ಗುರುವಿನ ಗುಲಾಮನಾಗುವ ತನಕ
ದೊರಕದಣ್ಣ ಮುಕ್ತಿ ಎಂದರು ದಾಸರು
ನಡೆದೆ ಕಾಡು ಮೇಡೆಗಳಲಿ ನಗರದಲಿ
ಅರಸುತ ಸದ್ಗುರುಗಳ ಸಂಧಿಗೊಂದಿನಲಿ
ಕಂಡೆ ಗುರುಗಳೆನಿಸಿದವರ ಬಂಗಲೆಗಳಲಿ
ರಾಜಕೀಯ ಧುರೀಣರ ಹಿಂದೆ ಮುಂದೆಯಲಿ
ಬೇಡವಾಗಿತ್ತು ದೇವರ ಚಿಂತನೆ ಮೊಗದಲಿ
ಬಯಸಿತ್ತು ಪದವಿಯ ಸಿರಿ ಸಂಪದವ
ನಡೆದಿದ್ದರು ಎಸಿ ಕಾರ್ಗಳಲಿ ಕಾವಿಯಲಿ
ಹಿಡಿದಿದ್ದರು ಕೈಯಲಿ ಬಣ್ಣದ ಕೈ ಚೀಲಗಳ
ತುಂಬಿಕೊಳಲು ಭಕ್ತರು ನೀಡುವ ಕಾಣಿಕೆಯ
ಗುರಿಯಿರಿಸಿ ಶ್ರೀಮಂತ ಸೌಧಗಳ ವ್ಯಕ್ತಿಗಳ
ನಡೆದಿಹುದು ಪೈಪೋಟಿ ಗುರುಗುರುಗಳಲಿ
ಯಾರು ಹೆಚ್ಚು ಶ್ರೀಮಂತರೆಂದು ಸಿರಿಯಲಿ
ಭಕ್ತರು ಅರಸಿಬಂದರೆ ಅರಸುವುದು ಅವರ
ಕಾಣಿಕೆಯ ಗಾತ್ರವನು ಆಧರಿಸಿ ಹರಸಲು
ಮೆಚ್ಚನಾ ಹರಿ ಕಪಟಿ ಗುರುಗಳ ಬಹುಕಾಲ
ಕಳಚುವುದು ಮುಖವಾಡ ಮುಂದೊಂದು ದಿನ
ನಂಬದಿರಿ ಕಪಟ ಸನ್ಯಾಸಿಗಳ ಎಚ್ಚರವಿರಲಿ
ನಂಬಿ ಗುರು ಬ್ರಹ್ಮ ಗುರು ವಿಷ್ಣು ಮಹೇಶ್ವರ
No comments:
Post a Comment