಒಪ್ಪಲಿಲ್ಲ . ನಾನು ಮಂಗಳೂರಿನಲ್ಲಿ ಇದ್ದು ಶಾಲೆ ನಡೆಸುವುದು ಅಸಾಧ್ಯವೆಂದು ಹೇಳಿದೆ. ಶಾಲೆ ಉತ್ತಮವಾಗಿ ನಡೆಯುತ್ತಿರುವಾಗ ಬೇರೆಯವರಿಗೆ ವರ್ಗಾಯಿಸುವುದು ಸೂಕ್ತವಲ್ಲವೆಂದೂ,ಆದ್ದರಿಂದ ನಾನೇ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸಿದರು . ಶಾಲೆಯ ಹಿತ ದ್ರಿಷ್ಟಿ ಯಿಂದ ಒಪ್ಪಿದೆ. ಅದರಂತೆ ೧೯೯೦ ಸೆಪ್ಟೆಂಬರ್ ನಿಂದ ಕಾರ್ಯದರ್ಶಿಯಾಗಿ
ಅಧಿಕಾರ ಹಿಡಿದೆ . ಶಾಲೆಯಲ್ಲಿ ಪ್ರಗತಿ ಮಂದಗತಿಯಲ್ಲಿತ್ತು . ಅದನ್ನು ಸರಿಪಡಿಸಲು ಅಧ್ಯಾಪಕರ ಸಭೆ ಕರೆದು ಸೂಚನೆ ನೀಡಿದೆ. ತಂದೆಯವರ ಅನಾರೋಗ್ಯದಿಂದ ನಡೆಯದೇ ನಿಂತಿದ್ದ ರಜತ ಮಹೋತ್ಸವ ಮುಂದೂಡಲ್ಪಟ್ಟಿತ್ತು . ಅದಕ್ಕಾಗಿ ಬೇಕಾದ ವ್ಯವಸ್ಥೆಗೆ ಚಾಲನೆ ನೀಡಿದೆ. ಒಂದು ಸ್ವಾಗತ ಸಮಿತಿ ರಚಿಸಿ ಸೂಕ್ತ ನಿರ್ದೇಶ ನೀಡಿದೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ತರಬೇಕೆಂದೂ, ಹಾಗೂ ಒಂದು ಸ್ಮಾರಕ ಭವನ ನಿರ್ಮಾಣವಾಗಬೇಕೆಂತಲೂ ತೀರ್ಮಾನ ಮಾಡಿದೆವು. ನಾನು ದೂರದ ಮಂಗಳೂರಿನಲ್ಲಿ ಇದ್ದಿದ್ದರಿಂದ ಜವಾಬ್ಧಾರಿಯನ್ನು ಸಮಿತಿಯ ಸದಸ್ಯರಿಗೆ ವಹಿಸಿ ನಿರ್ದೇಶನ ನೀಡಿದೆ. ಉತ್ತಮ ಪ್ರತಿಕ್ರಿಯೆ ಬಂತು.
ಒಂದು ವರ್ಷದಲ್ಲಿ ಬೃಹತ್ತಾದ ಸ್ಮಾರಕ ಭವನ ಪೂರ್ಣ ವಾಯಿತು. ಅನೇಕ ಮಂದಿ ದಾನಿಗಳು ಕೊಡುಗೆ ನೀಡಿದರು. ಸ್ಮರಣ ಸಂಚಿಕೆಗೆ ಉತ್ತಮ ಜಾಹಿರಾತುಗಳು ದೊರಕಿದವು. ಅಧ್ಯಾಪಕರ ಸಭೆ ನಡಿಸಿ ಮಕ್ಕಳ ಸಹಕಾರಪಡೆದು ವಿವಿಧ ಗುಂಪುಗಳನ್ನು ರಚಿಸಲು ತಿಳಿಸಿದೆ. ಈ ಸಂದರ್ಭದಲ್ಲಿ ಒಂದು ವಿಜ್ಞಾನ ಪ್ರದರ್ಶನ ಏರ್ಪಡಿಸಲು ಸೂಚನೆ ನೀಡಿದೆ. ಎರಡು ದಿನ ಕಾರ್ಯಕ್ರಮದಲ್ಲಿ ಮನರಂಜನೆ, ವಾಕ್ಸ್ಪರ್ಧೆ, ಗಾಯನ ಸ್ಪರ್ಧೆ,ರಂಗೋಲಿ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ ನೀಡಿದೆ. ಆಹ್ವಾನ ಸಮಿತಿ ರಚಿಸಿ ಗಣ್ಯರನ್ನು ಗುರುತಿಸಿ ಆಹ್ವಾನಿಸಲು ಸೂಚನೆ ನೀಡಿದೆ . ಅದರಂತೆ ಮೈಸೂರಿನ ಅಂದಿನ ವಿಧಾನ ಸಭೆಯ ಸದಸ್ಯರು ಮತ್ತು ಮಂತ್ರಿ ಗಳೂ ಆಗಿದ್ದ ಶ್ರೀ ಶ್ರೀನಿವಾಸ ಪ್ರಸಾದ್,ನಗರಸಭೆಯ ಅಧ್ಯಕ್ಷರು,ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಶ್ರೀ ಚಿರಂಜೀವಿ ಸಿಂಗ್ ಹೀಗೆ ಅನೇಕ ಗಣ್ಯರ ಪಡೆಯನ್ನೇ ಆಹ್ವಾನಿಸಿದೆವು.. ಶಾಲೆಯ ಕಟ್ಟಡದ ಮುಂದೆ ದೊಡ್ಡ ಶಾಮಿಯಾನ ರಚಿಸಲಾಯಿತು. ತಂದೆಯವರ ೫ಅಡಿ ಎತ್ತರದ ತೈಲ ಚಿತ್ರ ರಚಿಸಬೇಕೆಂದು ತೀರ್ಮಾನಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು. ಶಾಲೆಯ ಬ್ಯಾಂಡ್ ತಂಡದಿಂದ ಸ್ವಾಗತಕ್ಕೆ ಬೇಕಾದ ಏರ್ಪಾಡು ಮಾಡಲಾಯಿತು. ಶಾಲೆಯದೆ ಆದ ಒಂದು ಧ್ವಜ ತಯಾರಿಸಿ ಅದರ ಆರೋಹಣಕ್ಕೆ ಬೇಕಾದ ವ್ಯವಸ್ಥೆ,ಮತ್ತು ಶಾಲೆಯ ಮಕ್ಕಳಿಂದ ಕವಾಯಿತು ವ್ಯವಸ್ಥೆಗೊಳಿಸಲಾಯಿತು.
ಆ ದಿನ ಬಂದೇಬಿಟ್ಟಿತು . ೧೯೯೨ ರಲ್ಲಿ ಅದ್ದೂರಿಯಾಗಿ ರಜತಮಹೋತ್ಸವ ನೆರವೇರಿತು. ಎಲ್ಲರೂ ಪ್ರಶಂಸಿಸಿದರು. ದೂರದಲ್ಲಿದ್ದು ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಕ್ಕೆ ಅಭಿನಂದನೆಯ ಸುರಿಮಳೆಯೇ ಬಂದಿತು. ತಂದೆಯವರಿಗೆ ಸೂಕ್ತವಾದ ಕೃತಜ್ಞತೆ ವ್ಯಕ್ತವಾಗಿತ್ತು . ಅವರ ೨೭ ವರ್ಷದ ಪರಿಶ್ರಮ ಒಂದು ಆಯಾಮ ಪಡೆದಿತ್ತು. ಶಾಲೆಗೆ ಒಳ್ಳೆಯ ಗೌರವ ದೊರೆಕಿತ್ತು. ಮನಸ್ಸು ಸಂತೋಷದಿಂದ ಕುಣಿದಾಡಿತು .

ತಂದೆಯವರ ಅಪೂರ್ಣವಾದ ಕನಸನ್ನು ಪೂರ್ಣ ಗೊಳಿಸಿದೆನೆಂಬ ಸಂತೋಷ ಮನ ಮನ ದಲ್ಲಿ ನಲಿದಾಡಿತು.

No comments:

Post a Comment