Monday, March 5, 2018

ಯದುಶೈಲ ಮೇಲುಕೋಟೆ ..ಒಂದು ಕಿರು ಪರಿಚಯ

ಮೇಲುಕೋಟೆ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ವೈಷ್ಣವ ಕ್ಷೇತ್ರ . ಮೈಸೂರಿನಿಂದ ೩೨ ಮೈಲಿ ದೂರದಲ್ಲಿರುವ ಮೇಲುಕೋಟೆಗೆ ನಾರಾಯಣಾದ್ರಿ , ವೇದಾದ್ರಿ , ಯತಿಶೈಲ , ತಿರುನಾರಾಯಣಪುರ ಎಂಬಿತ್ಯಾದಿ ಹೆಸರುಗಳು ಪ್ರಸಿದ್ಧಿಯಲ್ಲಿವೆ . ಇಲ್ಲಿ ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಭಾಷ್ಯಕಾರ ರಾಮಾನುಜಾಚಾರ್ಯರು ನೆಲೆಸಿ ಚೆಲುವನಾರಾಯಣನ ಸೇವೆಗೈದರೆಂದು ಚರಿತ್ರೆಯಿಂದ ತಿಳಿಯುತ್ತದೆ . ಸುಂದರ ಪ್ರಕೃತಿಯ ಭವ್ಯ ಆಶ್ರಯದಲ್ಲಿ ಆಕರ್ಷಕವಾಗಿ ರಾರಾಜಿಸುತ್ತಿರುವ ದಕ್ಷಿಣ ಭಾರತದ ಬದರೀ ಎಂದು ಖ್ಯಾತವಾಗಿರುವ ಮೇಲುಕೋಟೆ ರಾಷ್ಟ್ರದ ಪ್ರಸಿದ್ಧ ಕ್ಷೇತ್ರಗಳಲ್ಲೊಂದು .

ಮೇಲುಕೋಟೆಯ ಪ್ರಮುಖ ಆಕರ್ಷಣೆ ಚೆಲುವ ನಾರಾಯಣನ ಭವ್ಯ ದೇವಾಲಯ . ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಹೊಯ್ಸಳ ಚಕ್ರವರ್ತಿ ಬಿಟ್ಟಿದೇವ ಕಟ್ಟಿಸಿದನೆಂದು ಶಾಸನದಿಂದ ತಿಳಿಯುತ್ತದೆ . ಮೂಲ ಮೂರ್ತಿಯು ಬ್ರಹ್ಮಾರಾಧಿತವೆಂದು ಅದನ್ನು ಸನತ್ಕುಮಾರರು ಇಲ್ಲಿ ಸ್ಥಾಪಿಸಿದರೆಂದು ಸ್ಥಳಪುರಾಣ ವರ್ಣಿಸುತ್ತದೆ . ಈ ಕ್ಷೇತ್ರದಲ್ಲಿ ದತ್ತಾತ್ರೇಯನು ಸನ್ಯಾಸ ಸ್ವೀಕಾರಮಾಡಿ ವೇದೋಪದೇಶ ಮಾಡಿದುದರಿಂದ ವೇದಾದ್ರಿಯೆಂದೂ , ಶ್ರೀ ಕೃಷ್ಣನು ಯಾದವರೊಡಗೂಡಿ ಪೂಜೆ ಸಲ್ಲಿಸುತ್ತಿದ್ದುದರಿಂದ ಯಾದವಾದ್ರಿಯೆಂದೂ , ಯತಿರಾಜ ರಾಮಾನುಜರು ನೆಲೆಸಿದುದರಿಂದ ಯತಿಶೈಲವೆಂಬ ಹೆಸರುಗಳು ಬಂದುವೆಂದು ಸ್ಥಳಪುರಾಣ ಬಣ್ಣಿಸುತ್ತದೆ . ಈ ದೇವಾಲಯ ಪ್ರವರ್ಧಮಾನಕ್ಕೆ ಬರಲು ಮೈಸೂರಿನ ಅರಸರು ಹಾಗೂ ವಿಜಯನಗರದ ಅರಸರು ಪ್ರಮುಖ ಕಾರಣರು . ಯದುಕುಲತಿಲಕ ರಾಜವೊಡೆಯರ್ ಅವರು ಯದುಗಿರಿಗೆ ಕೋಟೆ ಕಟ್ಟಿಸಿ "ಮೇಲುಕೋಟೆ"ಎಂಬ ಹೆಸರಿತ್ತಿದ್ದಲ್ಲದೆ ಸಮೀಪವಿರುವ ನೃಸಿಂಹಗಿರಿಯ ಮೇಲಿರುವ ನೃಸಿಂಹದೇವಾಲಯವನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ . ರಾಜಮುಡಿ ಎಂಬ ಅಮೂಲ್ಯ ಕಿರೀಟವು ರಾಜಒಡೆಯರ್ ಅವರ ಕಾಣಿಕೆ . ಹಾಗೆಯೇ ಕೃಷ್ಣರಾಜ ಒಡೆಯರ್ ರವರು ಕೃಷ್ಣರಾಜ ಮುಡಿ ಎಂಬ ಕಿರೀಟವನ್ನಲ್ಲದೆ ಗಂಡಭೇರುಂಡ ಪದಕ, ಮುತ್ತಿನಹಾರ, ಕರ್ಣಪದಕಗಳನ್ನೂ ಅರ್ಪಿಸಿದ್ದಾರೆ. ರಾಜ ಒಡೆಯರ್ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯ ನೆನಪಾಗಿ ಅವರ ಪ್ರತಿಮೆ ಇಂದಿಗೂ ದೇವಾಲಯದಲ್ಲಿ ಪುರಸ್ಕಾರ ಪಡೆಯುತ್ತಿದೆ . ಮೊಗಲರ ಕಾಲದಲ್ಲಿ ನಡೆದ ದೇವಾಲಯಗಳ ನಾಶದ ಧಾಳಿಗೆ ಮೇಲುಕೋಟೆಯ ದೇವಾಲಯವೂ ಬಲಿಪಶು ಆಗದಿರಲಿಲ್ಲ . ಆದರೆ ಕಾಲಕ್ರಮದಲ್ಲಿ ವಿಜನಗರದ ಅರಸರ ಆಸಕ್ತಿಯಿಂದಾಗಿ ಪುನರುಜ್ಜೆವಿತವಾಯಿತು. .
ರಾಮಾನುಜರು ಮೇಲುಕೋಟೆಗೆ ಬಂದಾಗ ಅಲ್ಲಿ ಉತ್ಸವ ಮೂರ್ತಿಯಿರಲಿಲ್ಲ . ಅದು ಮೊಗಲರ ಧಾಳಿಯ ಕಾಲದಲ್ಲಿ ಅಪಹೃತವಾಗಿತ್ತೆಂದು ತಿಳಿಯುತ್ತದೆ. ಒಬ್ಬ ಮೊಗಲರ ದೊರೆ ತನ್ನ ಮಗಳಿಗಾಗಿ ಆಟಿಕೆಗಾಗಿ ವಿಗ್ರಹವನ್ನು ಕೊಂಡೊಯ್ದಿದ್ದನೆಂದು ವಿಷ್ಯ ಅರಿತ ರಾಮಾನುಜರು ಕೂಡಲೇ ದೆಹಲಿಗೆ ಪ್ರಯಾಣ ಬೆಳೆಸಿ , ಸುಲ್ತಾನನನ್ನು ಕಂಡರು . ರಾಮಾನುಜರ ಪ್ರತಿಭೆಗೆ, ತೇಜಸ್ಸಿಗೆ ಮಾರುಹೋದ ಸುಲ್ತಾನನು , ತನ್ನ ಕೊಳ್ಳೆಹೊಡೆದ ವಿಗ್ರಹರಾಶಿಯಲ್ಲಿ ಅವರು ಬಯಸಿದ  ವಿಗ್ರಹ ಇರುವುದಾದರೆ ಕೊಂಡೊಯ್ಯಬಹುದೆಂದು ಅಜ್ಞಾಪಿಸಿದ  . ಆದರೆ .ಆ ರಾಶಿಯಲ್ಲಿ ನೆಚ್ಚಿನ ವಿಗ್ರಹವಿರಲಿಲ್ಲ . ತಮ್ಮ ಇಷ್ಟ ಮೂರ್ತಿ ರಾಜಕುಮಾರಿಯಬಳಿ ಇರುವುದನ್ನು ದಿವ್ಯ ದೃಷ್ಟಿಯಿಂದ ಗ್ರಹಿಸಿದ ರಾಮಾನುಜರು ಆ ಮೂರ್ತಿಯನ್ನು ಧ್ಯಾನಿಸಿದರು . ಕೂಡಲೇ ಆ ವಿಗ್ರಹ ಜಿಗಿಯುತ್ತ ಇವರಬಳಿ ಓಡಿಬಂದಿತು . ತಡಮಾಡಿದರೆ ಕೆಡುಕೆಂದು ತಿಳಿದು ಕೂಡಲೇ ವಿಗ್ರಹ ಸಮೇತ ದಕ್ಷಿಣಕ್ಕೆ ಧಾವಿಸಿದರು . ಕಾಲ್ನಡಿಗೆಯೇ ಅಂದಿನದಿನದಲ್ಲಿ ಗತಿಯಾಗಿತ್ತು . ಅರಮನೆಗೆ ಮರಳಿದ ರಾಜಕುಮಾರಿಗೆ ತನ್ನ ಪ್ರೀತಿಯ ವಿಗ್ರಹ ಇಲ್ಲದಿರುವುದು ಗಮನಕ್ಕೆ ಬಂದು ಸೇನೆಯನ್ನು ಹುಡುಕಲು ಯೋಜಿಸಿದಳು .ಅದು ರಾಮಾನುಜರಿಗೆ ಕೊಡಲ್ಪಟ್ಟಿತೆಂದು ತಿಳಿದು ತಾನೇ ವಿಗ್ರಹವನ್ನು ಹುಡುಕಿಕೊಂಡು ಬಂದಳು. ರಾಮಾನುಜರು ವಾಸ್ತವಾಂಶವನ್ನು ತಿಳಿಸಿ ಬಯಸಿದಾದರೆ ತನ್ನೊಡನೆ   ಮೇಲುಕೋಟೆಗೆ ಬರಬಹುದೆಂದು ತಿಳಿಸಲು ವಿಗ್ರಹವನ್ನು ಬಿಟ್ಟಿರಲಾಗದ ರಾಜಕುಮಾರಿಯು ಮೇಲುಕೋಟೆಗೆ ಬಂದು ತನ್ನ ಕೊನೆಯುಸಿರು ಇರುವವರೆಗೂ ವಿಗ್ರಹದ ಸಾನ್ನಿಧ್ಯದಲ್ಲಿ ಕಳೆದಳೆಂದೂ , ಅವಳ ಭಕ್ತಿಯನ್ನು ಮೆಚ್ಚಿದ ರಾಮಮಾನುಜರು ಮೂಲಮೂರ್ತಿಯ ಚರಣಗಳ ಬಳಿಯಲ್ಲಿ ಅವಳ ವಿಗ್ರಹಕ್ಕೂ ಅವಕಾಶ ಮಾಡಿಕೊಟ್ಟು ಗೌರವಿಸಿದರೆಂದು ತಿಳಿಯುತ್ತದೆ .
ಉತ್ಸವ ಮೂರ್ತಿಗೆ ಸಂಪತ್ಕುಮಾರ ಎಂದು ಹೆಸರು . ಪ್ರತಿ ವರುಷ ಮೀನ ಮಾಸದ ಪುಷ್ಯ ನಕ್ಷತ್ರದಂದು ನಡೆಯುವ ವೈರಮುಡಿ ಉತ್ಸವ ಜಗತ್ ಪ್ರಸಿದ್ಧ . ವೈರ ಎಂದರೆ ವಜ್ರ . ಮುಡಿ ಎಂದರೆ ಕಿರೀಟ .ಈ  ವಜ್ರಕಿರೀಟ ಸಾವಿರ ಸಾವಿರ ಅಮೂಲ್ಯ ವಜ್ರಗಳಿಂದ ಕೂಡಿದ್ದಾಗಿದೆ . ಇದನ್ನು ಸೂರ್ಯನ ಮುಂದೆ ಹಿಡಿದರೆ ಅದರಿಂದ ಹೊರಬರುವ ಕಾಂತಿ ಸಹಸ್ರ ಸೂರ್ಯರಿಗೆ ಸಾಟಿಯಾಗಿರುತ್ತದೆ . ಈ ಕಾಂತಿಯನ್ನು ಬರಿ ಕಣ್ಣಿಂದ ನೋಡಿದರೆ ಅಂಧರಾಗುತ್ತಾರೆಂದು ಪ್ರತೀತಿ. ಆದ್ದರಿಂದಲೇ ಈ ಕಿರೀಟವನ್ನು ಹಗಲಲ್ಲಿ ತೆಗೆಯುವುದಿಲ್ಲ. ವರ್ಷದಲ್ಲಿ ಒಂದು ಬಾರಿ ಮಾತ್ರ ರಾತ್ರಿಯಲ್ಲಿ ಈ ಕಿರೀಟವನ್ನು ಉತ್ಸವ ಮೂರ್ತಿಗೆ ಧರಿಸುತ್ತಾರೆ ಇದನ್ನು ವೈರಮುಡಿ ಉತ್ಸವ ಎಂದು ಕರೆಯುತ್ತಾರೆ. ಇಡೀ ರಾತ್ರಿ ನಡೆಯುವ ವೈರಮುಡಿ ಉತ್ಸವ ವೀಕ್ಷಿಸಲು ದೇಶದ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ .ಪುರಾಣದನ್ವಯ ಈ ಕಿರೀಟ ದ್ವಾಪರ ಯುಗದ್ದೆಂದೂ , ಕುರುಕ್ಷೇತ್ರ ಯುದ್ಧ ಕಾಲದಲ್ಲಿ ಪಾರ್ಥ ಧರಿಸಿದ್ದನೆಂದೂ ಕರ್ಣನ ನಾಗಾಸ್ತ್ರದಿಂದ ಕೃಷ್ಣನ ಯುಕ್ತಿಯಿಂದಾಗಿ ತಳ್ಳಲ್ಪಟ್ಟಾಗ ನೆಲದ ಮೇಲೆ ಬಿದ್ದ ಕಿರೀಟವನ್ನು ಗರುಡನು ಸ್ವೀಕರಿಸಿ ಇಲ್ಲಿನ ಸಂಪತ್ಕುಮಾರ ವಿಗ್ರಹಕ್ಕೆ ತೊಡಿಸಿದನೆಂದು ಸ್ಥಳ ಪುರಾಣ ವರ್ಣಿಸುತ್ತದೆ.
ಮೇಲುಕೋಟೆಯಲ್ಲಿ ಚೆಲುವ ನಾರಾಯಣನ ಆಲಯವಲ್ಲದೆ ಅಕ್ಕ ತಂಗಿಯರ ಕೊಳ , ನಾಮದ ಚಿಲುಮೆ , ವೇದ ಪುಷ್ಕರಿಣಿ , ಕಲ್ಯಾಣಿ , ಧನುಷ್ಕೋಟಿ , ದರ್ಭ ತೀರ್ಥ , ಯಾದವ ತೀರ್ಥ , ಪದ್ಮ ತೀರ್ಥ ಮುಂತಾದವು ನೋಡತಕ್ಕ ಸ್ಥಳಗಳು. ಸಮೀಪದಲ್ಲಿರುವ ನೃಸಿಂಹ ಗಿರಿಯ ಮೇಲೆ ಪ್ರಹ್ಲಾದನಿಂದ ಸ್ಥಾಪಿಸಲ್ಪಟ್ಟುದೆಂದು ಪ್ರಸಿದ್ಧವಾಗಿರುವ ಯೋಗಾ ನರಸಿಂಹ ದೇವಾಲಯ ಪ್ರಸಿದ್ಧ . ಬೆಟ್ಟವನ್ನು ಏರಲು ಕಡಿದಾದ ೨೦೦ ಮೆಟ್ಟಲಿನ ಮಾರ್ಗವಿದೆ . ನರಸಿಂಹ ಮೂರ್ತಿ ಭವ್ಯವಾಗಿದ್ದು ನೋಡಲು ಆಕರ್ಷಕವಾಗಿದೆ. ಬೆಟ್ಟದ ಮೇಲಿನಿಂದ ಮೇಲುಕೋಟೆಯ ಸುಂದರ ದೃಶ್ಯ ರಮಣೀಯವಾಗಿರುತ್ತದೆ .
ಕರ್ನಾಟಕದ ಈ ಭಾಗದಲ್ಲಿ ರಾಮಾನುಜರು ನೆಲೆಸಿದ್ದರಿಂದ ಇಲ್ಲಿ ವಿಶಿಷ್ಟಾದ್ವೈತ ಪ್ರಮುಖ ಆಚಾರ್ಯರ ಮಠಗಳೂ , ವಸತಿ ನಿಲಯಗಳೂ , ವೇದಾಂತ ದೇಶಿಕರ ಭವ್ಯ ದೇವಾಲಯವೂ , ಸಂಸ್ಕೃತ ಸಂಶೋಧನಾ ಕೇಂದ್ರವು ಕಾಣ ಸಿಗುತ್ತದೆ . ಮೇಲುಕೋಟೆಯಿಂದ ೪ ಮೈಲಿ ದೂರದಲ್ಲಿ ತೊಂಡನೂರೆಂಬ ಕ್ಷೇತ್ರವಿದ್ದು ಇಲ್ಲಿ ರಾಮಾನುಜರ ಆದಿಶೇಷ ರೂಪವುಳ್ಳ ಅಪರೂಪದ ವಿಗ್ರಹ ಕಾಣ ಸಿಗುತ್ತದೆ .ರಾಮಾನುಜರು ಆದಿಶೇಷನ ಅವತಾರವೆಂದೇ ಪ್ರಸಿದ್ಧಿ.
ಈ ವರ್ಷ ಮಾರ್ಚ್ ೨೬ ರಂದು ಸೋಮವಾರ ರಾತ್ರಿ ಜಗತ್ಪ್ರಸಿದ್ಧ ವೈರಮುಡಿ ಉತ್ಸವ ನಡೆಯುತ್ತದೆ . ಹಾಗೂ ಮಾರ್ಚ್ ೨೯ರಂದು ಗುರುವಾರ ರಥೋತ್ಸವವು ನಡೆಯುತ್ತದೆ .

ಶ್ರೀನಿವಾಸ ಪ್ರಸಾದ್ . ಕೆ ವಿ


No comments:

Post a Comment