Thursday, April 20, 2017

ಸಮನ್ವಯ ಹರಿಕಾರ ಯತಿರಾಜ ರಾಮಾನುಜ

ರಾಮಾನುಜ ತತ್ವವನ್ನು ತಿಳಿಯುವ ಮೊದಲು ಶಂಕರ ತತ್ವವನ್ನು ಅರಿಯುವುದು ಅನಿವಾರ್ಯ . ಶಂಕರರು ಜನಿಸಿದ ಕಾಲ. ಹಿಂದೂ ಧರ್ಮ ಅವನತಿಯತ್ತ ಸಾಗುತ್ತಿದ್ದ ಕಾಲ . ಚಾರ್ವಾಕರು ಪ್ರಬಲರಾಗುತ್ತಿದ್ದರು . ಬೌದ್ಧ , ಜೈನ ಧರ್ಮಗಳು ಪ್ರಾಬಲ್ಯಪಡೆಯುತ್ತಿದ್ದ ಸಮಯ . ಶೂನ್ಯ ವಾದ ಅಗ್ರಸ್ಥಾನದತ್ತ  ಮುನ್ನುಗ್ಗುತ್ತಿದ್ದಾಗ  ಜನಿಸಿದವರು ಶಂಕರರು. ಅವರಿದ್ದ ಅಲ್ಪ ಆಯಸ್ಸಿನಲ್ಲಿ
ವೇದೋಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿ, ಶೂನ್ಯ ವಾದ ಪ್ರಚಾರ ಮಾಡುತ್ತಿದ್ದ ಬೌದ್ಧೀಯರನ್ನು ಅಡಗಿಸಿ, ಹಿಂದೂ ಧರ್ಮವನ್ನುನೆಲೆಗೊಳಿಸಿದವರು ಶಂಕರರು .ಎಲ್ಲ ಧರ್ಮಗಳ ಧ್ಯೇಯ ಮೋಕ್ಷ. ಅದನ್ನು ಮುಸ್ಲಿಮ್ಮರು  ಜನ್ನತ್  ಎಂದರೆ  ಕ್ರಿಶ್ಚಿಯನ್ನರು  ಅಬೋಡ್ ಎಂದರು . ಈ ಮೋಕ್ಷ ಪ್ರಾಪ್ತಿಗೆ ಅಗತ್ಯವಿರುವುದು ಜ್ಞಾನ . ಜ್ಞಾನಮಾರ್ಗವೊಂದರಿಂದಲೇ ಮೋಕ್ಷ . ನಹಿ ಜ್ಞಾನೇನ ಸಧೃಶಂ .ಚರಾಚರ ಗಳೆಲ್ಲವೂ ಪರಮಾತ್ಮನ ಅಂಶವೇ . ಹೇಗೆ ವೈಜ್ಞಾನಿಕವಾಗಿ ಅವಿನಾಶಿ ಪರಮಾಣುವನ್ನುಎಷ್ಟುಬಾರಿ ವಿಭಜಿಸಿದರೂ ಉತ್ಪತ್ತಿಯಾಗುವುದು ಅಣುಮಾತ್ರವೇ . ಅಣುವು ಎಲ್ಲ ಬಗೆಯಲ್ಲಿಯೂ ಪರಮಾಣುವನ್ನೇ ಹೋಲುತ್ತದೆ . ಅಂತೆಯೇ ಪರಮಾತ್ಮನೂ ಅವಿನಾಶಿ. ಅವನು ಒಬ್ಬನೇ .ಅವನ ಅಂಶದಿಂದ ಹುಟ್ಟಿದುದೆಲ್ಲವೂ ಜೀವಾತ್ಮರು . ಜೀವಾತ್ಮರು ಎಲ್ಲ ಬಗೆಯಲ್ಲಿಯೂ ಪರಮಾತ್ಮನನ್ನೇ ಹೋ ಲುತ್ತಾರೆ . ಆದ್ದರಿಂದ ಜೀವಾತ್ಮ ಪರಮಾತ್ಮಬೇರೆಯಲ್ಲ . ಮೋಕ್ಷ ಪ್ರಾಪ್ತಿಗೆ ಪರಮಾತ್ಮನ ಜ್ಞಾನ ಅವಶ್ಯ . ಅವನನ್ನರಿತಾಗ ಉಳಿದ ಅರಿಷಡ್ವರ್ಗಗಳು ಮರೆಯಾಗಿ ಪರಮಾತ್ಮ ಜ್ಞಾನಉಂಟಾಗುತ್ತದೆ . ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಮತವನ್ನು ಸ್ಥಾಪಿಸಿ ಹಿಂದೂ ವನ್ನುಚಿರಸ್ಥಾಯಿಗೊಳಿಸಿದವರು ಶಂಕರರು.ಶಂಕರರು ೮ನೇ ಶತಮಾನದಲ್ಲಿದ್ದರೆ, ರಾಮಾನುಜರು ೧೧ನೇ ಶತಮಾನದಲ್ಲಿ ಜನಿಸಿದರು . ಅವರು ಮೂಲತಃ ವೈಷ್ಣವರಾಗಿರಲಿಲ್ಲ.ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು . ಅವರು ಯಾದವ ಪ್ರಕಾಶರೆಂಬ ಅದ್ವೈತ ಗುರುಗಳಲ್ಲಿ ವ್ಯಾಸಂಗ ಆರಂಭಿಸಿದರು . ಆದರೆ ಯಾದವ ಪ್ರಕಾಶರ ಅದ್ವೈತ ತತ್ವ ಅಷ್ಟಾಗಿ ಸರಿಯೆನಿಸಲಿಲ್ಲ . ಅವರ ಅನೇಕ ವ್ಯಾಖ್ಯಾನಗಳನ್ನು ರಾಮಾನುಜರು  ತಿಭಟಿಸಿದರು .
ಗುರುಕುಲದಿಂದ ಹೊರನಡೆದರು . ಕಾಂಚೀಪುರಂನ ವರದರಾಜಸ್ವಾಮಿ ದೇವಾಲಯದಲ್ಲಿ ಅರ್ಚಕ ವೃತ್ತಿ ಹಿಡಿದ ರಾಮಾನುಜರಮನಸ್ಸಿನಲ್ಲಿ ಹೋರಾಟ ನಡೆಯುತ್ತಿತ್ತು . ಜೀವಾತ್ಮ ಪರಮಾತ್ಮರು ಬೇರೆಯಲ್ಲದಿದ್ದರೂ ಕರ್ಮ ಫಲದಿಂದ ಕಲುಷಿತವಾದ ಜೀವಾತ್ಮಪರಮಾತ್ಮನನ್ನು ಹೊಂದಬೇಕಾದರೆ ಸಾಧನೆ ಅತ್ಯವಶ್ಯವೆಂಬ ಸಿದ್ಧಾಂತವನ್ನು ಹೊರಹಾಕಿದರು . ಅಂದರೆ ಅದ್ವೈತವನ್ನು ಒಪ್ಪಿದರೂ ಅದರಲ್ಲಿ ವಿಶಿಷ್ಟಾರ್ಥವನ್ನು ಸೃಷ್ಟಿಸಿ ವಿಶಿಷ್ಟಾದ್ವೈತ ತತ್ವ ಪ್ರತಿಪಾದಕರಾದರು . ಜ್ಞಾನಮಾರ್ಗದಿಂದ ಮಾತ್ರ ಮೋಕ್ಷ ಎಂಬ ವಾದವನ್ನು ತಳ್ಳಿಹಾಕಿ , ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಉಪದೇಶಿಸಿದಂತೆ , ಜ್ಞಾನಮಾರ್ಗ ಎಲ್ಲರಿಗೂ ಎಟಕುವಂತಹುದಲ್ಲ . ಅಂದ ಮಾತ್ರಕ್ಕೆಸಾಮಾನ್ಯ ಜನರಿಗೆ ಮೋಕ್ಷವೇ ಇಲ್ಲವೆಂದಲ್ಲ. ಶ್ರೀ ಕೃಷ್ಣನೇ ತಿಳಿಸಿರುವಂತೆ ಜ್ಞಾನ ಕರ್ಮಮಾರ್ಗಗಳು ಸಾಧ್ಯವಿಲ್ಲದಿದ್ದಾಗ ಭಕ್ತಿಮಾರ್ಗದಲ್ಲಿ ಮೋಕ್ಷ ಸಾಧ್ಯವೆಂದು ಪ್ರತಿಪಾದಿಸಿದರು ರಾಮಾನುಜರು . ಅವರು ತಮ್ಮ ಪೂರ್ವದಲ್ಲಿದ್ದ , ಜಾತಿಯಲ್ಲಿ ಅಬ್ರಾಹ್ಮಣರಾದ ಆಳ್ವಾರರು ಹೇಗೆ ಭಕ್ತಿಮಾರ್ಗದಿಂದ ಭಗವಂತನನ್ನು ಹೊಂದಿದರು ಎಂಬುದನ್ನು ನಿದರ್ಶಿಸಿ , ಸಾಮಾನ್ಯರಿಗೂ ಅನುಕೂಲವಾಗುವಂತಹ ಭಕ್ತಿ ಮಾರ್ಗ ಪ್ರವರ್ತಕರಾದರು
ಶೈವತತ್ವ ಪ್ರಬಲವಾಗುತ್ತಿದ್ದ ಕಾಲದಲ್ಲಿ , ವಿಷ್ಣುವೊಬ್ಬನೇ ಪರಮಾತ್ಮ. ಎಲ್ಲ ಜೀವಾತ್ಮರೂ ಅವನ ಅಂಶಗಳು ಎಂಬ ತತ್ವವನ್ನುಪ್ರಚುರಪಡಿಸಿ ವೈಷ್ಣವ ಧರ್ಮಕ್ಕೆ ಭದ್ರ ಬುನಾದಿ ಹಾಕಿದರು. ಶೈವರು ಷಡಕ್ಷರಿ ಮಂತ್ರವಾದ "ಓಂ ನಮಃ. ಶಿವಾಯ "ಎಂಬ ಮಂತ್ರದಿಂದ ಮೋಕ್ಷವೆಂದರೇ ,ಅಷ್ಟಾಕ್ಷರಿ ಮಂತ್ರವಾದ "ಓಂ ನಮೋ ನಾರಾಯಣಾಯ"ಎಂಬ ಮಂತ್ರದಿಂದ ಮೋಕ್ಷಪ್ರಾಪ್ತಿಎಂದು ಸ್ಥಾಪಿಸಿ ಎಲ್ಲರಿಗೂ ಮೋಕ್ಷಪ್ರಾಪ್ತಿ ಸಿಂಧುವಾಗಲೆಂದು ಬಯಸಿ , ರಹಸ್ಯವಾಗಿದ್ದ ಈ ಮಂತ್ರವನ್ನು ದೇವಾಲಯದ ಗೋಪುರವೇರಿ ಎಲ್ಲರಿಗೂ ಸಾರಿ ಹೇಳಿದರು. ಬ್ರಾಹ್ಮಣರಲ್ಲದ ಇತರ ಮೂರು ವರ್ಗಗಳಿಗೂ ಮೋಕ್ಷಪ್ರಾಪ್ತಿ ಸಾಧ್ಯವೆಂದು ತಿಳಿಸಿ ,ಭಕ್ತಿಮಾರ್ಗ ಉಪದೇಶಿಸಿ ಶರಣಾಗತಿ ತತ್ವವನ್ನು ಪ್ರ.ತಿಪಾದಿಸಿದರು. ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿರುವಂತೆ,ಅನನ್ಯಭಕ್ತಿಯಿಂ ದ ಸ್ವರ್ಗ ಪ್ರಾಪ್ತಿ ಸಾಧ್ಯವೆಂದು ಸಾರಿದರು. ಅವರು ರಚಿಸಿದ ಬ್ರಹ್ಮಸೂತ್ರ ಭಾಷ್ಯ,ಗೀತಾಭಾಷ್ಯಗಳು ಪ್ರಸಿದ್ಧ ಗ್ರಂಥಗಳಾದವು .ಶಿವನೊಬ್ಬನೇ ದೈವವೆಂದವರು ಶೈವರಾದರು. ಶಿವ ವಿಷ್ಣು ಇಬ್ಬರನ್ನೂ ಸ್ವೀಕರಿಸಿದ ಅದ್ವೈತಿಗಳು ಸ್ಮಾರ್ತರೆನಿಸಿದರು. ವಿಷ್ಣುಒಬ್ಬನೇ ದೈವವೆಂದವರು ಶ್ರೀವೈಷ್ಣವರೆನಿಸಿಕೊಂಡರು. ಹೀಗಾಗಿ ರಾಮಾನುಜ ಅನುಯಾಯಿಗಳು  ಶ್ರೀವೈಷ್ಣವರೆಂದು ಖ್ಯಾತ ನಾಮರಾದರು .

ಭಕ್ತಿಮಾರ್ಗದಲ್ಲಿ ನಡೆಯುವುದು ಹೂವಹಾಸಿಗೆಯಲ್ಲ . ಅದರಲ್ಲಿ ಏಕಾಗ್ರತೆಯಿರಬೇಕು . ಅನ್ಯಚಿಂತನೆಗಳಿಗೆ ಅವಕಾಶವಿಲ್ಲ .ಸದಾ ಸರ್ವದಾ ಭಗವಧ್ಯಾನ ಅನಿವಾರ್ಯ . ಇಲ್ಲಿ ಅಹಂಕಾರಕ್ಕೆ ಅವಕಾಶವಿಲ್ಲ . ಎಲ್ಲವೂ ಭಗವಂತನದು ಎಂಬ ಜ್ಞಾನ  ಅನಿವಾರ್ಯ. ಮಾಡಿದುದೆಲ್ಲವನ್ನು ಭಗವಂತನಿಗೆ  ಅರ್ಪಿಸಬೇಕು.  ಮಾಡುವುದೆಲ್ಲವೂ  ಭಗವಂತನ  ನಿರ್ದೇಶನದಂತೆ  ಎಂದು
ತಿಳಿಯಬೇಕು. ಕರ್ಮಫಲ ಅಪೇಕ್ಷಿಸಬಾರದು . ಮೂರು ನಿದ್ರಾವಸ್ಥೆಯಲ್ಲಿಯೂ ಭಗವಧ್ಯಾನವೇ ಆಕ್ರಮಿಸಿರಬೇಕು . ಇಂತಹ ವ್ರತ ಪರಿಪಾಲನೆ ಚಂಚಲಚಿತ್ತನಾದ ಮನುಷ್ಯನಿಗೆ ಸಾಧ್ಯವೇ ಎಂಬ ಅನುಮಾನ ಆವಾರಿಸತೊಡಗಿತು . ಆಗ ರೂಪಿಸಲ್ಪಟ್ಟತತ್ವವೇ ಶರಣಾಗತಿ ತತ್ವ . ಶ್ರೀ ಕೃಷ್ಣನು ಗೀತೆಯಲ್ಲಿ ತಿಳಿಸಿರುವಂತೆ , ಫಲಾಪೇಕ್ಷೆಯಿಲ್ಲದೆ ಮಾಡಿದ ಕರ್ಮವೆಲ್ಲವೂ ಪಾಪ ಮುಕ್ತವಾಗಿಸುವಂತೆ , ಹೇಗೆ ರಾಮಾಯಣದಲ್ಲಿ ವಿಭೀಷಣನು ರಾವಣನಿಂದ ಪರಿತ್ಯಕ್ತನಾಗಿ ರಾಮನಲ್ಲಿ ಶರಣು ಎಂದು ಬಂದು  ಆಶ್ರಯಪಡೆದನೋ , ಅಂತೆಯೇ ಭಗವಂತನಲ್ಲಿ ಶರಣಾಗುವುದರಿಂದ ಮೋಕ್ಷಪ್ರಾಪ್ತಿಯೆಂದು ನಿರೂಪಿಸಿದರು ರಾಮಾನುಜರು ಭಗವಂತನಲ್ಲಿ ನೇರವಾಗಿ ಶರಣಾಗುವುದು ಕಷ್ಟವೆನಿಸಿದಾಗ , ಒಬ್ಬ ಯೋಗ್ಯ ಗುರುಗಳಲ್ಲಿ ಶರಣಾಗಿ , ಪ್ರಪತ್ತಿ
ಮಾಡಿಸಿಕೊಳ್ಳುವುದರಿಂದ ಗುರುಮುಖೇನ ಮೋಕ್ಷ ಪ್ರಾಪ್ತಿ ಸಿದ್ಧ ವೆಂದು ತಿಳಿಸಿ , ಪ್ರಪತ್ತಿ ಮಾರ್ಗಪ್ರವರ್ತಕರಾದರು ರಾಮಾನುಜರು.

ಭಗವಂತನು ಅವಿನಾಶಿ, ಅಯೋನಿಜನು , ರೂಪರಹಿತನು , ಸಗುಣನು , ಅನಂತನು,ನಿರ್ಗುಣನು , ಅವಿಕಾರನು, ಅಶೇಷಿ , ಸರ್ವಶೇಷಿ,ಶುದ್ಧನು , ಆಚಾರ ಧರ್ಮಗಳಿಗೆ ಪ್ರವರ್ತಕನು. ಹೀಗೆ ಭಗವಂತನನ್ನು ಎಷ್ಟು ವರ್ಣಿಸಿದರೂ ಸಾಲದು. ಆದರೆ ನಿರಾಕಾರನಾದ ಭಗವಂತನ ಸ್ಮರಣೆ ಹೇಗೆ ಸಾಧ್ಯ ?. ಇದನ್ನರಿತ ಶಾಸ್ತ್ರಜ್ಞರು ಅರ್ಚಾರೂಪವನ್ನು ಸಾಕಾರಗೊಳಿಸಿ , ಅವನಿಗೆ ಮಾನವ-ಮಾನಸ ,ಚೇತನ-ಅಚೇತನ ರೂಪಗಳನ್ನು ಪರಿಕಲ್ಪಿಸಿ , ನಿರಾಕಾರ ಭಗವಂತನ ಸ್ಮರಣೆಗೆ ಅಣಿವುಮಾಡಿದರು . ಆದರೆ ಭಗವಂತನ ಆರಾಧನೆಗೆ ಏಕರೂಪವಿರಲಿಲ್ಲ . ಇದನ್ನರಿತ ರಾಮಾನುಜರು ವಿಷ್ಣು ಆರಾಧನೆಗೆ ಏಕರೂಪವಾದ ಆಚರಣೆಯನ್ನು ರೂಪಿಸಿದರು. ಇದು ಅವರು ಮಾಡಿದ ಅದ್ಭುತವಾದ ಕಾರ್ಯ .ಇಂದಿಗೂ ಆಸೇತುಹಿಮಾಚಲ ಈ ಏಕರೂಪ ಆರಾಧನಾ ಪದ್ಧತಿ ಪ್ರಚಲಿತದಲ್ಲಿದೆ .

ರಾಮಾನುಜರ ಬಹುತೇಕ ಕೃತಿಗಳು ಸಂಸ್ಕೃತದಲ್ಲಿದ್ದರೂ , ಅವರು ತಮ್ಮ ಪೂರ್ವಜರ ವಿಷ್ಣು ಪಂಥವನ್ನು ಗೌರವಿಸಿ ಅವರುಗಳು ರಚಿಸಿದ ಭಕ್ತಿಯುತವಾದ ಸ್ತೋತ್ರಗಳನ್ನೆಲ್ಲ ಕಲೆಹಾಕಿ , ನಾಲ್ಕು ಸಾವಿರ ಸ್ಲೋಕಗಳನ್ನು ಸಂಗ್ರಹಿಸಿ ,ನಾಲಾಯಿರ ಪ್ರಬಂಧಮ್ ಎಂದು ನಾಮಕರಣಮಾಡಿ ಅದಕ್ಕೆ ವೇದಗಳ ಸಮಾನ ಸ್ಥಾನ ಕಲ್ಪಿಸಿ , ದ್ರಾವಿಡ ವೇದವೆಂದು ಗುರುತಿಸಿದರು. ಇಂದಿಗೂ ದೇವಾಲಯಗಳಲ್ಲಿ ವೇದಗಳೊಂದಿಗೆ ಈ ದ್ರಾವಿಡ ವೇದವನ್ನೂ ಸ್ತುತಿಸುವುದು ಆಚರಣೆಯಲ್ಲಿದೆ.
ಅದಕ್ಕೆ ರಾಮಾನುಜರನ್ನು ಉಭಯವೇದಾಂತ ಪ್ರವರ್ತಕರೆಂದೂ , ಭಾಷ್ಯರಚಿಸಿದ್ದರಿಂದ ಭಾಷ್ಯಕಾರರೆಂದೂ ಗೌರವಿಸಲ್ಪಡುತ್ತಿದ್ದಾರೆ .

ರಾಮಾನುಜರು ಎಲ್ಲರನ್ನು ಸಮನಾಗಿ ಕಾಣುತ್ತಿದ್ದರು . ಅವರಿಗೆ ಜಾತಿ ಮತದ ಬೇಧವಿರಲಿಲ್ಲ . ಅವರು ಅಪೇಕ್ಷಿಸುತ್ತಿದ್ದುದು ಅನನ್ಯ ಭಕ್ತಿ . ಅವರು ಅವತರಿಸಿದ ಕಾಲ ಮೊಗಲರ ದಬ್ಭಾಳಿಕೆಯ ಸಮಯ . ಮೊಗಲರ ಆಕ್ರಮಣದಿಂದ ಹಿಂದೂ ಧರ್ಮ ಅವನತಿಯ ಅಂಚಿನಲ್ಲಿದ್ದ ಕಾಲ . ಶ್ರೀರಂಗಂನಲ್ಲಿ  ಆಕ್ರಮಣವಾದ  ಸಮಯದಲ್ಲಿ  ಶ್ರೀರಂಗನ , ರಂಗನಾಯಕಿ  ಅಮ್ಮನವರ
ಮೂರ್ತಿಗಳನ್ನು ರಕ್ಷಿಸಿದರು ರಾಮಾನುಜರು. ಆದರೆ ಅವರ ಧಾಳಿ ಮಿತಿಮೀರಿದಾಗ , ರಾಮಾನುಜರು ಕರ್ನಾಟಕದ  ಮೇಲುಕೋಟೆಗೆ ಆಗಮಿಸಿ ೧೨ ವರ್ಷಕಾಲ ತಮ್ಮ ಧರ್ಮೋಪದೇಶವನ್ನು ಮುಂದುವರಿಸಿದ್ದರು . ಒಮ್ಮೆ ಮೇಲುಕೋಟೆಯ ಚೆಲುವನಾರಾಯಣನ ಅರ್ಚಾ ವಿಗ್ರಹ ಕಣ್ಮರೆಯಾದಾಗ , ಮಗುವನ್ನು ಕಾಣದ ತಾಯಿಯಂತೆ ಪರಿತಪಿಸಿ, ದೇಶವೆಲ್ಲಾ
ಶೋಧಿಸಿ , ಕಡೆಯಲ್ಲಿ ಮೊಗಲರ ದೆಹಲಿ ದರ್ಭಾರಿನಲ್ಲಿ ರಾಣಿಯ ಅಂತಃಪುರದಲ್ಲಿ ವಿಗ್ರಹವಿರುವುದನ್ನು ಅರಿತು ಶ್ರಮದಿಂದ ವಿಗ್ರಹ ಪಡೆದು ,ಕಳೆದುಹೋಗಿದ್ದ ದೊಡ್ಡ ಆಸ್ತಿ ಮರಳಿಪಡೆದಷ್ಟು ಸಂತೋಷದಿಂದ ಆನಂದಾಶ್ರುಗಳಿಂದ ಮರಳಿ ಮೇಲುಕೋಟೆಗೆ ತಂದು ಪುನರ್ಸ್ಥಾಪಿಸಿದರು. ದೆಹಲಿಯಲ್ಲಿ ವಿಗ್ರಹ ಕಾಣದೆ ಪರಿತಪಿಸಿ  ರಾಮಾನುಜರನ್ನು  ಅರಸಿ  ಬಂದ
ಮುಸ್ಲಿಂ ರಾಜಕುಮಾರಿಯನ್ನು ಶಿಷ್ಯೆಯನ್ನಾಗಿ ಸ್ವೀಕರಿಸಿ ಅವಳ ನಿಧನದ ನಂತರ ಅವಳ ಮೂರ್ತಿಯೊಂದನ್ನು ಚೆಲುವ ನಾರಾಯಣನ ಚರಣಸಮೀಪ ಸ್ಥಾಪಿಸಿ ಸರ್ವಧರ್ಮ ಸಮನ್ವಯ ಸಾಧಿಸಿದವರು ರಾಮಾನುಜರು.ಹಾಗೆಯೇ ಜೈನ ದೊರೆ ಬಿಟ್ಟಿದೇವ ತನ್ನ ಕುಮಾರಿಗೆ ಹುಚ್ಚುಬಿಡಿಸಲಾಗದವನಾಗಿ ಪರಿತಪಿಸುತ್ತಿದ್ದ ಕಾಲದಲ್ಲಿ ಆಕೆಯ ಹುಚ್ಚು ಬಿಡಿಸಿ ಬಿಟ್ಟಿದೇವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ , ವಿಷ್ಣುವರ್ಧನನೆಂದು ನಾಮಕರಣಮಾಡಿ ಸರ್ವಧರ್ಮ ಸಮನ್ವಯ ಹರಿಕಾರನೆಂದು ಖ್ಯಾತರಾದರು ರಾಮಾನುಜರು. ವಿಷ್ಣುವರ್ಧನನ ನೆರವಿನೊಂದಿಗೆ ಅನೇಕ ಅದ್ಭುತ ಶಿಲ್ಪಕಲಾಸೌಂದರ್ಯ ಪೂರಿತ ವಿಷ್ಣು ದೇವಾಲಯಗಳನ್ನು ನಿರ್ಮಿಸಿ ವೈಷ್ಣವ ಪಂಥವನ್ನು
ಪ್ರಚುರಪಡಿಸಿದರು ರಾಮಾನುಜರು. ಇವರ ಭಕ್ತಿ ಪಂಥ ಉತ್ತರ ಭಾರತದ ಅನೇಕ  ಮುನಿಗಳ ಮೇಲೆ ಪ್ರಭಾವ ಬೀರಿ ಉತ್ತರ ಭಾರತದಲ್ಲಿಯೂ ಭಕ್ತಿಪಂಥಕ್ಕೆ ಸೋಪಾನ ವಾಯಿತು.

ಮೋಕ್ಷ ಸಾಧನೆಗೆ ಹೇಗೆ ಶರಣಾಗತಿ ಅವಶ್ಯವೋ ಅಂತೆಯೇ ಸನ್ಮಾರ್ಗವೂ ಅತ್ಯವಶ್ಯ. ಯೆ, ಕರುಣೆ, ಕ್ಷಮೆ,ಮುಂತಾದ  ಮೂಲ ಗುಣಗಳೂ ಅವಶ್ಯ. ಭಗವಂತನ ಕರುಣೆಗೆ ಪಾತ್ರರಾಗಬೇಕಾದರೆ ಪ್ರಪತ್ತಿ ಎಷ್ಟು ಮುಖ್ಯವೋ ನಂತರದಲ್ಲಿ ನಡೆಸುವ ಸ್ವಚ್ಛಂದ ಜೀವನ ಅಕ್ಷಮ್ಯಅಪರಾಧವೂ ಕೂಡ . ಇಂದ್ರಿಯ ನಿಗ್ರಹ , ಅರಿಷಡ್ವರ್ಗಗಳ ಮೇಲೆ ವಿಜಯ,ಸರಳ ಜೀವನ, ಎಲ್ಲರನ್ನು ಸಮಾನ ರೀತಿಯಿಂದ ನಡೆಸುವುದು, ಗೌರವಿಸುವುದು ಅತ್ಯವಶ್ಯ. ನಾರಾಯಣನ ಕಲ್ಯಾಣ ಗುಣಗಳ ಮನನ ಜೀವನ ರೂಪಿಸಲು ನೆರವಾಗುತ್ತದೆ .ರಾಮಾನುಜರು ನಾರಾಯಣನ ಕಲ್ಯಾಣ ಗುಣಗಳನ್ನು ಸುಂದರವಾಗಿ ತಮ್ಮ ಗದ್ಯತ್ರಯಗಳಲ್ಲಿ ವರ್ಣಿಸಿದ್ದಾರೆ.ಅವರ ಮೇರುಕೃತಿ ಶರಣಾಗತಿಗದ್ಯ. ಇದರಲ್ಲಿ ಶ್ರೀರಾಮನ ಕಲ್ಯಾಣ ಗುಣಗಳನ್ನು ಸುಂದರವಾಗಿ ವರ್ಣಿಸಿ ಹೇಗೆ ಶರಣಾಗತಿ ಮೋಕ್ಷಕ್ಕೆ ಸುಲಭ ಸಾಧನವೆಂಬುದನ್ನು ನಿರೂಪಿಸಿದ್ದಾರೆ.

ರಾಮಾನುಜರ ಜನ್ಮ ಕುರಿತಾದ ಅನೇಕ ದಂತಕಥೆಗಳು ಪ್ರಚಲಿತದಲ್ಲಿವೆ. ಇವರು ಆದಿಶೇಷನ ಅವತಾರವೆಂದೂ ಒಮ್ಮೆ ಅವರು ಅನ್ಯಮತೀಯರೊಂದಿಗಿನ ಚರ್ಚೆಯೊಂದರಲ್ಲಿ ತಮ್ಮ ಸಹಸ್ರವದನದಿಂದ ಉತ್ತರಿಸಿದರೆಂದು ಪ್ರತೀತಿ. ಅವರು ಶೇಷರೂಪದಲ್ಲಿ ಶ್ರೀನಿವಾಸನ ಗರ್ಭಗೃಹ ಪ್ರವೇಶಿಸಿ , ವೆಂಕಟೇಶನನ್ನು ಸ್ಥಿರಗೊಳಿಸಿದರೆಂದೂ ಪ್ರತೀತಿ.

ರಾಮಾನುಜರು ಅವತರಿಸಿ ಒಂದು ಸಾವಿರ ವರ್ಷಕಳೆಯುತ್ತಿದೆ . ಅವರು ಮಾಡಿದ ಕಾರ್ಯಗಳು , ಉಪದೇಶಿಸಿದ ತತ್ವಗಳು ಕೋಟ್ಯಾನುಕೋಟಿ ಭಕ್ತರಿಗೆ ಮೋಕ್ಷಮಾರ್ಗವನ್ನು ತೋರಿಸುತ್ತಿದೆ. ಭಗವದ್ದರ್ಶನಕ್ಕೆ ಅಣಿವುಮಾಡಿಕೊಟ್ಟಿದೆ . ಏಕರೂಪ ಆರಾಧನಾಪದ್ಧತಿಯಿಂದ ದೇವಾಲಯಗಳು ಧರ್ಮಾಚರಣೆಯ ಕೇಂದ್ರಗಳಾಗಿವೆ. ಆದರೆ ಭಿನ್ನತೆಯೊಂದು ಒಂದು ಕ್ಷುದ್ರರೋಗ .ಅದು ರಾಮಾನುಜರ ಸಿದ್ಧಾಂತಗಳಿಗೂ ಹೊರತಾಗಿರಲಿಲ್ಲ. ಸುಮಾರು ೧೬ ನೆಯ ಶತಮಾನದಲ್ಲಿ ಶ್ರೀ
ವೈಷ್ಣವರು ಇಬ್ಭಾಗವಾದರು. ತತ್ವಒಂದೇ ಆದರೂ ಆಚರಣೆಗಳು ವಿ ಭಿನ್ನವಾದವು. ಪರಸ್ಪರ ದ್ವೇಷ , ಅಸೂಯೆಗಳು ಚಿಗುರೊಡೆದವು . ಯಾವ ಅರಿಷಡ್ವರ್ಗಗಳ ನಿವಾರಣೆಗೆ ರಾಮಾನುಜರು ಶ್ರಮಿಸಿದರೋ ಅದು ಭೂತಾಕಾರವಾಗಿ ಬೆಳೆದು ಮೂಲತತ್ವವನ್ನೇ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ . ಈ ಶುಭ ಅವಸರದಲ್ಲಿಯಾದರೂ ಮರೆಯೋಣ ಭಿನ್ನತೆ. ಕಲೆಯೋಣ ಪ್ರೀತಿ ಪ್ರೇಮಾದರದಿಂದ .ಹರಡೋಣ ರಾಮಾನುಜರ ಆದರ್ಶ ಜೀವನವ. ಪಾಲಿಸೋಣ ಒಮ್ಮತದಿಂದ
ರಾಮಾನುಜರ ತತ್ವಗಳ ಎಂಬುದೇ ನನ್ನ ಅರಿಕೆ.

ಶ್ರೀನಿವಾಸಪ್ರಸಾದ್. ಕೆ .ವಿ

No comments:

Post a Comment