ಕಳಲೆ ಲಕ್ಷ್ಮೀಕಾಂತಸ್ವಾಮಿ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ಕಳಲೆ ಗ್ರಾಮ ಪೌರಾಣಿಕರೀತ್ಯ ಪ್ರಸಿದ್ಧವಾಗಿರುವ ಒಂದು ಪುಣ್ಯ ಯಾತ್ರಾಸ್ಥಳ . ಕಳಲೆಗೆ ತುಳಸೀಕಾನನ , ಕಪಿಲಾಶ್ರಮ , ವೇಣುಪುರಿ ಎಂಬಿತ್ಯಾದಿ ಹೆಸರುಗಳು ಪ್ರಸಿದ್ಧಿಯಲ್ಲಿವೆ . ಪ್ರಕೃತಿಯ ಸುಂದರ ಸೊಬಗಿನ ಪ್ರಶಾಂತ ಹಿನ್ನೆಲೆಯಲ್ಲಿ ಆಕರ್ಷಕವಾಗಿ ರಾರಾಜಿಸುತ್ತಿರುವ ಲಕ್ಷ್ಮೀಕಾಂತನ ನೆಲೆ , ಕಳಲೆ , ಪ್ರತಿಯೋರ್ವ ಆಸ್ತಿಕನೂ ನೋಡಲೇಬೇಕಾದ ರಮ್ಯಾ ಸ್ಥಳ .
ಕಳಲೆ ದಳವಾಯಿಗಳ ತವರೂರು . ದಳವಾಯಿಗಳೆಂದರೆ ರಾಜ ಮಹಾರಾಜರ ಬಲಗೈ ಇದ್ದಂತೆ . ಕಳಲೆಯ ದಳವಾಯಿಗಳು ವಿಜಯನಗರದ ಸಾಮ್ರಾಜ್ಯದಲ್ಲೂ , ಯದುವಂಶ ಭೂಪಾಲರ ರಾಜ್ಯದಲ್ಲೂ ಉನ್ನತ ಸ್ಥಾನದಲ್ಲಿದ್ದ ಬಗ್ಗೆ ಮಾಹಿತಿಗಳು ಇವೆ . ಕಳಲೆ ೧೮೩೧ನೇ ಇಸವಿಯವರೆವಿಗೂ ಉತ್ತಮ ಸ್ಥಿತಿಯಲ್ಲಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ . ಕಳಲೆಯ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಮೈಸೂರು ಅರಸರು ಬಹಳವಾಗಿ ಶ್ರಮಿಸಿದ್ದರೆಂದು ತಿಳಿದುಬರುತ್ತದೆ ಇದಕ್ಕೆ ಆಧಾರವಾಗಿ ಮೈಸೂರು ಅರಸರ ಲಾಂಛನಗಳಾದ ಶಂಖ ಚಕ್ರ ಮತ್ಸ್ಯ ಮುಂತಾದ ವುಗಳು ದೇವಾಲಯದಲ್ಲಿವೆ. ಅಂತೆಯೇ ಟೀಪೂ ಸುಲ್ತಾನನು ನೀಡಿದನೆಲ್ಲಲಾದ ಪೂಜಾ ಸಾಮಗ್ರಿಗಳು ದೇವಾಲಯದಲ್ಲಿ ಕಾಣಸಿಗುತ್ತವೆ . ಹಾಗೆಯೇ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಸೊಸೆ ಲಕ್ಷಮ್ಮಣ್ಣಿ ಅವರು ಅರ್ಪಿಸಿರುವ ಬೃಹತ್ ಘಂಟೆಯೊಂದು ದೇವಾಲಯದಲ್ಲಿದೆ .
ಲಕ್ಷ್ಮೀಕಾಂತ ದೇವಾಲಯ ಬಹು ವಿಸ್ತಾರವಾಗಿದ್ದು ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ . ದೇವಾಲಯದ ಸ್ಥಾಪನೆ ಎಂದೆಂಬುದು ಖಚಿತವಾಗಿ ತಿಳಿಯದಿದ್ದರೂ ಇದು ಬಹು ಪುರಾತನವೆಂಬುದಕ್ಕೆ ಪೌರಾಣಿಕ ಸ್ಥಳ ಚರಿತ್ರೆ ಇಂಬುಕೊಡುತ್ತದೆ . ಪಾಂಡು ವಂಶ ತಿಲಕ ಜನಮೇಜಯ ರಾಜ ಒಮ್ಮೆ ಭೇಟೆಗಾಗಿ ಬಂದಿದ್ದಾಗ ಕಪಿಲ ಕೌಂಡಿನ್ಯ ನದಿಗಳ ತೀರದಲ್ಲಿ ಒಂದು ವಿಸ್ಮಯ ಕಂಡು ಬೆರಗಾದನಂತೆ . ಶಾಶ್ವತ ವೈರಿಗಳಾದ ಗೋ ವ್ಯಾಘ್ರ ಮೊದಲಾದವು ಸಾಮರಸ್ಯದಿಂದ ಕಲೆತಿರುವ ದೃಶ್ಯ ಕಂಡು ಚಕಿತನಾಗಿ ಪರಿಶೀಲಿಸಲು ಸನಿಹದ ಬಿದಿರಿನ ಮೆಳೆಯೊಂದರಲ್ಲಿ ಅದ್ಭುತವಾದ ನಾರಾಯಣನ ವಿಗ್ರಹ ಕಂಡನಂತೆ . ಅಲ್ಲಿಂದ ಮೂರ್ತಿಯನ್ನು ತೆಗೆಸಿ ದೇವಾಲಯ ನಿರ್ಮಿಸಿದನೆಂದು ಸ್ಥಳಪುರಾಣ ವರ್ಣಿಸುತ್ತದೆ . ಮೂರ್ತಿ ಸುಮಾರು ೪ ಅಡಿ ಎತ್ತರವಿದ್ದು ಬಲಗೈನಲ್ಲಿ ಶಂಖವನ್ನು ಎಡಗೈನಲ್ಲಿ ಚಕ್ರವನ್ನು ಹಿಡಿದುದಾಗಿ ನಂಬಿ ನಾರಾಯಣ ರೂಪದಲ್ಲಿರುವುದು ವಿಶೇಷ . ಮೂಲ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳನ್ನು ಬಿಡಿಸಲಾಗಿದೆ . ಇಲ್ಲಿ ದೇವರಿಗೆ ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜೆಗಳು ನಡೆಯುತ್ತವೆ . ಲಕ್ಷ್ಮೀದೇವಿಗೆ ಪ್ರತ್ಯೇಕವಾಗಿ ಗುಡಿಯಿದ್ದು ಅಮ್ಮನವರನ್ನು ಅರವಿಂದನಾಯಕಿ ಎಂದು ಕರೆಯಲಾಗುತ್ತದೆ . ಸಂಸ್ಕೃತದಲ್ಲಿ ಕಳಲೆ ಎಂದರೆ ಬಿದಿರು ಎಂದರ್ಥ . ಮೂಲ ವಿಗ್ರಹ ಬಿದಿರಿನ ಮೆಳೆಯಲ್ಲಿ ದೊರೆತದ್ದರಿಂದ ಸ್ಥಳಕ್ಕೆ ಕಳಲೆ ಎಂಬ ಹೆಸರು ಬಂದಿರುವುದೆಂದು ತಿಳಿಯುತ್ತದೆ .
ಕರ್ದಮ ಮಹರ್ಷಿಗಳ ಪುತ್ರರಾದ ಕಪಿಲ ಮುನಿಗಳು ಪಾತಾಳದಲ್ಲಿ ತಪಸ್ಸನ್ನು ಆಚರಿಸುತ್ತಿರುವ ವೇಳೆ ಸಾಗರ ಚಕ್ರವರ್ತಿಯ ೧೦೦ ಪುತ್ರರು ತಂದೆ ನಡೆಸುತ್ತಿದ್ದ ಅಶ್ವಮೇಧ ಯಜ್ಞದ ಅಶ್ವವನ್ನು ಅರಸುತ್ತ ಪಾತಾಳಕ್ಕೆ ಬಂದಾಗ ಕಪಿಲ ಮುನಿಗಳ ಪಕ್ಕದಲ್ಲಿ ನಿಂತಿದ್ದ ಯಜ್ಞಾಶ್ವವನ್ನು ಕಂಡು ದೀರ್ಘ ತಪದಲ್ಲಿದ್ದ ಮುನಿಗಳ ತಪೋಭಂಗ ಮಾಡಲಾಗಿ ಮುನಿಗಳು ಎಚ್ಚರಗೊಂಡು ಶಾಪ ನೀಡಲು ಸಾಗರ ಚಕ್ರವರ್ತಿಯ ೧೦೦ ಮಕ್ಕಳು ಭಸ್ಮರಾದರು. ತಮ್ಮ ತಮೋಗುಣಕ್ಕೆ ನೊಂದ ಮುನಿಗಳು ಬೇರೊಂದು ಪ್ರಶಾಂತ ಸ್ಥಳವನ್ನರಸುತ್ತ ಬರಲಾಗಿ ಕಪಿಲ ಕೌಂಡಿನ್ಯ ನದೀ ತೀರದಲ್ಲಿದ್ದ ಕಳಲೆಯಲ್ಲಿ ಆಕರ್ಷಿತರಾಗಿ ಇಲ್ಲಿ ತಪಸ್ಸನ್ನು ಮುಂದುವರಿಸಿದರೆಂದು ಸ್ಥಳ ಪುರಾಣ ವರ್ಣಿಸುತ್ತದೆ . ಇದಕ್ಕೆಂದೇ ಇಲ್ಲಿಯ ಕ್ಷೇತ್ರಕ್ಕೆ ಕಪಿಲಾಶ್ರಮ ಎಂಬ ಹೆಸರು ಬಂದಿತೆಂದು ಪ್ರತೀತಿ .
ಸಪ್ತ ಋಷಿಗಳಲ್ಲಿ ಅಗ್ರಗಣ್ಯರಾದ ಅತ್ರಿ ಮಹರ್ಷಿಗಳು ಇಲ್ಲಿ ನೆಲೆಸಿ ಲಕ್ಷ್ಮೀಕಾಂತನನ್ನು ಸೇವಿಸಿದರೆಂದೂ ಅವರ ಕುಮಾರನೆನಿಸಿದ ದತ್ತಾತ್ರೇಯ ರೂಪದಲ್ಲಿ ಲಕ್ಷ್ಮೀಕಾಂತನನ್ನು ಪೂಜಿಸಲಾಗುತ್ತದೆ ಎಂದು ಕ್ಷೇತ್ರ ಮಹಿಮೆ ತಿಳಿಸುತ್ತದೆ . ಅದೇನೇ ಇರಲಿ ಇದೊಂದು ಪೌರಾಣಿಕ ಪುರಾಣ ಕ್ಷೇತ್ರವೆಂಬುದು ತಿಳಿದುಬರುತ್ತದೆ .
ಕಾಲಕ್ರಮದಲ್ಲಿ ಮೈಸೂರು ಅರಸರ ಪ್ರಭಾವದಿಂದಲೂ ದಳವಾಯಿಗಳ ಆದರದಿಂದಲೂ ಬಹಳವಾಗಿ ವಿಸ್ತಾರಗೊಂಡು ಬಹು ದೊಡ್ಡ ದೇಗುಲವಾಗಿ ಬೆಳೆದು ನಿಂತಿದೆ . ದೇವಾಲಯದ ಮುಖ್ಯ ಗೋಪುರ ಸುಮಾರು ೫೦ ಅಡಿಯೆತ್ತರವಿದ್ದು ಉಭಯ ಪಾರ್ಶ್ವಗಳಲ್ಲಿ ಒಂದುಕಡೆ ಯಾಗಶಾಲೆ ಮತ್ತೊಂದೆಡೆ ಪಾಕಶಾಲೆಯನ್ನು ಹೊಂದಿದೆ . ಪ್ರಾಕಾರ ಬಹಳ ವಿಸ್ತಾರವಾಗಿದ್ದು ಅನೇಕ ಸಣ್ಣ ಸಣ್ಣ ಗುಡಿಗಳನ್ನು ಹೊಂದಿದೆ . ವಿಶಿಷ್ಟಾದ್ವೈತ ಸ್ಥಾಪಕರಾದ ರಾಮಾನುಜರು , ಭಕ್ತಿ ಪಂಥದ ೧೨ ಮಂದಿ ಆಳವಾರರ ಗುಡಿಗಳು , ವಾಹನ ಮಂಟಪಗಳು , ಆಂಡಾಳ್ ಗುಡಿ , ನಾರಾಯಣನ ವಿವಿಧರೂಪಗಳಾದ ಪಟ್ಟಾಭಿರಾಮ ಲಕ್ಷ್ಮೀನಾರಾಯಣ ವರದರಾಜ ರಾಜಮನ್ನಾರ್ ಸಂಪತ್ಕುಮಾರ ಶ್ರೀನಿವಾಸ ಕೋದಂಡರಾಮ ವೇಣುಗೋಪಾಲ ಮುಂತಾದ ದೇವರುಗಳ ಸಣ್ಣ ಸಣ್ಣ ಗುಡಿಗಳಿವೆ . ಅಂತೆಯೇ ಅರವಿಂದ ನಾಯಕಿ ಅಮ್ಮನವರ ಗುಡಿಯೂ ಇದೆ . ಅಲ್ಲದೆ ವೇದಾಂತ ದೇಶಿಕರ , ಜೀಯರ್ ರವರ ಗುಡಿಗಳೂ ಇವೆ . ವಾಹನಗಳಾದ ಅಶ್ವ ಗಜ ತುರಗ ಸಿಂಹ ಆಂಜನೇಯ ಆದಿಶೇಷ ಗಳಿಗೆ ಪ್ರತ್ಯೇಕ ಮಂಟಪಗಳಿವೆ . ದಳವಾಯಿಗಳು ನೀಡಿದರೆನ್ನಲಾದ ಬೃಹತ್ ಢಮರು , ಪುಷ್ಪ ಮಂಟಪ ವಾಹನ ಗಳು ಇವೆ . ಪೂರ್ವದಲ್ಲಿ ಪೂಜೆಯವೇಳೆಯಲ್ಲಿ ಬೃಹತ್ ಢಮರುವನ್ನ ಭಾರಿಸಲಾಗುತ್ತಿದ್ದೆಂದೂ ತಿಳಿಯುತ್ತದೆ. ದೇವಾಲಯದ ಮುಂಬಾಗದಲ್ಲಿ ಅಕ್ಕಪಕ್ಕಗಳಲ್ಲಿ ಎರಡು ಬೃಹತ್ತಾದ ಮಂಟಪಗಳಿವೆ . ಇವುಗಳನ್ನು ಮೈಸೂರಿನ ಒಡೆಯರ್ ಅವರ ಧಾರ್ಮ ಪತ್ನಿಗಳ ಹೆಸರಿನಲ್ಲಿ ಕಟ್ಟಲಾಗಿದ್ದು ಈ ಹಿಂದೆ ಬ್ರಹ್ಮೋತ್ಸವದ ಸಮಯದಲ್ಲಿ ದೇವರನ್ನು ಇಲ್ಲಿ ಬಿಜಯಮಾಡಿಸಿ ಸೇವಾರ್ಥಗಳನ್ನು ನಡೆಸಲಾಗುತ್ತಿತ್ತೆಂದು ಆದರೆ ಕಾಲಕ್ರಮದಲ್ಲಿ ಅದು ನಿಂತುಹೋಗಿ ಈಗ ಪಾಲು ಮಂಟಪವಾಗಿದೆಯೆಂದೂ ತಿಳಿಯುತ್ತದೆ .
ದೇವಾಲಯದಲ್ಲಿ ಉತ್ಸವಾದಿಗಳು ನಿತ್ಯ ಪೂಜೆಗಳು ಸಕ್ರಮವಾಗಿ ನಡೆಯಲು ೧೯೦೬ರಲ್ಲಿ ಕಳಲೆ ಶ್ರೀನಿವಾಸ ಅಯ್ಯಂಗಾರ್ಯರ ನೇತೃತ್ವದಲ್ಲಿ ಸಭೆಯೊಂದನ್ನು ಆರಂಭಿಸಲಾಗಿದ್ದು ಕಳೆದ ೧೧೨ ವರ್ಷದಿಂದ ಈ ಸಭೆ ಉತ್ಸವಾದಿಗಳನ್ನು ಆಗಮೋಕ್ತರೀತ್ಯಾ ನಡೆಸುತ್ತ ಬಂದಿದೆ . ದೇವಾಲಯಕ್ಕೆ ಸೇರಿದ್ದ ಜಮೀನುಗಳು ಸರ್ಕಾರದ ವಶಕ್ಕೆ ಹೋದಮೇಲೂ ಭಕ್ತ ಜನಗಳ ಉದಾರ ನೆರವಿನಿಂದ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ . ಇದೀಗ ಭಕ್ತ ಜನರ ತಂಗುವಿಕೆಗಾಗಿ ದೇಣಿಗೆಯ ನೆರವಿನಿಂದ ಸಭಾ ಭವನ ನಿರ್ಮಿಸಲಾಗಿದ್ದು ಉತ್ಸವಾದಿಗಳ ದಿನಗಳಂದು ಅಣ್ಣ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಪ್ರತಿ ವರುಷ ಎರಡು ಬ್ರಹ್ಮೋತ್ಸವಗಳು ನಡೆಯುತ್ತವೆ . ಮೀನಮಾಸದಲ್ಲಿ ಲಕ್ಷ್ಮೀಕಾಂತದೇವರ ಬ್ರಹ್ಮೋತ್ಸವ ೯ ದಿನಗಳು ವಿಜೃಂಭಣೆಯಿಂದ ನಡೆಯುತ್ತದೆ ಸ್ವಾತಿ ನಕ್ಷತ್ರದಂದು ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ . ಸುತ್ತಲಿನ ಗ್ರಾಮದ ಸಹಸ್ರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ . ರಥೋತ್ಸವದ ರಾತ್ರಿ ಶ್ರೀಕಾಂತ ಮುಡಿ ಉತ್ಸವ ಇಡೀ ರಾತ್ರಿ ವೈಭವದಿಂದ ನಡೆಯುತ್ತದೆ . ಮನಮುಟ್ಟುವ ಓಲಗದ ಮೇಳ , ಪುಷ್ಪಗಳಿಂದ ತುಂಬಿ ಬಗೆ ಬಗೆಯ ಆಭರಣಗಳಿಂದ ಅಲಂಕೃತನಾದ ಉಭಯ ದೇವಿ ಸಮೇತ ಲಕ್ಷ್ಮೀಕಾಂತನ ಉತ್ಸವ ವರ್ಣಿಸಲಸಾಧ್ಯ . ಕೆಂಪು ಹರಳುಗಳಿಂದ ಕಂಗೊಳಿಸುವ ಶ್ರೀಕಾಂತ ಮುಡಿ .ವಿದ್ಯುತ್ ದೀಪಾಲಂಕಾರಗಳೊಂದಿಗೆ ಅಲಂಕೃತವಾದ ಪುಷ್ಪ ಚಪ್ಪರ , ಇಡೀ ರಾತ್ರಿ ಉತ್ಸವದೊಂದಿಗೆ ಕಳೆಯುವ ಭಕ್ತ ವೃಂದ . ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವ ನೆನಪಿಸುತ್ತದೆ.ಈ ವರ್ಷ ಏಪ್ರಿಲ್ ೩ ರಂದು ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಎರಡನೆಯ ಬ್ರಹ್ಮೋತ್ಸವ ಅರವಿಂದ ನಾಯಕಿ ಅಮ್ಮನವರಿಗೆ ನಡೆಯುವ ಉತ್ಸವ ಇದು ನವರಾತ್ರಿಯ ಸಮಯದಲ್ಲಿ ೯ ದಿನ ನಡೆಯುತ್ತದೆ . ಚಿಕ್ಕ ರಥೋತ್ಸವವು ಆರನೆಯ ದಿನ ನಡೆಯುತ್ತದೆ.
ಕಳಲೆಯಲ್ಲಿ ಲಕ್ಷ್ಮೀಕಾಂತನ ದೇವಾಲಯವಲ್ಲದೆ ಈಶ್ವರನ ದೇವಾಲಯ ಕೂಡ ಕಲಾ ಕುಸುಮದಿಂದ ಕೂಡಿದ್ದು ಆಕರ್ಷಣೀಯವಾಗಿದೆ . ಅಂತೆಯೇ ರಥ ಬೀದಿಯ ಆಂಜನೇಯ ದೇವಾಲಯ ಕೂಡ ಪ್ರಸಿದ್ಧವಾಗಿದೆ . ಸಮೀಪವಿರುವ ಕಲ್ಯಾಣಿ ಯಲ್ಲಿ ಬ್ರಹ್ಮೋತ್ಸವ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತದೆ . ಊರ ಹೊರಭಾಗದಲ್ಲಿ ಗ್ರಾಮ ದೇವತೆ ಕೈವಲ್ಯಾ ದೇವಿಯ ಗುಡಿಯೂ ಪ್ರಮುಖವಾಗಿದೆ . ಇದರ ಹಿಂದೆ ಕಥೆಯೊಂದು ಪ್ರಚಲಿತದಲ್ಲಿದೆ. ಕಪಿಲ ಮುನಿಗಳು ಇಲ್ಲಿ ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ ಲವಣಾಸುರನೆಂಬ ರಾಕ್ಷಸನು ತಪಭಂಗ ಮಾಡಲು ಆಕ್ರಮಣ ಮಾಡಲು ಮುನಿಗಳು ತಪಸ್ಸಿನಿಂದ ರಕ್ಷಣೆಗಾಗಿ ಶಕ್ತಿಯೊಂದನ್ನು ರೂಪಿಸಿದರೆಂದೂ ಆ ದೇವಿಯು ಲವಣಾಸುರನನ್ನು ಸಂಹರಿಸಿ ಮುನಿಗಳ ತಪಸ್ಸು ಯಶಸ್ವಿಯಾಗಲು ನೆರವಾದಳೆಂದೂ ,
ಆಕೆಯನ್ನು ಗ್ರಾಮ ದೇವತೆಯಾಗಿ ಪೂಜಿಸಲಾಗುತ್ತದೆ ಇಲ್ಲಿಯೂ ವರ್ಷಕ್ಕೊಮ್ಮೆ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ . ಸುತ್ತಲಿನ ಗ್ರಾಮದ ಜನರು ಉತ್ಸಾಹದಿಂದ ಸೇರುತ್ತಾರೆ.