Thursday, April 20, 2017

ನನ್ನ ಜೀವನ ಚರಿತೆ ಭಾಗ ೨


ನಮ್ಮ ತಂದೆಗೆ ಮದುವೆಯಾಗಿ ೧೦ ವರುಷ ಆದಾಗಲು  ಮಕ್ಕಳಾಗದಿದ್ದಾಗ ನನ್ನ ಅತ್ತೆಯರು ಚಿಂತಿತರಾಗಿ ಒಟ್ಟುಗೂಡಿ ತಾಯಿಯನ್ನು ಕರೆದುಕೊಂಡು ತಿರುಮಲೆಗೆ ತೆರಳಿ ಪಾದ ಮಾರ್ಗದಲ್ಲಿ ಮೆಟ್ಟಲು ಹತ್ತಿ ಹರಕೆ ಹೊತ್ತರಂತೆ . ಆಗ ನಾನು ೧೯೫೨ ನೆ ಇಸವಿ ಮೇ ತಿಂಗಳು ೩೦ ರಂದು ಶುಕ್ರವಾರ ಜನಿಸಿದೆ .
.ಎಲ್ಲರಿಗೂ ಖುಷಿಯೋ ಖುಷಿ . ಸಂಭ್ರಮದಲ್ಲಿ ನಡೆಯಿತು ನಾಮಕರಣ ಇತ್ಯಾದಿ . ಮುದ್ರಣಾಲಯವೂ ಅಭಿವೃದ್ದಿ ಆಯಿತು . ಒಂದು ಯಂತ್ರ ಮೂರು ಆಯಿತು ಒಬ್ಬರು ನೌಕರ ೫ ನೌಕರರಾದರು .೧೯೫೫ ರಲ್ಲಿ ನನ್ನ ತಂಗಿಯ ಜನನವಾಯಿತು  ಆ ಮಗುವಿಗೆ ವೇದ ಎಂದು ಹೆಸರಿಸಲಾಯಿತು ಮುಂದೆ ೧೯೫೭ ರಲ್ಲಿ ನನ್ನ ತಮ್ಮ ಜನಿಸಿದ .ಅವನಿಗೆ ಸಂಪತ್ಕುಮಾರ ಎಂದು ನಾಮಕರಣ ಮಾಡಲಾಯಿತು.೧೯೬೦ ರಲ್ಲಿ ತಂಗಿ ಲೀಲಾ ೧೯೬೩ರಲ್ಲಿ ಪದ್ಮ ಎಂಬ ತಂಗಿಯರು ಜನಿಸಿದರು. ೧೯೬೬ ರಲ್ಲಿ ಕೊನೆಯ ತಂಗಿ ಕನಕ ಜನಿಸಿದಳು ಮನೆ ಕಲ ಕಲ ಎನ್ನುತಿತ್ತು   . ನಮ್ಮ ತಾಯಿಯಂತೂ ಖುಷಿಯಾದರು . ತಾಯಿಯ ಮಮತೆ ಎಲ್ಲರಿಗೂ ಸಮಾನವಾಗಿ ಹಂಚಿದರು ಎಲ್ಲರನ್ನು ಚೆನ್ನಾಗಿ ಓದಿಸಬೇಕು , ಒಳ್ಳೆಯ ಕಡೆ ಮಾಡುವೆ ಮಾಡಿಕೊಡಬೇಕು ಎಂಬುದು ಅವರ ಮನದಾಳದ ಆಸೆಯಾಗಿತ್ತು .ಅದಕ್ಕಾಗಿ ಪರಿಶ್ರಮಿಸಿದರು ಆದರೆ ಅವರ ಆರೋಗ್ಯ ಹದಗೆಡತೊಡಗಿತು
೧೯೬೩ ರಲ್ಲಿ ತಂದೆಯವರು ಒಂದು ಹೆಣ್ಣು ಮಕ್ಕಳ ಶಾಲೆ ತೆರೆಯಲು ಮುಂದಾದರು ಅದಕ್ಕಾಗಿ ಒಂದು ಕಟ್ಟಡ ಬಾಡಿಗೆಗೆ ಪಡೆದರು ಮೊದಲ ವರ್ಷದಲ್ಲೇ ೨೦ ಮಕ್ಕಳು ಸೇರಿದರು ಯಾಕೆಂದರೆ ಆಗ ಹೆಣ್ಣು ಮಕ್ಕಳನ್ನು ಶಾಲೆಗೇ ಕಳುಹಿಸುವುದು ಒಂದು ಕಳಂಕ ಆಗಿತ್ತು . ನಮ್ಮ ಹಳ್ಳಿಯಾದ ಕಳಲೆಯಲ್ಲಿ ಇಷ್ಟು ವರುಷ ದೇವಸ್ಥಾನದ ಮೇಲ್ವಿಚಾರಣೆ ನೋಡುತಿದ್ದ ನನ್ನ ದೊಡ್ಡಪ್ಪ ಕಾಲವಾದಮೇಲೆ  ಆ ಜವಾಬ್ಧಾರಿ ತಂದೆಯ ಮೇಲೆ ಬಂತು . ಜವಾಬ್ಧಾರಿ ಹೆಚ್ಚಾದಂತೆ ಮನೆಯ ಕಡೆ ಗಮನ ಕಮ್ಮಿಯಾಯಿತು . ಇದೆಲ್ಲದರ ನಡುವೆ ಇನ್ನೂ ಅಪ್ರಾಪ್ತಾಳಾಗಿದ್ದ ನನ್ನ ಮೊದಲ ತಂಗಿಗೆ ಮದುವೆಯ ಕಂಕಣ ಕೂಡಿ ಬಂದಿತ್ತು . ಒಳ್ಳೆಯ ಸಂಬಂಧ . ಮೈಸೂರಿನ ಪರಕಾಲ ಸ್ವಾಮಿಗಳ ಪೂರ್ವಾಶ್ರಮದ ಎರಡನೆಯ ಸುತ . ಒಲ್ಲೆ ಎನ್ನಲಾಗಲಿಲ್ಲ . ಕೂಡಿಟ್ಟ ಹಣ ಸೈಟ್ ಮಾರಿ ಬಂದ  ಹಣದಿಂದ ಅದ್ದೂರಿಯಾಗಿ ಮದುವೆ ಮಾಡಿದರು . ಓಡಾಟದಿಂದ ತಾಯಿ ಬಳಲಿದ್ದರು . ಅವರ ಆರೋಗ್ಯ ಮತ್ತಷ್ಟು ಹದಗೆಡತೊಡಗಿತು . ಅವರ ಚಿಕಿತ್ಸೆಗೆ ಬಹಳ ಹಣ ಖರ್ಚಾಗತೊಡಗಿತು . ಆದರೂ ಎದೆಗುಂದಲಿಲ್ಲ ತಂದೆ . ನನ್ನ ವಿದ್ಯಾಭ್ಯಾಸವು ಅವಿರತವಾಗಿ ಮುಂದುವರೆದಿತ್ತು . ನಾನು ಬಿ ಎಸ್ ಸಿ ಮುಗಿಸಿ ಇಂಜನೀರಿಂಗ್ ಪದವಿಗೆ ಸೇರಿದ್ದೆ . .ನನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಉಚಿತ ಶಿಕ್ಷಣ ವಿದ್ಯಾರ್ಥಿ ವೇತನ ಎಲ್ಲವೂ ದೊರೆತಿತ್ತು . ತಂದೆಗೆ ಯಾವ ಹೊರೆಯನ್ನು ಕೊಟ್ಟಿರಲಿಲ್ಲ . ಎಲ್ಲ ಸೆಮಿಸ್ಟರ್ ಗಳಲ್ಲೂ ಒಳ್ಳೆಯ ಅಂಕ ಪಡೆಯುತ್ತಿದ್ದೆ . ತಾಯಿಯಂತೂ ಬಹಳ ಖುಷಿಯಾಗಿದ್ದರು .ಕೊನೆಯ ವರುಷ ದಲ್ಲಿ ಕಾಲೇಜಿನಿಂದ ಉತ್ತರ ಭಾರತದ ಒಂದು ಪ್ರವಾಸ ಏರ್ಪಡಿಸಲಾಗಿತ್ತು . ಸಹಪಾಠಿಗಳೆಲ್ಲ ಸಂತಸದಿಂದಿದ್ದರು ತಾಯಿಯ ಆರೋಗ್ಯ ಚೆನ್ನಾಗಿರಲಿಲ್ಲ ನನಗೆ ಪ್ರವಾಸ ಹೋಗಲು ಉತ್ಸಾಹವೇ ಇರಲಿಲ್ಲ ತಂದೆಯವರ ಅಪೇಕ್ಷೆಯ ಮೇರೆಗೆ ಒಪ್ಪಿದೆ. ಪ್ರವಾಸ ಮುಗಿಸಿ ಬರುವಷ್ಟರಲ್ಲಿ ತಾಯಿಯ ಆರೋಗ್ಯ ಕುಸಿದಿತ್ತು. ಪರೀಕ್ಷೆಗೆ ಕುಳಿತುಕೊಳ್ಳಲು ತಯಾರಾಗಿರಲಿಲ್ಲ ಪರೀಕ್ಷೆ ಬರೆಯುವುದು ಬೇಡ ಎಂದು ತೀರ್ಮಾನಿಸಿದೆ.  ಆದರೆ ವಿಧಿ ನಿಯಮವೇ ಬೇರೆಯಾಗಿತ್ತು . ತಾಯಿಯ ಆರೋಗ್ಯ ಪೂರ್ಣ ಹದಗೆಟ್ಟು ೧೯೭೪ ರಲ್ಲಿ ಏಪ್ರಿಲ್ ೨೭ ರಂದು ತಾಯಿ ಕೊನೆಯುಸಿರು ಎಳೆದರು . ತಂದೆಗೆ ದಿಕ್ಕೇ ತೋಚಲಿಲ್ಲ ಉಳಿದ ಮೂರು ಹೆಣ್ಣು ಮಕ್ಕಳ ಮದುವೆ ಹಾಗೂ ಗಂಡು ಮಕ್ಕಳ ವಿದ್ಯಾಭ್ಯಾಸ ಅವರನ್ನು ಕಂಗೆಡಿಸಿತ್ತು . ಆಗ ಧೈರ್ಯ ತುಂಬಿದವರು ನನ್ನ ಅಂಬಾ  ಸೋದರತ್ತೆ . ಮಕ್ಕಳ ಜವಾಬ್ಧಾರಿ ನನಗೆ ಬಿಡು . ನೀನು ಧೈರ್ಯವಾಗಿರು ಎಂದು ಭರವಸೆ ತುಂಬಿದರು . ನನ್ನ ತಾಯಿಯ ಅಂತಿಮ ಕರ್ಮಗಳನ್ನೆಲ್ಲ ನನ್ನ ತಾತ ನವರ ನೇತೃತ್ವದಲ್ಲಿ ಮಾಡಿ ಮುಗಿಸಿದೆ. ಅವರ ತೀವ್ರ ಅನಾರೋಗ್ಯದ ನಡುವೆಯೂ ಮಗಳ ಅಂತಿಮ ಕಾರ್ಯಗಳನ್ನೂ ಮಾಡಿಸಿದರು . ಮಗಳ ಅಗಲಿಕೆಯ ದುಃಖ ಅವರನ್ನು ಕಾಡಿತ್ತು . ನಡುವೆ ಅವರ ಹಿರಿಯ ಮಗ ಹೃದಯ ಆಘಾತದಿಂದ ಮರಣಿಸಿದ . ಪುತ್ರ ಶೋಕಂ ನಿರಂತರಂ ಎಂಬಂತೆ ತಾತನವರ ಆರೋಗ್ಯ ಹದಗೆಟ್ಟಿತು .ತಾಯಿಯವರು ಮರಣಿಸಿದ ಒಂದು ವರುಷದಲ್ಲೇ ಅವರೂ ಮರಣಿಸಿದರು . ಇವೆಲ್ಲದರ ನಡುವೆ ತಾಯಿಯ ಮರಣದ ವೇಳೆ ನನ್ನ ಸಹಪಾಠಿಗಳು ಮತ್ತು ಪ್ರಾಧ್ಯಾಪಕರೂ ಸಾಂತ್ವನ ಹೇಳಲು ಬಂದಿದ್ದರು . ಅವರುಗಳು ಪರೀಕ್ಷೆ ಬಿಡಬೇಡ ತಾಯಿಯ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂದರು .ತಂದೆಯವರೂ ಅದನ್ನೇ ಹೇಳಿದರು ಅವರೆಲ್ಲರ ಅಪೇಕ್ಷೆಯಂತೆ ಪರೀಕ್ಷೆ ಬರೆದೆನು .ಉತ್ತಮ ಅಂಕ ಪಡೆದು ಉತ್ತೀರ್ಣನಾದೆನು . ಬಾಲ್ಯದಿಂದ ಯೌವನದತ್ತ ನಡೆದಿದ್ದೆ .

No comments:

Post a Comment