Saturday, July 24, 2021

ಶ್ರದ್ಧಾಂಜಲಿ

  ಅಗಲಿ ವರುಷವಾಯಿತು

ಮರೆಯೆ ನಾ ಭಾಷ್ಪದ ಕಣ್ಗಳ

ಹೋರಾಡಿದೆ ನೋವೆಲ್ಲಾ ನುಂಗಿ

ಕಳೆಯೇ ಕೆಲವು ವರ್ಷ ಮೊಮ್ಮಕ್ಕಳೊಂದಿಗೆ


ವಿಧಿ ಬಿಡಲಿಲ್ಲ ನೀ ಎಳೆದೆ ಕೊನೆ ಉಸಿರ

ನಮ್ಮನು ಕಣ್ಣೀ ರಲ್ಲಿ ಮುಳುಗಿಸಿ

ನಿನ್ನ ನೆನಪು ಮಾತ್ರ ಚಿರಕಾಲ ಉಳಿಸಿ

ಮಕ್ಕಳನು ತಬ್ಬ ಲಿ ಯಾಗಿರಿಸಿ


ಪ್ರೇಮವನು ಧಾರೆಯೆರೆದು ಬೆಳೆಸಿದೆ

ಬಂಧುಗಳಲ್ಲಿ ಅಮಿತಾದರವ ತೋರಿಸಿ

ಪ್ರಿಯವಾದೆ ಸ್ನೇಹಿತರಿಗೆ ಬಾಂಧವರಿಗೆ

ಪೋಷಿಸಿದೆ ಮೊಮ್ಮಕ್ಕಳ ಪಾಶ ದಿಂದ


ಕಲಾ ಕಳೆದ ನಿನ್ನ ನೆನಪು ಹಸಿರೆಂದೂ 

ಕಳೆದಿಹೆನು ನೀನಿತ್ತ ಪ್ರೇಮ ಕುಡಿಗಳೊಂದಿಗೆ

ಆಡುತಲಿ ಮೊಮ್ಮಕ್ಕಳೊಂದಿಗೆ ನೆನೆಯುತ

ಸಂತಸದ ಆ ಯೌವನದ ದಿನಗಳ


ಇರಲಿ ನಿನ್ನ ಆತ್ಮ ಚಿರ ಶಾಂತಿಯಲ್ಲಿ

ಪರಮಾತ್ಮನಲ್ಲಿ ಲೀನವಾಗಿ ಎಂದೂ

ಸಿಗಲಿ ಪರಮಪದ ಮರಳಿ ಬಾರದೆ

ಪ್ರಾರ್ಥಿಸುವೆ ಶ್ರೀಕಾಂತನಲಿ ಎದೆತುಂಬಿ

ಶರಣಾಗತಿ

 ನಾರಾಯಣ ಗೋವಿಂದ ಮಾಧವ

ನೀನೇ ನನಗೆ ತಂದೆ ತಾಯಿ ಬಂಧು

ಮಿತ್ರನೂ ನೀನೇ ಬಳಗವೂ ನೀನೇ

ಶರಣಾಗಿರುವೆ ತಂದೆ ದಾರಿ ತೋರಿಸು


ತಪ್ಪ ಎಸಗದಂತೆ ಕರ್ಮದಲಿ ಇರಿಸು

ಬೇಡ ಫಲಾಪೇಕ್ಷೆ ನಡೆವೆನು ನಿನ್ನಿರಿಸಂತೆ

ಇರಿಸು ಎನ್ನನು ಸದಾ ನಿನ್ನ ಧ್ಯಾನದಲ್ಲಿ

ಅಳಿಸು ಧ್ಯಾನಕೆ ಅಡ್ಡಿಯಾಗುವ ವಿಘ್ನವ


ಈ ಜಗ ನಿನ್ನದು ಸೂರ್ಯ ಚಂದ್ರರು ನೇತ್ರ

ಅಡಗಿಹುದು ವಿಶ್ವ ನಿನ್ನ ಉದರದಲಿ

ನಿಂತಿಹಳು ಲಕ್ಷ್ಮಿ ವಕ್ಷಸ್ಥಲದಲಿ ಚಿರವಾಗಿ

ಅಡಗಿಹರು ಇಂದ್ರಾದಿ ದೇವತೆಗಳು ಪಾದದಲಿ


ಸರ್ವಶಕ್ತನು  ನೀನು ಸರ್ವ ಅಂತರ್ಯಾಮಿ

ಸರ್ವ ಜನಕನು  ಪ್ರಳಯಕಾರಕನು ನೀನು ಕರುಣಾ ಮೂರ್ತಿಯೂ ಆಶ್ರಿತವತ್ಸಲನೂ ಅಮಿತ ಪ್ರೀತಿ ಭಕ್ತರಲಿ ಧಾವಿಸುವೆ ರಕ್ಷಿಸಲು


ಮರೆಯುವೆ ನೀ ಸರ್ವೇಶ್ವರನು ಎಂದು

ಕಾಯುವೆ ಬಾಗಿಲಲಿ ದ್ವಾರಪಾಲಕನಾಗಿ

ಹರಿಸುವೆ ಅಂಬರವ ಕೈ ಎತ್ತಿ ಕರೆಯಲು

ಗಿರಿಯಿಂದ ಉರುಳಿದವನ ಹಿಡಿಯೆ ಕೈಯಲಿ


ತಪ್ಪೆಸಗಿದ್ದರೆ ಮನ್ನಿಸು ಸೂತ್ರಧಾರ ನೀನು

ದಾರಿ ತೋರಿಸು ನಡೆಸು ಸನ್ಮಾರ್ಗದಲಿ

ನನಗಿಲ್ಲ ಬೇರಾರು ನೀನಲ್ಲದೆ ಗುರುವಾಗಿ

ಸದ್ಗತಿಯ ಅನುಗ್ರಹಿಸು ಜೀವದಂತ್ಯದಲಿ


ಶ್ರೀನಿವಾಸ ಪ್ರಸಾದ್.ಕೆ.ವಿ.

ಗುರು ಪೂರ್ಣಿಮೆ

 ಗುರುವಿನ ಗುಲಾಮನಾಗುವ ತನಕ

ದೊರಕದಣ್ಣ ಮುಕ್ತಿ ಎಂದರು ದಾಸರು

ನಡೆದೆ   ಕಾಡು ಮೇಡೆಗಳಲಿ ನಗರದಲಿ

ಅರಸುತ ಸದ್ಗುರುಗಳ ಸಂಧಿಗೊಂದಿನಲಿ


ಕಂಡೆ ಗುರುಗಳೆನಿಸಿದವರ ಬಂಗಲೆಗಳಲಿ

ರಾಜಕೀಯ ಧುರೀಣರ ಹಿಂದೆ ಮುಂದೆಯಲಿ

ಬೇಡವಾಗಿತ್ತು ದೇವರ ಚಿಂತನೆ ಮೊಗದಲಿ

ಬಯಸಿತ್ತು ಪದವಿಯ ಸಿರಿ ಸಂಪದವ


ನಡೆದಿದ್ದರು ಎಸಿ ಕಾರ್ಗಳಲಿ ಕಾವಿಯಲಿ

ಹಿಡಿದಿದ್ದರು ಕೈಯಲಿ ಬಣ್ಣದ ಕೈ ಚೀಲಗಳ

ತುಂಬಿಕೊಳಲು ಭಕ್ತರು ನೀಡುವ ಕಾಣಿಕೆಯ

ಗುರಿಯಿರಿಸಿ ಶ್ರೀಮಂತ ಸೌಧಗಳ ವ್ಯಕ್ತಿಗಳ


ನಡೆದಿಹುದು ಪೈಪೋಟಿ ಗುರುಗುರುಗಳಲಿ 

ಯಾರು ಹೆಚ್ಚು ಶ್ರೀಮಂತರೆಂದು ಸಿರಿಯಲಿ

ಭಕ್ತರು ಅರಸಿಬಂದರೆ ಅರಸುವುದು ಅವರ

ಕಾಣಿಕೆಯ ಗಾತ್ರವನು ಆಧರಿಸಿ ಹರಸಲು


ಮೆಚ್ಚನಾ ಹರಿ ಕಪಟಿ ಗುರುಗಳ ಬಹುಕಾಲ

ಕಳಚುವುದು ಮುಖವಾಡ ಮುಂದೊಂದು ದಿನ

ನಂಬದಿರಿ ಕಪಟ ಸನ್ಯಾಸಿಗಳ ಎಚ್ಚರವಿರಲಿ

ನಂಬಿ ಗುರು ಬ್ರಹ್ಮ ಗುರು ವಿಷ್ಣು ಮಹೇಶ್ವರ