ತಿರುಮಕೂಡ್ಲು ನರಸೀಪುರದ ಗುಂಜಾ ನರಸಿಂಹ
ಮೈಸೂರು ನಗರದಿಂದ ೨೦ ಮೈಲಿ ದೂರದಲ್ಲಿರುವ ತಿರುಮಕೂಡ್ಲು ನರಸೀಪುರ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಪ್ರಸಿದ್ಧವಾಗಿರುವ ಪ್ರಾಚೀನ ಪುಣ್ಯ ಕ್ಷೇತ್ರ . ಕಪಿಲಾ ಮತ್ತು ಕಾವೇರಿ ನದಿಗಳು ಒಂದಾಗಿ ಹರಿಯುವ ಈ ಪುಣ್ಯ ಸಂಗಮ ಕ್ಷೇತ್ರ ಮೈಸೂರು ಜಿಲ್ಲೆಯ ವೈಭವವನ್ನು ಖ್ಯಾತಿಯನ್ನು ಬಹುವಾಗಿ ಹೆಚ್ಚಿಸಿದೆ . ನದೀ ತೀರದಲ್ಲಿ ಅಗೆಯಲಾಗಿ ನವಶಿಲಾಯುಗದ ಇತಿಹಾಸ ಪೂರ್ವ ಕಾಲದವರೆಗಿನ ಪ್ರಾಚ್ಯ ವಸ್ತುಗಳು , ಅವಶೇಷಗಳು ದೊರಕಿರುವುದು ಈ ಕ್ಷೇತ್ರದ ಪ್ರಾಚೀನತೆಯನ್ನು ಮನದಟ್ಟುಮಾಡಿ ಕೊಡುತ್ತದೆ . ಇಲ್ಲಿ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದವೆನ್ನಲಾದ ಮಡಿಕೆಗಳು ಆಯುಧಗಳು ಶವಸಂಪುಟಗಳು ಕುಡಿಕೆಗಳು ಪ್ರಾಣಿಗಳ ಮೂಳೆಗಳು ದೊರಕಿವೆಯೆಂದು ಸಂಶೋಧನಾ ಮೂಲಗಳಿಂದ ತಿಳಿದು ಬಂದಿದೆ .
ಭವ್ಯ ಇತಿಹಾಸವುಳ್ಳ ಪರಂಪರೆಯನ್ನುಳ್ಳ ನರಸೀಪುರ ಕ್ಷೇತ್ರ ಪೌರಾಣಿಕವಾಗಿಯೂ ಒಂದು ಪುಣ್ಯ ಕ್ಷೇತ್ರ. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಹರಿದುಬರುವ ಕರ್ನಾಟಕದ ಜೀವನದಿ ಕಾವೇರಿಯು ಮತ್ತು ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿದು ಬರುವ ಕಪಿಲೆಯು ನರಸೀಪುರದಲ್ಲಿ ಸಂಗಮವಾಗುವುದು ವೈಶಿಷ್ಟ್ಯ . ಸಂಗಮ ಸ್ಥಳದಲ್ಲಿ ಅಗೋಚರವಾದ ಸ್ಫಟಿಕ ಸರೋವರವೂ ಇದ್ದು ಇದನ್ನು ದಕ್ಷಿಣ ಭಾರತದ ತ್ರಿವೇಣಿ ಸಂಗಮವೆಂದೂ ಕರೆಯಲಾಗುತ್ತದೆ . ಕಾವೇರಿ ತೀರದಲ್ಲಿ ನರಸೀಪುರವೂ ಸಂಗಮಸ್ಥಳದಲ್ಲಿ ತಿರುಮಕೂಡ್ಲು ಕ್ಷೇತ್ರವೂ ಇದ್ದು ಎರಡು ಕ್ಷೇತ್ರವನ್ನು ಕೂಡಿಸುವಂತೆ ಸೇತುವೆಯನ್ನು ನಿರ್ಮಿಸಲಾಗಿದೆ . ಸಂಗಮ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ದೇವಾಲಯವೂ ಕಾವೇರೀ ತೀರದಲ್ಲಿ ನರಸಿಂಹ ದೇವಾಲಯವೂ ಇದ್ದು ಈ ಕ್ಷೇತ್ರವನ್ನು ತಿರುಮಕೂಡ್ಲು ನರಸೀಪುರ ಅಥವಾ ಟಿ ನರಸೀಪುರ ಎಂಬುದಾಗಿಯೂ ಕರೆಯಲಾಗುತ್ತದೆ .
ನರಸೀಪುರದ ನರಸಿಂಹ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಬಹು ವಿಸ್ತಾರವಾಗಿದೆ . ಇತ್ತೀಚೆಗೆ ನವೀಕರಣಗೊಂಡು ನವ ವಧುವಂತೆ ಶೃಂಗಾರ ಗೊಂಡಿದೆ . ಮೂಲ ದೇಗುಲದ ಸ್ಥಾಪನೆ ಎಂದೆಂಬುದು ತಿಳಿಯದಿದ್ದರೂ ಕಾಲಕ್ರಮದಲ್ಲಿ ಮೂಗೂರಿನ ಒಡೆಯರಿಂದ ವಿಸ್ತರಿತಗೊಂಡಿದೆ ಎಂಬುದು ಶಾಸನದಿಂದ ತಿಳಿದುಬರುತ್ತದೆ . ನದಿಯ ತೀರದಲ್ಲಿ ಕಲಾತ್ಮಕವಾಗಿ ರೂಪುಗೊಂಡಿರುವ ಸುಂದರ ದೇವಾಲಯದ ಮೂಲಮೂರ್ತಿ ನರಸಿಂಹ . ತೊಡೆಯಮೇಲೆ ಲಕ್ಷ್ಮೀದೇವಿಯನ್ನು ಕುಳ್ಳಿರಿಸಿಕೊಂಡಿರುವ ಮೂಲಮೂರ್ತಿಯ ವಿಗ್ರಹ ನಯನ ಮನೋಹರವಾಗಿದೆ
ನರಸಿಂಹನ ಮೂರ್ತಿಯ ಬಲ ಕೈನಲ್ಲಿ ಬೆರಳುಗಳ ನಡುವೆ ಗುಲಗಂಜಿಯ ಮೂಲಿಕೆಯಿದ್ದು ತನ್ನಿಮಿತ್ತ ಗುಂಜಾ ನರಸಿಂಹನೆಂದೇ ಖ್ಯಾತವಾಗಿದೆ . ಈ ಕ್ಷೇತ್ರ ಪಾವಿತ್ರ್ಯತೆಯಲ್ಲಿ ಕಾಶಿಗಿಂತ ಗುಲಗಂಜಿಯಷ್ಟು ಹೆಚ್ಚು ಶ್ರೇಷ್ಠವೆಂದು ಸ್ಥಳಪುರಾಣದಲ್ಲಿ ವರ್ಣಿಸಲಾಗಿದೆ . ಉತ್ತರ ಭಾರತದ ಕಾಶಿ ಭಾರತೀಯರೆಲ್ಲರಿಗೂ ಬಹಳ ಪವಿತ್ರವಾದ ಕ್ಷೇತ್ರ . ನರಸಿಂಹ ದೇವಾಲಯದ ಗೋಪುರ , ನವರಂಗ ಮಂಟಪದಲ್ಲಿರುವ ಕಂಭಗಳ ವಿನ್ಯಾಸ ಅದರಲ್ಲಿನ ಕಲಾತ್ಮಕ ಕೆತ್ತನೆಗಳು ಆಕರ್ಷಕವಾಗಿದ್ದು ಮನಮೋಹಕವಾಗಿವೆ .
ಮೂಲಮೂರ್ತಿಯ ಸ್ಥಾಪನೆಯ ಬಗ್ಗೆ ದಂತಕಥೆಯೊಂದು ಪ್ರಚಲಿತದಲ್ಲಿದೆ . ಸ್ಥಳೀಯ ಅಗಸನೋರ್ವನಿಗೆ ಒಮ್ಮೆ ಸ್ವಪ್ನದಲ್ಲಿ ನರಸಿಂಹ ಕಾಣಿಸಿಕೊಂಡು ತಾನೊಂದು ಹುತ್ತದಡಿಯಲ್ಲಿ ಇರುವುದಾಗಿಯೂ ಸಮೀಪದ ಒಗೆಯುವ ಕಲ್ಲಿನಡಿಯಲ್ಲಿ ನಿಧಿಯಿರುವುದಾಗಿಯೂ ತಿಳಿಸಿ ಆ ನಿಧಿಯನ್ನು ಉಪಯೋಗಿಸಿ ಹುತ್ತದಡಿಯ ನರಸಿಂಹ ಮೂರ್ತಿಗೆ ದೇಗುಲ ಕಟ್ಟುವಂತೆಯೂ ಆದೇಶವಾಯಿತೆಂದೂ ಅದರಂತೆ ಆ ಅಗಸನು ದೇವಾಲಯ ನಿರ್ಮಿಸಿದನೆಂದೂ ಕಥೆಯಲ್ಲಿ ತಿಳಿಸಲಾಗಿದೆ . ಗರ್ಭಗೃಹದ ಹೊಸಿಲು ಆ ಒಗೆಯುವ ಕಲ್ಲೆಂದೂ ಕಲ್ಲಿನ ಮೇಲಿರುವ ಚಿತ್ರ ಅಗಸನದೆಂದೂ ತಿಳಿಸಲಾಗುತ್ತದೆ. ಅದೇನೇ ಇರಲಿ ಮೂರ್ತಿಯಂತೂ ಬಹಳ ಸುಂದರವಾಗಿದ್ದು ಮನದಾಳದಲ್ಲಿ ನಿಲ್ಲುವಂತೆ ಸೊಗಸಾಗಿದೆ. ನರಸಿಂಹ ದೇವಾಲಯದ ವಿಮಾನಕ್ಕೆ ಅನಂತ ಪುಣ್ಯಕೋಟಿ ವಿಮಾನ ಎಂದು ಕರೆಯಲಾಗುತ್ತದೆ . ಕ್ಷೇತ್ರಕ್ಕೆ ಭಾಸ್ಕರ ಕ್ಷೇತ್ರವೆಂದೂ ಪ್ರಸಿದ್ಧಿ . ದೇವಾಲಯದ ಹೊರ ಪ್ರಾಕಾರದಲ್ಲಿ ಶ್ರೀನಿವಾಸ, ನಾರಾಯಣ, ಶ್ರೀರಾಮ , ಕೃಷ್ಣ , ವರದರಾಜ ಮತ್ತು ಆಂಡಾಳ್ ಅಮ್ಮನವರ ಗುಡಿಗಳೂ ಕಂಗೊಳಿಸುತ್ತವೆ . ಅಮ್ಮನವರ ಗುಡಿಯಲ್ಲಿ ಹನುಮಂತನ ವಿಗ್ರಹವೊಂದಿದ್ದು ಗೋಡೆಯಲ್ಲಿ ಕೃಷ್ಣಲೀಲೆಯನ್ನು ವಿವರಿಸುವ ತೈಲಚಿತ್ರಗಳು ಕಾಣಸಿಗುತ್ತವೆ . ಪ್ರಾಕಾರದ ಗೋಡೆಯಮೇಲೆ ನರಸಿಂಹನ ನವರೂಪಗಳನ್ನು ಚಿತ್ರಿಸಲಾಗಿದೆ . ಇಂದಿಗೂ ಶತಮಾನಗಳು ಕಳೆದರೂ ಮಾಸದೆ ಆಕರ್ಷಕವಾಗಿವೆ . ನವರೂಪಗಳೆಂದರೆ ಕಂಭ ಛೇದಿಸುತ್ತಿರುವ ನರಸಿಂಹ,ಹಿರಣ್ಯಕಶಿಪುವಿನೊಡನೆ ಯುದ್ಧನಿರತನಾಗಿರುವ ನರಸಿಂಹ,ಜಠರವನ್ನು ಬಗೆಯುತ್ತಿರುವ ನರಸಿಂಹ, ಧ್ಯಾನ ರೂಪಿ ನರಸಿಂಹ, ಲಕ್ಷ್ಮೀನರಸಿಂಹ , ಪ್ರಹ್ಲಾದವರದ ನರಸಿಂಹ, ಸೂಲಗಿತ್ತಿ ವಲ್ಲಭ ನರಸಿಂಹ , ಅಷ್ಟಭುಜ ನರಸಿಂಹ ,ಯೋಗನರಸಿಂಹ ಎಂದು . ಬಲಿಪೀಠದ ಬಳಿ ದೇವಾಲಯದ ಅಭಿವೃದ್ಧಿಗೆ ಕಾರಣನಾದ ಮೂಗೂರಿನ ಒಡೆಯನ ಹಾಗೂ ಅವನ ತಮ್ಮನದೆಂದು ಹೇಳುವ ಎರಡು ವಿಗ್ರಹಗಳಿವೆ . ಸಮೀಪದಲ್ಲಿ ಪ್ರಹ್ಲಾದ ಮಂಟಪ ಹಾಗೂ ಜೀರ್ಣಾವಸ್ಥೆಯಲ್ಲಿರುವ ಜನಾರ್ದನ ದೇವಾಲಯಗಳು ಇವೆ .
ಒಂದು ಅಭಿಪ್ರಾಯದ ಪ್ರಕಾರ ಅದ್ವೈತ ಮತ ಸ್ಥಾಪಕರಾದ ಆದಿ ಶಂಕರರು ಈ ಕ್ಷೇತ್ರಕ್ಕೆ ಭೇಟಿನೀಡಿದುದಾಗಿಯೂ ನರಸಿಂಹನ ದಿವ್ಯ ಮಂಗಳ ಮೂರ್ತಿಗೆ ಮಾರುಹೋದ ಶಂಕರರು ಇಲ್ಲಿ ನರಸಿಂಹನನ್ನು ಕುರಿತಾದ ಪ್ರಸಿದ್ಧ ಕರಾವಲಂಬ ಸ್ತೋತ್ರ ರಚಿಸಿದರೆಂದೂ ಪ್ರತೀತಿ .
ಇಲ್ಲಿ ಪ್ರತಿ ವರ್ಷ ಮೀನಮಾಸದಲ್ಲಿ ರಥೋತ್ಸವ ನಡೆಯುತ್ತದೆ. ಈ ವರ್ಷ ಮಾರ್ಚ್ ೩೧ರಂದು ರಥೋತ್ಸವ ನಡೆಯಲಿದೆ .
ಕೆ ವಿ ಶ್ರೀನಿವಾಸ ಪ್ರಸಾದ್
No comments:
Post a Comment