Thursday, February 6, 2020



ವಿಪ್ರ : ಸರ್ವತ್ರ ಪೂಜ್ಯತೇ

ಲೇಖಕರು: ಕೆ ವಿ ಶ್ರೀನಿವಾಸ ಪ್ರಸಾದ್ , ಕೊಡಿಗೇಹಳ್ಳಿ ಬೆಂಗಳೂರು 

ವಿಪ್ರನೆಂದರೆ ಯಾರು? ಯಾರು ಬ್ರಾಹ್ಮಣರೋ ಮತ್ತು ಸಚ್ಚಾರಿತ್ರವುಳ್ಳವರೋ ಅವರೇ ವಿಪ್ರರು . ಬ್ರಾಹ್ಮಣನೆಂದರೆ ಜಾತಿಯೆಂದಲ್ಲ . ಜನ್ಮನಾ ಯಾರೂ ಬ್ರಾಹ್ಮಣನಾಗುವುದಿಲ್ಲ . ಬ್ರಹ್ಮಜ್ಞಾನವನ್ನು ಪಡೆದ ನಂತರವಷ್ಟೇ ಬ್ರಾಹ್ಮಣತ್ವ ಬರುವುದು . ಬ್ರಹ್ಮಜ್ಞಾನವನ್ನು ಪಡೆಯಬೇಕಾದರೆ ಐಹಿಕ ಭೋಗ ಭಾಗ್ಯಗಳ ಲಾಲಸೆಯಲ್ಲಿ ನಿರತನಾಗಿದ್ದರೆ  ದೊರಕದು . ಅದು ಕೇವಲ ವೈರಾಗ್ಯ ಕಠಿಣ ಪರಿಶ್ರಮ ಅರಿಯಬೇಕೆಂಬ ಮಹದಾಸೆ ,ಛಲಗಳಿದ್ದರೆ ಮಾತ್ರ ದೊರಕುವುದು . ಆಹಾರದಲ್ಲಿ ಅಭಿರುಚಿ ನೋಟದಲ್ಲಿ ವೈವಿಧ್ಯತೆ ಐಚ್ಚಿಕ ಭೋಗಗಳಲ್ಲಿ ಆಸಕ್ತಿ ಇವುಗಳನ್ನು ವರ್ಜಿಸಬೇಕು . ಇದೊಂದು ಕಠಿಣ ಪರಿಶ್ರಮ . ಸಾಧಿಸಲು ಛಲವಿರಬೇಕು . ಪಡೆಯಬೇಕೆಂಬ ಹಠ ಇರಬೇಕು . ಎಡರು ತೊಡರು ಗಳನ್ನು ಎದುರಿಸುವ ಸಾಮರ್ಥ್ಯ ಇರಬೇಕು . ಆರೋಗ್ಯವಿರಬೇಕು ಅದಕ್ಕೆಂದೇ ಪೂರ್ವಜರು ಉಪನಯನ ಸಂಸ್ಕಾರವನ್ನು ಪಂಚ ಸಂಸ್ಕಾರಗಳಲ್ಲಿ ಒಂದಾಗಿಸಿದರು . ಉಪನಯನ ಎಂದರೆ ದ್ರಿಷ್ಟಿಗೆ ಸಮೀಪಿಸು ಎಂದರ್ಥ . ಒಬ್ಬ ಬಾಲಕನು ಅಷ್ಟ ವಯಸ್ಕನಾಗುತ್ತಿದ್ದಂತೆ ತಂದೆ ತಾಯಿಯರು ಬಂಧನವ ಕಳಚಿ ಮಗನನ್ನು ಗುರುಕುಲದತ್ತ ಕಳುಹಿಸಲು ನಿರ್ಧರಿಸುತ್ತಿದ್ದರು . ಮಕ್ಕಳು ತಂದೆ ತಾಯಿಯರ ಪ್ರೀತಿಯಲ್ಲಿ ಕಳೆದರೆ ಜ್ಞಾನ ದೊರಖ್ದೆಂಬುದ ಅಭಿಪ್ರಾಯವಾಗಿತ್ತು .ಗುರುಕುಲದಲ್ಲಿ ಬಾಲಕನು ತನ್ನ ಜೀವಿತವನ್ನು ಗುರು ಆಶ್ರಯದಲ್ಲಿ , ವನ ಮಧ್ಯದಲ್ಲಿ ಎಲ್ಲ ಭೋಗ ಲಾಲಸೆಗಳಿಂದ ದೂರವಾಗಿ ಏಕಾಗ್ರಚಿತ್ತದಿಂದ ಆಹಾರ ನಿಯಮದಡಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು .ಅವರು ತಂದೆ ತಾಯಿಯರನ್ನು ಮರೆತು ಗುರುವೇ ಸರ್ವಸ್ವವೆಂದು ಭಾವಿಸಿ ಪ್ರತ್ಯೇಕ ಜೀವಿಗಳಾಗಿ ಸರ್ವ ಸ್ವತಂತ್ರವಾಗಿ ಬೆಳೆಯುತ್ತಿದ್ದರು . ಎರಡನೆಯ ಜನ್ಮ ಪಡೆದು ದ್ವಿಜರೆನಿಸಿಕೊಳ್ಳುತ್ತಿದ್ದರು . ಸಚ್ಚಾರಿತ್ರವನ್ನು ಮೈಗೂಡಿಸಿಕೊಂಡು ವಿಪ್ರರಾಗುತ್ತಿದ್ದರು . 
ಬ್ರಹ್ಮಜ್ಞಾನ ವೆಂದರೆ ಏನು? ತಾನು ಯಾರೆಂಬುದರ ಅರಿವೇ ಬ್ರಹ್ಮಜ್ಞಾನ . ಸ್ವಸ್ವರೂಪದ ಅರಿವಾಗಬೇಕಾದರೆ ವೇದಾಧ್ಯಯನ ಅತ್ಯಗತ್ಯ . ಸಾಕ್ಷಾತ್ ಪರಬ್ರಹ್ಮನಿಂದ ಶ್ರುತಿ ಸ್ಮೃತಿ ರೂಪದಲ್ಲಿ ಹರಿದುಬಂದ ಆತ್ಮ ಜ್ಞಾನವೇ ವೇದಗಳು . ವೇದಗಳು ನಾಲ್ಕಾದರೂ ಪ್ರಥಮವಾದದ್ದು ಋಗ್ವೇದ . ಉಳಿದವು ಯಜುರ್ವೇದ ,ಸಾಮವೇದ ಮತ್ತು ಅಥರ್ವ ವೇದಗಳು. ಎಲ್ಲ ಜೀವಿಗಳ ಉತ್ಪತ್ತಿ ಒಬ್ಬನಿಂದಲೇ ಆದದ್ದು ಅವನೇ ಪರಮಾತ್ಮ . ಆ ಪರಮಾತ್ಮನ ಅಂಶಗಳೇ ಜೀವಾತ್ಮಗಳು . ರೂಪ ಲಾವಣ್ಯ ಗುಣೇತ್ಯಾದಿ ಶರೀರದ ಸ್ವರೂಪಗಳು ನೋಟಕ್ಕಷ್ಟೇ . ಆದರೆ ಆ ಪ್ರತಿ ಶರೀರದ  ಹಿಂದಿರುವುದು ಭಗವಂತನ ಅಂಶವಾದ ಜೀವಾತ್ಮ . ನಾವು ಮಾಡುವ ಪ್ರತಿ ಕರ್ಮಗಳು ಶರೀರಕ್ಕಷ್ಟೇ ವಿನಃ ಜೀವಾತ್ಮಕ್ಕೆ ಅಂಟುವುದಿಲ್ಲ . ಆದರೆ ಅದನ್ನು ಆವರಿಸುವುದು . ಆ ಮಬ್ಬನ್ನು ಹೋಗಲಾಡಿಸುವುದೇ ಬ್ರಹ್ಮಜ್ಞಾನದ ಉದ್ದೇಶ . ಮಬ್ಬು ಕರಗದಿದ್ದರೆ ಕಲುಷಿತಾತ್ಮ ಅನುಭವಿಸುವುದು ಕತ್ತಲೆಯ ಸಂಕಷ್ಟಗಳನ್ನು . ಪುನರಪಿ ಮರಣಂ ಪುನರಪಿ ಜನನಂ ಪುನರಪಿ ಜನನೀ ಜಠರೇ ಶಯನಂ  ಎಂದು ಆದಿ ಶಂಕರರು ತಮ್ಮ ಭಜ ಗೋವಿಂದ ಸ್ತೋತ್ರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ . ಮಬ್ಬು ಕರಾಗಬೇಕಾದರೆ ಕಠಿಣ ಪರಿಶ್ರಮ ಬೇಕು . ವಿರಕ್ತಿಯಿರಬೇಕು . ಛಲವಿರಬೇಕು . ಗುರಿಯಿರಬೇಕು . ಇದನ್ನೇ ಬ್ರಾಹ್ಮಣತ್ವ ಎನ್ನುವುದು .
ವೇದಗಳೆಂದರೆ ಯಾವುದು? ಅದರಲ್ಲಡಗಿರುವುದ ಏನು ?ವೇದಗಳ ಜ್ಞಾನದಿಂದ ಭೋಗ ಲಭಿಸದು ಐಶ್ವರ್ಯ ದೊರಕದು . ಸುಖ ಸಂಪತ್ತುಗಳು ಬರಲಾರವು . ಐಚ್ಚಿಕ ಜೀವನ ತನಗಾಗದು. ಇಂತಹ ಭೌಕ್ತಿಕ ಲಾಭವಿಲ್ಲದ ಜ್ಞಾನ ಏಕೆ ಬೇಕು ಎಂಬ ಪ್ರಶ್ನೆ ಸಹಜ .ಇದನ್ನೇ ಜೀವನ ಚಕ್ರ ಎನ್ನುವುದು . ಪಾಪ ಪೀಡಿತವಾದ ಆತ್ಮ ಕರ್ಮಾನುಸಾರ ಅನೇಕ ಜನ್ಮಗಳನ್ನು ಅನೇಕ ವೇಳೆ ಕ್ಷುದ್ರ ಜನ್ಮವನ್ನು ಅನುಭವಿಸುತ್ತ ಯುಗ ಯುಗಗಳು ಭಂಧ್ಯಾಗಿರಬೇಕೇ? ಅಥವಾ ಮುಕ್ತನಾಗಿ ಶಾಶ್ವತವಾದ ಪುನರ್ಜನ್ಮವಿಲ್ಲದ ಪರಮಾತ್ಮನನ್ನು ಹೊಂದಿ ಮುಕ್ತನಾಗಬೇಕೇ ಎಂಬುದು ಪ್ರಶ್ನೆ . ಅದಕ್ಕೆಂದೇ ತಿಳಿಸಿದುದು ಬ್ರಹ್ಮ ಜ್ಞಾನಕ್ಕೆ ಅವಶ್ಯವಾದುದು ವಿರಕ್ತಿ ಕಠಿಣ ಪರಿಶ್ರಮಗಳೆಂದು . ಅವುಗಳನ್ನು ಪಡೆದಾಗಲೇ ಬ್ರಾಹ್ಮಣ ಆಗುವುದು .
 ಮರಣಗಳೆಂಬ ಚಕ್ರ ಪರಿವರ್ತನೆಯ ಅನಿಷ್ಟವನ್ನು ಪರಿಹರಿಸಿ ಪರಬ್ರಹ್ಮ ಪ್ರಾಪ್ತಿ ಎಂಬ ಇಷ್ಟವನ್ನು ಪಡೆಯಲು ಮಾನವಕೋಟಿ ಅನುಸರಿಸಬೇಕಾದ ವಿಧಾನವನ್ನು ತಿಳಿಸುವುದೇ ವೇದ . ಅಗ್ರಮಾನ್ಯವಾದದ್ದು ಋಗ್ವೇದ . ಯಜುರ್ವೇದ ಸಾಮವೇದಗಳು "ತತ್ಪರಿಚಾರಣಾವಿತಾರೌ ವೇದೋ " ಎಂಬಂತೆ ಕೇವಲ ಯಾಗಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಮಾತ್ರವೇ ಒಳಗೊಂಡಿದೆ. ಅಥರ್ವವು ಯಾಗಕ್ಕೆ ನೇರವಾಗಿ  ಸಂಬಂದಿಸಿಲ್ಲದ ಕಾರಣ ಅದು ಇತರ ವೇದಗಳಿಗಿಂತ ಈಚಿನದೆಂದು ಅಭಿಪ್ರಾಯ. ಋಗ್ವೇದದಲ್ಲಿ ೧೦೨೮ ಸೂಕ್ತ ಗಳಿವೆ. ೧೦೫೫೨ ಮಂತ್ರಗಳಿವೆ . ಯಜುರ್ವೇದದಲ್ಲಿ ಎರಡು ಶಾಖೆಗಳಿದ್ದು ಕೃಷ್ಣ ಯಜುರ್ವೇದ ಮತ್ತು ಶುಕ್ಲ ಯಜುರ್ವೇದ ಎಂದು ಪ್ರಚಲಿತದಲ್ಲಿದೆ . ಶುಕ್ಲ ಯಜುರ್ವೇದ ಛಂದೋಬದ್ಧವಾಗಿದ್ದು ೧೯೦೫ ಮಂತ್ರಗಳನ್ನು ಹೊಂದಿದೆ ಕೃಷ್ಣ ಯಜುರ್ವೇದ ಗದ್ಯ ಪದ್ಯ ಮಿಶ್ರಿತವಾಗಿದೆ . ಸಾಮವೇದ ಉದ್ಗಾತೃ ವೇದ . ಇದರಲ್ಲಿ ೧೫೪೯ ಮಂತ್ರಗಳಿವೆ . ಬಹುಪಾಲು ಮಂತ್ರಗಳು ಋಗ್ವೇದದಲ್ಲಿರುವುದೇ ಆಗಿವೆ . ಸಾಮವೇದವನ್ನು ಸಂಗೀತ ಶಾಸ್ತ್ರದ ಮೂಲವೆಂದು ಹೇಳಲಾಗುತ್ತದೆ . ವೇದಗಳಲ್ಲಿ ಬರುವ ಮಂತ್ರಗಳು ಪ್ರಕೃತಿಯ ಶಕ್ತಿಗಳನ್ನೇ ದೇವತೆಗಳೆಂದು ಸ್ತುತಿಸುತ್ತವೆ . ಇಲ್ಲಿ ಸ್ತುತಿಸಲ್ಪಡುವ ದೇವತೆಗಳೆಂದರೆ ಅಗ್ನಿ , ಸೂರ್ಯ , ವರುಣ , ವಾಯು , ವಾತ , ಉಷಸ್ , ರಾತ್ರಿ , ಮಿತ್ರ , ಆಪಃ , ಪೃಥ್ವಿ , ಸೋಮ , ಮುಂತಾದವರೇ ಆಗಿದ್ದಾರೆ . ಈ ಜಗತ್ತು ಆತ್ಮನಲ್ಲಿ ಒಂದಾಗಿದೆ ಎಂಬುದನ್ನು ವೇದಗಳು ಪ್ರತಿಪಾದಿಸುತ್ತವೆ  ಈ ಪ್ರಕೃತಿ ಆಧರಿಸಿ ತಮ್ಮ ಕರ್ತವ್ಯಗಳನ್ನು ಮಾಡುತ್ತಿರಬೇಕೆಂಬುದೇ ವೇದಗಳ ಸಂದೇಶ . ವೇದಾಧ್ಯಯನ ಬ್ರಾಹ್ಮಣರ ಸಹಜ ಕರ್ಮವೆಂಬುದು ಅಭಿಪ್ರಾಯ . ಪರಮಾತ್ಮನದೇ ಸೃಷ್ಟಿಯಾದ ಪ್ರಕೃತಿ ಹೇಗೆ ನಿಯಮ ಬದ್ಧವಾಗಿ ಭಗವದಾಜ್ಞೆಯಂತೆ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೋ ಹಾಗೆಯೇ ಪರಮಾತ್ಮನ ಅಂಶೀ ಭೂತರಾದ  ಸಕಲ ಜೀವರಾಶಿಗಳು ಪ್ರಕೃತಿ ನಿಯಮಕ್ಕನುಗುಣವಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಅರ್ಪಣಾ ಭಾವದಿಂದ ನಿರ್ವಹಿಸಬೇಕೆಂಬುದೇ ವೇದಗಳ ಆದೇಶ ನಿರ್ವಹಣೆಯಲ್ಲಿ ಅಹಂಕಾರವೇ  ಮೊದಲಾದ ಅರಿಷದ್ವರ್ಗಗಳಿಗೆ ಅವಕಾಶ ನೀಡದೆ ಪರಮಾತ್ಮನಲ್ಲಿ ನಿಷ್ಠೆಯಿಂದ ಕರ್ತವ್ಯಗಳನ್ನು ಮಾಡಿದಾಗ ಆತ್ಮ ಪರಿಶುದ್ಧತೆಯನ್ನು ಪಡೆದು , ಯಾವುದೇ ವಿಧವಾದ ದೋಷಗಳಿಗೆ ಅಂಟಿಕೊಳ್ಳದೆ ನೀರಮೇಲಿನ ಗುಳ್ಳೆಯಂತೆ ಪರಿಶುಧದಿಂದಿದ್ದು ಕರ್ತವ್ಯ ಮುಗಿದನಂತರ ಪರಮಾತ್ಮನನ್ನು ಸೇರುತ್ತದೆಎಂಬುದೇ ವೇದಗಳ ಸಂದೇಶ . ಪ್ರಕೃತಿಯನ್ನು ಗೌರವಿಸಬೇಕು ಅದನ್ನು ಕೂಡಿ ಅನುಭವಿಸಬೇಕು. ಏಕೆಂದರೆ ಅವೆಲ್ಲವೂ ಪರಮಾತ್ಮನಿಗೆ ಸೇರಿದವು ಎಂಬ ಭಾವನೆ ಬರಬೇಕು. "ವೇದಗಳ ಸಾರವನ್ನು ತಿಳಿಸುವ ಅತಿ ಸರಳ ಗ್ರಂಥವೆಂದರೆ ಭಗವದ್ಗೀತಾ . ಇದರಲ್ಲಿ ೭೦೦ ಶ್ಲೋಕಗಳಲ್ಲಿ ಇಡೀ ವೇದದ ಸಾರಾಂಶವನ್ನು ತಿಳಿಸಲಾಗಿದೆ. ವೇದಗಳನ್ನು ಅಭ್ಯಸಿಸಲು ಆಗದಿದ್ದವರು ಭಗವದ್ಗೀತೆಯನ್ನಾದರೂ ಮನನ ಮಾಡಿಕೊಳ್ಳಬೇಕು .
ವೇದವರಿತಾರೆ ಸಾಲದು . ವೇದಾಚರಣೆಯೂ ಅತಿ ಆವಶ್ಯಕ ವೇದಾಚರಣೆಯ ಬಗ್ಗೆ ಎಲ್ಲವೇದದಲ್ಲಿಯೂ ಉಲ್ಲೇಖ್ವವಿ ದ್ದರೂ , ತೈತ್ತರೀಯ ಉಪನಿಷತ್ತಿನಲ್ಲಿ ವಿಶೇಷವಾಗಿ ವರ್ಣಿಸಲಾಗಿದೆ .
सत्यं वद धर्मं चर स्वाध्यायान्मा प्रमदः  आचार्याय प्रियं धनमाह्रित्य प्रजातन्तुं मा व्यवचेत्सि     ಇತ್ಯಾದಿ
ಸತ್ಯವನ್ನೇ ನುಡಿ ಸತ್ಯವಾದುದನ್ನಮೆ ಆಚರಿಸು ವೇದ ಕಲಿಕೆಯಲ್ಲಿ ತಪ್ಪೆಸಗಬೇಡ . ಧರ್ಮದಿಂದ ದೂರಸರಿಯಬೇಡ ದೇವಾ ಪಿತೃ ಕಾರ್ಯಗಳಿಂದ ದೂರ ಸರಿಯಬೇಡ ತಾಯಿಯೇ ದೇವರು ತಂದೆಯೇ ದೇವರು ಗುರುಗಳೇ ದೇವರು ಅತಿಥಿಗಳೇ ದೇವರು . ದಾನವನ್ನು ನಂಬಿಕೆಯಿಂದ ನೀಡು . ಅದರಲ್ಲಿ ಸ್ವಾರ್ಥ ಬೇಡ ದಾನ ಮಾಡುವಾಗ ನಗುವಿರಲಿ . ಭಯಬೇಡ . ಮನಃಪೂರ್ವಕವಾಗಿ ದಾನ ಮಾಡು .
सहनाववतु सहनॊ भुनक्तु सहवीर्यं करवावहै तेजस्विनावधीतमस्तु मा विद्विषावहै
ಒಟ್ಟಿಗೆ ಹೊಂದೋಣ ಒಟ್ಟಿಗೆ ಭುಂಜಿಸೋಣ ಒಟ್ಟಿಗೆ ಶಕ್ತಿಯನ್ನು ಪಡೆಯೋಣ ಪರಸ್ಪರ ದ್ವೇಷಿಸದಿರೋಣ
ಈ ರೀತಿಯಾಗಿ ವೇದ ನಾವಿ ಜೀವನವನ್ನು ಹೇಗೆ ಸಾಗಿಸಬೇಕು ಎಂಬುದನ್ನು ತಿಳಿಸುತ್ತದೆ . ಸೃಷ್ಟಿಯ ಉಗಮವನ್ನು ತಿಳಿಸುತ್ತ ಬ್ರಹ್ಮನಿಂದ ಆತ್ಮ ಆತ್ಮದಿಂದ ಆಕಾಶ ಆಕಾಶದಿಂದ ವಾಯು ವಾಯುವಿನಿಂದ ಅಗ್ನಿ ಅಗ್ನಿಯಿಂದ ನೀರು ನೀರಿನಿಂದ ಭೂಮಿ ಭೂಮಿಯಿಂದ ಔಷಧಿಗಳು ಔಷಧಿಯಿಂದ ಅಣ್ಣ ಅನ್ನದಿಂದ ಮನುಷ್ಯ  ಎಂದು ವೇದಗಳು ಸಾರುತ್ತವೆ ಆದುದರಿಂದ ಅನ್ನವನ್ನು ದುರುಪಯೋಗಿಸಬಾರದು ಅನ್ನವನ್ನು ಎಸೆಯಬಾರದು ಅನ್ನವನ್ನು ಯಥೇಚ್ಚೆಯಾಗಿ ಮಾಡಬೇಕು ಅನ್ನಕ್ಕಾಗಿ ಬಂದವರನ್ನು ಹಿಂದುರಿಗಿಸಬಾರದು .
ಹೀಗೆ ವಿಪ್ರರಾದವರು ವೇದದರಿವಿನೊಂದಿಗೆ ಸಚ್ಚಾರಿತ್ರವನ್ನು ಬೆಳೆಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸುತ್ತದೆ.


No comments:

Post a Comment