Sunday, July 30, 2017


ಕಳಲೆ ವಾರ್ತಾ ಸಂಚಿಕೆ ...... ಆಗಸ್ಟ್ ೨೦೧೭
Varalakshmi Vrata is a festival to propitiate the goddess Lakshmi, the consort of Vishnu, one of the Hindu Trinity. Varalakshmi is one who grants boons (Varam). It is an important pooja performed by many women in the states of Andhra PradeshTelanganaKarnataka and Tamil Nadu. The Hindu festival going by the name 'Vara Lakshmi Vrata' is celebrated on the Second Friday 
Varalakshmi Vrata is performed by married woman for the well being of all the family members, especially husband, to get progeny etc. It is believed that worshiping Goddess Varalakshmi on this day is equivalent to worshiping Ashtalaksmi
ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ಅಂದರೆ ಈ ವರ್ಷ ಆಗಸ್ಟ್  ೪ ರಂದು ಕರ್ನಾಟಕದಲ್ಲಿ ವೈಭವದಿಂದ ಆಚರಿಸಲಾಗುತ್ತದೆ . ಈ ವ್ರತವನ್ನು ವಿವಾಹಿತ ಮಹಿಳೆಯರು ಉಪವಾಸವಿದ್ದು ತಮ್ಮ ಕುಟುಂಬದ ಸದಸ್ಯರ ಒಳಿತಿಗಾಗಿ , ಮಕ್ಕಳಾಗದಿದ್ದವರು ಮಕ್ಕಳಾಗಲೆಂದು ,ಸಂಪತ್ತಿನ ಅಭಿವೃದ್ಧಿಗಾಗಿ ಹೀಗೆ ಬಗೆಬಗೆಯ ಕಾರಣಗಳಿಗಾಗಿ ಬಹಳ ಶ್ರದ್ದೆಯಿಂದ ಭಕ್ತಿಯಿಂದ ಆಚರಿಸುತ್ತಾರೆ . ಈ ದಿನ ಲಕ್ಷ್ಮಿಯನ್ನು ಆರಾಧಿಸಿದರೆ ಅಷ್ಟಲಕ್ಷ್ಮಿಯನ್ನು ಆರಾಧಿಸಿದಂತೆ . ಕಳಲೆಯಲ್ಲಿಯೂ ಈ ಹಬ್ಬವನ್ನು ಬಹಳ ಶ್ರದ್ದೆಯಿಂದ ಆಚರಿಸಲಾಗುತ್ತದೆ . ಅರವಿಂದನಾಯಕಿ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ನೆರವೇರಿಸಲಾಗುತ್ತದೆ . ಲಕ್ಷ್ಮೀಕಾಂತ ಉತ್ಸವ ಮೂರ್ತಿಯನ್ನು ಉಭಯ ದೇವಿಯರೊಂದಿಗೆ ಅಮ್ಮನವರ ಸನ್ನಿಧಿಗೆ ಕರೆತಂದು ಮಂಟಪೋತ್ಸವ ನೆರವೇರಿಸಲಾಗುತ್ತದೆ . ವೇದ ಪ್ರಬಂಧ ಪಾರಾಯಣದೊಂದಿಗೆ ಶಾತ್ತುಮೊರೈಯನ್ನು ನಡೆಸಲಾಗುತ್ತದೆ . ಅಂದು ಮಾಡುವ ವಿಶೇಷ ಅಲಂಕಾರ ಅದ್ಭುತ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಾರ್ಥನೆ . 








Wednesday, July 19, 2017

ಕಳಲೆ ಸುದ್ಧಿ ಪತ್ರಿಕೆ -----ಜುಲೈ ೨೦೧೭


ಇದೇ ಜುಲೈ ೨೬ ಬುಧವಾರದಂದು ಆಂಡಾಳ್ ಅವತಾರ ದಿನವನ್ನು ಭಾರತಾದ್ಯಂತ ಶ್ರೀ ವೈಷ್ಣವ ದೇವಾಲಯಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ . ಆಂಡಾಳ್ ವೈಷ್ಣವ ಪಂಥದ ೧೨ ಆಳ್ವಾರ್ಗಳಲ್ಲಿ ಅಗ್ರಗಣ್ಯಳು ಆಂಡಾಳ್ಳ ಮೂಲ ಹೆಸರು ಗೋದಾದೇವಿ . ಇವಳು ಪೆರಿಯ ಆಳ್ವಾರ್  ಎಂದೇ ಖ್ಯಾತರಾದ ವಿಷ್ಣುಚಿತ್ತರ ಸಾಕುಮಗಳು . ಇವರು ರಂಗನಾಥನ ಸೇವೆಗೆಂದು ಹೂವು ಸಂಗ್ರಹಿಸುತ್ತಿದ್ದಾಗ ಭೂಮಿಯಲ್ಲಿ ದೊರೆತವಳು . ಅದಕ್ಕಾಗಿ ಆಡಿ  ತಿಂಗಳ ಪುಬ್ಬಾ ನಕ್ಷತ್ರದಂದು ಆಂಡಾಳ್ ಅವತಾರ ದಿನವೆಂದು ಕೊಂಡಾಡಪಡುತ್ತದೆ . ಇವಳಿಗೆ ಶೂಡಿ ಕೊಡುತ್ತ ನಾಚಿಯಾರ್ ಎಂದೂ ಹೆಸರು ಏಕೆಂದರೆ ಇವಳು ಧರಿಸಿ ನೀಡುತ್ತಿದ್ದ ಹೂವಿನ ಮಾಲೆ ರಂಗನಾಥನಿಗೆ ಪ್ರಿಯವಾಗಿತ್ತು ಈಕೆ ಸಮಗ್ರ  ಭಕ್ತಿ ಪಂಥದ ಪ್ರವರ್ತಕಳು .ಸ್ತ್ರೀಯರಿಗೂ ಭಕ್ತಿ ಮಾರ್ಗದ ಮೂಲಕ ಮೋಕ್ಷ ಸಾಧ್ಯವೆಂದು ನಿರೂಪಿಸದ್ದಳು . ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಅಡಿಪಾಯ 
 

ಹಾಕಿದವಳು .  ಹೇಗೆ ರಾಧೆ ಭಕ್ತಿಯಿಂದ ಕೃಷ್ಣನನ್ನು ಪಡೆದಳೋ ಹಾಗೆ ಗೋದೆ ಕೂಡ ತನ್ನ ಅಪ್ರತಿಮ ಭಕ್ತಿಯಿಂದ ರಂಗನಾಥನನ್ನು ಪಡೆದಳು.  ಇವಳು ರಚಿಸಿರುವ ತಿರುಪ್ಪಾವೈ ಅಂದಿನಿಂದ ಇಂದಿನ ದಿನದವರೆಗೂ ದೇವಾಲಯಗಳಲ್ಲಿ ಮನೆಮನೆಗಳಲ್ಲಿ ಪಠಿಸಲಾಗುತ್ತದೆ . ಕಳಲೆಯಲ್ಲಿಯೂ ಗೋದೆಯ ಅವತಾರದಿನವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ . ಇದಕ್ಕಾಗಿ ಒಂದು ತಿಂಗಳ ಮೊದಲಿಂದ ಲಕ್ಷ್ಮೀಕಾಂತ ಮೂರ್ತಿಗೆ ಡೋಲೋತ್ಸವ ನಡೆಸಲಾಗುತ್ತದೆ . ಅವತಾರದ ದಿನ ಮೂಲ ಮೂರ್ತಿಗೆ ಮತ್ತು ಅರವಿಂದ ನಾಯಕಿ ಮೂರ್ತಿಗೆ ವಿಶೇಷ ಅಭಿಷೇಕ , ಅರ್ಚನೆ,ಪ್ರಬಂಧ ಪಾರಾಯಣ ,ಶಾತ್ತುಮೊರೈ ,ಡೋಲೋತ್ಸವ ನೆರವೇರಿಸಲಾಗುತ್ತದೆ .  ಪ್ರಸಾದ ವಿನಿಯೋಗ ಸಹ ಮಾಡಲಾಗುತ್ತದೆ . ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಪ್ರಾರ್ಥನೆ . 

July 26th Wednesday, is observed as Andal's Avatara day through out India..Andal  is the only female Alvar among the 12 Alvar saints of South India. The original name of Andal is Godha.She is step daughter of Sri Vishnuchittar, who is referred as Periya Alwar.While he was plucking flowers for adoring Ranganatha. Godha was found in the bushes.That is why this day i.e Pubba starday of Adi month  is observed as Avatara day.She is also called Shoodokodutta nachiyar because the garland which she wore prior to adoring Ranganatha moorthy was accepted by God.She is the propagator of Bhakti marg. She was the exponent of Ramanuja's Vishistadwaita philosophy.Just as Radha married Lord Krishna through undaunted devotion to Lord Krishna, Godha also married Ranganatha through her staunch devotion.Godha has written Tiruppavai , a poem of 30 versus, in devotion to Lord& this poem is recited even today in all temples & households.In Kalale also the Avatara day is observed with great devotion.For this purpose Dolotsava for Utsava deity of Lakshmikanta is conducted one month prior to Avatara day. On the Avatarav day, Abhishekam is conducted to moola murthy of Andal & Aravindanayaki followed by archane, prabandha parayanam,Dolotsava and shattumurai.Prasadam is also distributed . Devotees are requested to attend the celeberation in large number & make the occasion a great success.

Tuesday, April 25, 2017


ನನ್ನ ಜೀವನ ಚರಿತೆ ಭಾಗ ೫

ಆಸ್ತಿ ವಿಭಜನೆ ಎಂಬುದು ತುಂಬಾ ದುಃಖಕರವಾದದ್ದು .ಆದರೆ ಅನಿವಾರ್ಯವಾಗಿತ್ತು . ಒಂದು ಕಡೆ ಲಕ್ಷಗಟ್ಟಲೆ ಸಾಲ . ಮತ್ತೊಂದೆಡೆ ತಮ್ಮನ ಬೇಜವಾಬ್ಧಾರಿ . ತಮ್ಮನಾದರೋ ನಮ್ಮ ತಂದೆ ೧೯೭೦ರಲ್ಲಿ ಆರಂಭಿಸಿದ್ದ ಸುಧರ್ಮಾ ಪತ್ರಿಕೆಗೆ ಸಂಪಾದಕನಾಗಿ ಸ್ವಯಂ ಘೋಷಿಸಿಕೊಂಡಿದ್ದ . ಮುದ್ರಣಾಲಯವನ್ನು ತನ್ನದೆಂದು ಘೋಷಿಸಿಕೊಂಡಿದ್ದ . ಸಾಲ ಮಾತ್ರ ನನ್ನ ಜವಾಬ್ಧಾರಿ ಎನ್ನುತ್ತಿದ್ದ . ತಂಗಿಯರು ಯಾರೂ ಸಹಾಯಕ್ಕೆ ಧಾವಿಸಲಿಲ್ಲ. ಮಧ್ಯೆ ನನ್ನ ತಮ್ಮನ ಮಡದಿಯ ಉಪದ್ರವ . ದಾರಿ ಕಾಣದಾಯಿತು. ನಾನು ದೂರದ ಮಂಗಳೂರಿನಲ್ಲಿದ್ದೆ . ಮನೆ ಶಿಥಿಲವಾಗಿತ್ತು ಮಳೆಯಲ್ಲಿ ಹಿಂದಿನ ಭಾಗ ಕುಸಿಯತೊಡಗಿತ್ತು. ಆದರೆ ತಂದೆಗೆ ಮಾತು ಕೊಟ್ಟಿದ್ದೆ. ತಮ್ಮನ ಜೀವನಕ್ಕೆ ಉಪಾಯ ಮಾಡುವೆನೆಂದು. ಅವನಿಗೆ ಕಂಪ್ಯೂಟರ್ ಉದ್ಯಮಕ್ಕೆ ಸಾಲ ಬ್ಯಾಂಕ್ನಿಂದ ಕೊಡಿಸಿದ್ದೆ. ಅವನ ಇತ್ತೀಚಿನ ಧೋರಣೆ ಭಯ ಮೂಡಿಸಿತ್ತು. ಆ ಸಾಲವು ನನ್ನ ತಲೆಯ ಮೇಲೆ ಬಂದರೆ ನನ್ನ ಮಕ್ಕಳ ಗತಿ ಏನು ಎಂಬ ಚಿಂತೆ ಕಾಡ ತೊಡಗಿತು. ತಂಗಿಯರೂ ಆಸ್ತಿ ವಿಭಜನೆಯೇ ಸೂಕ್ತ ಎಂದು ತಿಳಿಸಿ ಎಲ್ಲರೂ ಒಪ್ಪಿಗೆ ಕೊಟ್ಟರು.

ತಮ್ಮನ ಹಿತವನ್ನು ಗಮನದಲ್ಲಿರಿಸಿ ಒಪ್ಪಿದೆ. ಅವನ ಜೀವನಕ್ಕೆ ಅಗತ್ಯವಾದ ಮುದ್ರಣಾಲಯ,ಪತ್ರಿಕೆ ಎಲ್ಲವನ್ನೂ ತಮ್ಮನಿಗೇ ಬಿಟ್ಟುಕೊಟ್ಟು ಮನೆಯನ್ನು ಉತ್ತರ ದಕ್ಷಿಣವಾಗಿ ಇಬ್ಬಾಗ ಮಾಡಿ , ಉದ್ಯಮದ ಸಾಲ ಅವನ ಸಂಪಾದನೆಯಿಂದಲೇ ತೀರಿಸಬೇಕೆಂದು ತಿಳಿಯ ಹೇಳಿ ೧೯೯೩ ರಲ್ಲಿ ಆಸ್ತಿ ವಿಭಜನೆ ಮಾಡಿ ನೋಂದಾಯಿಸಿ ತಮ್ಮನ ಭಾಗದ ಪಾತ್ರವನ್ನು ನೀಡಿ ಸ್ವತಂತ್ರನನ್ನಾಗಿಸಿದೆ. ತಂಗಿಯ ಮದುವೆಗೆ ಮಾಡಿದ್ದ ಸಾಲ ಮತ್ತು ತಂದೆಯವರ ಆಸ್ಪತ್ರೆಯ ವೆಚ್ಚದ  ಸಾಲವನ್ನು ಆಪ್ತರಿಗೆ ಕಂತಿನಲ್ಲಿ ಮರು ಪಾವತಿ ಮಾಡಿದೆ. ತಂದೆಯ ಚಿತ್ರದಡಿಯಲ್ಲಿ ಅತ್ತೆ . ತಂದೆಯ ಕ್ಷಮೆ ಯಾಚಿಸಿದೆ. ಎಲ್ಲವೂ ದೈವ ನಿರ್ಣಯದಂತೆ ನಡೆದು ಹೋಗಿತ್ತು.

ನಾನು ಉದ್ಯೋಗದಲ್ಲಿ ಮುಂದುವರಿದೆ. ಮಂಗಳೂರಿನಲ್ಲಿ ೧೯೯೬ ರವರೆವಿಗೂ ಇದ್ದೆ. ಮಕ್ಕಳ ವಿದ್ಯಾಭ್ಯಾಸ ಒಳ್ಳೆಯ ತಳಹದಿಯ ಮೇಲೆ ನಡೆಯಿತು. ಮಂಗಳೂರು ವಿದ್ಯಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಹಾಗಾಗಿ ಇಬ್ಬರು ಮಕ್ಕಳಿಗೂ ಒಳ್ಳೆಯ ವಿದ್ಯೆ ದೊರೆಯಿತು. ಮಕ್ಕಳು ಒಳ್ಳೆಯ ಹೆಸರು ಮಾಡಿದರು. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಭಾಗವಹಿಸಿ ಒಳ್ಳೆಯ ಹೆಸರು ತಂದರು. ಒಳ್ಳೆಯ ಅಂಕ ಪಡೆದು ಶಾಲೆಯಲ್ಲಿಯೂ ಉತ್ತಮ ವಿದ್ಯಾರ್ಥಿಗಳೆಂದು ಹೆಮ್ಮೆ ತಂದರು. ತಂದೆಗೂ ತಾತನಿಗೂ ಕೀರ್ತಿ ತಂದರು. ವಂಶದ ಹೆಸರನ್ನು ಉಳಿಸಿದರು.

ಈ ಮಧ್ಯೆ ತಂದೆಯವರ ನಿಧನದ ಸಂದರ್ಭದಲ್ಲಿ ಅವರು ೧೯೬೩ ರಲ್ಲಿ ಆರಂಭಿಸಿ ಅಭಿವೃದ್ಧಿ ಪಡಿಸಿದ್ದ ಶ್ರೀ ಕಾಂತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸ್ಥಾನವನ್ನು ವಹಿಸಿಕೊಳ್ಳಬೇಕೆಂದು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಒತ್ತಡ ತಂದರು. ನಾನು ಆಡಳಿತದಲ್ಲಿ ಅನುಭವವಿಲ್ಲವೆಂದು ಎಷ್ಟು ಹೇಳಿದರೂ ಒಪ್ಪಲಿಲ್ಲ . ನಾನು ಮಂಗಳೂರಿನಲ್ಲಿ ಇದ್ದು ಶಾಲೆ ನಡೆಸುವುದು ಅಸಾಧ್ಯವೆಂದು ಹೇಳಿದೆ. ಶಾಲೆ ಉತ್ತಮವಾಗಿ ನಡೆಯುತ್ತಿರುವಾಗ ಬೇರೆಯವರಿಗೆ ವರ್ಗಾಯಿಸುವುದು ಸೂಕ್ತವಲ್ಲವೆಂದೂ,ಆದ್ದರಿಂದ ನಾನೇ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸಿದರು . ಶಾಲೆಯ ಹಿತ ದ್ರಿಷ್ಟಿ ಯಿಂದ ಒಪ್ಪಿದೆ. ಅದರಂತೆ ೧೯೯೦ ಸೆಪ್ಟೆಂಬರ್ ನಿಂದ ಕಾರ್ಯದರ್ಶಿಯಾಗಿ
ಅಧಿಕಾರ ಹಿಡಿದೆ . ಶಾಲೆಯಲ್ಲಿ ಪ್ರಗತಿ ಮಂದಗತಿಯಲ್ಲಿತ್ತು . ಅದನ್ನು ಸರಿಪಡಿಸಲು ಅಧ್ಯಾಪಕರ ಸಭೆ ಕರೆದು ಸೂಚನೆ ನೀಡಿದೆ. ತಂದೆಯವರ ಅನಾರೋಗ್ಯದಿಂದ ನಡೆಯದೇ ನಿಂತಿದ್ದ ರಜತ ಮಹೋತ್ಸವ ಮುಂದೂಡಲ್ಪಟ್ಟಿತ್ತು . ಅದಕ್ಕಾಗಿ ಬೇಕಾದ ವ್ಯವಸ್ಥೆಗೆ ಚಾಲನೆ ನೀಡಿದೆ. ಒಂದು ಸ್ವಾಗತ ಸಮಿತಿ ರಚಿಸಿ ಸೂಕ್ತ ನಿರ್ದೇಶ ನೀಡಿದೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ತರಬೇಕೆಂದೂ, ಹಾಗೂ ಒಂದು ಸ್ಮಾರಕ ಭವನ ನಿರ್ಮಾಣವಾಗಬೇಕೆಂತಲೂ ತೀರ್ಮಾನ ಮಾಡಿದೆವು. ನಾನು ದೂರದ ಮಂಗಳೂರಿನಲ್ಲಿ ಇದ್ದಿದ್ದರಿಂದ ಜವಾಬ್ಧಾರಿಯನ್ನು ಸಮಿತಿಯ ಸದಸ್ಯರಿಗೆ ವಹಿಸಿ ನಿರ್ದೇಶನ ನೀಡಿದೆ. ಉತ್ತಮ ಪ್ರತಿಕ್ರಿಯೆ ಬಂತು.
ಒಂದು ವರ್ಷದಲ್ಲಿ ಬೃಹತ್ತಾದ ಸ್ಮಾರಕ ಭವನ ಪೂರ್ಣ ವಾಯಿತು. ಅನೇಕ ಮಂದಿ ದಾನಿಗಳು ಕೊಡುಗೆ ನೀಡಿದರು. ಸ್ಮರಣ ಸಂಚಿಕೆಗೆ ಉತ್ತಮ ಜಾಹಿರಾತುಗಳು ದೊರಕಿದವು. ಅಧ್ಯಾಪಕರ ಸಭೆ ನಡಿಸಿ ಮಕ್ಕಳ ಸಹಕಾರಪಡೆದು ವಿವಿಧ ಗುಂಪುಗಳನ್ನು ರಚಿಸಲು ತಿಳಿಸಿದೆ. ಈ ಸಂದರ್ಭದಲ್ಲಿ ಒಂದು ವಿಜ್ಞಾನ ಪ್ರದರ್ಶನ ಏರ್ಪಡಿಸಲು ಸೂಚನೆ ನೀಡಿದೆ. ಎರಡು ದಿನ ಕಾರ್ಯಕ್ರಮದಲ್ಲಿ ಮನರಂಜನೆ, ವಾಕ್ಸ್ಪರ್ಧೆ, ಗಾಯನ ಸ್ಪರ್ಧೆ,ರಂಗೋಲಿ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ ನೀಡಿದೆ. ಆಹ್ವಾನ ಸಮಿತಿ ರಚಿಸಿ ಗಣ್ಯರನ್ನು ಗುರುತಿಸಿ ಆಹ್ವಾನಿಸಲು ಸೂಚನೆ ನೀಡಿದೆ . ಅದರಂತೆ ಮೈಸೂರಿನ ಅಂದಿನ ವಿಧಾನ ಸಭೆಯ ಸದಸ್ಯರು ಮತ್ತು ಮಂತ್ರಿ ಗಳೂ ಆಗಿದ್ದ ಶ್ರೀ ಶ್ರೀನಿವಾಸ ಪ್ರಸಾದ್,ನಗರಸಭೆಯ ಅಧ್ಯಕ್ಷರು,ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಶ್ರೀ ಚಿರಂಜೀವಿ ಸಿಂಗ್ ಹೀಗೆ ಅನೇಕ ಗಣ್ಯರ ಪಡೆಯನ್ನೇ ಆಹ್ವಾನಿಸಿದೆವು.. ಶಾಲೆಯ ಕಟ್ಟಡದ ಮುಂದೆ ದೊಡ್ಡ ಶಾಮಿಯಾನ ರಚಿಸಲಾಯಿತು. ತಂದೆಯವರ ೫ಅಡಿ ಎತ್ತರದ ತೈಲ ಚಿತ್ರ ರಚಿಸಬೇಕೆಂದು ತೀರ್ಮಾನಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು. ಶಾಲೆಯ ಬ್ಯಾಂಡ್ ತಂಡದಿಂದ ಸ್ವಾಗತಕ್ಕೆ ಬೇಕಾದ ಏರ್ಪಾಡು ಮಾಡಲಾಯಿತು. ಶಾಲೆಯದೆ ಆದ ಒಂದು ಧ್ವಜ ತಯಾರಿಸಿ ಅದರ ಆರೋಹಣಕ್ಕೆ ಬೇಕಾದ ವ್ಯವಸ್ಥೆ,ಮತ್ತು ಶಾಲೆಯ ಮಕ್ಕಳಿಂದ ಕವಾಯಿತು ವ್ಯವಸ್ಥೆಗೊಳಿಸಲಾಯಿತು.
ಆ ದಿನ ಬಂದೇಬಿಟ್ಟಿತು . ೧೯೯೨ ರಲ್ಲಿ ಅದ್ದೂರಿಯಾಗಿ ರಜತಮಹೋತ್ಸವ ನೆರವೇರಿತು. ಎಲ್ಲರೂ ಪ್ರಶಂಸಿಸಿದರು. ದೂರದಲ್ಲಿದ್ದು ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಕ್ಕೆ ಅಭಿನಂದನೆಯ ಸುರಿಮಳೆಯೇ ಬಂದಿತು. ತಂದೆಯವರಿಗೆ ಸೂಕ್ತವಾದ ಕೃತಜ್ಞತೆ ವ್ಯಕ್ತವಾಗಿತ್ತು . ಅವರ ೨೭ ವರ್ಷದ ಪರಿಶ್ರಮ ಒಂದು ಆಯಾಮ ಪಡೆದಿತ್ತು. ಶಾಲೆಗೆ ಒಳ್ಳೆಯ ಗೌರವ ದೊರೆಕಿತ್ತು. ಮನಸ್ಸು ಸಂತೋಷದಿಂದ ಕುಣಿದಾಡಿತು .

ತಂದೆಯವರ ಅಪೂರ್ಣವಾದ ಕನಸನ್ನು ಪೂರ್ಣ ಗೊಳಿಸಿದೆನೆಂಬ ಸಂತೋಷ ಮನ ಮನ ದಲ್ಲಿ ನಲಿದಾಡಿತು.













ಜನುಮದ ಗೆಳತಿಗೆ ಶುಭಾಶಯ

ಜನುಮದ ಗೆಳತಿಯೇ ನಿನಗೆ ಶುಭಾಶಯ
ತುಂಬಿದ ಅರವತ್ತು ವರ್ಷದ ಅವಸರದಿ
ನಡೆದೆ ಜೊತೆ ಜೊತೆಯಲಿ ೩೪ ವರುಷ
ನಾ ಮರೆಯಲಾರೆ ನಿನ್ನ ದೀರ್ಘ ಒಡನಾಟ
ಅನುರಾಗ ಅರಳಿಸಿದೆ ಪ್ರೇಮ ಬಂಧನದಿ
ಅನುಸರಿಸಿದೆ ಜೀವನದ ಕಷ್ಟ ಸುಖದಲಿ
ಮೂಡಿಸಿದೆ ವಿಶ್ವಾಸ ನನ್ನ ಸಿಹಿ ಕಹಿಯಲಿ
ಸಾಂತ್ವನವ ನೀಡುತ ನನ್ನ ಕಷ್ಟದ ದಿನಗಳಲಿ
ಜೊತೆಯಾದೆ ಜವಾಬ್ದಾರಿಯಲಿ ಬೆಂಬಲಿಸಿ
ನಡೆಸಿ ವಿವಾಹ ಎರಡು ತಂಗಿಯರ ತಮ್ಮನ
ತಂದೆ ರುಜಿನದಲಿ ಮಲಗಿರಲು ನೀನಾದೆ
ಆಸರೆ ಅವರಿಗೆ ನನ್ನ ಅನುಪಸ್ಥಿತಿಯಲಿ
ವಿವಾಹದಾರಂಭದಲಿ ಇರಲಿಲ್ಲ ರೇಡಿಯೋ
ಉಟ್ಟಬಟ್ಟೆಯಲಿ ನಡೆದೆ ಹುಬ್ಬಳ್ಳಿಗೆ ಧೈರ್ಯದಿ
ನಡೆಸಿದೆ ಸಂಸಾರ ಸಂತಸದಿ ತಿಂಗಳ ಸಂಬಳದಿ
ಉಳಿಸಿದೆ ಸಿರಿಯ ಮುಂದಿನ ದಿನಗಳಿಗಾಗಿ
ಆಯಿತೆರಡು ಕುಡಿಗಳು ಬೆಳೆಸಿದೆ ಪ್ರೀತಿಯಲಿ
ಉಣಿಸುತ ಪ್ರೇಮ ಪಾಠವ ವಿದ್ಯೆ ಜೊತೆಯಲಿ
ಬೆಳೆದರು ಮಕ್ಕಳು ತಾಯಿಯ ಮಮತೆಯಲಿ
ಪಡೆದರು ದೊಡ್ಡ ವಿದ್ಯೆಯ ಉದ್ಯೋಗವನು
ನಾ ಮಲಗಿರೆ ಅನಾರೋಗ್ಯದಿ ನಿಂತೆ ಜೊತೆಯಲಿ
ಹಗಲಿರುಳೆನ್ನದೆ ನೆರಳಾಗಿ ನಡೆದೆ ಬೆಂಬಲಿಸುತ
ಮನೆಯೊಂದನು ಕಟ್ಟಲು ಚಿಂತಿಸಲು ಇತ್ತೆ ಹಸ್ತ
ಪ್ರತಿದಿನ ಪಯಣಿಸುತ ದೂರವ ಕಟ್ಟಡ ನಿರ್ಮಾಣಕೆ
ನಡೆಸಿದೆ ಎರಡು ಮಕ್ಕಳ ವಿವಾಹ ಸಮಾರಂಭ
ಎಣಿಸದೆ ಅನಾರೋಗ್ಯವನೂ ಸಂಭ್ರಮಿಸುತ
ಜನಿಸಿದಳು  ಮೊಮ್ಮಗಳು ನಿನ್ನ ಆರೈಕೆಯಲಿ
ಬೆಳೆಸಿದೆ ಮೊಮ್ಮಗಳ ಐದುಮಾಸ ಮಮತೆಯಲಿ
ನಿನಗಿದೋ ಶುಭಾಶಯ ತುಂಬಿದ ಆರು ದಶಕದಿ
ಕಳೆದೆ  ಮೂರು ದಶಕಗಳ ಒಲವಿನ ಒಡನಾಟದಿ
ಹರಸಲಿ ರಮಾಪತಿಯು ದೀರ್ಘಆಯುರಾರೋಗ್ಯ
ಸಂಭ್ರಮಿಸಲು ಮೊಮ್ಮಕ್ಕಳು ಮಕ್ಕಳು ಪತಿಯೊಡನೆ
ರಚನೆ : ಕೆ.ವಿ. ಶ್ರೀನಿವಾಸ ಪ್ರಸಾದ್
 

ನನ್ನ ಮಗಳಿಗೆ ಶುಭಾಶಯ

ಶುಭಾಶಯ ಮುದ್ದಿನ ಕುವರಿಗೆ
ಜನುಮದಿನದ ಹಾರ್ದಿಕ ಶುಭಾಶಯ
ಕಳೆದಿಹುದು ವಸಂತ ಬಾಲ್ಯಾರಭ್ಯ
ವಿವಾಹೋತ್ತರ ನಾಲ್ಕು ವರ್ಷ ತನಕ

















ಏರಿರುವೆ ವಿದ್ಯೆ ತಾಂತ್ರಿಕತೆಯಲಿ
ಉದ್ಯೋಗದಲಿ ವೋಲ್ವೋವರೆವಿಗೆ
ಆಗಿರುವರು ಪತಿ ಆಪ್ತಸಖರೆನಿಸಿ
ಸಾಗಲಿ ವಸಂತಗಳು ಉದಾತ್ತ ಪ್ರೇಮದಿ


ಅರಳಿಹುದು ಕುಸುಮವೊಂದು ಬಂಧದಲಿ
ಮಗಳಾಗಿ ಬೆಳಕ ನೀಡುವ ಜ್ಯೋತಿಯಾಗಿ
ತಂದಿಹಳು ಹರುಷ ಎರಡು ಕುಟುಂಬದಲಿ
ಅವಳ ಆಟ ಇರಲಿ ಎಂದೆಂದಿಗೂ ಹಸುರಾಗಿ

ನನ್ನ ಮಗನಿಗೆ ಶುಭಾಶಯ














ಕಲಾ ಸುತನೆ ನೀನಾಗು ತಾಯಿಯಂತೆ
ಸಕಲ ಗುಣಗಳ ಪಡೆದು ನಕ್ಷತ್ರವಾಗು
ತಾಳ್ಮೆ ಸೌಜನ್ಯ ಆದರಿಸುವ ಗುಣ ಹೊಂದಿ
ಬೆಳಕಾಗು ನಿನ್ನ ಸತಿ ಸುತ ಸುತೆಯರಿಗೆ
ಪ್ರಸಾದ ಸುತನೆ ನೀನಾಗು ತಂದೆಯಂತೆ
ಸಕಲ ವಿದ್ಯೆಗಳ ಕಲಿತು ಗುರುವಾಗು
ದಾರಿ ತೋರಿಸುತ ಅರಸಿ ಬರುವವರಿಗೆ
ಬರಹ ಬಲ್ಲವನಾಗು ತಿಳಿಸುತ ಅರಿತದ್ದನು
ನೀನಾಗು ನೀನು ಬೆರೆಸುತ ಗುಣಗಳೆಲ್ಲ
ತೋರಿಸು ಪ್ರೀತಿಯ ಕೈ ಹಿಡಿದ ಮಡದಿಗೆ
ಆದರಿಸು ಎಂದೆಂದಿಗೂ ನಿನ್ನ ಬೆಳೆಸಿದವರ
ಗೌರವಿಸು ಸತತ ನಿನ್ನ ಸ್ನೇಹಿತರ ಬಂಧುಗಳ 

ಪುಟ್ಟ ತಂಗಿಗೆ ಶುಭಾಷಯ


ಇವಳೇನಾ ನನ್ನ ಪುಟ್ಟ ತಂಗಿ
೨೫ ವರುಷದ ಹಿಂದೆ ಧಾರೆ
ಎರೆದಿದ್ದು ಮಡಿಲಲ್ಲಿ ಇರಿಸಿ
ಮಾಸಿಲ್ಲ ಆ ಸುಂದರ ಮುಖ
ಈಗ ಅವಳು ಎರಡು ಗಂಡು
ಮಕ್ಕಳ ತಾಯಿ ಆದರೆ ಇಂದಿಗೂ
ಕಾಣುತಿಹಳು ಯೌವನದ ಹುರುಪಲ್ಲಿ
ಇವಳೇನಾ ನನ್ನ ಪುಟ್ಟ ತಂಗಿ
ಶುಭಾಷಯವು ಬೆಳ್ಳಿ ಹಬ್ಬದಲಿ
ಅಳಿಯ ನರಸಿಂಹನಿಗೆ ಮತ್ತು
ತಂಗಿ ಕನಕಳಿಗೆ ಬಾಳು ನೂರು
ವರುಷ ಸುಖ ಸಂತೋಷದಲಿ ಎಂದು

News letter for December 2016

The month of Karthigai is very auspicious to both Vaishnavites & Shaivites. The Karthigai deepam also known as Vishnu deepam falls this year on 14th December. People light deepams in front of their houses to tide out evil forces, as light is embodiment of Lord Vishnu .This month also is the birth month of Bhagavad Geetha. In temples ,Sokkapanai i.e. lighting of palm leaves covered with white cloth is performed, signifying the Vamana Avatar (Ulagalandha Perumal)

ಕಾರ್ತಿಕ ಮಾಸವು ಶ್ರೀ ವೈಷ್ಣವರಿಗೂ ಮತ್ತು ಶೈವರಿಗೂ ಅತಿ ಪವಿತ್ರವಾದದ್ದು . ಕಾರ್ತಿಕ ದೀಪ ಅಥವಾ ವಿಷ್ಣು ದೀಪವು ಇದೇ ವರ್ಷ ಡಿಸೆಂಬರ್ ೧೪ರಂದು ಬರುತ್ತದೆ . ಈ ದಿನ ಭಕ್ತರು ಶ್ರದ್ದೆಯಿಂದ ಮನೆಯ ತುಂಬಾ ಹಣತೆಯನ್ನು ಹಚ್ಚುತ್ತಾರೆ . ಏಕೆಂದರೆ ವಿಷ್ಣುವು ಅಗ್ನಿಸ್ವರೂಪ . ಇದೇ ತಿಂಗಳು ಭಗವದ್ಗೀತೆಯ ಜನನವಾಯಿತೆಂದು ಪ್ರತೀತಿ . ದೇವಾಲಯಗಳಲ್ಲಿ ವಿಷ್ಣು ದೀಪದಂದು
ಶೋಕ್ಕುಪ್ಪಾಣೈ ಅಂದರೆ ತೆಂಗಿನ ಗರಿಗೆ ಬಿಳಿ ವಸ್ತ್ರ ಸುತ್ತಿ ಬೆಂಕಿ ಹಚ್ಚುವ ಪ್ರಕ್ರಿಯೆ ಆಚರಿಸುತ್ತಾರೆ . ಇದು ವಾಮನ ಅವತಾರದ ಸ್ಮರಣೆಗಾಗಿ ಎಂದು ಹೇಳಲಾಗುತ್ತದೆ .

Monday, April 24, 2017



News letter for May 2017


ರಾಮಾನುಜರು ೧೧ ನೇ ಶತಮಾನದ ಪ್ರಸಿದ್ಧ ದಾರ್ಶನಿಕರು. ಅದುವರೆಗೆ ಪ್ರಚಲಿತದಲ್ಲಿದ್ದ ಅದ್ವೈತ ಸಿದ್ದಾಂತಕ್ಕೆ ನೂತನ ವ್ಯಾಖಾನ ಪ್ರಸ್ತುತ ಪಡಿಸಿ ವಿಶಿಷ್ಟಾದ್ವೈತ ಸಿದ್ದಾಂತ ಸ್ಥಾಪಿಸಿ , ಜೀವಾತ್ಮ ಪರಮಾತ್ಮರು ಒಂದೇ ಆದರೂ ವಾಸನೆಯಿಂದ ಬೇರಾಗುವ ಜೀವಾತ್ಮಪರಮಾತ್ಮನನ್ನು ಹೊಂದಬೇಕಾದರೆ ಸಾಧನೆ ಅಗತ್ಯವೆಂದು ಪ್ರತಿಪಾದಿಸಿ , ಹಾಗೆ ಹೊಂದಲು ಮೂರು ಮಾರ್ಗಗಳಿದ್ದರೂ ,ಜ್ಞಾನ,ಕರ್ಮ ಮತ್ತು ಭಕ್ತಿ ಮಾರ್ಗಗಳಿದ್ದರೂ , ಅವುಗಳಲ್ಲಿ ಭಕ್ತಿ ಮಾರ್ಗವೇ ಶ್ರೇಷ್ಠವೆಂದು ನಿರೂಪಿಸಿ , ಭಗವಂತನಲ್ಲಿ ಶರಣಾಗುವುದೇಶ್ರೇಷ್ಠ ಮತ್ತು ಸರಳ ಮಾರ್ಗವೆಂದು ನಿರೂಪಿಸಿ,, ಭಕ್ತಿಮಾರ್ಗ ಪ್ರವರ್ತಕರೆನಿಸಿಕೊಂಡರು ಆ ಮಹಾನುಭಾವರ ಜನ್ಮ ಸಹಸ್ರಾಬ್ಧಿ
ಈ ವರ್ಷ ಮೇ ೧ ರಂದು ಅಖಂಡ ಭಾರತದಲ್ಲಿ ಆಚರಿಸಲ್ಪಡುತ್ತಿದ್ದು , ಕಳಲೆಯಲ್ಲಿಯೂ ವಿಶೇಷವಾಗಿ ನಡೆಸಲು ತೀರ್ಮಾನಿಸಲಾಗಿದೆ .ಈ ದಿಶೆಯಲ್ಲಿ ತೊಡಕ  ಪ್ರಬಂಧ ಪಾರಾಯಣಗಳನ್ನು ಏರ್ಪಡಿಸಲಾಗಿದ್ದು ಅಂದು ರಾಮಾನುಜಾಚಾರ್ಯರ ಮೂರ್ತಿಗೆ ಅಭಿಷೇಕ ವನ್ನೂನಂತರ ದಿವ್ಯ ರಥೋತ್ಸವವನ್ನು ಆಯೋಜಿಸಲಾಗಿದೆ. ರಥೋತ್ಸವದ ನಂತರ ಶಾತ್ತುಮೊರೈ ಇದ್ದು ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಮೇ ೧೦ರಂದು ವೈಮಾಳಿಗೆ ಉತ್ಸವ ನಡೆಯುತ್ತದೆ. ಅಂದು ಬೆಳಿಗ್ಗೆ ಲಕ್ಷ್ಮೀಕಾಂತರ ಮೂಲ ಮೂರ್ತಿಗೆ ಅಭಿಷೇಕ ವಿದ್ದು,,ಸಂಜೆಯಲ್ಲಿ ಶ್ರೀದೇವಿ ಭೂದೇವಿ ಸಮೇತರಾದ ಉತ್ಸವ ಮೂರ್ತಿಯನ್ನು ಮಾಳಿಗೆಯಲ್ಲಿರುವ ವಸಂತ ಮಂಟಪದಲ್ಲಿ ಬಿಜಯಮಾಡಿಸಿ ,ಮರ್ಯಾದೆಯ ನಂತರ ಮೂರು ಪ್ರದಕ್ಷಿಣೆಯಲ್ಲಿ ಕರೆತರಲಾಗುತ್ತದೆ. ಮೊದಲ ಪ್ರದಕ್ಷಿಣೆಯಲ್ಲಿ ವೇದ ಪಾರಾಯಣೆಯೂ , ಎರಡನೆಯ ಪ್ರದಕ್ಷಿಣೆಯಲ್ಲಿ ಸಂಗೀತ ಮೇಳವೂ , ಮೂರನೆಯ ಪ್ರದಕ್ಷಿಣೆಯಲ್ಲಿ ವಾದ್ಯ ಮೇಳವೂ ಜರಗುತ್ತದೆ. ಹುಣ್ಣಿಮೆಯ ತಣ್ಣನೆಯ  ಬೆಳದಿಂಗಳಲ್ಲಿ ಬಿಸಿ ಬಿಸಿಯ ಪ್ರಸಾದ
ವಿತರಿಸಲಾಗುತ್ತದೆ. ಈ ಸುಂದರ ಅನುಭವ ಸವಿದರೇನೇ ಚೆನ್ನ , ವರ್ಣಿಸಿದರೆ ಸಾಲದು. ಎಲ್ಲ ಆಸ್ತಿಕ ಭಕ್ತರಿಗೂ ಆಹ್ವಾನ ಉಂಟು.

Bhagavan Ramaanuja is a great philosopher of 11th century.Though he subscribed to Shankaraachaaryaas advaita philosophy,he differed to the extent that jeevatma , which is maligned by vaasana attains oneness with paramaatma only when jeevatma performs saadhana by following any of the 3 paths narrated in Bhagavadgeeta by Lord Krishna.They are Jnaana maarga, karma maarga or Bhakti maarga.Though the first two are little difficult paths, Ramanuja proved that the 3rd path namely Bhakti maarga is the easiest one and it only needs sublimation to God. Ramanuja initiated prapatti marga i.e. total surrender to God as most acceptable path accessible to everyone irrespective of caste, creed or religion.Thus Ramaanuja became the perpetrator of Bhakti cult in India.
The birth 1000th year of this great saint is being observed on May 1st all over India and in Kalale too efforts are afoot to celeberate birth 1000th year in a befitting way.In the morning sacred bath to Ramanuja is performed followed by Todaka,Prabandha parayana , followed by car festival to idol of Ramaanuja. . Later after shattumurai, Prasada viniyoga has also been arranged.

May 10th, vymaalige utsava takes place. On that day, sacred bath to moola moorthy has been arranged. In the evening utsava moorthy along with Sreedevi and Bhoodevi are taken to the rooftop of the temple , to vasanta maaligai. There after performing regular honours, the deities are taken in Pradakshina 3 times. In the first Pradakshina, veda paarayanam is offered. In the second round, sangeetam is rendered by vidwans and in the third round the nadaswara vidwans render vadya mela .As it is full moon day, under the sky in the bright cool moon light Hot prasaadam will be served to devotees.The rich experience can only be felt and cannot be described by words. All are welcome.



Ramanujacharya at Kalale

Ramanujacharya gudi at Kalale

Utsava moorthy of Ramanujacharya

Thursday, April 20, 2017

ನನ್ನ ಜೀವನ ಚರಿತೆ ಭಾಗ ೪

೧೯೮೧ರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಸೇರಿದೆ. ನನ್ನ ಈ ಹಿಂದಿನ ೬ ತಿಂಗಳ ಕೈಗಾರಿಕೆಯೊಂದರಲ್ಲಿ ಮಾಡಿದ ಕೆಲಸದ ಅನುಭವ ಸಹಾಯ ಮಾಡಿತು. ನೇರವಾಗಿ ಅಧಿಕಾರಿಯಾಗಿ ನೇಮಕಗೊಂಡೆ . ಮೊದಲಬಾರಿಗೆ ಮಂಗಳೂರಿನಲ್ಲಿ ಕೆಲಸ ಸೇರಿದೆ . ತಂದೆಯವರಿಗೆ ಆದ ಆನಂದ ಅಷ್ಟಿಷ್ಟಲ್ಲ . ಅವರಿಗೆ ಮಂಗಳೂರಿಗೆ ಒಬ್ಬನನ್ನೇ ಕಳುಹಿಸಲು ಅಂಜಿಕೆ . ಮದುವೆಗೆ ಒಪ್ಪಲೇಬೇಕೆಂದರು . ತಂದೆಯ ಮಾತನ್ನು ಎಂದೂ ಮೀರಿದವನಲ್ಲ . ಒಪ್ಪಿದೆ. ವಧುಗಳ ಪಟ್ಟಿಯೇ ಸಿದ್ದವಾಯಿತು . ಆದರೆ ಯಾರೂ ಒಪ್ಪಿಗೆಯಾಗಲಿಲ್ಲ. ಈ ಮಧ್ಯೆ ನನ್ನ ಅತ್ತೆ ಅಂದರೆ ತಂದೆಯ ತಂಗಿ, ತಾಯಿ ತೀರಿಕೊಂಡಷ್ಟು ದಿನದಿಂದಲೂ ತಾಯಿಯಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದರು .ಅವರಿಗೆ ಒಬ್ಬಳು ಮದುವೆಯ ವಯಸ್ಸಿನ ಮಗಳಿದ್ದಳು. ಅತ್ತೆ ಮದುವೆಯ ಬಗ್ಗೆ ಪ್ರಸ್ತಾಪಿಸಿದರು. ಆದರೆ ನನ್ನ ಅಭಿರುಚಿ ಒಪ್ಪಲಿಲ್ಲ. ತಂದೆಯವರ ಬಳಿ ತಿಳಿಸಿದೆ.ಅವರು ನೊಂದು ನುಡಿದರು. ಋಣ ತೀರಿಸಬೇಕಾದ್ದು ಕರ್ತವ್ಯವೆಂದರು. ತಂದೆಯ ಯಾವ ಮಾತನ್ನು ಮೀರದ ನಾನು ಒಪ್ಪಿದೆ. ಬ್ಯಾಂಕ್ ಸೇರಿದ ಎರಡು ತಿಂಗಳಲ್ಲಿಅಂದರೆ ಅಕ್ಟೋಬರ್ ೩೦, ೧೯೮೧ ರಂದು ನನ್ನ ಮತ್ತು ವಸಂತ ಕಲಾಳ ಮಾಡುವೆ ನೆರವೇರಿತು.
ತಂದೆಯವರಿಗೆ ಸಂತೋಷವಾಗಿತ್ತು. ಕೆಲವೇ ತಿಂಗಳಲ್ಲಿ ನನಗೆ ಹುಬ್ಬಳ್ಳಿಗೆ ವರ್ಗವಾಯಿತು. ಹೊಸದಾಗಿ ಸಂಸಾರ ಆರಂಭಿಸಿದೆ. ಮೊದಲ ದಿನಗಳು ತುಂಬಾ ಸಂತಸದಿಂದ ಕೂಡಿತ್ತು. ತಿಂಗಳಿಗೊಮ್ಮೆ ಮೈಸೂರಿಗೆ ಹೋಗಿ ತಂದೆಯನ್ನು ನೋಡಿ ಬರುತ್ತಿದ್ದೆ. ೧೯೮೩ ರಲ್ಲಿ ಮಗಳು ಜನಿಸಿದಳು.ಅವಳಿಗೆ ಹೇಮಾ ಎಂದು ನಾಮಕರಣ ಮಾಡಿದೆ . ತಂದೆಯವರ ಮುಖ ಅರಳಿತು . ಅವರ  ಸಂತಸ ಇಮ್ಮಡಿಯಾಗಿತ್ತು

೧೯೮೪ ರಲ್ಲಿ ನನಗೆ ಹಾಸನಕ್ಕೆ ವರ್ಗವಾಯಿತು. ೧೯೮೫ ರಲ್ಲಿಗಂಡು ಮಗುವಾಯಿತು. ಆನಂದಕ್ಕೆ ಎಲ್ಲೆಯಿರಲಿಲ್ಲ. ಗುರು ರಾಘವೇಂದ್ರರ ಅನುಗ್ರಹವೆಂದೇ ಭಾವಿಸಿ ಮಗನಿಗೆ ರಾಘವ ಕಮ್ ಪ್ರದೀಪ ಎಂದು ನಾಮಕರಣ ಮಾಡಿದೆ.


೧೯೮೯ರವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆಗ ತಂದೆಯವರ ಆರೋಗ್ಯ ಬಿಗಡಾಯಿಸಿತು. ಅವರು ಪಾರ್ಶ್ವವಾಯುವಿಗೆ ತುತ್ತಾದರು.ತಂದೆಯವರು ಚಿಂತೆಗೆ ಒಳಗಾದರು . ಕೊನೆಯ ಮಗಳ ಮದುವೆ ಶೀಘ್ರದಲ್ಲಿ ಆಗಬೇಕೆಂದು ಹಠಮಾಡಿದರು .ಕೊನೆಗೆ ನನ್ನ ಮಡದಿಯ ತಮ್ಮ ಒಪ್ಪಿದರು .ತಂಗಿಯ ಮದುವೆ ೧೯೯೦ರ ಜುಲೈನಲ್ಲಿ ನೆರವೇರಿತು. ತಂದೆಯವರ ಅಶಕ್ತಿಯಲ್ಲಿ ನಾನೇ ಧಾರೆಗೆ ಒಪ್ಪಿದೆ. ಅವರ ಕಣ್ಣೆದುರಲ್ಲಿ ಆ ಮದುವೆ ನಡೆಯಿತು. ಆರ್ಥಿಕವಾಗಿ ಶಕ್ತನಲ್ಲದಿದ್ದರೂ ಆಪ್ತರ ನೆರವಿನಿಂದ ಮದುವೆ ಒಪ್ಪವಾಗಿ ನೆರವೇರಿಸಿದೆ . ಓಡಾಡಲೂ ಯಾರೂ ಇಲ್ಲ . ನಾನು ಮತ್ತು ನನ್ನ ಮಡದಿ ಬೆಂಗಳೂರಿಗೆ ತೆರಳಿ ಸೀರೆ ಪಾತ್ರೆಗಳು ಓದಿಸಲು ಬೇಕಾದ ಗಿಫ್ಟ್ ಪದಾರ್ಥಗಳು ಹೀಗೆ ಎಲ್ಲವನ್ನು ಎರಡು ಮೂರು ದಿನದಲ್ಲಿ ಖರೀದಿಸಿ ಅವುಗಳನ್ನು ಮೈಸೂರಿಗೆ ಬಸ್ನಲ್ಲಿ ತುಂಬಿಸಿಕೊಂಡು ರಾತ್ರಿಯಲ್ಲಿ ತಲಪಿದೆವು. ಮದುವೆಗೆ ಛತ್ರ ಹುಡುಕುವುದರಿಂದ ಹಿಡಿದು ಪುರೋಹಿತರು,ಓಲಗದವರು,ಅಡಿಗೆಯವರು ಚಿತ್ರಗ್ರಾಹಕರು ಎಲ್ಲವನ್ನು ೧೫ ದಿನದಲ್ಲಿ ಮುಗಿಸಿದೆವು ಏಕೆಂದರೆ ನಿಶ್ಚಿತಾರ್ಥವಾಗಿ ಮದುವೆಗೆ ಇದ್ದದ್ದು ೨೦ ದಿನ ಮಾತ್ರ . ಮೈಸೂರಿನಲ್ಲಿ ಕರೆಯುವ ಕೆಲಸ ನಾನು ವಹಿಸಿಕೊಂಡೆ ಬೆಂಗಳೂರಿನಲ್ಲಿ ಕರೆಯುವ ಕೆಲಸ ತಂಗಿಯರಿಗೆ ನೀಡಿದೆ  . ಮದುವೆಯ ದಿನ ಬಂದೇ ಬಿಟ್ಟಿತು ತಂದೆಯವರಿಗೆ ಆತಂಕವೋ ಆತಂಕ . ಈ ಸಮಯದಲ್ಲಿ ಹಣ ಸಹಾಯ ಮಾಡಿದ ತಂದೆಯವರ ಆಪ್ತ ಸ್ನೇಹಿತರಾಗಿದ್ದ ಶ್ರೀ ಶಿತಿಕಂಠ ಶರ್ಮರನ್ನು ನೆನೆಸಿಕೊಳ್ಳದಿದ್ದರೆ ಅಪರಾಧವಾಗುತ್ತದೆ . ನನ್ನ ಕೈ ಯಲ್ಲಿ ಎರಡು ಲಕ್ಷ ರೂಪಾಯಿ ಹಣವನ್ನು  ಕಾಗದ ಪಾತ್ರ ಏನು ಇಲ್ಲದೆ ತಂದಿಟ್ಟರು . ನಿನ್ನಲ್ಲಿ ವಿಶ್ವಾಸವಿದೆ ಬೇರೆ ಏನು ಬೇಡ ಕಾರ್ಯ ಮುಗಿಸು ಎಂದರು. ಅವರ ನೆರವಿಲ್ಲದಿದ್ದರೆ ಈ ಮದುವೆ ನಡೆಯುತ್ತಿರಲಿಲ್ಲ ಜೊತೆಯಲ್ಲಿ ಮೂರು ದಿನವೂ ಜತೆಯಲ್ಲಿ ಇದ್ದು ಮದುವೆ ಚೆನ್ನಾಗಿ ನಡೆಯಲು ನಿರ್ದೇಶನ ನೀಡಿದರು. ಮದುವೆ ನಿರಾತಂಕವಾಗಿ ನಡೆಯಿತು ತಂದೆಯವರ ಕಣ್ಣಲ್ಲಿ ಆನಂದ ಭಾಷ್ಪ ಕೊಡಿಹರಿಯಿತು. ನನ್ನ ಕೈ ಹಿಡಿದು ಗದ್ಗದಿತ ಕಂಠದಿಂದ ನುಡಿದರು "ನನ್ನ ಕೊನೆಯಾಸೆ ನೆರವೇರಿಸಿದೆ ನಿನ್ನನ್ನು ಮಗನಾಗಿ ಪಡೆದದ್ದು ಸಾರ್ಥಕವಾಯಿತು "ಎಂದರು 

ದುರಾದೃಷ್ಟವೆಂದರೆ ಅದೇ ವರ್ಷ ನನಗೆ ಮಂಗಳೂರಿಗೆ ವರ್ಗವಾಯಿತು. ತಂದೆಗೆ ಪಾರ್ಶ್ವವಾಯು ಆಗಿದೆ ಒಂದು ವರ್ಷ ವರ್ಗಾವಣೆ ಮುಂದೂಡಿ ಎಂದು ಪರಿಪರಿಯಾಗಿ ಪ್ರಾರ್ಥಿಸಿ ಪ್ರಯತ್ನಿಸಿದೆ . ಆದರೆ ಬ್ಯಾಂಕ್ ನವರು ಒಪ್ಪಲಿಲ್ಲ.ತಂದೆಯವರ ಬಲಭಾಗ ನಿಷ್ಕ್ರಿಯವಾಗಿತ್ತು .ಅವರಿಗೆ ಸ್ವತಂತ್ರವಾಗಿ ಏನನ್ನೂ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ . ತಂಗಿ ತಮ್ಮಂದಿರು ಇನ್ನೂ ಚಿಕ್ಕವರು ಬೇರೆ ಮಾರ್ಗವಿಲ್ಲದೆ ಮಡದಿಯನ್ನು ಮೈಸೂರಿನಲ್ಲಿ ಬಿಟ್ಟು ಒಂಟಿಯಾಗಿ ಮಂಗಳೂರಿಗೆ ನಡೆದೆ.ಒಂದು ವರ್ಷವೇ ಕಷ್ಟ ಪಟ್ಟರು , ಮನೆಗೇ ಚಿಕಿತ್ಸೆಗೆ ವೈದ್ಯರು ಬರುತ್ತಿದ್ದರು ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ . ತಂದೆಯವರ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ನಾಟಿ ವೈದ್ಯ ಪ್ರಯೋಗಿಸಲಾಯಿತು ಆದರೆ ಅದೇ ಕುತ್ತಾಯಿತು .  ೧೯೯೦ ರ ಆಗಸ್ಟ್ ೫ ರಂದು ತಂದೆಯವರು ವಿಧಿವಶರಾದರು. ನಮ್ಮ ಪ್ರಯತ್ನ ಪ್ರಾರ್ಥನೆ ಫಲಿಸಲಿಲ್ಲ.ಅಂದು ಭಾನುವಾರವಾದರೂ ಆಪ್ತರ ದಂಡೇ ಆಗಮಿಸಿತು . ನಗರದ ಪ್ರತಿಷ್ಠಿತ ವ್ಯಕ್ತಿಗಳು ಆಗಮಿಸಿ ಶ್ರಾದ್ಧನಂಜಲಿ ಅರ್ಪಿಸಿದರು ನಾನು ತಂದೆಯವರ ಚರಿತೆ ತಯಾರಿಸಿದ್ದೆ ಬಂಡ ಪತ್ರಕರ್ತರಿಗೆ ಒಂದೊಂದು ಪ್ರತಿ ನೀಡಿದೆ. ಎಲ್ಲ ಪತ್ರಿಕೆಯವರು ಭಾವಪೂರ್ಣ ಶ್ರದ್ದಾಂಜಲಿ ಪ್ರಕಟಿಸಿದರು. ತಂದೆಯವರ ಅಂತಿಮ ಕಾರ್ಯ ೧ಘಂಟೆಗೆ ಆರಂಭವಾಯಿತು. ವೇದ ಘೋಷ ಮೊಳಗಿಸಲಾಯಿತು .ಪುರುಷಸೂಕ್ತದೊಂದಿಗೆ ಸ್ನಾನ ಮಾಡಿಸಲಾಯಿತು ನಂತರ ವಿಪ್ರರು ದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದರು ನಗರದ ಹರಿಶ್ಚನ್ದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು. ತುಳಸಿ ಚಂದನ ಕಾಷ್ಠ ದಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು . ಕಣ್ಣಿನಲ್ಲಿ ಅಶ್ರು ಧರೆ ಧಾರಾಕಾರವಾಗಿ ಹರಿಯಿತು. ನನ್ನ ಪ್ರೀತಿಯ ತಂದೆ ಇಲ್ಲವಾಗಿದ್ದರು. ಪ್ರಕೃತಿಯಲ್ಲಿ ಲೀನವಾಗಿದ್ದರು . ನಮ್ಮ ಜೀವನದ ಅತ್ಯಮೂಲ್ಯ ವಸ್ತುವೊಂದನ್ನು ಕಳೆದುಕೊಂಡಿದ್ದೆವು . ಮಾರನೆಯ ದಿನ ಬೆಳಿಗ್ಗೆ ಅಸ್ತಿ ಸಂಗ್ರಹಣ ಮತ್ತು ಪಶ್ಚಿಮ ವಾಹಿನಿಯಲ್ಲಿ ಅಸ್ತಿ ವಿಸರ್ಜನೆ ಮಾಡಲಾಯಿತು . ೧೦ ದಿನಗಳು ಶೋಕಾಚರಣೆ ನಡೆಯಿತು. ಹತ್ತನೆಯ ದಿನ ಬಂಧುಗಳಿಂದ ತಿಲೋದಕ ಏರ್ಪಡಿಸಲಾಗಿತ್ತು. ೧೧ ನೆಯ ದಿನಕ್ಕೆ ಸಾಮಾನ್ಯವಾಗಿ ಜನ ಸಿಗುವುದು ಕಷ್ಟ . ಆದರೆ ಆ ದಿನಕ್ಕೆ ನನ್ನ ಹಿರಿಯ ಅತ್ತೆಯ ಮಗ ಮತ್ತು ತಂದೆಯ ಆಪ್ತ ಒಡನಾಡಿ ಶೀನು ಇರಲು ಒಪ್ಪಿದ . ೧೨ ನೇ ದಿನದಂದು ದಾನ ಪ್ರಮುಖ . ನಾನು ಪುರೋಹಿತರಿಗೆ ಹೇಳಿದೆ ಯಾವ ಕೊರತೆಯೂ ಬೇಡ ವೆಂದು ಅದರಂತೆ ಚಿನ್ನದ ಉಂಗುರವನ್ನು ಮಾಡಿಸಿದ್ದೆ ಅದನ್ನು ನಮ್ಮ ಮನೆ ವೈದ್ಯರಾದ ಡಾಕ್ಟರ್ ಕಸ್ತೂರಿಯವರಿಗೆ ನೀಡಲಾಯಿತು . ೧೩ ನೆಯ ದಿನ ವೈಕುಂಠ ಸಮಾರಾಧನೆ ವೈಭವದಿಂದ ನಡೆಯಿತು ಆಪ್ತರು,ಬಂಧುಗಳು ಸ್ನೇಹಿತರು ಕಲೆತು ಊಟ ಮಾಡಿದರು . ಅಲ್ಲಿಗೆ ಆತ್ಮ ಪರಮಾತ್ಮನಲ್ಲಿ ಲೀನವಾಯಿತು

ಕೊನೆಯ ತಂಗಿ ಮದುವೆಯ ನಂತರ  ಪತಿಮನೆಗೆ ತೆರಳಿದಳು. ನಂತರ ತಮ್ಮ ಒಂಟಿಯಾದ. ಅಷ್ಟು ದೊಡ್ಡ ಮನೆಯಲ್ಲಿ ತಮ್ಮನನ್ನು ಒಂಟಿಯಾಗಿ ಬಿಡಲು ಮನಸ್ಸು ಒಪ್ಪಲಿಲ್ಲ.ಅದೂ ತಂದೆ ಮೃತರಾದ ಮೇಲೆ ಮನೆ ಬಿಕೋ ಎನ್ನುತಿತ್ತು. ತೀರ್ಮಾನಿಸಿದೆ .   ತಮ್ಮನ ಮದುವೆಯವರೆಗೆ ಆದರೂ ನನ್ನ ಮಡದಿಯನ್ನು ಮೈಸೂರಿನಲ್ಲೇ ಬಿಟ್ಟು ಒಂಟಿಯಾಗಿ ಮಂಗಳೂರಿಗೆ ತೆರಳಲು ಹಾಗೂ ಇರಲು ನಿರ್ಧರಿಸಿದೆ. ಮಡದಿಯೂ ಒಪ್ಪಿದಳು. ಮಡದಿ, ಮಕ್ಕಳನ್ನುಮೈಸೂರಿನಲ್ಲಿ ಬಿಟ್ಟು ಒಂಟಿಯಾಗಿ ನಡೆದೆ .ಪ್ರತಿ ವಾರ ಶನಿವಾರ ಮೈಸೂರಿಗೆ ಬರುತ್ತಿದ್ದೆ ಪ್ರತಿ ತಿಂಗಳೂ ಮಾಸಿಕಗಳು ನೆರವೇರಿಸಿದೆ ಮಡದಿ ಪ್ರತಿ ತಿಂಗಳೂ ಮಾಸಿಕಕ್ಕೆ ಶ್ರೀರಂಗ ಪಟ್ಟಣಕ್ಕೆ ತೆರಳಿ ಕಾವೇರಿ ಸ್ನಾನ ಮಾಡಿ ಬಂದು ಪಂಚಕವ್ಯ ಸ್ವೀಕರಿಸುತ್ತಿದ್ದಳು ಆದಷ್ಟು ಭಕ್ತಿ ಶ್ರದ್ದೆ ಯಿಂದ ತಂದೆಯವರ ಅಂತಿಮ ಕಾರ್ಯಗಳನ್ನೆಲ್ಲಾ ಮುಗಿಸಿದೆ

೧೯೯೧ ಆಗಸ್ಟ್ ನಲ್ಲಿ ತಂದೆಯವರ ವರ್ಷ ಪುಣ್ಯತಿಥಿ.ನಡೆಯಿತು ಅದನ್ನೂ ಭಕ್ತಿ ಶ್ರದ್ದೆಯಿಂದ ನೆರವೇರಿಸಿದೆ ಹಿರಿಯ ಮಗನಾಗಿ ಕರ್ತವ್ಯ ಮಾಡಿ ಮುಗಿಸಿದೆ . ಅದಾದ ಮೇಲೆ ತಮ್ಮನಿಗೆ ಕನ್ಯಾನ್ವೇಷಣೆ ಆರಂಭವಾಯಿತು ಎಲ್ಲರೂ ಉದ್ಯೋಗದಲ್ಲಿರುವ ವರನನ್ನು ಅಪೇಕ್ಷಿಸುವವರೇ ಅಂತೂ ಕೊನೆಗೆ ಕನ್ಯೆ ದೊರೆತಳು . ಬೆಂಗಳೂರು ನಗರ ಸಭೆಯ ಮಾಜಿ ಸದಸ್ಯರಾದ ಶ್ರೀ ಶ್ರೀನಿವಾಸ ಅಯ್ಯಂಗಾರ್ ರವರ   ಸೀಮಂತ ಪುತ್ರಿ ಜಯಲಕ್ಷ್ಮಿಯೊಂದಿಗೆ ೧೯೯೨ ಜನವರಿಯಲ್ಲಿ ತಮ್ಮನ ಮದುವೆ ಬೆಂಗಳೂರಿನಲ್ಲಿ ನೆರವೇರಿತು. ಕುಟುಂಬ ಸಮೇತ ಒಂದು ಬಸ್ ಮಾಡಿಕೊಂಡು ಬೆಂಗಳೂರಿಗೆ ನಡೆದೆವು . ಮದುವೆ ಚೆನ್ನಾಗಿ ನಡೆಯಿತು. ನನ್ನ ಮಡದಿ ನೂತನ ವಧುವನ್ನು ಮನೆಗೆ ಬರಮಾಡಿಕೊಂಡಳು . ಮೂರು ತಿಂಗಳು ಜೊತೆಯಲ್ಲಿ ಇದ್ದು ಪರಿಚಯಿಸಿ ಕೊಟ್ಟಳು . ಮಕ್ಕಳ ಪರೀಕ್ಷೆಯ ನಂತರ ಏಪ್ರಿಲ್ ನಲ್ಲಿ ಮಡದಿಯನ್ನು ಮಂಗಳೂರಿಗೆ ಕರೆಯಿಸಿಕೊಂಡೆ.ದುಃಖ ವೆಂದರೆ ನಾನು ಮಾಡಿದ ಕರ್ತವ್ಯಗಳನ್ನೆಲ್ಲಾ ಒಡಹುಟ್ಟಿದವರೂ ತೃಣವಾಗಿ ಕಂಡರು ಆದರೂ ಬೇಸರ ಪಡಲಿಲ್ಲ. ಎಲ್ಲವನ್ನೂ ನನ್ನ ಕರ್ತವ್ಯವೆಂದು ಮಾಡಿದ್ದೆ ಅದು ಭಗವಂತನಿಗೆ ತೃಪ್ತಿಯಾಗಿದ್ದರೆ ಸಾಕು ಎಂದೆನಿಸಿತು. ಕಾಲಕ್ರಮದಲ್ಲಿ ನನ್ನ ಪರಿಶ್ರಮವೆಲ್ಲ ನೀರಿನಲ್ಲಿ ಮಾಡಿದ ಹೋಮದಂತಾಗಿತ್ತು

ಆದರೆ ಎಲ್ಲವೂ ಸರಿಯಾಗಿ ನಡೆಯಲಿಲ್ಲ. ತಮ್ಮ ಪ್ರೆಸ್ ಗಾಗಿ ಮಾಡಿದ್ದ ಸಾಲದ ಮರುಪಾವತಿಗೆ ಮೈಸೂರ್ ಬ್ಯಾಂಕ್ ನನಗೆ ನೋಟೀಸ್ ನೀಡಿತು. ತಮ್ಮನನ್ನುಒತ್ತಾಯಿಸಿದೆ. ಅವನು ಸಾಲ ಮರುಪಾವತಿಸಲಿಲ್ಲ. ಮೈಸೂರ್ ಬ್ಯಾಂಕ್ ನನ್ನ ಬ್ಯಾಂಕ್ ಮೂಲಕ ಒತ್ತಡ ತಂದಿತು. ನನಗೆ ದಿಕ್ಕೇ ತೋಚಲಿಲ್ಲ. ಆಗ ತಾನೇ ತಂಗಿಯ ಮದುವೆಗೆ ಹಾಗೂ ತಂದೆಯವರ ಆಸ್ಪತ್ರೆಯ ಖರ್ಚಿಗೆ ಮತ್ತು ಅಂತ್ಯಕ್ರಿಯೆಗೆ ಎಂದು ಬಹಳ  ಸಾಲ ಮಾಡಿದ್ದೆ. ನನ್ನ ಆರ್ಥಿಕ ಸ್ಥಿತಿಯೂ ಉತ್ತಮವಾಗಿರಲಿಲ್ಲ.ಕೆಲಸ ಸೇರಿ ೯ ವರ್ಷವಷ್ಟೇ ಆಗಿತ್ತು . ಈ ಮದ್ಯದಲ್ಲಿ ತಂದೆಯ ಖರ್ಚಿಗಾಗಿ ಎಂದು ಪ್ರತಿ ತಿಂಗಳೂ ಹಣ ಕಳುಹಿಸುತ್ತಿದ್ದೆ . ಆದ ಕಾರಣ ಉಳಿತಾಯ ಏನು ಇರಲಿಲ್ಲ .ಇವೆಲ್ಲವನ್ನೂ ತಮ್ಮನಲ್ಲಿ ತಿಳಿಯಹೇಳಿ ಬ್ಯಾಂಕ್ ಸಾಲವನ್ನುಕ್ರಮವಾಗಿ ತೀರಿಸಲು ಬ್ಯಾಂಕ್ ಗೆ ವಿವರಿಸಲು ತಿಳಿಸಿದೆ. ಆದರೆ ಬ್ಯಾಂಕ್ ನವರು ಒಪ್ಪಲಿಲ್ಲ ದಾರಿ ಕಾಣಲಿಲ್ಲ ಬ್ಯಾಂಕ್ ಸಾಲ ತೀರಿಸದಿದ್ದರೆ ತಂದೆಯವರ ಮನೆ ಮತ್ತು ಪ್ರೆಸ್ ಹರಾಜಿಗೆ ಬರುತಿತ್ತು. ತಮ್ಮನ ಜೀವನವೂ ಕಷ್ಟವಾಗುತ್ತಿತ್ತು ನಾನೂ ನನ್ನ ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದೆ ಇವೆಲ್ಲವನ್ನೂ  ತಮ್ಮನ ಗಮನಕ್ಕೆ ತಂದು ಆಪ್ತರ ಸಹಾಯ ಯಾಚಿಸಿ ಅದರಿಂದ  ಬ್ಯಾಂಕ್ ಸಾಲ ಮರುಪಾವತಿಸಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದೆ. ಸಾಲದ ಹೊರೆ ನೋವುಂಟುಮಾಡಿತು..ಆಪ್ತರ ಕೆಂಗಣ್ಣೂ ಬೇಸರ ತಂದಿತು. ನನ್ನ ತಂಗಿಯರು ಯಾರೂ ಸಹಾಯಕ್ಕೆ ಬರಲಿಲ್ಲ. ತಮ್ಮನ ಅಸಹಕಾರ ತಂಗಿಯರ ಗಮನಕ್ಕೆ ತಂದೆ. ಆದರೆ .ಪ್ರಯೋಜನವಾಗಲಿಲ್ಲ.ತಂದೆಯವರ ಅಂದಿನ ಆಸ್ತಿ ಎಂದರೆ ಹಳೆಯ ವಾಸವಿದ್ದ ಮನೆ  ,ಕಳೆದ ವರ್ಷ ನಿರ್ಮಿಸಿದ ೪ ಚದರದ ಸಣ್ಣ ತಾರಸಿ ಮನೆ ಮತ್ತು ಮುದ್ರಣಾಲಯ   ಅದರ ವಿಭಜನೆ ಯಲ್ಲದೆ ಬೇರೆ ಮಾರ್ಗ ತೋರಲಿಲ್ಲ . ಆಸ್ತಿ ವಿಭಜನೆ ಅನಿವಾರ್ಯವಾಯಿತು.

ಜೀವನದ ಮುಖ್ಯ ತಿರುವು ಅಲ್ಲಿಂದ ಮುಂದೆ ಆರಂಭವಾಯಿತು


ನನ್ನ ಜೀವನ ಚರಿತೆ ಭಾಗ ೩


ತಾಯಿಯವರ ಮರಣದ ದುಃಖದಲ್ಲಿ ಪರೀಕ್ಷೆ ಬರೆಯುವ ಮನಸಿರಲಿಲ್ಲ . ಸಂತಾಪ ಸೂಚಿಸಲು ಬಂದಿದ್ದ ನನ್ನ ಪ್ರಾಧ್ಯಾಪಕರು ಹಾಗೂ ಸ್ನೇಹಿತರು ಒತ್ತಾಯಿಸಿದರು . ತಂದೆಯವರು ತಾಯಿಯ ಆಸೆಯಂತೆ ಪರೀಕ್ಷೆ ಬರೆಯಲು ಸೂಚಿಸಿದರು . ಅದರಂತೆ ಪರೀಕ್ಷೆ ಬರೆದೆ . ಮೊದಲ ದರ್ಜೆಯಲಿ ಪಾಸಾದೆ . ತಂದೆಯವರಿಗೆ ಅತೀವ ಸಂತೋಷ ಆಯಿತು . ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು . ತಂದೆಯವರು ಕೆಲಸ ಹುಡುಕಲು ಬಲವಂತ ಮಾಡಿದರು . ಆದರೆ ನನಗೆ ತಂದೆಯವರನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಲು ಮನಸಾಗಲಿಲ್ಲ . ತಂದೆಯವರಿಗೆ ಸಹಾಯವಾಗಿ ಜೊತೆಯಲ್ಲೇ ಇರಲು ತೀರ್ಮಾನಿಸಿದೆ . ಪತ್ರಿಕೆಯ ಪ್ರಕಾಶನದಲ್ಲಿ ಹತ್ತು ವರುಷ ತೊಡಗಿಸಿಕೊಂಡೆ .ಅನೇಕ  ಕೈಗಾರಿಕೆಗಳಿಂದ ಅವಕಾಶಗಳು ಬಂದವು ಪ್ರಖ್ಯಾತ ಉದ್ದಿಮೆಗಳಾದ ಬಾಬಾ ಅಟಾಮಿಕ್ ಎನರ್ಜಿ,ಹೆಚ್ ಸಿ ಎಲ್ ,ಈ ಸಿ ಐ ಎಲ್ ಮುಂತಾದ ಉದ್ದಿಮೆಗಳು ತಕ್ಷಣ ಕೆಲಸ ಸೇರುವಂತೆ ಅವಕಾಶ ಮಾಡಿಕೊಟ್ಟವು. ಆದರೆ ತಾಯಿಯೂ ಇಲ್ಲದಿದ್ದಾಗ ತಂದೆಯನ್ನು ಒಬ್ಬರನ್ನೇ ಬಿಟ್ಟಿರಲು ಮನಸ್ಸು ಒಪ್ಪಲಿಲ್ಲ ತಂದೆಯವರ ಬಳಿಯೇ ನೆರವಾಗಿ ಉಳಿದೆ ತಂದೆಯವರ ಇಚ್ಚೆಯಂತೆ ಅಖಿಲ ಭಾರತ ಸಂಸ್ಕೃತ ಸಮ್ಮೇಳನ ನಡೆಸಲು ನೆರವಾದೆ. ಎರಡನೆಯ ಪುಟದಲ್ಲಿ ಪ್ರತಿ ಸೋಮವಾರ ಮೈಸೂರು ಜಿಲ್ಲೆಯ ದೇವಾಲಯಗಳ ಬಗ್ಗೆ ಲೇಖನ ಬರೆಯಲು ಮುಂದಾದೆ ಸ್ನೇಹಿತ ಅಮರದಾಸ್ ನೆರವಿನೊಂದಿಗೆ ಮೈಸೂರು ಜಿಲ್ಲೆಯ ಅತಿ ಹೆಸರಾದ ೪೦ ದೇವಾಲಯಗಳ ಬಗ್ಗೆ ಚಿತ್ರ ಲೇಖನ ಬರೆದೆ . ಆ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತಂದೆ .ಸಂಸ್ಕೃತದಲ್ಲಿ ಬರೆದ ಪ್ರತಿಗಳೆಲ್ಲ ಮುಗಿದುಹೋದವು. ಅಮೆರಿಕಾದ ಪುಸ್ತಕ ಸಂಗ್ರಹಾಲಯಎಲ್ಲ ಪ್ರತಿಗಳನ್ನೂ ಖರೀದಿಸಿತು. ಆಗ ಪುಸ್ತಕದ ಕನ್ನಡ ಆವೃತ್ತಿ ಹೊರತಂದೆ .
ಮೈಸೂರಿನ ಜಿಲ್ಲಾಧಿಕಾರಿಗಳು ಕನ್ನಡ ಪುಸ್ತಕದ  ಬಿಡುಗಡೆ ಮಾಡಿ ಪ್ರಶಂಸಿಸಿದರು . ತಂದೆಯವರಿಗೆ ತುಂಬಾ ಸಂತೋಷ ಆಯಿತು . ಪತ್ರಿಕೆಯ ಚಂದಾದಾರರ ಸಂಖ್ಯೆ ಕ್ರಮೇಣ ಅಧಿಕವಾಗತೊಡಗಿತು .

ನನ್ನ ಬಿಡುವಿನ ಸಮಯದಲ್ಲಿ ಐ  ಎ ಎಸ್ ಪರೀಕ್ಷೆಗೆ ತಯಾರಾದೆ . ಆದರೆ ವಿಧಿ ಬೇರೆಯೇ ಇತ್ತು . ನನ್ನ ಆರೋಗ್ಯದಲ್ಲಿ ಏರುಪೇರಾಯಿತು . ಪರೀಕ್ಷೆ ಬರೆಯಲಾಗಲಿಲ್ಲ . ಬೇಸರ ಆಯಿತು . ನನ್ನ ತಮ್ಮ ಓದಿನಲ್ಲಿ ಹಿಂದೆ ಇದ್ದ . ಅವನ ಓದಿಗೆ ಸರಿಯಾಗಿ ಉದ್ಯೋಗವು ದೊರೆಕಲಿಲ್ಲ . ಕೆಲಸ ದೊರೆತಾಗಲು  ಕೆಲಸದಲ್ಲಿ ಉಳಿಯಲಿಲ್ಲ . ತಂದೆಯವರು ನಿರಾಸೆ ಹೊಂದಿದರು ಇಬ್ಬರು ಗಂಡು ಮಕ್ಕಳು ಪ್ರೆಸ್ ನಲ್ಲಿ ಕೆಲಸ ಮಾಡುವುದು ಅವರಿಗೆ ಬೇಸರ ತಂದಿತ್ತು . ಈ ಮಧ್ಯೆ ಪತ್ರಿಕೆಯ ೧೦ ನೆ ವರ್ಷದ ಸಮಾರಂಭ ಅದ್ದೊರಿಯಾಗಿ ನಡೆಸಲು ತಂದೆಯವರು ತೀರ್ಮಾನಿಸಿದರು . ಅಂತೆಯೇ ಭಾರತದ  ಉಪ ರಾಷ್ಟ್ರಪತಿಗಳಾಗಿದ್ದ ಬಿ ಡಿ ಜತ್ತಿಯವರನ್ನು ಆಹ್ವಾನಿಸಲು ಉದ್ದೇಶಿಸಿದರು  ಅವರ ಆಸೆಯಂತೆ ಜತ್ತಿಯವರನ್ನು ನೇರವಾಗಿ ಆಹ್ವಾನಿಸಲು ಡೆಲ್ಲಿಗೆ ತೆರಳಿದೆ ಅವರು ಸಮಾರಂಭಕ್ಕೆ ಬರಲು ಒಪ್ಪಿದರು . ಅದಕ್ಕಾಗಿ ಒಂದು ವಿಶೇಷ ಸಂಚಿಗೆ ಹೊರತರಲು ಇಚ್ಛಿಸಿದರು . ನಾನು ಹಗಲಿರುಳೆನ್ನದೆ ಜಾಹಿರಾತು ಸಂಗ್ರಹಿಸಲು ಬೆಂಗಳೂರಿನ ಅನೇಕ ದೊಡ್ಡ ಉದ್ದಿಮೆದಾರರನ್ನು ಭೇಟಿಯಾದೆ . ಪರಿಣಾಮ ಸುಮಾರು ೪೦ ಜಾಹಿರಾತನ್ನು ಸಂಗ್ರಹಿಸಿದೆ. ಒಂದು ದೊಡ್ಡ ಸ್ಮರಣ ಸಂಚಿಕೆ ತಯಾರಾಯಿತು . ಜತ್ತಿಯವರ ಉಪಸ್ಥಿತಿಯಲ್ಲಿ ಸಮಾರಂಭ ಅದ್ದೊರಿಯಾಗಿ ನಡೆಯಿತು . ಭಾರತದ ಬಹುತೇಕ ಪತ್ರಿಕೆಯಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಚಾರವಾಯಿತು . ತಂದೆ ತುಂಬಾ ಸಂತೋಷಗೊಂಡರು . ಅವರ ಮಿತ್ರರೆಲ್ಲ ಹೊಗಳಿದರು .  ಆದರೆ ಯಾರು ಆರ್ಥಿಕವಾಗಿ ನೆರವು ನೀಡಲು ಮುಂದಾಗಲಿಲ್ಲ . ತಂದೆಯವರ ಆರ್ಥಿಕ ಸ್ಥಿತಿ ಹದಗೆಡತೊಡಗಿತು . ತಂದೆಯವರ ಸ್ಥಿತಿ ನನ್ನ ಮನಸನ್ನು ಕಲಕತೊಡಗಿತು . ತಂದೆಯವರು ನೀನು ಚೆನ್ನಾಗಿ ಓದಿದ್ದೀಯ ಏಕೆ ಬೇಕು ಈ ಪತ್ರಿಕಾ ಜೀವನ .ಎಲ್ಲಾದರು ಕೆಲಸ ಗಳಿಸಿ ಚೆನ್ನಾಗಿರು ಎಂದು ಒತ್ತಾಯಿಸ ತೊಡಗಿದರು . ಈ ನಡುವೆ ನನ್ನ ಉಳಿದ ಅವಿವಾಹಿತ ತಂಗಿಯರ ಮದುವೆಯೂ ನಡೆಯಿತು . ಓಡಾಡಲು ಯಾರೂ ಇರಲಿಲ್ಲ . ಒಂದು ತಂಗಿಯನ್ನು ನಾನೇ ಧಾರೆಯೆರೆದರೆ ಮತ್ತೋರ್ವಳನ್ನು ನನ್ನ ದೊಡ್ಡಪ್ಪನ ಮಗ ಧಾರೆ ಎರೆದ . ತಂದೆಯವರು ಕೂಡಿಟ್ಟ ಹಣವೆಲ್ಲ ಖರ್ಚಾಗಿ ಹೋಗಿತ್ತು . ತಮ್ಮನಾದರೋ ಯಾವ ಕೆಲಸದಲ್ಲೂ ಉತ್ಸಾಹ ತೋರಲಿಲ್ಲ . ಅವನು ಪ್ರೆಸ್ಸನ್ನು ನೋಡಿಕೊಳ್ಳಲು ತೀರ್ಮಾನಿಸಿದ್ದ ನನಗೆ ದಿಕ್ಕು ತೋಚಲಿಲ್ಲ . ಸರಿ ಕೆಲಸ ಹುಡುಕಲು ಆರಂಭಿಸಿದೆ . ಅನೇಕ ಕಡೆ ಕೆಲಸ ದೊರಕಿತು . ಆದರೆ ತಂದೆಯನ್ನು ಬಿಟ್ಟು ಹೋಗಲಾಗದೆ ಮೈಸೂರಲ್ಲೇ ಕೆಲಸ ಅರಸಿದೆ . ಆದರೆ ಆ ಕೆಲಸ ರಾತ್ರಿಯ ಪಾಳಿಯದಾದ್ದರಿಂದ ಹೆಚ್ಚು ದಿನ  ಅಲ್ಲಿ ಕೆಲಸ ಮಾಡಲಾಗಲಿಲ್ಲ . ಅಷ್ಟರಲ್ಲಿ ಬ್ಯಾಂಕ್ ಉದ್ಯೋಗ ದೊರಕಿತು . ತಂದೆಯವರ ಆಶಯದಂತೆ ಕಾರ್ಪೋರೇಶನ್ ಬ್ಯಾಂಕ್ ಸೇರಿದೆ . ನನ್ನ ತಮ್ಮ ಪ್ರೆಸ್ಸ್ನಲ್ಲಿ ಉಳಿದ .
ನನ್ನ ಯೌವನದ ದಿನಗಳು ಹೀಗೆ ಆರಂಭವಾಯಿತು .

ನನ್ನ ಜೀವನ ಚರಿತೆ ಭಾಗ ೨


ನಮ್ಮ ತಂದೆಗೆ ಮದುವೆಯಾಗಿ ೧೦ ವರುಷ ಆದಾಗಲು  ಮಕ್ಕಳಾಗದಿದ್ದಾಗ ನನ್ನ ಅತ್ತೆಯರು ಚಿಂತಿತರಾಗಿ ಒಟ್ಟುಗೂಡಿ ತಾಯಿಯನ್ನು ಕರೆದುಕೊಂಡು ತಿರುಮಲೆಗೆ ತೆರಳಿ ಪಾದ ಮಾರ್ಗದಲ್ಲಿ ಮೆಟ್ಟಲು ಹತ್ತಿ ಹರಕೆ ಹೊತ್ತರಂತೆ . ಆಗ ನಾನು ೧೯೫೨ ನೆ ಇಸವಿ ಮೇ ತಿಂಗಳು ೩೦ ರಂದು ಶುಕ್ರವಾರ ಜನಿಸಿದೆ .
.ಎಲ್ಲರಿಗೂ ಖುಷಿಯೋ ಖುಷಿ . ಸಂಭ್ರಮದಲ್ಲಿ ನಡೆಯಿತು ನಾಮಕರಣ ಇತ್ಯಾದಿ . ಮುದ್ರಣಾಲಯವೂ ಅಭಿವೃದ್ದಿ ಆಯಿತು . ಒಂದು ಯಂತ್ರ ಮೂರು ಆಯಿತು ಒಬ್ಬರು ನೌಕರ ೫ ನೌಕರರಾದರು .೧೯೫೫ ರಲ್ಲಿ ನನ್ನ ತಂಗಿಯ ಜನನವಾಯಿತು  ಆ ಮಗುವಿಗೆ ವೇದ ಎಂದು ಹೆಸರಿಸಲಾಯಿತು ಮುಂದೆ ೧೯೫೭ ರಲ್ಲಿ ನನ್ನ ತಮ್ಮ ಜನಿಸಿದ .ಅವನಿಗೆ ಸಂಪತ್ಕುಮಾರ ಎಂದು ನಾಮಕರಣ ಮಾಡಲಾಯಿತು.೧೯೬೦ ರಲ್ಲಿ ತಂಗಿ ಲೀಲಾ ೧೯೬೩ರಲ್ಲಿ ಪದ್ಮ ಎಂಬ ತಂಗಿಯರು ಜನಿಸಿದರು. ೧೯೬೬ ರಲ್ಲಿ ಕೊನೆಯ ತಂಗಿ ಕನಕ ಜನಿಸಿದಳು ಮನೆ ಕಲ ಕಲ ಎನ್ನುತಿತ್ತು   . ನಮ್ಮ ತಾಯಿಯಂತೂ ಖುಷಿಯಾದರು . ತಾಯಿಯ ಮಮತೆ ಎಲ್ಲರಿಗೂ ಸಮಾನವಾಗಿ ಹಂಚಿದರು ಎಲ್ಲರನ್ನು ಚೆನ್ನಾಗಿ ಓದಿಸಬೇಕು , ಒಳ್ಳೆಯ ಕಡೆ ಮಾಡುವೆ ಮಾಡಿಕೊಡಬೇಕು ಎಂಬುದು ಅವರ ಮನದಾಳದ ಆಸೆಯಾಗಿತ್ತು .ಅದಕ್ಕಾಗಿ ಪರಿಶ್ರಮಿಸಿದರು ಆದರೆ ಅವರ ಆರೋಗ್ಯ ಹದಗೆಡತೊಡಗಿತು
೧೯೬೩ ರಲ್ಲಿ ತಂದೆಯವರು ಒಂದು ಹೆಣ್ಣು ಮಕ್ಕಳ ಶಾಲೆ ತೆರೆಯಲು ಮುಂದಾದರು ಅದಕ್ಕಾಗಿ ಒಂದು ಕಟ್ಟಡ ಬಾಡಿಗೆಗೆ ಪಡೆದರು ಮೊದಲ ವರ್ಷದಲ್ಲೇ ೨೦ ಮಕ್ಕಳು ಸೇರಿದರು ಯಾಕೆಂದರೆ ಆಗ ಹೆಣ್ಣು ಮಕ್ಕಳನ್ನು ಶಾಲೆಗೇ ಕಳುಹಿಸುವುದು ಒಂದು ಕಳಂಕ ಆಗಿತ್ತು . ನಮ್ಮ ಹಳ್ಳಿಯಾದ ಕಳಲೆಯಲ್ಲಿ ಇಷ್ಟು ವರುಷ ದೇವಸ್ಥಾನದ ಮೇಲ್ವಿಚಾರಣೆ ನೋಡುತಿದ್ದ ನನ್ನ ದೊಡ್ಡಪ್ಪ ಕಾಲವಾದಮೇಲೆ  ಆ ಜವಾಬ್ಧಾರಿ ತಂದೆಯ ಮೇಲೆ ಬಂತು . ಜವಾಬ್ಧಾರಿ ಹೆಚ್ಚಾದಂತೆ ಮನೆಯ ಕಡೆ ಗಮನ ಕಮ್ಮಿಯಾಯಿತು . ಇದೆಲ್ಲದರ ನಡುವೆ ಇನ್ನೂ ಅಪ್ರಾಪ್ತಾಳಾಗಿದ್ದ ನನ್ನ ಮೊದಲ ತಂಗಿಗೆ ಮದುವೆಯ ಕಂಕಣ ಕೂಡಿ ಬಂದಿತ್ತು . ಒಳ್ಳೆಯ ಸಂಬಂಧ . ಮೈಸೂರಿನ ಪರಕಾಲ ಸ್ವಾಮಿಗಳ ಪೂರ್ವಾಶ್ರಮದ ಎರಡನೆಯ ಸುತ . ಒಲ್ಲೆ ಎನ್ನಲಾಗಲಿಲ್ಲ . ಕೂಡಿಟ್ಟ ಹಣ ಸೈಟ್ ಮಾರಿ ಬಂದ  ಹಣದಿಂದ ಅದ್ದೂರಿಯಾಗಿ ಮದುವೆ ಮಾಡಿದರು . ಓಡಾಟದಿಂದ ತಾಯಿ ಬಳಲಿದ್ದರು . ಅವರ ಆರೋಗ್ಯ ಮತ್ತಷ್ಟು ಹದಗೆಡತೊಡಗಿತು . ಅವರ ಚಿಕಿತ್ಸೆಗೆ ಬಹಳ ಹಣ ಖರ್ಚಾಗತೊಡಗಿತು . ಆದರೂ ಎದೆಗುಂದಲಿಲ್ಲ ತಂದೆ . ನನ್ನ ವಿದ್ಯಾಭ್ಯಾಸವು ಅವಿರತವಾಗಿ ಮುಂದುವರೆದಿತ್ತು . ನಾನು ಬಿ ಎಸ್ ಸಿ ಮುಗಿಸಿ ಇಂಜನೀರಿಂಗ್ ಪದವಿಗೆ ಸೇರಿದ್ದೆ . .ನನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಉಚಿತ ಶಿಕ್ಷಣ ವಿದ್ಯಾರ್ಥಿ ವೇತನ ಎಲ್ಲವೂ ದೊರೆತಿತ್ತು . ತಂದೆಗೆ ಯಾವ ಹೊರೆಯನ್ನು ಕೊಟ್ಟಿರಲಿಲ್ಲ . ಎಲ್ಲ ಸೆಮಿಸ್ಟರ್ ಗಳಲ್ಲೂ ಒಳ್ಳೆಯ ಅಂಕ ಪಡೆಯುತ್ತಿದ್ದೆ . ತಾಯಿಯಂತೂ ಬಹಳ ಖುಷಿಯಾಗಿದ್ದರು .ಕೊನೆಯ ವರುಷ ದಲ್ಲಿ ಕಾಲೇಜಿನಿಂದ ಉತ್ತರ ಭಾರತದ ಒಂದು ಪ್ರವಾಸ ಏರ್ಪಡಿಸಲಾಗಿತ್ತು . ಸಹಪಾಠಿಗಳೆಲ್ಲ ಸಂತಸದಿಂದಿದ್ದರು ತಾಯಿಯ ಆರೋಗ್ಯ ಚೆನ್ನಾಗಿರಲಿಲ್ಲ ನನಗೆ ಪ್ರವಾಸ ಹೋಗಲು ಉತ್ಸಾಹವೇ ಇರಲಿಲ್ಲ ತಂದೆಯವರ ಅಪೇಕ್ಷೆಯ ಮೇರೆಗೆ ಒಪ್ಪಿದೆ. ಪ್ರವಾಸ ಮುಗಿಸಿ ಬರುವಷ್ಟರಲ್ಲಿ ತಾಯಿಯ ಆರೋಗ್ಯ ಕುಸಿದಿತ್ತು. ಪರೀಕ್ಷೆಗೆ ಕುಳಿತುಕೊಳ್ಳಲು ತಯಾರಾಗಿರಲಿಲ್ಲ ಪರೀಕ್ಷೆ ಬರೆಯುವುದು ಬೇಡ ಎಂದು ತೀರ್ಮಾನಿಸಿದೆ.  ಆದರೆ ವಿಧಿ ನಿಯಮವೇ ಬೇರೆಯಾಗಿತ್ತು . ತಾಯಿಯ ಆರೋಗ್ಯ ಪೂರ್ಣ ಹದಗೆಟ್ಟು ೧೯೭೪ ರಲ್ಲಿ ಏಪ್ರಿಲ್ ೨೭ ರಂದು ತಾಯಿ ಕೊನೆಯುಸಿರು ಎಳೆದರು . ತಂದೆಗೆ ದಿಕ್ಕೇ ತೋಚಲಿಲ್ಲ ಉಳಿದ ಮೂರು ಹೆಣ್ಣು ಮಕ್ಕಳ ಮದುವೆ ಹಾಗೂ ಗಂಡು ಮಕ್ಕಳ ವಿದ್ಯಾಭ್ಯಾಸ ಅವರನ್ನು ಕಂಗೆಡಿಸಿತ್ತು . ಆಗ ಧೈರ್ಯ ತುಂಬಿದವರು ನನ್ನ ಅಂಬಾ  ಸೋದರತ್ತೆ . ಮಕ್ಕಳ ಜವಾಬ್ಧಾರಿ ನನಗೆ ಬಿಡು . ನೀನು ಧೈರ್ಯವಾಗಿರು ಎಂದು ಭರವಸೆ ತುಂಬಿದರು . ನನ್ನ ತಾಯಿಯ ಅಂತಿಮ ಕರ್ಮಗಳನ್ನೆಲ್ಲ ನನ್ನ ತಾತ ನವರ ನೇತೃತ್ವದಲ್ಲಿ ಮಾಡಿ ಮುಗಿಸಿದೆ. ಅವರ ತೀವ್ರ ಅನಾರೋಗ್ಯದ ನಡುವೆಯೂ ಮಗಳ ಅಂತಿಮ ಕಾರ್ಯಗಳನ್ನೂ ಮಾಡಿಸಿದರು . ಮಗಳ ಅಗಲಿಕೆಯ ದುಃಖ ಅವರನ್ನು ಕಾಡಿತ್ತು . ನಡುವೆ ಅವರ ಹಿರಿಯ ಮಗ ಹೃದಯ ಆಘಾತದಿಂದ ಮರಣಿಸಿದ . ಪುತ್ರ ಶೋಕಂ ನಿರಂತರಂ ಎಂಬಂತೆ ತಾತನವರ ಆರೋಗ್ಯ ಹದಗೆಟ್ಟಿತು .ತಾಯಿಯವರು ಮರಣಿಸಿದ ಒಂದು ವರುಷದಲ್ಲೇ ಅವರೂ ಮರಣಿಸಿದರು . ಇವೆಲ್ಲದರ ನಡುವೆ ತಾಯಿಯ ಮರಣದ ವೇಳೆ ನನ್ನ ಸಹಪಾಠಿಗಳು ಮತ್ತು ಪ್ರಾಧ್ಯಾಪಕರೂ ಸಾಂತ್ವನ ಹೇಳಲು ಬಂದಿದ್ದರು . ಅವರುಗಳು ಪರೀಕ್ಷೆ ಬಿಡಬೇಡ ತಾಯಿಯ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂದರು .ತಂದೆಯವರೂ ಅದನ್ನೇ ಹೇಳಿದರು ಅವರೆಲ್ಲರ ಅಪೇಕ್ಷೆಯಂತೆ ಪರೀಕ್ಷೆ ಬರೆದೆನು .ಉತ್ತಮ ಅಂಕ ಪಡೆದು ಉತ್ತೀರ್ಣನಾದೆನು . ಬಾಲ್ಯದಿಂದ ಯೌವನದತ್ತ ನಡೆದಿದ್ದೆ .

ನನ್ನ ಜೀವನ ಚರಿತೆ  ಭಾಗ ೧

ಅಂದು ಆಗಸ್ಟ್ ೫ನೆ ತಾರೀಖು ೧೯೯೦ ನೆ ಇಸವಿ ಭಾನುವಾರ ಬೆಳಿಗೆ ೪-೩೦ ಘಂಟೆ ,ನನ್ನ ಪ್ರೀತಿಯ ತಂದೆ ೬೯ ವರುಷ ಪೂರ್ಣಗೊಳಿಸಿ ಇಲ್ಲವಾಗಿದ್ದರು . ನನ್ನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು ಮನೆಗೆ ನಾನೇ ಹಿರಿಯ ಮಗ .ಆಗ  ನನಗೆ ೨೮ ವರುಷ ನನ್ನ ತಾಯಿ ತೀರಿಹೋಗಿ ೧೬ ವರುಷವಾಗಿತ್ತು ಮನೆಯ ಎಲ್ಲ ಜವಾಬ್ಧಾರಿ ನನ್ನ ಮೇಲೆ ಬಿದ್ದಿತ್ತು . ಮುಂದಿನ ಕೆಲಸಗಳೆಲ್ಲವೂ 
ಆಗಬೇಕಿತ್ತು ನನ್ನ ತಂದೆಗೆ ನನ್ನನ್ನು ಸೇರಿ ೬ ಮಕ್ಕಳು ೪ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು . ಹೆಣ್ಣು ಮಕ್ಕಳಿಗೆಲ್ಲ ಮದುವೆ ಆಗಿತ್ತು . ನನಗೂ ಮದುವೆ ಆಗಿ ೯ ವರುಷ ಆಗಿತ್ತು ನನಗೆ ಎರಡು ಮಕ್ಕಳಿದ್ದರು . ತಂದೆಯವರು ಅಪಾರ ಬಂಧು ಬಳಗ ಸ್ನೇಹಿತರು ಅಭಿಮಾನಿಗಳನ್ನು ಬಿಟ್ಟು ಹೋಗಿದ್ದರು . ಬೆಳಗಾಗುತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನ ಸಾಗರ ಬರತೊಡಗಿತು . ಹಾರಗಳನ್ನು ಹಿಡಿದು ಬರುವವರು ಕೆಲವರಾದರೆ ಪುಷ್ಪ ಗುಚ್ಛ ಹಿಡಿದು ಬಂದವರು ಕೆಲವರಾಗಿದ್ದರು . ಎಲ್ಲರ ಕಣ್ಣಲ್ಲಿ ಕಂಬನಿ ಮೂಡಿತ್ತು . ಪತ್ರಿಕೆಯವರು  ಆಕಾಶವಾಣಿಯವರು ಆಗಮಿಸಿದ್ದರು ಸಾಂತ್ವನದ ನುಡಿಗಳು ಹರಿದಿದ್ದವು ೧೧ಘಂಟೆಗೆ ಮುಂದಿನ ಕಾರ್ಯಗಳು ಆರಂಭ ಗೊಂಡವು . ಬಂಧುಗಳು ಅಭಿಮಾನಿಗಳು ತಂದೆಯ ಶರೀರವನ್ನು ಬಿಜಯಗೊಳಿಸುವುದಾಗಿ  ವಿನಂತಿಸಿದರು . ಅಂತೆಯೇ ಅಂತಿಮ ಯಾತ್ರೆ ೧೨ ಘಂಟೆಗೆ ಆರಂಭ ವಾಯಿತು ೨ ಘಂಟೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು . ತಂದೆಯ ಭೌತಿಕ ಶರೀರ ಅಂತರಿಕ್ಷದಲ್ಲಿ ಲೀನವಾಯಿತು . ಒಂದು ಅಧ್ಯಾಯ ಮುಗಿದು ನೂತನ ಯುಗಕ್ಕೆ ಎಡೆಮಾಡಿ ಕೊಟ್ಟಿತ್ತು . 

ಮುಂದುವರೆಯುವ  ಮೊದಲು ಪೂರ್ವ ವೃತ್ತಾಂತ ತಿಳಿಸಲು ಬಯಸುತ್ತೇನೆ . ನನ್ನ ತಂದೆ ಜನಿಸಿದ್ದು ೧೯೨೧ ನೆ ಇಸವಿ ಸೆಪ್ಟೆಂಬರ್ ೧೪ ರಂದು . ಅವರ ತಂದೆ ನಡಾದುರ್ ಶ್ರೀನಿವಾಸ ಅಯ್ಯಂಗಾರ್ . 
ತಾಯಿ ಕನಕಮ್ಮ . ಅವರದ್ದು ಸಂಪ್ರದಾಯ ಕುಟುಂಬ .
ತುಂಬು ಕುಟುಂಬದಲ್ಲಿ ೫ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು . ತಂದೆಯ ಅಕ್ಕಂದಿರು ಅಲಮೇಲು ಮತ್ತು ಚೇಚಮ್ಮ . ತಂಗಿಯರು ಕ್ರಮವಾಗಿ ಜಯಮ್ಮ,ಪದ್ಮಮ್ಮ ಮತ್ತು ಅಂಬಮ್ಮ. ಅಣ್ಣನವರು  ನಡಾದುರ್ ಲಕ್ಷ್ಮೀಕಾಂತ ಅಯ್ಯಂಗಾರ್ ತಂದೆ ಮತ್ತು ಅಣ್ಣ   ಸಂಸ್ಕೃತ ಪಂಡಿತರು . ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ  ಅಧ್ಯಾಪಕರಾಗಿದ್ದರು ದೊಡ್ಡಪ್ಪನವರು ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರಾಗಿದ್ದರು ಅವರ ಹಾದಿಯಲ್ಲೇ ತಂದೆಯವರು ಪಾಠ ಶಾಲೆಯಲ್ಲಿ ಸಂಸ್ಕೃತ ವಲ್ಲದೆ ಇಂಗ್ಲಿಷ್ ಶಾಲೆಯಲ್ಲಿ ಆಂಗ್ಲ ಭಾಷೆಯ ಅಧ್ಯಯನವನ್ನು ಮಾಡಿದರು ಕಾಲಕ್ರಮದಲ್ಲಿ ಪಂಡಿತ ಪರೀಕ್ಷೆಯಲ್ಲಿ ಪಾಂಚರಾತ್ರಾಗಮದಲ್ಲಿ ಪದವಿ ಪಡೆದರು . ಆದರೆ ಹಿರಿಯರಂತೆ ಅಧ್ಯಾಪಕ ವೃತ್ತಿ ಮಾಡಲು ಅವರು ಬಯಸಲಿಲ್ಲ ತಮ್ಮ ೨೦ ನೆಯ ವಯಸ್ಸಿನಲ್ಲಿ ಸೀತಾಲಕ್ಷ್ಮಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು . ಆಗ ತಾಯಿಗೆ ೧೪ ವರುಷ . ತಂದೆ ೧೯೪೨ ರಲ್ಲಿ ಸಣ್ಣ ಪ್ರಮಾಣದಲ್ಲಿ ಒಂದು ಮುದ್ರಣಾಲಯ ತೆರೆದರು . ತಾವೇ ಸ್ವತಃ ನಿಂತು ಮುದ್ರಣ ಮಾಡಿದರು ಅನೇಕ ಸ್ತೋತ್ರ ಪುಸ್ತಕಗಳನ್ನು ಮುದ್ರಿಸಿದರು ಅಯ್ಯಂಗಾರ್ ಲಗ್ನಪತ್ರಿಕೆಗೆಂದೇ ಒಂದು ಮಾದರಿ ಸ್ರಿಷ್ಟಿಸಿದರು . ಕಾಲ ಕ್ರಮದಲ್ಲಿ ಮುದ್ರಣಾಲಯ ವಿಸ್ತರಿಸಿದರು ಸ್ಥಳೀಯ ದಿನಪತ್ರಿಕೆಗಳನ್ನು ಮುದ್ರಿಸಲು ಆರಂಬಿಸಿದರು ಪ್ರಶ್ನ ಪತ್ರಿಕೆಗಳು ಸಿನಿಮಾ ಟಿಕೆಟ್ಗಗಳು   ಚುನಾವಣಾ ಬಿತ್ತಿ ಪತ್ರಗಳು ಹೀಗೆ ಹಲವಾರು ವಿಧಗಳಲ್ಲಿ ಮುಂದುವರಿದರು . ಅವರು ಪರಿಷ್ಕಾರ ಮಾಡಿ ಮುದ್ರಿಸಿದ ಸರಳ ಆರಾಧನಾ ಕ್ರಮ, ಸಂಧ್ಯಾವಂದನ ಕ್ರಮ,ಶ್ರಾದ್ಧಪ್ರಯೋಗ ಮುಂತಾದ ಪುಸ್ತಕಗಳು ಜನಪ್ರಿಯವಾದವು . ತಂದೆಯವರ ಆತ್ಮೀಯ ಸ್ನೇಹಿತರೆಂದರೆ ಟಿ ಬಿ ಸೂರ್ಯನಾರಾಯಣ,ಡಿ ಕೃಷ್ಣ ಅಯ್ಯಂಗಾರ್,ವೆಂಕಟರಂಗ ಅಯ್ಯಂಗಾರ್ ಮುಂತಾದವರು . ಪರಿಶ್ರಮವೇ ಜೀವನೋಪಾಯ ಎಂದು ಸಾರಿ ಹೇಳಿದರು. ಕೆಲಸದವರು ಕೈ ಕೊಟ್ಟಾಗಲೂ ಅಂಜದೆ ತಾವೇ ನಿಂತು ಕೆಲಸ ಮಾಡಿದವರು . ಸರಳ ಜೀವನ ಅಂದ ಮಾತ್ರಕ್ಕೆ ಆಡಂಬರ ಬೇಡವೆಂದವರಲ್ಲ. ಮೊದಲು ರೇಡಿಯೋ ಖರೀದಿಸಿದವರು ತಂದೆಯವರು. ಬೀದಿಯ ಮಂದಿಯೆಲ್ಲಾ ರೇಡಿಯೋ ಕೇಳಲು ಬರುತ್ತಿದ್ದರು . ಸಿನಿಮಾ ಎಂದರೆ ಪಂಚಪ್ರಾಣ . ಸ್ನೇಹಿತರೊಂದಿಗೆ ರಾತ್ರಿಯಲ್ಲಿ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಹಾಗೆಂದು ಮಕ್ಕಳನ್ನು ಸ್ವಚ್ಛಂದವಾಗಿ ಬಿಡಲಿಲ್ಲ . ಶಿಸ್ತಿನ ಸಿಪಾಯಿಯಂತಿದ್ದರು . ವಿದ್ಯೆಗೆ ಮೊದಲ ಆದ್ಯತೆ ಎನ್ನುತ್ತಿದ್ದರು ಹೀಗೆ ನಾನು ಶಿಸ್ತಿನ ವಾತಾವರಣದಲ್ಲಿ ಬೆಳೆದೆ. ತಾಯಿ ಮಮತೆಯ ಪ್ರತಿರೂಪ. ಅವರಿಗೆ ನನ್ನ ಮೇಲೆ ಅತಿಯಾದ ಪ್ರೀತಿ ನನಗೋ ಎಣ್ಣೆ ತಿಂಡಿಯೆಂದರೆ ಪಂಚಪ್ರಾಣ . ಯಾವಾಗಲೂ ಮನೆಯಲ್ಲಿ ತಿಂಡಿ ಇರುತ್ತಿತ್ತು . ಅಮ್ಮನ ಬಿಸಿಬೇಳೆಬಾತ್ , ಪುಳಿಯೋಗರೆ ,ಪೊಂಗಲ್ ,ದೋಸೆ ಎಂದರೆ ಬಲೇ ಇಷ್ಟ .ಇವುಗಳಿಲ್ಲದ ದಿನವಿರಲಿಲ್ಲ . ಈ ತಿನಿಸುಗಳ ತಯಾರಿಕೆಯಲ್ಲಿ ಯಾವ ಪದಾರ್ಥವು ಕೊರೆಯಾಗಬಾರದು . ಹಾಗಾಗಿ ಅವರ ತಿನಿಸುಗಳೆಂದರೆ ಬಂಧುಗಳಿಗೂ ಇಷ್ಟ . ನಮ್ಮದು ಆಗ ಒಟ್ಟು ಕುಟುಂಬ . ಅತ್ತೆಯವರೆಲ್ಲ ಒಟ್ಟಿಗೆ ಇರುತ್ತಿದ್ದರು ಹೀಗಾಗಿ ತಿನಿಸು ಮಾಡಬೇಕಾದರೆ ದೊಡ್ಡ ಪ್ರಮಾಣದಲ್ಲೇ ಮಾಡಬೇಕಿತ್ತು. ತಾಯಿಯವರು ಎಲ್ಲವನ್ನೂ ನಿಭಾಯಿಸುತ್ತಿದ್ದರು.
ನನ್ನ ತಾಯಿಯ ತಂದೆ ಪ್ರಸಿದ್ಧ ಪುರೋಹಿತರು .ಅವರ ಹೆಸರು ಕಂದಾಡೈ ತಿರುನಾರಾಯಣ ಅಯ್ಯಂಗಾರ್ ಎಂದು. ಅವರಿಗೆ ಇಬ್ಬರು ಮಡದಿಯರು . ನನ್ನ ತಾಯಿ ಮೊದಲಮಡದಿಯ ಏಕೈಕ ಪುತ್ರಿ. ಎರಡನೆಯ ಮಡದಿಗೆ ೭ ಜನ ಮಕ್ಕಳು. ನನ್ನ ಅಜ್ಜಿಗೆ ನಾನೆಂದರೆ ತುಂಬಾ ಇಷ್ಟ , ಹೆಚ್ಚಿನದಿನಗಳು ಸಂಜೆಯ ಸಮಯ ಅಜ್ಜಿಮನೆಯಲ್ಲಿಯೇ ಕಳೆಯುತ್ತಿದ್ದೆ . ಅಜ್ಜಿಯ ಹೆಸರು ಸುಂದರಮ್ಮ. ಹೆಸರಿಗೆ ತಕ್ಕಂತೆ ಸುಂದರವಾಗಿಯೇ ಇದ್ದರು. ಮೊದಲ ಮಗು ಹೆಣ್ಣು ಮಗು ಆಯಿತಲ್ಲ ಎಂದು ಅಜ್ಜ ಎರಡನೆಯ ಮದುವೆ ಆಗಿದ್ದರು. ಆದರೂ ತಾತನಿಗೆ ಮುದ್ದಿನ ಮೊಮ್ಮಗ ಆಗಿದ್ದೆ. ಅಜ್ಜಿ ದೋಸೆ ಚೆನ್ನಾಗಿ ಮಾಡುತ್ತಿದ್ದರು ನಾನು ಅವರ ಮನೆಗೆ ಹೋದಾಗಲೆಲ್ಲಾ ದೋಸೆ ಸಿದ್ಧವಾಗಿರುತಿತ್ತು. ಅಜ್ಜಿಗೆ ಸಿನಿಮಾ ನೋಡಲು ಜೊತೆ ನಾನಾಗಿದ್ದೆ . ಅಪ್ಪ ತುಂಬಾ ಸ್ಟ್ರಿಕ್ಟ್ . ರಾತ್ರಿ ಅಜ್ಜಿಮನೆಯಲ್ಲಿ ಇರುವೆನೆಂದು ಹೋಗಿ ಅಜ್ಜಿಯ ಸಂಗಡ ರಾತ್ರಿ ಸಿನಿಮಾ ನೋಡುತ್ತಿದ್ದೆ . ಹೀಗೆ ನನ್ನ ಬಾಲ್ಯ ಸುಂದರ ಸಮಯವಾಗಿತ್ತು. ಕಳೆದ ಆ ಬಾಲ್ಯದ ದಿನಗಳು ರಸಮಯವಾಗಿತ್ತು.

ಉಗಾದಿ ೨೦೧೭



ಕಳೆದಿಹುದು ೨೧ ರ ಶತಕದ ೧೬ ವರುಷ
ಬರುತಿಹುದು ೧೭,ಸಡಗರವ ಚೆಲ್ಲುತ
ಶೀತ ಮಾರುತವು ಬೀಸಿಹುದು ಪೂರ್ವದಲಿ
ಸೂಚಿಸುತ ದೂರದಿ ಬರಲಿರುವ ವಿಪತ್ತನು


ನುಡಿದಿಹರು ಭವಿಷ್ಯ ಸೂಚಿಸುತ ಪ್ರಳಯ

ಯುಗಾಂತದಲಿ ವಿಶ್ವದ ಅಂತ್ಯವ
ನಡೆಸಿಹರು ವಿಜ್ಞಾನಿಗಳು ಶೋಧವ
ರವಿಯಂಚಿನಿಂದ ಸ್ಫೋಟಿಸುವ ಅಗ್ನಿ ಜ್ವಾಲೆಯ


ಕರಗುತಿದೆ ಹಿಮಾಲಯದ ತಣ್ಣನೆಯ ಮಂಜು
ಸುಡುತಿದೆ ಸಾಗರದಡಿಯ ಲವಣದ ನೀರು
ಜರುಗುತಿದೆ ಭೂಗೋಳ ಇಂಚಿಂಚಿನಲಿ
ಉಕ್ಕುತಿದೆ ಸಾಗರ ಕಬಳಿಸುತ ಭೂಮಿಯ


ಇಂದು ನಮ್ಮದು, ನಾಳೆ ಜಗದೊಡೆಯನದು
ಸ್ವಾಗತಿಸೋಣ ದಶಕ ಹದಿನೇಳ ಸಂತಸದಿ
ಬೇಡ ಮಧ್ಯಪಾನ ,ಲಲನೆಯರ ಬಿನ್ನಾಣ
ನಡುರಾತ್ರಿಯಲಿ ಜರಗುವ ಮೋಜಿನ ನಿತ್ರಾಣ


ಕೂಡಿ ಪ್ರಾರ್ಥಿಸೋಣ ಎಲ್ಲ ದೇವ,ದೇವರ,ಅಲ್ಲಾನ
ಪಾರುಮಾಡೆಂದು ಬರಲಿರುವ ವಿಪತ್ತಿನಿಂದ
ತುಂಬಿರಲಿ ಸಂತಸ ಮನೆಮಂದಿ ಮಕ್ಕಳಲಿ
ನೂರಾರು ಶತಕಗಳಲಿ ಅನವರತ ನಿರಂತರ

ರಚನೆ-ಕೆ.ವಿ.ಶ್ರೀನಿವಾಸ ಪ್ರಸಾದ್ 


ರಥಸಪ್ತಮಿ


ರಥಸಪ್ತಮಿ ಭಾರತೀಯರಿಗೆ ಒಂದು ಪ್ರಮುಖ ಹಬ್ಬ . ಇದುಮಾಘ ಮಾಸದ ಶುಕ್ಲ ಸಪ್ತಮಿಯಂದು ಬರುತ್ತದೆ . ಈ ವರ್ಷ ಫೆಬ್ರವರಿ ೩ ರಂದು ಆಚರಿಸಲಾಗುತ್ತದೆ . ಇದನ್ನು ಸೂರ್ಯನ ಜನ್ಮದಿನವೆಂದು , ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ . ಸೂರ್ಯನು ಅದಿತಿ , ಕಶ್ಶ್ಯಪರ ಮಗನೆಂದು ಆದಿತ್ಯ ಎಂಬ ಹೆಸರಿನಿಂದ ಕರೆಯುತ್ತಾರೆ . ರಥಸಪ್ತಮಿ ಋತು ಪರಿವರ್ತನೆಯ ಪರ್ವಕಾಲವೂ ಕೂಡ . ಹೇಮಂತ ಋತು ಮುಗಿದು ಶಿಶಿರ ಋತುವಿನ ಆರಂಭ . ರೈತರಿಗೆ ನೂತನ ವರ್ಷಾರಂಭ ಕೂಡ . ಸೂರ್ಯನ ರಥಕ್ಕೆ ೭ ಕುದುರೆಗಳು ಮತ್ತು ೧೨ ಚಕ್ರಗಳು .ಇವು ವಾರದ ೭ ದಿನಗಳ ಮತ್ತು ೧೨ ತಿಂಗಳ ಸಂಕೇತ. ಏಳು ಕುದುರೆಗಳು ಏಳು ಬಣ್ಣಗಳನ್ನುಸೂಚಿಸುತ್ತದೆ. ಏಳು ಬಣ್ಣಗಳ ಮಿಲನ ಬಿಳಿಯ ಬಣ್ಣ. ೧೨ ತಿಂಗಳುಗಳು ೧೨ ರಾಶಿಗಳನ್ನು ತಿಳಿಸುತ್ತದೆ. ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯನ್ನು ಪ್ರವೇಶಿಸುತ್ತಾನೆ . ಸೂರ್ಯನ ಜನ್ಮ ಸ್ಥಾನ ಸಿಂಹರಾಶಿ . ರಥಸಪ್ತಮಿ ಮುಂಬರುವ ಬೇಸಿಗೆ ಕಾಲವನ್ನು ಸೂಚಿಸುತ್ತದೆ. ಸೂರ್ಯನ ಪೂಜೆ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ. ವಿಪ್ರರು ಸೂರ್ಯನ ಕುರಿತಾದ ಗಾಯತ್ರಿ ಜಪವನ್ನು ಪ್ರತಿನಿತ್ಯ ತ್ರಿಕಾಲದಲ್ಲಿ ಜಪಿಸುತ್ತಾರೆ. ಈ ಮಂತ್ರ ಸಕಲ ರೋಗ ನಿವಾರಕ,ಭಯ ನಿವಾರಕ ಮತ್ತು ಪಾಪ ಪರಿಹಾರವೆಂದು ನಂಬಲಾಗಿದೆ. ಸೂರ್ಯನ ಕುರಿತಾದ ಅತಿ ಪ್ರಸಿದ್ಧವಾದ ಸ್ತೋತ್ರವೆಂದರೆ ಅಗಸ್ತ್ಯ ಮುನಿ ಪ್ರಣೀತವಾದ ಆದಿತ್ಯಹೃದಯ ಸ್ತೋತ್ರ.

ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಂ ,
ಜಯಾವಹಂ ಜಪೇನ್ನಿತ್ಯಮ್ ಅಕ್ಶಯಮ್ ಪರಂ ಶಿವಂ
ಸರ್ವ ಮಂಗಳ ಮಾಂಗಲ್ಯಮ್ ಸರ್ವ ಪಾಪ ಪ್ರಣಾಶನಂ
ಚಿಂತಾಶೋಕ ಪ್ರಶಮನಂ ಆಯುರ್ವರ್ಧನಂ ಉತ್ತಮಮ್

ಎಂದು ಸ್ತುತಿಸಲಾಗುತ್ತದೆ .

ಸೂರ್ಯನ ದೇವಾಲಯಗಳು ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ಕಾಣ ಸಿಗುತ್ತದೆ. ಆದರೆ ಕೋನಾರ್ಕ್ ನಲ್ಲಿರುವ ಸೂರ್ಯ ದೇವಾಲಯ ಅತಿ ಪ್ರಸಿದ್ಧವಾದದ್ದು . ಇಲ್ಲಿ ಕಾಣಸಿಗುವ ಕಲಾಕೃತಿಗಳು ವಿಶ್ವಪ್ರಸಿದ್ಧ . ದೇವಾಲಯದ ರಚನೆ ಸೂರ್ಯನ ಗತಿಯನ್ನು ನಿಖರವಾಗಿ ಸೂಚಿಸುತ್ತದೆ.

ಸೂರ್ಯನನ್ನು ವಿಷ್ಣು ಸ್ವರೂಪವೆಂದು ಸೂರ್ಯ ನಾರಾಯಣನೆಂದೂ ಪೂಜಿಸುತ್ತಾರೆ. ದೇವಾಲಯಗಳಲ್ಲಿ ರಥ ಸಪ್ತಮಿಯಂದು ಸೂರ್ಯ ಪ್ರಭ ವಾಹನ  ಉತ್ಸವ ನಡೆಸಲಾಗುತ್ತದೆ. ಕಳಲೆಯಲ್ಲಿಯೂ ಅಂದು ಸೂರ್ಯ ಮಂಡಲ ಉತ್ಸವ ನಡೆಯುತ್ತದೆ.
ಮಾಘ ಕೃಷ್ಣ ಚತುರ್ದಶಿಯನ್ನು ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಇದು ಫೆಬ್ರವರಿ ೨೪ ರಂದು ಬರುತ್ತದೆ.

ಶ್ರೀನಿವಾಸ ಪ್ರಸಾದ್ .ಕೆ ವಿ.

ಸನ್ಮಾನ ಪತ್ರ  


ಭಗವಾನ್ ರಾಮಾನುಜರ ನಂತರ ಪ್ರಖ್ಯಾತರಾದವರು ಸ್ವಾಮಿ ವೇದಾಂತ ದೇಶಿಕರು ಅಥವಾ ವೆಂಕಟನಾಥರು . ರಾಮಾನುಜರ ತತ್ವ ಪ್ರತಿಪಾದನೆಗಾಗಿ ಸುಮಾರು ೧೦೦ ಕೃತಿಗಳನ್ನು ರಚಿಸಿ ಕವಿಸಿಂಹ ಎಂದು ಪ್ರಖ್ಯಾತರಾದವರು . ಸಂಸ್ಕೃತ ಮತ್ತು ತಮಿಳಿನಲ್ಲಿ ರಚನೆಗಳನ್ನು ಮಾಡಿ ಉಭಯವೇದಾಂತ ಪ್ರವರ್ತಕರೆನಿಸಿಕೊಂಡವರು . ಇವರು ಜನಿಸಿ ಸುಮಾರು ೭೫೦ ವರುಷಗಳೇ ಆದರೂ ಇಂದಿಗೂ ಅವರ ರಚನೆಗಳು ಅಜರಾಮರಗಳಾಗಿವೆ . ದೇಶಿಕರ  ಕೈಂಕರ್ಯಗಳನ್ನು ಅನವರತ ನಡೆಸಿಕೊಂಡು ಬರಲು ೧೯೧೭ ರಲ್ಲಿ ಸ್ಥಾಪಿತವಾದ ಸಂಸ್ಥೆ ಮೈಸೂರಿನ ವೆಂಕಟೇಶ ಸಭೆ. ವಿದ್ವಾನ್ ಕಳಲೆ ಶ್ರೀನಿವಾಸ ಅಯ್ಯಂಗಾರ್ಯರಿಂದ ಆರಂಭವಾದ ಸಂಸ್ಥೆ ಇಂದಿಗೂ ಮೈಸೂರಿನ ಅರಮನೆ ದೇವಸ್ಥಾನಗಳಲ್ಲಿ ದೇಶಿಕರ ಜನ್ಮ ದಿನವನ್ನು ಕೊಂಡಾಡುತ್ತಾ ಬಂದಿದೆ . 
ತೊಡಕಾ, ವೇದ ಪಾರಾಯಣ ,ಗಂಧಹುಡಿ ಉತ್ಸವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ . ಕೆಲವು ವರ್ಷಗಳಿಂದ ಪುಸ್ತಕ ಪ್ರಕಾಶನ ಉಪನ್ಯಾಸ ಮತ್ತು ಚಿಣ್ಣರಿಗಾಗಿ ಸ್ತೋತ್ರ ಪಾಠ ಸ್ಪರ್ಧೆ ಗಳನ್ನೂ ನಡೆಸುತ್ತಾ ಬಂದಿದೆ . ಕಳೆದ ಸಂವತ್ಸರದಿಂದ  ವೇದ ವಿದ್ವಾಂಸರ ಸನ್ಮಾನ ಕಾರ್ಯಕ್ರಮವನ್ನೂ ಆರಂಭಿಸಿದೆ . 

ಈ ಸಂವತ್ಸರ ಸನ್ಮಾನಿತರಾಗುವವರು ವೇದ ವಿದ್ವಾಂಸರಾದ ,ಪಂಡಿತ ಮಣಿ,ಶಾಸ್ತ್ರ ಕಲಾಧಾರ, ವೇದಶಾಸ್ತ್ರ ವಿಶಾರದ,ವಿದ್ಯಾ ವಾಚಸ್ಪತಿ ಮುಂತಾದ ಬಿರುದಾಂಕಿತರಾದ ಚಕ್ರವರ್ತಿ ಶ್ರೀನಿವಾಸಾಚಾರ್ ಗೋಪಾಲಾಚಾರ್ . ೧೯೨೭ ರಲ್ಲಿ ಹೆಡತಲೆ ಶ್ರೀನಿವಾಸಾಚಾರ್ ಮತ್ತು ಲಕ್ಷ್ಮಮ್ಮ ದಿವ್ಯ ದಂಪತಿಗಳಿಗೆ ಜನಿಸಿದ ಇವರು ತಮ್ಮ ವಿದ್ವತ್ತನ್ನು ಬೆಂಗಳೂರಿನ ಸಂಸ್ಕೃತ ಕಾಲೇಜಿನಿಂದ ಪಡೆದರು.ಯಜುರ್ವೇದ ,ಪ್ರಶ್ನ ,ಸೂಕ್ತಗಳನ್ನು ವಿದ್ವಾನ್ ಸ್ವಚ್ಛಂದಮ್ ಅನಂತಾಚಾರ್ಯರಿಂದ ಅಭ್ಯಸಿಸಿದ್ದಾರೆ.  ಉಪನ್ಯಾಸ ವೃತ್ತಿಯಲ್ಲಿ ಸುಮಾರು ಮೂರು ದಶಕ ಗಳಿಗಿಂತಲೂ ಹೆಚ್ಚು ಸೇವೆಸಲ್ಲಿಸಿದ್ದಾರೆ .ತಮ್ಮ ನಿವೃತ್ತಿಯ ನಂತರವೂ ಅನೇಕ ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯೆಯನ್ನು ಧಾರೆ  ಎರೆದಿದ್ದಾರೆ . ಪೌರೋಹಿತ್ಯ ವೃತ್ತಿಯಲ್ಲಿಯೂ ತೊಡಗಿಸಿಕೊಂಡ ಇವರು ತಮ್ಮ ೮೯ ನೇ ವಯಸ್ಸಿನಲ್ಲಿಯೂ ವಿದ್ಯಾ ಪ್ರಸಾರಕ್ಕೆ ಅನವರತ ಶ್ರಮಿಸುತ್ತಿದ್ದಾರೆ . 

ಇಂತಹ ವಿದ್ವನ್ಮಣಿ ಯನ್ನು ವೇದಾಂತ ದೇಶಿಕರ ಜನ್ಮದಿನದವಸರದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯೆನಿಸಿದೆ. ಭಗವಂತನು ಇವರಿಗೆ ಆಯುರಾರೋಗ್ಯವನ್ನು ದಯಪಾಲಿಸಲಿ ಎಂಬುದೇ ನಮ್ಮ ಹಾರೈಕೆ . 

ಸಮನ್ವಯ ಹರಿಕಾರ ಯತಿರಾಜ ರಾಮಾನುಜ

ರಾಮಾನುಜ ತತ್ವವನ್ನು ತಿಳಿಯುವ ಮೊದಲು ಶಂಕರ ತತ್ವವನ್ನು ಅರಿಯುವುದು ಅನಿವಾರ್ಯ . ಶಂಕರರು ಜನಿಸಿದ ಕಾಲ. ಹಿಂದೂ ಧರ್ಮ ಅವನತಿಯತ್ತ ಸಾಗುತ್ತಿದ್ದ ಕಾಲ . ಚಾರ್ವಾಕರು ಪ್ರಬಲರಾಗುತ್ತಿದ್ದರು . ಬೌದ್ಧ , ಜೈನ ಧರ್ಮಗಳು ಪ್ರಾಬಲ್ಯಪಡೆಯುತ್ತಿದ್ದ ಸಮಯ . ಶೂನ್ಯ ವಾದ ಅಗ್ರಸ್ಥಾನದತ್ತ  ಮುನ್ನುಗ್ಗುತ್ತಿದ್ದಾಗ  ಜನಿಸಿದವರು ಶಂಕರರು. ಅವರಿದ್ದ ಅಲ್ಪ ಆಯಸ್ಸಿನಲ್ಲಿ
ವೇದೋಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿ, ಶೂನ್ಯ ವಾದ ಪ್ರಚಾರ ಮಾಡುತ್ತಿದ್ದ ಬೌದ್ಧೀಯರನ್ನು ಅಡಗಿಸಿ, ಹಿಂದೂ ಧರ್ಮವನ್ನುನೆಲೆಗೊಳಿಸಿದವರು ಶಂಕರರು .ಎಲ್ಲ ಧರ್ಮಗಳ ಧ್ಯೇಯ ಮೋಕ್ಷ. ಅದನ್ನು ಮುಸ್ಲಿಮ್ಮರು  ಜನ್ನತ್  ಎಂದರೆ  ಕ್ರಿಶ್ಚಿಯನ್ನರು  ಅಬೋಡ್ ಎಂದರು . ಈ ಮೋಕ್ಷ ಪ್ರಾಪ್ತಿಗೆ ಅಗತ್ಯವಿರುವುದು ಜ್ಞಾನ . ಜ್ಞಾನಮಾರ್ಗವೊಂದರಿಂದಲೇ ಮೋಕ್ಷ . ನಹಿ ಜ್ಞಾನೇನ ಸಧೃಶಂ .ಚರಾಚರ ಗಳೆಲ್ಲವೂ ಪರಮಾತ್ಮನ ಅಂಶವೇ . ಹೇಗೆ ವೈಜ್ಞಾನಿಕವಾಗಿ ಅವಿನಾಶಿ ಪರಮಾಣುವನ್ನುಎಷ್ಟುಬಾರಿ ವಿಭಜಿಸಿದರೂ ಉತ್ಪತ್ತಿಯಾಗುವುದು ಅಣುಮಾತ್ರವೇ . ಅಣುವು ಎಲ್ಲ ಬಗೆಯಲ್ಲಿಯೂ ಪರಮಾಣುವನ್ನೇ ಹೋಲುತ್ತದೆ . ಅಂತೆಯೇ ಪರಮಾತ್ಮನೂ ಅವಿನಾಶಿ. ಅವನು ಒಬ್ಬನೇ .ಅವನ ಅಂಶದಿಂದ ಹುಟ್ಟಿದುದೆಲ್ಲವೂ ಜೀವಾತ್ಮರು . ಜೀವಾತ್ಮರು ಎಲ್ಲ ಬಗೆಯಲ್ಲಿಯೂ ಪರಮಾತ್ಮನನ್ನೇ ಹೋ ಲುತ್ತಾರೆ . ಆದ್ದರಿಂದ ಜೀವಾತ್ಮ ಪರಮಾತ್ಮಬೇರೆಯಲ್ಲ . ಮೋಕ್ಷ ಪ್ರಾಪ್ತಿಗೆ ಪರಮಾತ್ಮನ ಜ್ಞಾನ ಅವಶ್ಯ . ಅವನನ್ನರಿತಾಗ ಉಳಿದ ಅರಿಷಡ್ವರ್ಗಗಳು ಮರೆಯಾಗಿ ಪರಮಾತ್ಮ ಜ್ಞಾನಉಂಟಾಗುತ್ತದೆ . ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಮತವನ್ನು ಸ್ಥಾಪಿಸಿ ಹಿಂದೂ ವನ್ನುಚಿರಸ್ಥಾಯಿಗೊಳಿಸಿದವರು ಶಂಕರರು.ಶಂಕರರು ೮ನೇ ಶತಮಾನದಲ್ಲಿದ್ದರೆ, ರಾಮಾನುಜರು ೧೧ನೇ ಶತಮಾನದಲ್ಲಿ ಜನಿಸಿದರು . ಅವರು ಮೂಲತಃ ವೈಷ್ಣವರಾಗಿರಲಿಲ್ಲ.ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು . ಅವರು ಯಾದವ ಪ್ರಕಾಶರೆಂಬ ಅದ್ವೈತ ಗುರುಗಳಲ್ಲಿ ವ್ಯಾಸಂಗ ಆರಂಭಿಸಿದರು . ಆದರೆ ಯಾದವ ಪ್ರಕಾಶರ ಅದ್ವೈತ ತತ್ವ ಅಷ್ಟಾಗಿ ಸರಿಯೆನಿಸಲಿಲ್ಲ . ಅವರ ಅನೇಕ ವ್ಯಾಖ್ಯಾನಗಳನ್ನು ರಾಮಾನುಜರು  ತಿಭಟಿಸಿದರು .
ಗುರುಕುಲದಿಂದ ಹೊರನಡೆದರು . ಕಾಂಚೀಪುರಂನ ವರದರಾಜಸ್ವಾಮಿ ದೇವಾಲಯದಲ್ಲಿ ಅರ್ಚಕ ವೃತ್ತಿ ಹಿಡಿದ ರಾಮಾನುಜರಮನಸ್ಸಿನಲ್ಲಿ ಹೋರಾಟ ನಡೆಯುತ್ತಿತ್ತು . ಜೀವಾತ್ಮ ಪರಮಾತ್ಮರು ಬೇರೆಯಲ್ಲದಿದ್ದರೂ ಕರ್ಮ ಫಲದಿಂದ ಕಲುಷಿತವಾದ ಜೀವಾತ್ಮಪರಮಾತ್ಮನನ್ನು ಹೊಂದಬೇಕಾದರೆ ಸಾಧನೆ ಅತ್ಯವಶ್ಯವೆಂಬ ಸಿದ್ಧಾಂತವನ್ನು ಹೊರಹಾಕಿದರು . ಅಂದರೆ ಅದ್ವೈತವನ್ನು ಒಪ್ಪಿದರೂ ಅದರಲ್ಲಿ ವಿಶಿಷ್ಟಾರ್ಥವನ್ನು ಸೃಷ್ಟಿಸಿ ವಿಶಿಷ್ಟಾದ್ವೈತ ತತ್ವ ಪ್ರತಿಪಾದಕರಾದರು . ಜ್ಞಾನಮಾರ್ಗದಿಂದ ಮಾತ್ರ ಮೋಕ್ಷ ಎಂಬ ವಾದವನ್ನು ತಳ್ಳಿಹಾಕಿ , ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಉಪದೇಶಿಸಿದಂತೆ , ಜ್ಞಾನಮಾರ್ಗ ಎಲ್ಲರಿಗೂ ಎಟಕುವಂತಹುದಲ್ಲ . ಅಂದ ಮಾತ್ರಕ್ಕೆಸಾಮಾನ್ಯ ಜನರಿಗೆ ಮೋಕ್ಷವೇ ಇಲ್ಲವೆಂದಲ್ಲ. ಶ್ರೀ ಕೃಷ್ಣನೇ ತಿಳಿಸಿರುವಂತೆ ಜ್ಞಾನ ಕರ್ಮಮಾರ್ಗಗಳು ಸಾಧ್ಯವಿಲ್ಲದಿದ್ದಾಗ ಭಕ್ತಿಮಾರ್ಗದಲ್ಲಿ ಮೋಕ್ಷ ಸಾಧ್ಯವೆಂದು ಪ್ರತಿಪಾದಿಸಿದರು ರಾಮಾನುಜರು . ಅವರು ತಮ್ಮ ಪೂರ್ವದಲ್ಲಿದ್ದ , ಜಾತಿಯಲ್ಲಿ ಅಬ್ರಾಹ್ಮಣರಾದ ಆಳ್ವಾರರು ಹೇಗೆ ಭಕ್ತಿಮಾರ್ಗದಿಂದ ಭಗವಂತನನ್ನು ಹೊಂದಿದರು ಎಂಬುದನ್ನು ನಿದರ್ಶಿಸಿ , ಸಾಮಾನ್ಯರಿಗೂ ಅನುಕೂಲವಾಗುವಂತಹ ಭಕ್ತಿ ಮಾರ್ಗ ಪ್ರವರ್ತಕರಾದರು
ಶೈವತತ್ವ ಪ್ರಬಲವಾಗುತ್ತಿದ್ದ ಕಾಲದಲ್ಲಿ , ವಿಷ್ಣುವೊಬ್ಬನೇ ಪರಮಾತ್ಮ. ಎಲ್ಲ ಜೀವಾತ್ಮರೂ ಅವನ ಅಂಶಗಳು ಎಂಬ ತತ್ವವನ್ನುಪ್ರಚುರಪಡಿಸಿ ವೈಷ್ಣವ ಧರ್ಮಕ್ಕೆ ಭದ್ರ ಬುನಾದಿ ಹಾಕಿದರು. ಶೈವರು ಷಡಕ್ಷರಿ ಮಂತ್ರವಾದ "ಓಂ ನಮಃ. ಶಿವಾಯ "ಎಂಬ ಮಂತ್ರದಿಂದ ಮೋಕ್ಷವೆಂದರೇ ,ಅಷ್ಟಾಕ್ಷರಿ ಮಂತ್ರವಾದ "ಓಂ ನಮೋ ನಾರಾಯಣಾಯ"ಎಂಬ ಮಂತ್ರದಿಂದ ಮೋಕ್ಷಪ್ರಾಪ್ತಿಎಂದು ಸ್ಥಾಪಿಸಿ ಎಲ್ಲರಿಗೂ ಮೋಕ್ಷಪ್ರಾಪ್ತಿ ಸಿಂಧುವಾಗಲೆಂದು ಬಯಸಿ , ರಹಸ್ಯವಾಗಿದ್ದ ಈ ಮಂತ್ರವನ್ನು ದೇವಾಲಯದ ಗೋಪುರವೇರಿ ಎಲ್ಲರಿಗೂ ಸಾರಿ ಹೇಳಿದರು. ಬ್ರಾಹ್ಮಣರಲ್ಲದ ಇತರ ಮೂರು ವರ್ಗಗಳಿಗೂ ಮೋಕ್ಷಪ್ರಾಪ್ತಿ ಸಾಧ್ಯವೆಂದು ತಿಳಿಸಿ ,ಭಕ್ತಿಮಾರ್ಗ ಉಪದೇಶಿಸಿ ಶರಣಾಗತಿ ತತ್ವವನ್ನು ಪ್ರ.ತಿಪಾದಿಸಿದರು. ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿರುವಂತೆ,ಅನನ್ಯಭಕ್ತಿಯಿಂ ದ ಸ್ವರ್ಗ ಪ್ರಾಪ್ತಿ ಸಾಧ್ಯವೆಂದು ಸಾರಿದರು. ಅವರು ರಚಿಸಿದ ಬ್ರಹ್ಮಸೂತ್ರ ಭಾಷ್ಯ,ಗೀತಾಭಾಷ್ಯಗಳು ಪ್ರಸಿದ್ಧ ಗ್ರಂಥಗಳಾದವು .ಶಿವನೊಬ್ಬನೇ ದೈವವೆಂದವರು ಶೈವರಾದರು. ಶಿವ ವಿಷ್ಣು ಇಬ್ಬರನ್ನೂ ಸ್ವೀಕರಿಸಿದ ಅದ್ವೈತಿಗಳು ಸ್ಮಾರ್ತರೆನಿಸಿದರು. ವಿಷ್ಣುಒಬ್ಬನೇ ದೈವವೆಂದವರು ಶ್ರೀವೈಷ್ಣವರೆನಿಸಿಕೊಂಡರು. ಹೀಗಾಗಿ ರಾಮಾನುಜ ಅನುಯಾಯಿಗಳು  ಶ್ರೀವೈಷ್ಣವರೆಂದು ಖ್ಯಾತ ನಾಮರಾದರು .

ಭಕ್ತಿಮಾರ್ಗದಲ್ಲಿ ನಡೆಯುವುದು ಹೂವಹಾಸಿಗೆಯಲ್ಲ . ಅದರಲ್ಲಿ ಏಕಾಗ್ರತೆಯಿರಬೇಕು . ಅನ್ಯಚಿಂತನೆಗಳಿಗೆ ಅವಕಾಶವಿಲ್ಲ .ಸದಾ ಸರ್ವದಾ ಭಗವಧ್ಯಾನ ಅನಿವಾರ್ಯ . ಇಲ್ಲಿ ಅಹಂಕಾರಕ್ಕೆ ಅವಕಾಶವಿಲ್ಲ . ಎಲ್ಲವೂ ಭಗವಂತನದು ಎಂಬ ಜ್ಞಾನ  ಅನಿವಾರ್ಯ. ಮಾಡಿದುದೆಲ್ಲವನ್ನು ಭಗವಂತನಿಗೆ  ಅರ್ಪಿಸಬೇಕು.  ಮಾಡುವುದೆಲ್ಲವೂ  ಭಗವಂತನ  ನಿರ್ದೇಶನದಂತೆ  ಎಂದು
ತಿಳಿಯಬೇಕು. ಕರ್ಮಫಲ ಅಪೇಕ್ಷಿಸಬಾರದು . ಮೂರು ನಿದ್ರಾವಸ್ಥೆಯಲ್ಲಿಯೂ ಭಗವಧ್ಯಾನವೇ ಆಕ್ರಮಿಸಿರಬೇಕು . ಇಂತಹ ವ್ರತ ಪರಿಪಾಲನೆ ಚಂಚಲಚಿತ್ತನಾದ ಮನುಷ್ಯನಿಗೆ ಸಾಧ್ಯವೇ ಎಂಬ ಅನುಮಾನ ಆವಾರಿಸತೊಡಗಿತು . ಆಗ ರೂಪಿಸಲ್ಪಟ್ಟತತ್ವವೇ ಶರಣಾಗತಿ ತತ್ವ . ಶ್ರೀ ಕೃಷ್ಣನು ಗೀತೆಯಲ್ಲಿ ತಿಳಿಸಿರುವಂತೆ , ಫಲಾಪೇಕ್ಷೆಯಿಲ್ಲದೆ ಮಾಡಿದ ಕರ್ಮವೆಲ್ಲವೂ ಪಾಪ ಮುಕ್ತವಾಗಿಸುವಂತೆ , ಹೇಗೆ ರಾಮಾಯಣದಲ್ಲಿ ವಿಭೀಷಣನು ರಾವಣನಿಂದ ಪರಿತ್ಯಕ್ತನಾಗಿ ರಾಮನಲ್ಲಿ ಶರಣು ಎಂದು ಬಂದು  ಆಶ್ರಯಪಡೆದನೋ , ಅಂತೆಯೇ ಭಗವಂತನಲ್ಲಿ ಶರಣಾಗುವುದರಿಂದ ಮೋಕ್ಷಪ್ರಾಪ್ತಿಯೆಂದು ನಿರೂಪಿಸಿದರು ರಾಮಾನುಜರು ಭಗವಂತನಲ್ಲಿ ನೇರವಾಗಿ ಶರಣಾಗುವುದು ಕಷ್ಟವೆನಿಸಿದಾಗ , ಒಬ್ಬ ಯೋಗ್ಯ ಗುರುಗಳಲ್ಲಿ ಶರಣಾಗಿ , ಪ್ರಪತ್ತಿ
ಮಾಡಿಸಿಕೊಳ್ಳುವುದರಿಂದ ಗುರುಮುಖೇನ ಮೋಕ್ಷ ಪ್ರಾಪ್ತಿ ಸಿದ್ಧ ವೆಂದು ತಿಳಿಸಿ , ಪ್ರಪತ್ತಿ ಮಾರ್ಗಪ್ರವರ್ತಕರಾದರು ರಾಮಾನುಜರು.

ಭಗವಂತನು ಅವಿನಾಶಿ, ಅಯೋನಿಜನು , ರೂಪರಹಿತನು , ಸಗುಣನು , ಅನಂತನು,ನಿರ್ಗುಣನು , ಅವಿಕಾರನು, ಅಶೇಷಿ , ಸರ್ವಶೇಷಿ,ಶುದ್ಧನು , ಆಚಾರ ಧರ್ಮಗಳಿಗೆ ಪ್ರವರ್ತಕನು. ಹೀಗೆ ಭಗವಂತನನ್ನು ಎಷ್ಟು ವರ್ಣಿಸಿದರೂ ಸಾಲದು. ಆದರೆ ನಿರಾಕಾರನಾದ ಭಗವಂತನ ಸ್ಮರಣೆ ಹೇಗೆ ಸಾಧ್ಯ ?. ಇದನ್ನರಿತ ಶಾಸ್ತ್ರಜ್ಞರು ಅರ್ಚಾರೂಪವನ್ನು ಸಾಕಾರಗೊಳಿಸಿ , ಅವನಿಗೆ ಮಾನವ-ಮಾನಸ ,ಚೇತನ-ಅಚೇತನ ರೂಪಗಳನ್ನು ಪರಿಕಲ್ಪಿಸಿ , ನಿರಾಕಾರ ಭಗವಂತನ ಸ್ಮರಣೆಗೆ ಅಣಿವುಮಾಡಿದರು . ಆದರೆ ಭಗವಂತನ ಆರಾಧನೆಗೆ ಏಕರೂಪವಿರಲಿಲ್ಲ . ಇದನ್ನರಿತ ರಾಮಾನುಜರು ವಿಷ್ಣು ಆರಾಧನೆಗೆ ಏಕರೂಪವಾದ ಆಚರಣೆಯನ್ನು ರೂಪಿಸಿದರು. ಇದು ಅವರು ಮಾಡಿದ ಅದ್ಭುತವಾದ ಕಾರ್ಯ .ಇಂದಿಗೂ ಆಸೇತುಹಿಮಾಚಲ ಈ ಏಕರೂಪ ಆರಾಧನಾ ಪದ್ಧತಿ ಪ್ರಚಲಿತದಲ್ಲಿದೆ .

ರಾಮಾನುಜರ ಬಹುತೇಕ ಕೃತಿಗಳು ಸಂಸ್ಕೃತದಲ್ಲಿದ್ದರೂ , ಅವರು ತಮ್ಮ ಪೂರ್ವಜರ ವಿಷ್ಣು ಪಂಥವನ್ನು ಗೌರವಿಸಿ ಅವರುಗಳು ರಚಿಸಿದ ಭಕ್ತಿಯುತವಾದ ಸ್ತೋತ್ರಗಳನ್ನೆಲ್ಲ ಕಲೆಹಾಕಿ , ನಾಲ್ಕು ಸಾವಿರ ಸ್ಲೋಕಗಳನ್ನು ಸಂಗ್ರಹಿಸಿ ,ನಾಲಾಯಿರ ಪ್ರಬಂಧಮ್ ಎಂದು ನಾಮಕರಣಮಾಡಿ ಅದಕ್ಕೆ ವೇದಗಳ ಸಮಾನ ಸ್ಥಾನ ಕಲ್ಪಿಸಿ , ದ್ರಾವಿಡ ವೇದವೆಂದು ಗುರುತಿಸಿದರು. ಇಂದಿಗೂ ದೇವಾಲಯಗಳಲ್ಲಿ ವೇದಗಳೊಂದಿಗೆ ಈ ದ್ರಾವಿಡ ವೇದವನ್ನೂ ಸ್ತುತಿಸುವುದು ಆಚರಣೆಯಲ್ಲಿದೆ.
ಅದಕ್ಕೆ ರಾಮಾನುಜರನ್ನು ಉಭಯವೇದಾಂತ ಪ್ರವರ್ತಕರೆಂದೂ , ಭಾಷ್ಯರಚಿಸಿದ್ದರಿಂದ ಭಾಷ್ಯಕಾರರೆಂದೂ ಗೌರವಿಸಲ್ಪಡುತ್ತಿದ್ದಾರೆ .

ರಾಮಾನುಜರು ಎಲ್ಲರನ್ನು ಸಮನಾಗಿ ಕಾಣುತ್ತಿದ್ದರು . ಅವರಿಗೆ ಜಾತಿ ಮತದ ಬೇಧವಿರಲಿಲ್ಲ . ಅವರು ಅಪೇಕ್ಷಿಸುತ್ತಿದ್ದುದು ಅನನ್ಯ ಭಕ್ತಿ . ಅವರು ಅವತರಿಸಿದ ಕಾಲ ಮೊಗಲರ ದಬ್ಭಾಳಿಕೆಯ ಸಮಯ . ಮೊಗಲರ ಆಕ್ರಮಣದಿಂದ ಹಿಂದೂ ಧರ್ಮ ಅವನತಿಯ ಅಂಚಿನಲ್ಲಿದ್ದ ಕಾಲ . ಶ್ರೀರಂಗಂನಲ್ಲಿ  ಆಕ್ರಮಣವಾದ  ಸಮಯದಲ್ಲಿ  ಶ್ರೀರಂಗನ , ರಂಗನಾಯಕಿ  ಅಮ್ಮನವರ
ಮೂರ್ತಿಗಳನ್ನು ರಕ್ಷಿಸಿದರು ರಾಮಾನುಜರು. ಆದರೆ ಅವರ ಧಾಳಿ ಮಿತಿಮೀರಿದಾಗ , ರಾಮಾನುಜರು ಕರ್ನಾಟಕದ  ಮೇಲುಕೋಟೆಗೆ ಆಗಮಿಸಿ ೧೨ ವರ್ಷಕಾಲ ತಮ್ಮ ಧರ್ಮೋಪದೇಶವನ್ನು ಮುಂದುವರಿಸಿದ್ದರು . ಒಮ್ಮೆ ಮೇಲುಕೋಟೆಯ ಚೆಲುವನಾರಾಯಣನ ಅರ್ಚಾ ವಿಗ್ರಹ ಕಣ್ಮರೆಯಾದಾಗ , ಮಗುವನ್ನು ಕಾಣದ ತಾಯಿಯಂತೆ ಪರಿತಪಿಸಿ, ದೇಶವೆಲ್ಲಾ
ಶೋಧಿಸಿ , ಕಡೆಯಲ್ಲಿ ಮೊಗಲರ ದೆಹಲಿ ದರ್ಭಾರಿನಲ್ಲಿ ರಾಣಿಯ ಅಂತಃಪುರದಲ್ಲಿ ವಿಗ್ರಹವಿರುವುದನ್ನು ಅರಿತು ಶ್ರಮದಿಂದ ವಿಗ್ರಹ ಪಡೆದು ,ಕಳೆದುಹೋಗಿದ್ದ ದೊಡ್ಡ ಆಸ್ತಿ ಮರಳಿಪಡೆದಷ್ಟು ಸಂತೋಷದಿಂದ ಆನಂದಾಶ್ರುಗಳಿಂದ ಮರಳಿ ಮೇಲುಕೋಟೆಗೆ ತಂದು ಪುನರ್ಸ್ಥಾಪಿಸಿದರು. ದೆಹಲಿಯಲ್ಲಿ ವಿಗ್ರಹ ಕಾಣದೆ ಪರಿತಪಿಸಿ  ರಾಮಾನುಜರನ್ನು  ಅರಸಿ  ಬಂದ
ಮುಸ್ಲಿಂ ರಾಜಕುಮಾರಿಯನ್ನು ಶಿಷ್ಯೆಯನ್ನಾಗಿ ಸ್ವೀಕರಿಸಿ ಅವಳ ನಿಧನದ ನಂತರ ಅವಳ ಮೂರ್ತಿಯೊಂದನ್ನು ಚೆಲುವ ನಾರಾಯಣನ ಚರಣಸಮೀಪ ಸ್ಥಾಪಿಸಿ ಸರ್ವಧರ್ಮ ಸಮನ್ವಯ ಸಾಧಿಸಿದವರು ರಾಮಾನುಜರು.ಹಾಗೆಯೇ ಜೈನ ದೊರೆ ಬಿಟ್ಟಿದೇವ ತನ್ನ ಕುಮಾರಿಗೆ ಹುಚ್ಚುಬಿಡಿಸಲಾಗದವನಾಗಿ ಪರಿತಪಿಸುತ್ತಿದ್ದ ಕಾಲದಲ್ಲಿ ಆಕೆಯ ಹುಚ್ಚು ಬಿಡಿಸಿ ಬಿಟ್ಟಿದೇವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ , ವಿಷ್ಣುವರ್ಧನನೆಂದು ನಾಮಕರಣಮಾಡಿ ಸರ್ವಧರ್ಮ ಸಮನ್ವಯ ಹರಿಕಾರನೆಂದು ಖ್ಯಾತರಾದರು ರಾಮಾನುಜರು. ವಿಷ್ಣುವರ್ಧನನ ನೆರವಿನೊಂದಿಗೆ ಅನೇಕ ಅದ್ಭುತ ಶಿಲ್ಪಕಲಾಸೌಂದರ್ಯ ಪೂರಿತ ವಿಷ್ಣು ದೇವಾಲಯಗಳನ್ನು ನಿರ್ಮಿಸಿ ವೈಷ್ಣವ ಪಂಥವನ್ನು
ಪ್ರಚುರಪಡಿಸಿದರು ರಾಮಾನುಜರು. ಇವರ ಭಕ್ತಿ ಪಂಥ ಉತ್ತರ ಭಾರತದ ಅನೇಕ  ಮುನಿಗಳ ಮೇಲೆ ಪ್ರಭಾವ ಬೀರಿ ಉತ್ತರ ಭಾರತದಲ್ಲಿಯೂ ಭಕ್ತಿಪಂಥಕ್ಕೆ ಸೋಪಾನ ವಾಯಿತು.

ಮೋಕ್ಷ ಸಾಧನೆಗೆ ಹೇಗೆ ಶರಣಾಗತಿ ಅವಶ್ಯವೋ ಅಂತೆಯೇ ಸನ್ಮಾರ್ಗವೂ ಅತ್ಯವಶ್ಯ. ಯೆ, ಕರುಣೆ, ಕ್ಷಮೆ,ಮುಂತಾದ  ಮೂಲ ಗುಣಗಳೂ ಅವಶ್ಯ. ಭಗವಂತನ ಕರುಣೆಗೆ ಪಾತ್ರರಾಗಬೇಕಾದರೆ ಪ್ರಪತ್ತಿ ಎಷ್ಟು ಮುಖ್ಯವೋ ನಂತರದಲ್ಲಿ ನಡೆಸುವ ಸ್ವಚ್ಛಂದ ಜೀವನ ಅಕ್ಷಮ್ಯಅಪರಾಧವೂ ಕೂಡ . ಇಂದ್ರಿಯ ನಿಗ್ರಹ , ಅರಿಷಡ್ವರ್ಗಗಳ ಮೇಲೆ ವಿಜಯ,ಸರಳ ಜೀವನ, ಎಲ್ಲರನ್ನು ಸಮಾನ ರೀತಿಯಿಂದ ನಡೆಸುವುದು, ಗೌರವಿಸುವುದು ಅತ್ಯವಶ್ಯ. ನಾರಾಯಣನ ಕಲ್ಯಾಣ ಗುಣಗಳ ಮನನ ಜೀವನ ರೂಪಿಸಲು ನೆರವಾಗುತ್ತದೆ .ರಾಮಾನುಜರು ನಾರಾಯಣನ ಕಲ್ಯಾಣ ಗುಣಗಳನ್ನು ಸುಂದರವಾಗಿ ತಮ್ಮ ಗದ್ಯತ್ರಯಗಳಲ್ಲಿ ವರ್ಣಿಸಿದ್ದಾರೆ.ಅವರ ಮೇರುಕೃತಿ ಶರಣಾಗತಿಗದ್ಯ. ಇದರಲ್ಲಿ ಶ್ರೀರಾಮನ ಕಲ್ಯಾಣ ಗುಣಗಳನ್ನು ಸುಂದರವಾಗಿ ವರ್ಣಿಸಿ ಹೇಗೆ ಶರಣಾಗತಿ ಮೋಕ್ಷಕ್ಕೆ ಸುಲಭ ಸಾಧನವೆಂಬುದನ್ನು ನಿರೂಪಿಸಿದ್ದಾರೆ.

ರಾಮಾನುಜರ ಜನ್ಮ ಕುರಿತಾದ ಅನೇಕ ದಂತಕಥೆಗಳು ಪ್ರಚಲಿತದಲ್ಲಿವೆ. ಇವರು ಆದಿಶೇಷನ ಅವತಾರವೆಂದೂ ಒಮ್ಮೆ ಅವರು ಅನ್ಯಮತೀಯರೊಂದಿಗಿನ ಚರ್ಚೆಯೊಂದರಲ್ಲಿ ತಮ್ಮ ಸಹಸ್ರವದನದಿಂದ ಉತ್ತರಿಸಿದರೆಂದು ಪ್ರತೀತಿ. ಅವರು ಶೇಷರೂಪದಲ್ಲಿ ಶ್ರೀನಿವಾಸನ ಗರ್ಭಗೃಹ ಪ್ರವೇಶಿಸಿ , ವೆಂಕಟೇಶನನ್ನು ಸ್ಥಿರಗೊಳಿಸಿದರೆಂದೂ ಪ್ರತೀತಿ.

ರಾಮಾನುಜರು ಅವತರಿಸಿ ಒಂದು ಸಾವಿರ ವರ್ಷಕಳೆಯುತ್ತಿದೆ . ಅವರು ಮಾಡಿದ ಕಾರ್ಯಗಳು , ಉಪದೇಶಿಸಿದ ತತ್ವಗಳು ಕೋಟ್ಯಾನುಕೋಟಿ ಭಕ್ತರಿಗೆ ಮೋಕ್ಷಮಾರ್ಗವನ್ನು ತೋರಿಸುತ್ತಿದೆ. ಭಗವದ್ದರ್ಶನಕ್ಕೆ ಅಣಿವುಮಾಡಿಕೊಟ್ಟಿದೆ . ಏಕರೂಪ ಆರಾಧನಾಪದ್ಧತಿಯಿಂದ ದೇವಾಲಯಗಳು ಧರ್ಮಾಚರಣೆಯ ಕೇಂದ್ರಗಳಾಗಿವೆ. ಆದರೆ ಭಿನ್ನತೆಯೊಂದು ಒಂದು ಕ್ಷುದ್ರರೋಗ .ಅದು ರಾಮಾನುಜರ ಸಿದ್ಧಾಂತಗಳಿಗೂ ಹೊರತಾಗಿರಲಿಲ್ಲ. ಸುಮಾರು ೧೬ ನೆಯ ಶತಮಾನದಲ್ಲಿ ಶ್ರೀ
ವೈಷ್ಣವರು ಇಬ್ಭಾಗವಾದರು. ತತ್ವಒಂದೇ ಆದರೂ ಆಚರಣೆಗಳು ವಿ ಭಿನ್ನವಾದವು. ಪರಸ್ಪರ ದ್ವೇಷ , ಅಸೂಯೆಗಳು ಚಿಗುರೊಡೆದವು . ಯಾವ ಅರಿಷಡ್ವರ್ಗಗಳ ನಿವಾರಣೆಗೆ ರಾಮಾನುಜರು ಶ್ರಮಿಸಿದರೋ ಅದು ಭೂತಾಕಾರವಾಗಿ ಬೆಳೆದು ಮೂಲತತ್ವವನ್ನೇ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ . ಈ ಶುಭ ಅವಸರದಲ್ಲಿಯಾದರೂ ಮರೆಯೋಣ ಭಿನ್ನತೆ. ಕಲೆಯೋಣ ಪ್ರೀತಿ ಪ್ರೇಮಾದರದಿಂದ .ಹರಡೋಣ ರಾಮಾನುಜರ ಆದರ್ಶ ಜೀವನವ. ಪಾಲಿಸೋಣ ಒಮ್ಮತದಿಂದ
ರಾಮಾನುಜರ ತತ್ವಗಳ ಎಂಬುದೇ ನನ್ನ ಅರಿಕೆ.

ಶ್ರೀನಿವಾಸಪ್ರಸಾದ್. ಕೆ .ವಿ