Saturday, July 24, 2021

ಶರಣಾಗತಿ

 ನಾರಾಯಣ ಗೋವಿಂದ ಮಾಧವ

ನೀನೇ ನನಗೆ ತಂದೆ ತಾಯಿ ಬಂಧು

ಮಿತ್ರನೂ ನೀನೇ ಬಳಗವೂ ನೀನೇ

ಶರಣಾಗಿರುವೆ ತಂದೆ ದಾರಿ ತೋರಿಸು


ತಪ್ಪ ಎಸಗದಂತೆ ಕರ್ಮದಲಿ ಇರಿಸು

ಬೇಡ ಫಲಾಪೇಕ್ಷೆ ನಡೆವೆನು ನಿನ್ನಿರಿಸಂತೆ

ಇರಿಸು ಎನ್ನನು ಸದಾ ನಿನ್ನ ಧ್ಯಾನದಲ್ಲಿ

ಅಳಿಸು ಧ್ಯಾನಕೆ ಅಡ್ಡಿಯಾಗುವ ವಿಘ್ನವ


ಈ ಜಗ ನಿನ್ನದು ಸೂರ್ಯ ಚಂದ್ರರು ನೇತ್ರ

ಅಡಗಿಹುದು ವಿಶ್ವ ನಿನ್ನ ಉದರದಲಿ

ನಿಂತಿಹಳು ಲಕ್ಷ್ಮಿ ವಕ್ಷಸ್ಥಲದಲಿ ಚಿರವಾಗಿ

ಅಡಗಿಹರು ಇಂದ್ರಾದಿ ದೇವತೆಗಳು ಪಾದದಲಿ


ಸರ್ವಶಕ್ತನು  ನೀನು ಸರ್ವ ಅಂತರ್ಯಾಮಿ

ಸರ್ವ ಜನಕನು  ಪ್ರಳಯಕಾರಕನು ನೀನು ಕರುಣಾ ಮೂರ್ತಿಯೂ ಆಶ್ರಿತವತ್ಸಲನೂ ಅಮಿತ ಪ್ರೀತಿ ಭಕ್ತರಲಿ ಧಾವಿಸುವೆ ರಕ್ಷಿಸಲು


ಮರೆಯುವೆ ನೀ ಸರ್ವೇಶ್ವರನು ಎಂದು

ಕಾಯುವೆ ಬಾಗಿಲಲಿ ದ್ವಾರಪಾಲಕನಾಗಿ

ಹರಿಸುವೆ ಅಂಬರವ ಕೈ ಎತ್ತಿ ಕರೆಯಲು

ಗಿರಿಯಿಂದ ಉರುಳಿದವನ ಹಿಡಿಯೆ ಕೈಯಲಿ


ತಪ್ಪೆಸಗಿದ್ದರೆ ಮನ್ನಿಸು ಸೂತ್ರಧಾರ ನೀನು

ದಾರಿ ತೋರಿಸು ನಡೆಸು ಸನ್ಮಾರ್ಗದಲಿ

ನನಗಿಲ್ಲ ಬೇರಾರು ನೀನಲ್ಲದೆ ಗುರುವಾಗಿ

ಸದ್ಗತಿಯ ಅನುಗ್ರಹಿಸು ಜೀವದಂತ್ಯದಲಿ


ಶ್ರೀನಿವಾಸ ಪ್ರಸಾದ್.ಕೆ.ವಿ.

No comments:

Post a Comment