Saturday, September 11, 2021

ತಂದೆಗೆ ಶತಕದ ನಮನ

 ಅಪ್ಪ ನೀ ಜನಿಸಿದೆ ನೂರ್ವರ್ಷ ಹಿಂದೆ

ತಂದೆ ವಿದ್ವಾಂಸ ಶ್ರೀನಿವಾಸೈಯ್ಯಂಗಾರ್ 

ತಾಯಿ ಕನಕಮ್ಮರ ನಾಲ್ಕನೇ ಮಗುವಾಗಿ

ಬೆಳೆದೆ ಸಂಸ್ಕೃತಿ ನಗರ ಮೈಸೂರಲ್ಲಿ


ಕಲಿತೆ ಪಾಂಚರಾತ್ರಾಗಮ ಪಾಠಶಾಲೆಯಲಿ

ಜೊತೆಯಲಿ ಆಂಗ್ಲ ಭಾಷೆಯನ್ನು ಕೂಡ

ಗುರುವಾಗಿದ್ದೆ ಕಲಿತ ಪಾಠ ಶಾಲೆಯಲ್ಲಿ

ಆದರೆ ರುಚಿಸದಾಯ್ತು ಕಲಿಸುವ ಕಲೆ


ಜೀವನಕ್ಕಾಗಿ ಆರಿಸಿದೆ ಮುದ್ರಣ ಉದ್ಯಮ

ಕೈಹಿಡಿದೆ ಸೀತಾಲಕ್ಷ್ಮಿಯ ಹದಿರೆಂಟರಲಿ

ಜನಿಸಿದೆ ನಾನು ಮೊದಲನೇ ಮಗುವಾಗಿ

ನಂತರ ಐದು ಮಕ್ಕಳು ಮೂರರ ಅಂತರದಿ


ಸುತ್ತಾಡಿದೆ ಅನೇಕ ತೀರ್ಥಕ್ಷೇತ್ರಗಳ ಜೊತೆ

ಜೊತೆಯಲಿ ಸ್ನೇಹಿತರ ಮತ್ತು ಮಕ್ಕಳಕೂಡ

ಪ್ರಕಟಿಸಿದೆ ಉಪಯುಕ್ತ ಸ್ತೋತ್ರಗಳನ್ನು

ಆರಾಧನಾ, ಅಷ್ಟೋ ತ್ತರ, ಶಾತ್ತುಮುರೈ


ವಿದ್ಯೆಗಾಗಿ ಹೆಣ್ಣುಮಕ್ಕಳ ಬವಣೆ ಕಂಡೆ

ಆರಂಭಿಸಿದೆ ಹೆಣ್ಣುಮಕ್ಕಳ ಪ್ರತ್ಯೇಕ ಶಾಲೆ 

ಶಿಶುವಿಹಾರ ಆರಭ್ಯ ಉನ್ನತ ವಿದ್ಯೆವರೆಗೆ

ಪಡೆದೆ ಭೂಮಿಯ ಕಟ್ಟಿಸಿದೆ ಭವನವ


ಸಂಸ್ಕೃತ ಭಾಷೆಯ ಅವನತಿಯ ಕಂಡೆ

ಮರುಗಿ ಆರಂಭಿಸಿದೆ ಸಂಸ್ಕೃತ ಪತ್ರಿಕೆಯ

ನಡೆಸಿದೆ ಅಖಂಡ ಸಂಸ್ಕೃತ ಸಮ್ಮೇಳನ

ಒಗ್ಗೊಡಿಸಿದೆ ಸಂಸ್ಕೃತ ಪಂಡಿತರ ಮೇಳದಿ


ನಾ ಜೊತೆಯಿದ್ದೆ ಹತ್ತು ವರುಷ ಪತ್ರಿಕೆಗಾಗಿ

ಸುತ್ತಾಡಿದೆ ಜಿಲ್ಲೆಯ ಕೆಲ ದೇವಾಲಯಗಳ

ಕುರಿತಾಗಿ ಬರೆದೆ ಮೂರ್ನಾಲ್ಕು ಪುಸ್ತಕಗಳ 

ಸಂಧಿಸಿದೆ ಹಲವು ಪ್ರಮುಖ ನೇತಾರರ


ಕ್ಷೀಣಿಸುತ್ತಿದ್ದ ಆರ್ಥಿಕ ಸ್ಥಿತಿ ನೌಕರಿಯತ್ತ

ಸೆಳೆಯಿತು ,ತಂದೆಗೆ ನೆರವಾಗಲು ಸೇರಿದೆ

ಉದ್ಯಮ ,ನಂತರ ಬ್ಯಾಂಕ್, ದೂರವಾದೆ

ನಿನ್ನಿಂದ, ನಡೆಸಿಮೂರುಹೆಣ್ಮಕ್ಕಳವಿವಾಹ


ನೀ ಅಗಲಿದೆ ನಮ್ಮ ಬಿಟ್ಟು ತೊಂಬತ್ತರಲಿ

ನವಿರಾಗಿಸಿ ನಿನ್ನ ಕಳೆದ ಹಸಿರ ನೆನಪುಗಳ

ತಂದೆಯೇ ನಿನಗಿದೋ ಶತಕದ ನಮನ

ನೀನಾಗು ತಂದೆ ಮುಂದಿನ ಜನ್ಮದಲೆಲ್ಲ


Tuesday, September 7, 2021

Katopanishad

 ಮರಣೋತ್ತರ ಮನುಷ್ಯನ ಬದುಕು ಹೇಗಿರತ್ತೆ ? ಆತ್ಮವು ಎಲ್ಲಿಗೆ ಹೋಗುವನು ? ಕಠೋಪನಿಷತ್ ನಲ್ಲಿ   ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಆತ್ಮ ವಿದ್ಯೆಯ ಪರಮ ರಹಸ್ಯ.. ?


"ಸಾವು" ಈ ಶಬ್ದ ಎಂತಹ ಮಹಾನ್ ವ್ಯಕ್ತಿಗಳನ್ನೂ ಬಿಟ್ಟಿಲ್ಲ. ಇದು ಗೊತ್ತಿದ್ದರೂ ಮನುಷ್ಯ ಗೊತ್ತಿಲ್ಲದಂತೆ ಬದುಕುವನು. ನ್ಯಾಯ ಅನ್ಯಾಯಗಳ ಮೂಲಕ ಯಥಾಯೋಗ್ಯ ಕರ್ಮಗಳನ್ನು ಸಂಪಾದಿಸುವನು. ಇರಲಿ. ಬದುಕು ಮುಗಿದ ಮೇಲೆ ಅದು ದೇಹ ಮಾತ್ರ. ಸಾವಿನೊಂದಿಗೆ ವ್ಯಕ್ತಿಯ ಹೆಸರೂ ಸಹ ಸಾಯುವುದು. ಎಲ್ಲರಲ್ಲಿಯೂ ಒಂದು ಅನುಮಾನ. ಸಾವಿನ ಬಳಿಕ ದುಃಖ ಒಂದೆಡೆ ಯಾದರೆ ಮರೋಣೋತ್ತರ ಬದುಕು ಹೇಗಿರತ್ತೆ ಎಂಬುವುದು.  ಆತ್ಮ ವಿದ್ಯೆಯ ಕುರಿತು ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಪರಮ ರಹಸ್ಯವಾದ ಆತ್ಮವಿದ್ಯಾ ರಹಸ್ಯ ಈ ಲೇಖನದಲ್ಲಿ ವಿವರಿಸುವೆ.( ನಚೀಕೇತ ಯಾರೆಂದು ಬಳಿಕ ತಿಳಿಸುವೆ )


ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಆತ್ಮವಿದ್ಯೆಯ ರಹಸ್ಯ ಹೇಳುವನು... 


ರವಿ,ಚಂದ್ರ,ಅಗ್ನಿ,ವಾಯು,ಆಕಾಶ,ಭೂಮಿ,ಜಲ ಇವೆಲ್ಲವೂ ಯಮ ರಾಜನ ಹೃದಯಗಳು.ಹಗಲು ಮತ್ತು ರಾತ್ರಿಗಳು ಯಮರಾಜನಿಗೆ ಮಾನವನ ವೃತ್ತಾಂತವನ್ನು ತಿಳಿಸುವರು.ಜೀವಿಯು ಗತಿಸಿದ ಮೇಲೆ ಒಂದು ವರ್ಷದ ಪರ್ಯಂತ ಧೀರ್ಘ ಪ್ರಯಾಣ ಮಾಡಿ ಯಮಲೋಕವನ್ನು ತಲುಪುವನು. ದಿನಕ್ಕೆ 2470 ಯೋಜನದಂತೆ 86,000 ಯೋಜನ ದೂರ ಯಮಲೋಕವಿದೆ. ದೇಹ ತ್ಯಜಿಸಿದ 10 ದಿನಗಳವರೆಗೂ ಸ್ಥೂಲಕಾಯ ದಿಂದ( ದೇಹದಿಂದ) ಬೇರ್ಪಟ್ಟ ಜೀವಿಯು ಹಸ್ತ ಪ್ರಮಾಣದಷ್ಟೇ ಬೆಳೆಯುವನು. ಬಳಿಕ ಮುಂದೆ ಯಮಲೋಕ ದಲ್ಲಿಒಂದು ವರ್ಷದ ಬಳಿಕವಷ್ಟೇ ಅಂಗುಷ್ಠ ಪ್ರಮಾಣದಲ್ಲಿ ಬೆಳೆದು ಯಮಭೋಗ ವನ್ನು ಕರ್ಮಾನು ಸಾರವಾಗಿ ಭೋಗಿಸುವನು. 


ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ !

ಅಭುಕ್ತ್ವಾ ಯಾತನಾಂ ಜಂತುರ್ಮಾನುಷಂ ಲಭತೇ ನಹಿ !!


ನೂರು ಕೋಟಿಕಲ್ಪ ಕಾಲವಾದರೂ ಕರ್ಮಫಲವು ಅನುಭವಿಸಿದಲ್ಲದೇ ಅದು ಎಂದೆಂದೂ ಬಿಡದು.(ದೇವತೆಗಳಿಗೂ ಇದು ಬಿಟ್ಟಿಲ್ಲ ಸ್ವತಃ ಯಮರಾಜನು ಅಣುಮಾಂಡವ್ಯ ಋಷಿಗಳ ಶಾಪಕ್ಕೆ ತುತ್ತಾಗಿ ವಿದುರನಾಗಿ ಜನ್ಮವೆತ್ತಿದ ಕಥೆಯೂ ಇದೆ) ಹಾಗೆಯೇ ಯಾತನೆ ಯನ್ನು ಅನುಭವಿಸದೇ ಜೀವಿಗೆ ಮನುಷ್ಯ ಜನ್ಮ ಲಭ್ಯವಿಲ್ಲ.ಸತ್ತ ಜೀವಿಗೆ ಪಿಂಡ ಪ್ರಧಾನ ಏಕೆಂದರೆ 10 ದಿನಗಳಲ್ಲಿ ಸೂಕ್ಷ್ಮ ದೇಹ ನಿರ್ಮಾಣವಾಗಿ ಜೀವಿಗೆ ಯಮಪುರಿ ಸೇರಲು ಶಕ್ತಿ ಸಿಗುವುದು. ಪಿಂಡ ಪ್ರಧಾನ ಕಾರ್ಯಗಳು ಮಾಡದಿದ್ದಲ್ಲಿ ಆತ್ಮವು ಪ್ರೇತವಾಗಿ ಅಲೆದಾಡಬೇಕಾಗುತ್ತದೆ. 5 ನೇ ತಿಂಗಳಲ್ಲಿ ಯಮ ಕಿಂಕರರು ಜೀವಿಗೆ ದಾರಿ ಮಧ್ಯೆ ವಿಶ್ರಾಂತಿ ನೀಡುವರು.6ನೇ ತಿಂಗಳಲ್ಲಿ ಆತ್ಮವು ವೈತರಣಿ ನದಿ ದಾಟುವುದು.(ದಕ್ಷನ ಯಜ್ಞದಲ್ಲಿ ದಾಕ್ಷಾಯಣಿಯು ದೇಹ ತ್ಯಾಗ ಮಾಡಿದಾಗ ಆ ನೋವಿನಲ್ಲಿ ರುದ್ರನು ಹರಿಸಿದ ಕಣ್ಣೀರಿನ ನದಿ ಯೇ ಈ ವೈತರಣಿ ನದಿಯಾಯಿತು). ಬಳಿಕ ಆತ್ಮವು ಯಮಪುರಿ ಸೇರುವುದು. ಇದೊಂದು ಧೀರ್ಘ ಪ್ರಯಾಣವೇ ಹೌದು.


ಮೊದಲು ಮನುಷ್ಯನ  ಕರ್ಮಾಕರ್ಮಗಳ ವಿಚಾರಣೆ ನಡೆಯುವುದು ಅದು ಯಮಪುರಿಯಲ್ಲೇ. ಯಮಲೋಕವಿರುವುದು ನರಕದಲ್ಲೇ.. ನರಕಗಳು ಭೂಮಿಯಿಂದ ದಕ್ಷಿಣ ದಿಕ್ಕಿಗೆ ನೀರಿನ ಮೇಲೆ ನಿಂತಿದೆ. ಇಲ್ಲಿಯೇ ಪಿತೃ ದೇವತೆಗಳ ವಾಸ.ಇಲ್ಲಿಂದಲೇ ಪಿತೃಗಳು ಕಾಲಕಾಲಕ್ಕೆ ತಮ್ಮ ವಂಶಜರು ನೀಡುವ ತರ್ಪಣಗಳನ್ನು ಸ್ವೀಕರಿಸಿ( ವರ್ಷಂ ಪ್ರತೀ ) ತಮ್ಮ ವಂಶದಲ್ಲಿ ಹುಟ್ಟುವವರಿಗೆ ಮಂಗಳವಾಗಲಿ ಎಂದು  ಹಾರಸುತ್ತಿರುತ್ತಾರೆ. ನರಕಾಧಿಪತಿ ಯಮಧರ್ಮನಾಗಿದ್ದು ಮೃತ ಜೀವಿಗಳ ಪಾಪ-ಪುಣ್ಯಕ್ಕನುಗುಣ ವಾಗಿ 21 ನರಕಗಳಲ್ಲಿ ಶಿಕ್ಷೆ ವಿಧಿಸುವನು. ತಾಮಿಸ್ರ,ಅಂಧ ತಾಮಿಸ್ರ,ರೌರವ,ಮಹಾ ರೌರವ, ಕುಂಭಿಪಾಕ,ಕಾಲಸೂತ್ರ, ಅಸಿಪತ್ರವನ ಇತ್ಯಾದಿ. ಇದಲ್ಲದೇ ಸೌಮ್ಯ, ಸೌರಿ ಪುರ, ನಗೇಂದ್ರ ಭವನ,ಕ್ರೌಂಚ,ವಿಚಿತ್ರ ಭವನ,ಶೀತಾಢ್ಯಬಹುಭೀತಪುರ, ಧರ್ಮ ಭವನ ಇತ್ಯಾದಿ( ಈ ಲೋಕದ ಕುರಿತು ಗರುಡ ಪುರಾಣದಲ್ಲಿ ಪ್ರತ್ಯೇಕ ವಿವರಣೆ ಇದೆ) . ಭೂಮಿಯಲ್ಲಿ ಮಾಡಿದ ಪಾಪ ಪುಣ್ಯಗಳಿಗೆ ಅನುಸಾರವಾಗಿ ಫಲಗಳನ್ನು ಅನುಭವಿಸಿ ಬಳಿಕ ಪುಣ್ಯಾಂಶಗಳಿಗೆ ಅನುಸಾರವಾಗಿ ಸ್ವಗಕ್ಕೆ( ವೈಕುಂಠ ಅಥವಾ ಕೈಲಾಸ) ಕ್ಕೆ ತೆರಳುವನು.ಬಳಿಕ ಸ್ವರ್ಗದಲ್ಲಿ ಪುಣ್ಯಾಂಶ ಅನುಭವಿಸಿದ ಬಳಿಕ ನಿಗದಿತ ಯೋನಿಯೊಂದರಲ್ಲಿ ಮತ್ತೆ ಕರ್ಮಾನುಸಾರ ಭೂಮಿಗೆ ಮರಳುವನು.


ಜೀವಿಯು ಬದುಕಿರುವಾಗ ಋಣದಲ್ಲೇ ಬದುಕುವನು... ಮೃತಪಟ್ಟ ಬಳಿಕವೂ ಸಂಪಾದಿತ ಋಣವನ್ನು ಅನುಭವಿಸಲೇ ಬೇಕು. ಮಾನವನ ಜನ್ಮ ಬರುತ್ತಲೇ 3 ಋಣ( ಪಿತೃ ಋಣ,ಋಷಿ ಋಣ,ದೇವ ಋಣ) ಗಳು ಅವನನ್ನು ಅಂಟಿಕೊಳ್ಳುವುದು. ಇವುಗಳಲ್ಲಿ ತಮ್ಮ ಕುಲ ಗುರುಗಳ( ಮಠ ಅಥವಾ ಗುರು ಪೀಠ) ಸೇವೆ ಮಾಡಿಯೂ ಋಷಿ ಋಣವನ್ನು ಹಾಗೂ ಹೋಮ ಹವನ ಆಹುತಿಗಳ ಮೂಲಕ ದೇವ ಋಣವನ್ನು ಸುಲಭದಲ್ಲಿ ತೀರಿಸಬಹುದು. ಆದರೆ ಪಿತೃ ಋಣ ಎಂಬುವದು ಮಾತ್ರ ಮನುಷ್ಯನಾದವನು ತೀರಿಸುವುದು ಬಲು ಕಷ್ಟ. ಶಾಸ್ತದಲ್ಲಿ ಮಾತ್ರ ದೇವೋ ಭವ, ಪಿತೃ ದೇವೋಭವ ಎಂದು ಮೊದಲೆರಡು ಸ್ಥಾನಗಳನ್ನು ಪಿತೃರಿಗೆ ನೀಡಲಾಗಿದೆ. ನವ ಮಾಸ ಹೊತ್ತು ಹೆತ್ತು ಸಲಹುವ ತಾಯಿ, ತನಗೆ ಕಷ್ಟವಿದ್ದರೂ ತಾನು ತಿನ್ನುವುದನ್ನು ಮಕ್ಕಳಿಗೆ ಕೊಟ್ಟು ತನ್ನ ತೋಳಿನಲ್ಲಿ ಪ್ರೀತಿ ಕೊಟ್ಟು ಬೆಳೆಸುವ ತಂದೆಯ ಪ್ರೀತಿಗೆ ಅಥವಾ ಋಣಕ್ಕೆ ಸಾಟಿ ಉಂಟೇ ? ಇನ್ನು ಇವರ ತ್ಯಾಗ,ಪ್ರೀತಿಯ ಋಣ ಮಕ್ಕಳಿಗೆ ಜನ್ಮ ಜನ್ಮಾಂತರದ ವರೆಗೂ ಭಾಧಿಸುವುದು. ತಂದೆ, ತಾಯಿಯರು ವೃದ್ಥಾಪ್ಯದಲ್ಲಿದ್ದಾಗ ಅವರ ಸೇವೆ ಮಾಡುವದೇ ನಿಜವಾದ ಪಿತೃ ಋಣ ತೀರಿಸುವುದು ಎಂದರ್ಥ. ಸಾವಿನ ಬಳಿಕ ತಮ್ಮ ಪಿತೃಗಳ ಈಡೇರದ ಆಸೆಗಳೇನಿದ್ದರೂ ಅದನ್ನು ಪೂರೈಸುವುದು ಇದುವೇ ನಿಜವಾದ ಶೃದ್ದ. ಜೀವಿತಾವಧಿಯಲ್ಲಿ ಪಿತೃಗಳನ್ನು ವೃಧ್ಧಾಶ್ರಮಕ್ಕೆ ಸೇರಿಸಿ ಪಿತೃಗಳು ಸತ್ತ ಬಳಿಕ ಶ್ರಾದ್ದ ಮಾಡಿಸಿದರೆ ಅದು ಬೂಟಾಟಿಕೆ ಆಗುವುದು ವಿನಹ ಶ್ರಾದ್ದವಾಗುವುದಿಲ್ಲ. ಶಾಸ್ತ್ರಗಳಲ್ಲಿ  ಪಿತೃಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಪಿತೃಗಳಿಗೆ ಸದ್ಗತಿ ನೀಡದೇ ನಾನಾ ದೇವಾಲಯದಲ್ಲಿ ಪೂಜೆ ಪುರಸ್ಕಾರ ಹೋಮ ಎಂದು ಅಡ್ಡಾಡಿದರೆ ಇದೇ ಪಿತೃಗಳು ದೇವತೆಗಳ ಆಶೀರ್ವಾದವೂ ನಿಮಗೆ ಸಿಗದಂತೆ ಅಡ್ಡಿ ಮಾಡುವರು. ಈ ಅಧಿಕಾವನ್ನು ದೇವತೆಗಳೇ ಪಿತೃರಿಗೆ ನೀಡಿದ್ದಾರೆ. ಯಾವ ಮಕ್ಕಳು ಜೀವಿತಾವಧಿ ಯಲ್ಲಿ ವೃದ್ದ ಪಿತೃಗಳ ಸೇವೆ ಮಾಡುವರೋ ಅವರಿಗೆ ಯಾವ ಕರ್ಮಗಳೂ ಅಂಟಿಕೊಳ್ಳಲಾರದು ಬಳಿಕ ಅವರು ಪರಮಪದ ಸೇರುವರು.


ಇನ್ನು 3 ಸ್ಥಳಗಳಿಗೆ ಪಿತೃ ಶ್ರಾದ್ದ ಪರಮ ಶ್ರೇಷ್ಠ ಎಂದು ಹೇಳಲಾಗಿದೆ. ಕಾಶಿ ವಿಶ್ವನಾಥನ ಗಂಗಾ ಸನ್ನಿಧಿ, ತ್ರಿವೇಣಿ ಸಂಗಮ್ ಹಾಗೂ ವಿಷ್ಣು ಪಾದ್ ದೇವಾಲಯ, ಗಯಾ ( ಬಿಹಾರ) . ಈ 3 ಸ್ಥಳಗಳಲ್ಲಿ ಯಾರು ತಮ್ಮ ಪಿತೃಗಳಿಗೆ ಸರ್ವ ಪಿತೃ ಶ್ರಾದ್ದ ಮಾಡಿ ಪಿಂಡ ಪ್ರಧಾನ ತರ್ಪಣಗಳನ್ನು ಬಿಡುವರೋ ಅಂತಹ ಪಿತೃಗಳು ಕರ್ಮದ ಪೊರೆಯಿಂದ ಬಹು ಬೇಗನೇ ಸ್ವರ್ಗ ಸೇರುವರು. 


ಜೀವತೋರ್ವಾಕ್ಯ ಕಾರಣಾತ್ ವರ್ಷಾಣಿತೆ ಭುವಿ ಭೋಜನಾತ್ !

ಗಯಾಯಾಂ ಷಿಂಡ ದಾನಚ್ಛ ತ್ರಿಭಿಃ ಪುತ್ರಸ್ಯ ಪುತ್ರತಾ !!


ಗಯಾ ಪಿಂಡ ಪ್ರಧಾನದ ಕುರಿತು ಶಾಸ್ತ್ರ ವಾಕ್ಯ ಪ್ರಮಾಣವಾಗಿದೆ.


( ಸರ್ವ ಪಿತೃ ಶ್ರಾದ್ದ ವೆಂದರೆ ತಮ್ಮ ವಂಶಜರಲ್ಲಿ ಗೊತ್ತಿದ್ದವರು ಮತ್ತು ಗೊತ್ತಿಲ್ಲದೇ ಮೃತಪಟ್ಟವರು ಮತ್ತು ವಂಶಜರ ಮನೆಯಲ್ಲಿ ಅಸುನೀಗಿದ ಸಾಕು ಪ್ರಾಣಿಗಳಿಗೂ ಈ ಕಾರ್ಯಲ್ಲಿ ಪಿತೃಗಳ ಜೊತೆಯಲ್ಲಿ ಅವರಿಗೂ ಸದ್ಗತಿ ದೊರೆಯುವುದು).


ಯಮಪುರಿಯಲ್ಲಿ ಯಮನು ಆತ್ಮನನ್ನು ಕೇಳುವನು ? ನಿನಗೆ ಕೊಟ್ಟ ದೇಹದಲ್ಲಿ ಕೈ ಕಾಲು ಇದೆ ನೋಡಲು ಕಣ್ಣು ಕೊಟ್ಟೆ ನೀನು ಏನು ಮಾಡಿದೆ ಎಂದು. ಅದಕ್ಕೆ ಉತ್ತರಿಸಲು ನಮ್ಮಲ್ಲಿ ಉತ್ತಮ ಉದಾಹರಣೆ ಇರಲಿ. ಸಜ್ಜನರ ಸಹವಾಸ, ದಾನ ಧರ್ಮ, ಹೋಮ ಹವನ, ಸಮಾಜ ಸೇವೆ ಹೀಗೆ ನಾನಾ ವಿಧಿಯಲ್ಲಿ ಭಗವಂತನ ಸೇವೆ ಮಾಡಿದರಷ್ಟೇ ಯಮನ ಪ್ರಶ್ನೆಗೆ ಉತ್ತರಿಸಬಹುದಾಗಿದೆ. 


ಇನ್ನು ನರಕಾಧಿಪತಿ ಯಮನಿಂದ ಆತ್ಮ ವಿದ್ಯೆಯ ರಹಸ್ಯ ತಿಳಿದ ನಚೀಕೇತನ ಕಥೆ..


ನಚೀಕೇತ ಗೋತಮ ವಾಜಶ್ರವಸ್ಸು ಎಂಬ ರಾಜನ ಮಗ. ಸ್ವರ್ಗ ಪಡೆಯಲು ನಚೀಕೇತನ ತಂದೆ ವಿಶ್ವಜಿತ್ ಯಾಗ ಮಾಡಿಸಿ ತನ್ನಲ್ಲಿ ರುವುದನ್ನೆಲ್ಲ ದಾನ ಮಾಡಿದ. ರಾಜನಾದ ತನ್ನ ತಂದೆಯು  ತನ್ನಲ್ಲಿರುವ ಸಣಕಲು ಗೋವು ಗಳನ್ನು ದಾನ ಮಾಡುತ್ತಿರು ವುದನ್ನು ನಚೀಕೀತ ಪ್ರಶ್ನಿಸುವನು. ಸಣಕಲು ದೇಹದ ಗೋವುಗಳಿಂದ ದಾನ ಮಾಡಿ ಏನು ಪ್ರಯೋಜನ ? ದಾನ ಪಡೆದವರಿಗೆ ಹೊರೆಯಾಗುವುದು ಎನ್ನಲು ತಂದೆಯು ಕೋಪಗೊಂಡು ನನಗೆ ಬುದ್ದಿ ಹೇಳಲು ಬರಬೇಡ ಎಂದು ಗದರಿಸಿದನು. ನಚೀಕೇತ ಪಟ್ಟು ಬಿಡದೇ ನನ್ನನ್ನು ಯಾರಿಗೆ ದಾನ ಕೊಡುವೆ ಎನ್ನಲು ನಿನ್ನನ್ನು ಮೃತ್ಯುವಿಗೆ(ಯಮನಿಗೆ) ದಾನ ನೀಡುವೆ ಎಂದನು. ಇನ್ನು ತಾನು ಯಮನ ಪಾಲೆಂದು ಅರಿತ ನಚೀಕೇತ ತನ್ನ ಆತ್ಮ ಬಲದಿಂದ ಯಮಲೋಕಕ್ಕೆ ಹೊರಟನು. ಯಮನ ಮನೆ ಸಂಯಮಿಯನ್ನು ಸೇರಿದಾಗ ಯಮನು ತನ್ನ ತಂಗಿ ಯಮುನೆಯ ಮನೆಗೆ ಹೋಗಿದ್ದು ವಾಪಾಸ್  ಬರಲು 3 ದಿನ ತಡವಾಯಿತು. ಯಮ ಬಂದವನೇ ಅವನ ಮನೆ ಬಾಗಿಲಿನಲ್ಲಿ 3ದಿನಗಳಿಂದ ಕಾಯುತ್ತಿದ್ದ ನಚೀಕೇತನನ್ನು  ನೋಡಿ ಅವಕ್ಕಾದನು. ಮೃತ್ಯುವಿನ ಮನೆಗೆ ಅಳುಕ್ಕಿಲ್ಲದೇ ಬಂದಿದ್ದೇಯಾ. ನನಗಾಗಿ ಕಾದಿದ್ದೀಯಾ..? ನನ್ನ ಹೆಸರೇಳಿದರೇ  ಜನರು ತಿರುಗಿ ನಿಲ್ಲುವರು. ನಿನ್ನ ಧೈರ್ಯಕ್ಕೆ ಮೆಚ್ಚಿ ವರ ಕೇಳು ಅಂದಾಗ ಆತ್ಮ ವಿದ್ಯಾ ರಹಸ್ಯ(ಮರಣೋತ್ತರ ಜೀವನ) ತಿಳಿದು ಸಜೀವವಾಗಿ ಭೂಮಿಗೆ ಬಂದು ಬಾಲ ಜ್ಞಾನಿಯಾಗಿ ಹೆಸರುಪಡೆದನೇ ಈ ನಚೀಕೇತ.


"ದುರ್ಲಬಂ ಮಾನುಷ್ಯ ಜನ್ಮಂ" ಎಂಬಂತೆ ದುರ್ಲಭವಾದ ಮನುಷ್ಯ ಜನ್ಮದಲ್ಲಿ ಮೃತ್ಯುವು ಯಾವಾಗ ಬೇಕಾದರೂ ಬರಬಹುದು. ದೇವರು ಕೊಟ್ಟ ಸಮಯದಲ್ಲಿ 4 ಒಳ್ಳೆಯ ಕೆಲಸ ಮಾಡಿ ಕರ್ತವ್ಯಗಳನ್ನು ಪಾಲಿಸಿ ಕೀರ್ತಿವಂತರಾ ಗುವುದು(ಅಮರರಾಗುವದು) ಒಳಿತು. ಪುನರಪಿ ಜನನಂ.. ಪುನರಪಿ ಮರಣಂ ಎಂದು ಭಗವತ್ಪಾದರು ಹೇಳಿದಂತೆ ಜೀವನ ಮರಣ ಯಾರಿಗೂ ತಪ್ಪಿದ್ದಲ್ಲ ಇಲ್ಲಿ ಅಂದರೆ ಜೀವಿತಾವಧಿಯಲ್ಲಿ ಹಾಗೂ ಮರಣೋತ್ತರ ಜೀವನದಲ್ಲಿ ನಮ್ಮ ಒಳಿತು ಕೆಡುಕು ನಿರ್ಧರಿಸುವುದು ನಮ್ಮ ಕರ್ಮವೇ ಹೊರತು ಬೇರೇ ಅಲ್ಲ....

Thursday, September 2, 2021

Gajendra moksha

 ಮದಿಸಿದ ಆನೆಯೊಂದು ತೆರಳಿತು

ಕೆರೆಯಬಳಿ ದಾಹ ಆರಿಸಲು

ನೀರಕುಡಿಯಲೆಂದು ಗರ್ಜಿಸುತ

ಇಳಿಸುತ ಸೊಂಡಿಲ ನೀರ ಹೀರಲು


ಸಿಕ್ಕಿತೊಂದು ಬಲಿ ಎಂದು ಧಾವಿಸಿತು

ಮೊಸಳೆಯೊಂದು ವೇಗದಲಿ ನೀರಿನಲಿ

ಹಿಡಿಯಿತು ಆನೆಯ ಸೊಂಡಿಲನು

ಎಳೆಯುತ ನೀರಿನಂಚಿಗೆ ಭದ್ರವಾಗಿ


ಆನೆ  ಸೆಣಸಾಡಿತು ಬಿಡಿಸಿಕೊಳ್ಳಲು

ಕೂಡಿದವು ಆನೆಗಳಹಿಂಡು ಜೊತೆಯಾಗಿ

ಎಳೆದವು ಬಲದಿಂದ ಕೂಗಿತು ನೋವಿನಲಿ

ಹರಿಯಿತು ನೆತ್ತರು ಸೊಂಡಿಲಿನಿಂದ


ಬಳಲಿತು ಆನೆ ನೋವಿನಲಿ ಕಂಗೆಟ್ಟಿತು

ಊಳಿಟ್ಟಿತು ನಾರಾಯಣ ಎಂದು 

ಗಜೇಂದ್ರನ ಕೂಗಿಗೆ ಧಾವಿಸಿದನು

ಹರಿ ತುರಗವನೇರಿ ಚಕ್ರವ ಹಿಡಿದು


ಹರಿಸಿದನು ಚಕ್ರವನು ಮೊಸಳೆಯತ್ತ 

ತುಂಡರಿಸಿತು ಮೊಸಳೆಯ ಶಿರವನು

ಆನೆ ಆನಂದ ಭಾಷ್ಪ ಹರಿಸಿತು ನಮಿಸುತ

ನಾನಿರುವೆ ಅನನ್ಯದಲಿ ಭಜಿಸೆ ಎಂದ ಹರಿ







Popular Slokas in Kannada

 ಶುಕ್ಲಾಂಭರಧರಂ ವಿಷ್ಣುಂ 

ಶಶಿವರ್ಣಂ ಚತುರ್ಭುಜಂ

ಪ್ರಸನ್ನವದನಮ್ ಧ್ಯಾಯೇತ್

ಸರ್ವ ವಿಘ್ನೋ ಪ ಶಾಂತಯೇ


ಶ್ವೇತ ವಸ್ತ್ರ ಅಲಂಕೃತ ವಿಷ್ಣುವೇ

ಶಶಿ ವರ್ಣವುಳ್ಳ ಚತುರ್ಭುಜ ನೇ

ನಗುಮುಖದಿಂದ ಕೂಡಿದವನೆ

ಧ್ಯಾನಿಸುವೆ ಎಲ್ಲ ವಿಘ್ನ ನಿವಾರಿಸು


ಅಗಜಾನನ ಪದ್ಮಾರ್ಕಂ

ಗಜಾನನ ಮಹರ್ನಿಶಂ

ಅನೇಕದಂತಮ್ ಭಕ್ತಾ ನಾಂ

ಏಕದಂತಮ್ ಉಪಾಸ್ಮಹೇ


ಗೌರೀ ವದನವ ಅಹರ್ನಿಶಿ ಪದ್ಮದಂತೆ

ಅರಳಿಸುವ ಗಜಾನನನೆ 

ಭಕ್ತರ ಅಭೀಷ್ಟಗಳ ನೆರವೇರಿಸುವ

ಏಕದಂತನೆ ನಿನ್ನ ಉಪಾಸಿಸುವೆ.


ವನಮಾಲಿ ಗಧೀ ಶಾರಂಘೀ

ಶಂಖೀ ಚಕ್ರೀ ಚ ನಂದಿಕೀ

ಶ್ರೀಮಾನ್ ನಾರಾಯಣೋ ವಿಷ್ಣು,:

ವಾಸುದೇವ: ಅಭಿರಕ್ಷತು


ವನಮಾಲಿಯೂ,ಗಧೆ, ಶಾರಂಗಬಿಲ್ಲು

ನಂದಿಕೀಖಡ್ಗ ,ಶಂಖ ಚಕ್ರ ಧಾರಿಯೂ

ಶ್ರೀಮನ್ ಮಹಾವಿಷ್ಣುವು ವಾಸುದೇವನು

ನಮ್ಮನ್ನು ಸದಾಕಾಲ ರಕ್ಷಿಸಲಿ


ಸರಸ್ವತೀ ನಮಸ್ತುಭ್ಯಂ ವರದೇ

ಕಾಮರೂಪಿನೀಂ

ವಿದ್ಯಾರಂಭಂ ಕರಿಷ್ಯಾಮಿ

ಸಿದ್ಧಿ: ಭವತು ಮೇ ಸದಾ


ಕಾಮರೂಪಿನೀ ಇಷ್ಟಾರ್ಥ

ದಾಯಿನೀ ಸರಸ್ವತಿಯೇ ವಂದನೆ

ವಿದ್ಯೆ ಆರಂಭಿಸುವೇ ಅದು

ಸದಾ ಸಿದ್ಧಿಸುವಂತೆ ಮಾಡು


ಕರಾಗ್ರೆ  ವಸತೇ ಲಕ್ಷ್ಮಿ

ಕರಮಧ್ಯೆ ಸರಸ್ವತೀ

ಕರಮೂಲೆ ಸ್ಥಿತೇ ಗೌರೀ

ಪ್ರಭಾತೆ ಕರದರ್ಶನಮ್


ಕೈ ತುದಿಯಲಿ ವಾಸಿಸುವ ಲಕ್ಷ್ಮಿ

ಕೈ ಮಧ್ಯದಲಿ ಸರಸ್ವತಿಯು

ಕೈ ತಳದಲ್ಲಿ ಗೌರಿಯೂ ಇರುವ

ಕೈ ದರ್ಶನ ಪ್ರಭಾತದಲ್ಲಿ ಅವಶ್ಯ


 ಜ್ಞಾನಾನಂದ ಮಯಂ ದೇವಂ

 ನಿರ್ಮಲ ಸ್ಫಟಿಕ ಆಕೃತಿಂ

 ಅಧಾರಂ ಸರ್ವ ವಿದ್ಯಾ ನಾಮ್

 ಹಯಗ್ರೀವ ೦ ಉಪಾಸ್ಮಹೆ


ಜ್ಞಾನ ಆನಂದ ದಿಂದ ಕೂಡಿದ

ಶುಭ್ರ ಸ್ಫಟಿಕ ಆಕೃತಿಯುಳ್ಳ

ಎಲ್ಲ ವಿದ್ಯೆಗೂ ಆಧಾರನಾದ

ಹಯಗ್ರೀವ ನನ್ನು ಉಪಾಸಿಸುವೆ


Saturday, July 24, 2021

ಶ್ರದ್ಧಾಂಜಲಿ

  ಅಗಲಿ ವರುಷವಾಯಿತು

ಮರೆಯೆ ನಾ ಭಾಷ್ಪದ ಕಣ್ಗಳ

ಹೋರಾಡಿದೆ ನೋವೆಲ್ಲಾ ನುಂಗಿ

ಕಳೆಯೇ ಕೆಲವು ವರ್ಷ ಮೊಮ್ಮಕ್ಕಳೊಂದಿಗೆ


ವಿಧಿ ಬಿಡಲಿಲ್ಲ ನೀ ಎಳೆದೆ ಕೊನೆ ಉಸಿರ

ನಮ್ಮನು ಕಣ್ಣೀ ರಲ್ಲಿ ಮುಳುಗಿಸಿ

ನಿನ್ನ ನೆನಪು ಮಾತ್ರ ಚಿರಕಾಲ ಉಳಿಸಿ

ಮಕ್ಕಳನು ತಬ್ಬ ಲಿ ಯಾಗಿರಿಸಿ


ಪ್ರೇಮವನು ಧಾರೆಯೆರೆದು ಬೆಳೆಸಿದೆ

ಬಂಧುಗಳಲ್ಲಿ ಅಮಿತಾದರವ ತೋರಿಸಿ

ಪ್ರಿಯವಾದೆ ಸ್ನೇಹಿತರಿಗೆ ಬಾಂಧವರಿಗೆ

ಪೋಷಿಸಿದೆ ಮೊಮ್ಮಕ್ಕಳ ಪಾಶ ದಿಂದ


ಕಲಾ ಕಳೆದ ನಿನ್ನ ನೆನಪು ಹಸಿರೆಂದೂ 

ಕಳೆದಿಹೆನು ನೀನಿತ್ತ ಪ್ರೇಮ ಕುಡಿಗಳೊಂದಿಗೆ

ಆಡುತಲಿ ಮೊಮ್ಮಕ್ಕಳೊಂದಿಗೆ ನೆನೆಯುತ

ಸಂತಸದ ಆ ಯೌವನದ ದಿನಗಳ


ಇರಲಿ ನಿನ್ನ ಆತ್ಮ ಚಿರ ಶಾಂತಿಯಲ್ಲಿ

ಪರಮಾತ್ಮನಲ್ಲಿ ಲೀನವಾಗಿ ಎಂದೂ

ಸಿಗಲಿ ಪರಮಪದ ಮರಳಿ ಬಾರದೆ

ಪ್ರಾರ್ಥಿಸುವೆ ಶ್ರೀಕಾಂತನಲಿ ಎದೆತುಂಬಿ

ಶರಣಾಗತಿ

 ನಾರಾಯಣ ಗೋವಿಂದ ಮಾಧವ

ನೀನೇ ನನಗೆ ತಂದೆ ತಾಯಿ ಬಂಧು

ಮಿತ್ರನೂ ನೀನೇ ಬಳಗವೂ ನೀನೇ

ಶರಣಾಗಿರುವೆ ತಂದೆ ದಾರಿ ತೋರಿಸು


ತಪ್ಪ ಎಸಗದಂತೆ ಕರ್ಮದಲಿ ಇರಿಸು

ಬೇಡ ಫಲಾಪೇಕ್ಷೆ ನಡೆವೆನು ನಿನ್ನಿರಿಸಂತೆ

ಇರಿಸು ಎನ್ನನು ಸದಾ ನಿನ್ನ ಧ್ಯಾನದಲ್ಲಿ

ಅಳಿಸು ಧ್ಯಾನಕೆ ಅಡ್ಡಿಯಾಗುವ ವಿಘ್ನವ


ಈ ಜಗ ನಿನ್ನದು ಸೂರ್ಯ ಚಂದ್ರರು ನೇತ್ರ

ಅಡಗಿಹುದು ವಿಶ್ವ ನಿನ್ನ ಉದರದಲಿ

ನಿಂತಿಹಳು ಲಕ್ಷ್ಮಿ ವಕ್ಷಸ್ಥಲದಲಿ ಚಿರವಾಗಿ

ಅಡಗಿಹರು ಇಂದ್ರಾದಿ ದೇವತೆಗಳು ಪಾದದಲಿ


ಸರ್ವಶಕ್ತನು  ನೀನು ಸರ್ವ ಅಂತರ್ಯಾಮಿ

ಸರ್ವ ಜನಕನು  ಪ್ರಳಯಕಾರಕನು ನೀನು ಕರುಣಾ ಮೂರ್ತಿಯೂ ಆಶ್ರಿತವತ್ಸಲನೂ ಅಮಿತ ಪ್ರೀತಿ ಭಕ್ತರಲಿ ಧಾವಿಸುವೆ ರಕ್ಷಿಸಲು


ಮರೆಯುವೆ ನೀ ಸರ್ವೇಶ್ವರನು ಎಂದು

ಕಾಯುವೆ ಬಾಗಿಲಲಿ ದ್ವಾರಪಾಲಕನಾಗಿ

ಹರಿಸುವೆ ಅಂಬರವ ಕೈ ಎತ್ತಿ ಕರೆಯಲು

ಗಿರಿಯಿಂದ ಉರುಳಿದವನ ಹಿಡಿಯೆ ಕೈಯಲಿ


ತಪ್ಪೆಸಗಿದ್ದರೆ ಮನ್ನಿಸು ಸೂತ್ರಧಾರ ನೀನು

ದಾರಿ ತೋರಿಸು ನಡೆಸು ಸನ್ಮಾರ್ಗದಲಿ

ನನಗಿಲ್ಲ ಬೇರಾರು ನೀನಲ್ಲದೆ ಗುರುವಾಗಿ

ಸದ್ಗತಿಯ ಅನುಗ್ರಹಿಸು ಜೀವದಂತ್ಯದಲಿ


ಶ್ರೀನಿವಾಸ ಪ್ರಸಾದ್.ಕೆ.ವಿ.

ಗುರು ಪೂರ್ಣಿಮೆ

 ಗುರುವಿನ ಗುಲಾಮನಾಗುವ ತನಕ

ದೊರಕದಣ್ಣ ಮುಕ್ತಿ ಎಂದರು ದಾಸರು

ನಡೆದೆ   ಕಾಡು ಮೇಡೆಗಳಲಿ ನಗರದಲಿ

ಅರಸುತ ಸದ್ಗುರುಗಳ ಸಂಧಿಗೊಂದಿನಲಿ


ಕಂಡೆ ಗುರುಗಳೆನಿಸಿದವರ ಬಂಗಲೆಗಳಲಿ

ರಾಜಕೀಯ ಧುರೀಣರ ಹಿಂದೆ ಮುಂದೆಯಲಿ

ಬೇಡವಾಗಿತ್ತು ದೇವರ ಚಿಂತನೆ ಮೊಗದಲಿ

ಬಯಸಿತ್ತು ಪದವಿಯ ಸಿರಿ ಸಂಪದವ


ನಡೆದಿದ್ದರು ಎಸಿ ಕಾರ್ಗಳಲಿ ಕಾವಿಯಲಿ

ಹಿಡಿದಿದ್ದರು ಕೈಯಲಿ ಬಣ್ಣದ ಕೈ ಚೀಲಗಳ

ತುಂಬಿಕೊಳಲು ಭಕ್ತರು ನೀಡುವ ಕಾಣಿಕೆಯ

ಗುರಿಯಿರಿಸಿ ಶ್ರೀಮಂತ ಸೌಧಗಳ ವ್ಯಕ್ತಿಗಳ


ನಡೆದಿಹುದು ಪೈಪೋಟಿ ಗುರುಗುರುಗಳಲಿ 

ಯಾರು ಹೆಚ್ಚು ಶ್ರೀಮಂತರೆಂದು ಸಿರಿಯಲಿ

ಭಕ್ತರು ಅರಸಿಬಂದರೆ ಅರಸುವುದು ಅವರ

ಕಾಣಿಕೆಯ ಗಾತ್ರವನು ಆಧರಿಸಿ ಹರಸಲು


ಮೆಚ್ಚನಾ ಹರಿ ಕಪಟಿ ಗುರುಗಳ ಬಹುಕಾಲ

ಕಳಚುವುದು ಮುಖವಾಡ ಮುಂದೊಂದು ದಿನ

ನಂಬದಿರಿ ಕಪಟ ಸನ್ಯಾಸಿಗಳ ಎಚ್ಚರವಿರಲಿ

ನಂಬಿ ಗುರು ಬ್ರಹ್ಮ ಗುರು ವಿಷ್ಣು ಮಹೇಶ್ವರ


Friday, March 12, 2021

ಡಾಕ್ಟರ್ ಟಿ. ವಿ. ಕಸ್ತೂರಿ

ಡಾಕ್ಟರ್ ಕಸ್ತೂರಿ ಮತ್ತು ನಮ್ಮ ತಂದೆ ಕಳಲೆ ವರದರಾಜ ಅಯ್ಯಂಗಾರ್ ಆಪ್ತ ಮಿತ್ರರು .ನಮ್ಮ ತಂದೆ ೧೯೪೨ ರಲ್ಲೀ ಒಂದು ಮುದ್ರಣಾಲಯ ಸ್ಥಾಪಿಸಿದರು.ಲಗ್ನಪತ್ರಿಕೆ ಮತ್ತು ನೋಟಿಸ್ ಗಳನ್ನು ಮುದ್ರಿಸುತ್ತಿದ್ದರು.೧೯೫೨ ರಲ್ಲಿ ನಾನು ಜನಿಸಿದೆ.ಆಗ ಡಾಕ್ಟರ್ ಕಸ್ತೂರಿಯವರ ಪರಿಚಯ ನಮ್ಮ ತಂದೆಗೆ ಆಯ್ತು.ಏಕೆಂದರೆ ನನ್ನ ಮಾತಮಹ ರವರ ಮನೆಯ ಹತ್ತಿರವೇ ಡಾಕ್ಟರ್ ಮನೆಯಿತ್ತು. ಆಗಾಗ್ಗೆ ಔಷದಿಗಾಗಿ ಡಾಕ್ಟರ್ ಬಳಿ ಹೋಗಬೇಕಿತ್ತು.ಕೆಲವೇ ದಿನಗಳಲ್ಲಿ ಪರಿಚಯ ಸ್ನೇಹವಾಗಿ ತಿರುಗಿತು.ಹೀಗೆ ಆರಂಭವಾದ ಸ್ನೇಹ ಮುಂದೆ ಗಾಡವಾಯಿತು. ಕಸ್ತೂರಿಯವರು ಆಯುರ್ವೇದ ವೈದ್ಯರಾಗಿದ್ದರು.ಅವರ ಸಹಯೋಗದಲ್ಲಿ ಡಾಕ್ಟರ್ ಜೆ.ಎಸ್.ರಾಮನ್ ಅವರು ಒಂದು ಮಾಸಿಕವನ್ನು ಪ್ರಕಟಿಸುತ್ತಿದ್ದರು.ಅದು ಬೇರೆಡೆ ಮುದ್ರಣ ಆಗುತ್ತಿತ್ತು.೧೯೫೫ ರಲ್ಲಿ ತಂದೆಯವರ ಮುದ್ರಣಾಲಯದಲ್ಲಿ ಪ್ರಕಟಣೆ ಆರಂಭವಾಯಿತು. ಕಛೇರಿ ತ್ಯಾಗರಾಜ ರಸ್ತೆಯ ವೇಣುಗೋಪಾಲ ದೇವಸ್ಥಾನದ ಎದುರು ಮಹಡಿಯ ಮೇಲೆ ಒಂದು ಸಣ್ಣ ಕೊಠಡಿಯಲ್ಲಿ ಇತ್ತು.ನಾನು ಸಣ್ಣವನು ಆಗ. ಪ್ರೂಫ್ ತೆಗೆದುಕೊಂಡು ಕಚೇರಿಗೆ ಹೋಗುತ್ತಿದ್ದೆ. ಸಮೀಪದಲ್ಲಿ ನನ್ನ ಅತ್ತೆಯ ಮನೆಯಿತ್ತು.ಪ್ರೂಫ್ ಸರಿಯಾದಮೇಲೆ ಅತ್ತೆಯ ಮನೆಗೆ ಹೋಗಿ ಕಾಫಿ ಕುಡಿದು ಮರಳುತಿದ್ದೆ.ಹೀಗೆ ಡಾಕ್ಟರ್ ನಮಗೆ ಸಮೀಪವಾಗತೊಡಗಿದರು. ಕುಟುಂಬದ ವೈದ್ಯರೂ ಆದರು. ಮನೆಯಲ್ಲಿಯೇ ಔಷಧ ಆಲಾಯ ಇತ್ತು.ನಮಗೆ ಸಣ್ಣ ನೆಗಡಿಯಾದರೂ ಅವರ ಮನೆಗೆ ಹೋಗಿ ಔಷದಿ ತರುತ್ತಿದ್ದೆವು.ಅವರ ಬಳಿ ಮೂರು ಬಣ್ಣದ ಬಾಟಲ್ ಗಳಿದ್ದವು. ಒಂದು ಕೆಂಪು. ಮತ್ತೊಂದು ಹಳದಿ.ಮೂರನೆಯದು ಪಿಂಕ್.ಮೂರನ್ನು ಕಲಸಿ ಔಷದಿ ಕೊಡುತ್ತಿದ್ದರು.ರುಚಿಯಾಗಿ ಇರುತಿತ್ತು. ಕುಡಿದೊಡನೆ ನೆಗಡಿ ಮಾಯವಾಗಿರುತಿತ್ತು.ಹೀಗೆ ಔಷಧಿಗಾಗಿ ಪದೇ ಪದೇ ಅವರ ಮನೆಗೆ ಹೋಗುತ್ತಿದ್ದೆ ವು. ಡಾಕ್ಟರ್ ಮಕ್ಕಳಾದ ರಾಮಪ್ರಸಾದ್, ಶ್ರೀನಿಧಿ, ನರಸಿಂಹ ಇವರ ಸ್ನೇಹವೂ ಆಯಿತು.ಡಾಕ್ಟರ್ ಪ್ರೆಸ್ಸಿಗೆ ದಿನಕ್ಕೆ ಎರಡು ಬಾರಿ ಬರುತ್ತಿದ್ದರು.ಅವರ ಕ್ಲಿನಿಕ್ ನಜರ್ಬಾದ್ ನಲ್ಲಿ ಇತ್ತು. ಕ್ಲಿನಿಕ್ ಮುಗಿಸಿ ಹಿಂತಿರುವಾಗ ಒಮ್ಮೆ  ಮನೆಗೆ ಬರುತ್ತಿದ್ದರು.

ಡಾಕ್ಟರ್ ಕಸ್ತೂರಿ ಅವರದ್ದು ಸರಳ ಸ್ವಭಾವ.ಅವರು ಸಜ್ಜನಿಕೆಯ ವ್ಯಕ್ತಿ. ಮೃದು ಭಾಷಿ.ಅಲ್ಪ ಭಾಷಿ ಕೂಡ. ದುಡ್ಡಿನ ದುರಾಶೆ ಇಲ್ಲ.ಬಡವರ ಬಗ್ಗೆ ವಿಶೇಷ ಕಾಳಜಿ. ಅವರಾಯಿತು ಅವರ ಮೊಪೆಡ್ ಆಯಿತು. ಮೊಪೆಡ್ ಏರಿದರೆ ಪ್ರೆಸ್ ಇಲ್ಲ ನಜರ್ಬಾದ್  ಕ್ಲಿನಿಕ್. ಅವರ ಮೊಪೆಡ್ಗೆ ಗೊತ್ತಿತ್ತು.  ಕ್ಲಿನಿಕ್ನಲ್ಲಿ ಯಾವಾಗಲೂ ಜನ ಜಂಗುಳಿ. ಕೆಲವೊಮ್ಮೆ ರಾತ್ರಿ ೧೦ ಆದರೂ ಜನ ಬರುತ್ತಿದ್ದರು.ಇವರು ಆಯುರ್ವೇದ ವೈದ್ಯ ಸಂಘದ ಸಂಚಾಲಕ ಆಗಿದ್ದರಿಂದ ಅನೇಕ ವೈದ್ಯರ ಪರಿಚಯ ಇವರಿಗಿತ್ತು.ಹೀಗಾಗಿ ತಂದೆಗೆ ಅನೇಕ ವೈದ್ಯರ ಸ್ನೇಹ ಆಯಿತು.ರಾಮನ್, ಕಮಲಾ ರಾಮನ್,ನಿಖಿಲ ಕರ್ನಾಟಕದ ನಿರ್ದೇಶಕ ನರಸಿಂಹ ಮೂರ್ತಿ ಹೀಗೆ ಹಲವಾರು.ಮಂದಿ.ತಂದೆಗೆ ಆಗಾಗ ತಿರುಪತಿಗೆ ಹೋಗುವ ಅಪೇಕ್ಷೆ. ಇದ್ದಕ್ಕಿದ್ದಂತೆ ಕಸ್ತೂರಿಯವರ ಜೊತೆ ರಾತ್ರಿ ಹೊರಟು ಬಿಡುತ್ತಿದ್ದರು.ಬೆಳಿಗ್ಗೆ ದೇವರ ದರ್ಶನ ಮಾಡಿ ಸಂಜೆಗೆ ವಾಪಸ್ಸಾಗುತ್ತಿದ್ದರು.

೧೯೬೨ ರಲ್ಲಿ ನಮ್ಮ ತಂದೆಗೆ ಒಂದು ಮಹಿಳಾ ಶಾಲೆ ತೆರೆಯಬೇಕು ಎಂದು ಯೋಚನೆ ಬಂತು. ಕಸ್ತೂರಿ ಅವರಲ್ಲಿ ಹೇಳಿದರು.ತಕ್ಷಣ ಬೆನ್ನು ತಟ್ಟಿ ಸಾವಿರ ರೂಪಾಯಿ ನೀಡಿದರು. ಡಾಕ್ಟರ್ ರಾಮನ್ ಅವರನ್ನು ಸೇರಿಸಿದರು. ಹೀಗೆ ಹತ್ತಾರು ಜನರ ಬೆಂಬಲಿಗರೊಂದಿಗೆ ಶ್ರೀ ಕಾಂತ ಸಂಸ್ಕೃತಿ ಸಂಘ ಆರಂಬಿಸಿದರು. ೧೯೬೩ ರ ಲ್ಲಿ ಶ್ರೀ ಕಾಂತ ಬಾಲಿಕಾ ಪ್ರೌಢಶಾಲೆ ತೆರೆದರು. ಈ ಶಾಲೆ ಇಂದು ಹೆಮ್ಮರ ವಾಗಿ ಬೆಳೆದಿದೆ.

೧೯೬೯ ರ ಲ್ಲೀ ನಮ್ಮ ತಂದೆ ಒಂದು ಸಂಸ್ಕೃತ ದಿನ ಪತ್ರಿಕೆ ಆರಂಭಿಸಲು ಸಂಕಲ್ಪಿಸಿ ದರು.ಕಸ್ತೂರಿ ಯವರು ಮತ್ತು ಕೆಲವು ಸ್ನೇಹಿತರು ಕೂಡಿ ಹೆಸರಿಡಲು ಚರ್ಚೆ ನಡೆಸಿದರು. ಅನೇಕ ದಿನಗಳ ಚರ್ಚೆಯ ನಂತರ ಹತ್ತು ಹೆಸರು ಸೂಚಿಸ ಲ್ಪಟ್ಟವು.ಹತ್ತು ಹೆಸರನ್ನು ಕೇಂದ್ರ ಸರ್ಕಾರದ ವಾರ್ತಾ ವಿಭಾಗಕ್ಕೆ ಕಳುಹಿಸಲಾಯಿತು.ಅದರಲ್ಲಿ ಸುಧರ್ಮ ಎಂಬ ಹೆಸರಿಗೆ ಅನುಮತಿ ದೊರೆಯಿತು.ಕಸ್ತೂರಿ ಯವರೂ ತಮ್ಮ ಕಾರ್ಯಾಲಯದಲ್ಲಿ ದ್ದ ದೊಡ್ಡ ಟೇಬಲ್ ಅನ್ನು ತಂದೆಯವರಿಗೆ ಉಪಯೋಗಿಸಲು ಕೊಟ್ಟರು.

೧೯೭೩ ರಲ್ಲೀ ನಮ್ಮ ತಾಯಿಯವರಿಗೆ ಆರೋಗ್ಯ ಹದಗೆಟ್ಟಿತು.ಕಸ್ತೂರಿಯವರು ಅವರನ್ನು ರಾಮನ್ ಕ್ಲಿನಿಕ್ ನಲ್ಲಿ ಸೇರಿಸಿ ಸೂಕ್ತ ಚಿಕಿತ್ಸೆಗೆ ಏರ್ಪಾಡು ಮಾಡಿದರು. ದಿನಕ್ಕೆರಡು ಬಾರಿ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೆ ತಾಯಿಯವರು ೧೯೭೪ ರಲ್ಲಿ  ದಿವಂಗತ ರಾದರು.

೧೯೮೯ ರಲ್ಲಿ ತಂದೆಯವರಿಗೆ ಪಾರ್ಶ್ವ ವಾಯು ಹೊಡೆಯಿತು.ಕಸ್ತೂರಿಯವರು ಚಡಪಡಿಸಿ ದರು.ಅನೇಕ ವೈದ್ಯರನ್ನು ಸಂಪರ್ಕಿಸಿದರು. ಚಿಕಿತ್ಸೆ ಕೊಡಿಸಿದರು.ಆದರೆ ಫಲಕಾರಿ ಯಾಗಲಲ್ಲ.೧೯೯೦ ಆಗಸ್ಟ್ ನಲ್ಲಿ ತಂದೆ ದಿವಂಗತರಾದರು.ನಾನು ಡಾಕ್ಟರ್ ಗೆ ಚಿನ್ನದ ಉಂಗುರ ದಾನ ಕೊಡಬೇಕೆಂದು ತೀರ್ಮಾನಿಸಿ ಹನ್ನೆರಡನೆಯ ದಿನ ದಾನ ನೀಡಿದೆ.

ಹೀಗೆ ಅವರಿಬ್ಬರ ಸ್ನೇಹ ಪರಿ ಸಮಾಪ್ತ ಆಯಿತು.ಸ್ನೇಹಕ್ಕೆ ಮಾದರಿಯಾಗಿದ್ದರು.



Friday, February 5, 2021

 MUST READ IN LIFE TIME:

*ಆದಿ ಶಂಕರಾಚಾರ್ಯ ವಿರಚಿತ ಭಜ ಗೋವಿಂದಂ ಗದ್ಯಾರ್ಥ ಸಹಿತ. ಸ್ವಲ್ಪ ದೀರ್ಘವಾಗಿದೆ. ಆದರೆ ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ.  ಒಮ್ಮೆ ಓದಿ ಬಿಡಿ ಸಾಕು,  ಇಡೀ ಜನ್ಮದ ಪುಣ್ಯ ನಿಮ್ಮದಾಗುವುದು !!*  


ಭಜ ಗೋವಿಂದಂ ಭಜ ಗೋವಿಂದಂ

ಗೋವಿಂದಂ ಭಜ ಮೂಢಮತೇ|

ಸಂಪ್ರಾಪ್ತೇ ಸನ್ನಿಹಿತೇ ಕಾಲೇ

ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||


*ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..! ಅಂತ್ಯ ಕಾಲವು ಸಮೀಪಿಸಿರುವಾಗ ಈ ಹಣ, ದ್ರವ್ಯ  ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.*


ಮೂಢ ಜಹೀಹಿ ಧನಾಗಮತೃಷ್ಣಾಮ್

ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|

ಯಲ್ಲಭಸೇ ನಿಜ ಕರ್ಮೋಪಾತ್ತಂ

ವಿತ್ತಂ ತೇನ ವಿನೋದಯ ಚಿತ್ತಮ್||2||


*ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.*

*ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡ ಬೇಕೆಂಬ ಬುದ್ಧಿಯನ್ನು ತಂದುಕೊ.* 

*ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.*


 ನಾರೀ ಸ್ತನಭರನಾಭೀದೇಶಂ

ದೃಷ್ಟ್ವಾಮಾ ಗಾ ಮೋಹಾವೇಶಮ್|

ಏತನ್ಮಾಂಸವಸಾದಿವಿಕಾರಂ

ಮನಸಿ ವಿಚಿಂತಯ ವಾರಂ ವಾರಮ್ ||3||


*ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.*

*ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.*


ನಲಿನೀದಲಗತಜಲಮತಿತರಲಂ ತದ್ವಜ್ಜೀವಿತಮತಿಶಯ ಚಪಲಮ್|

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

ಲೋಕಂ ಶೋಕಹತಂ ಚ ಸಮಸ್ತಮ್ ||4||


*ತಾವರೆ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹು ಬೇಗನೆ ಜಾರುತ್ತದೆ. ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ ಯಾವ ಕ್ಷಣದಲ್ಲಾದರೂ ಜಾರಿ ಹೋಗ ಬಹುದು. ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.*


ಯಾವದ್ವಿತ್ತೋಪಾರ್ಜನಸಕ್ತಃ

ಸ್ತಾವನ್ನಿಜಪರಿವಾರೋ ರಕ್ತಃ|

ಪಶ್ಚಾಜ್ಜೀವತಿ ಜರ್ಜರದೇಹೇ

ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||


*ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.*

*ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ. ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.*


ಯಾವತ್ಪವನೋ ನಿವಸತಿ ದೇಹೇ

ತಾವತ್ಪೃಚ್ಛತಿ ಕುಶಲಂ ಗೇಹೇ|

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||


*ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸ ಬಹುದು.*

*ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.*


ಬಾಲಸ್ತಾವತ್ಕ್ರೀಡಾಸಕ್ತ-

ಸ್ತರುಣಸ್ತಾವತ್ತರುಣೀಸಕ್ತಃ|

ವೃದ್ಧಸ್ತಾವತ್ಚಿಂತಾಮಗ್ನಃ

ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||


*ಹುಡುಗನಿಗಾದರೋ ಆಟದಲ್ಲಿ ಆಸಕ್ತಿ.*


*ಯುವಕನಿಗೆ ತರುಣಿಯರಲ್ಲಿ ಆಸಕ್ತಿ ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.*

*ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!*


ಕಾ ತೇ ಕಾಂತಾ ಕಸ್ತೇ ಪುತ್ರಃ

ಸಂಸಾರೋsಯಮತೀವ ವಿಚಿತ್ರಃ|

ಕಸ್ಯ ತ್ವಂ ಕಃ ಕುತ ಆಯಾತ-

ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||


*ಈ ಸಂಸಾರವು ಅತೀವ ವಿಚಿತ್ರವಾದದ್ದು. ನಿನ್ನ ಕಾಂತೆ ಎಂದು ಕೊಳ್ಳುವೆಯಲ್ಲ, ಅವಳು ಯಾರು? ನನ್ನ ಪುತ್ರ ಎಂದು ಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ? ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.*


ಸತ್ಸಂಗತ್ವೇ ನಿಸ್ಸಂಗತ್ವಂ

ನಿಸ್ಸಂಗತ್ವೇ ನಿರ್ಮೋಹತ್ವಮ್|

ನಿರ್ಮೋಹತ್ವೇ ನಿಶ್ಚಲತತ್ತ್ವಂ

ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||


*ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ. ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ. ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ. ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತ ಆಯಿತೆಂದು ತಿಳಿಯ ಬೇಕು.*


ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ|

ಕ್ಷೀಣೇ ವಿತ್ತೇ ಕಃ ಪರಿವಾರೋ

ಜ್ಞಾತೇ ತತ್ತ್ವೇ ಕಃ ಸಂಸಾರಃ ||10||


*ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರ ಎಲ್ಲಿರುತ್ತದೆ? ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು? ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರ ಎಲ್ಲಿರುತ್ತದೆ? ತತ್ತ್ವಜ್ಞಾನ ಆದಾಗ ಈ ಸಂಸಾರ ಎಲ್ಲಿದ್ದೀತು?*


ಮಾ ಕುರು ಧನಜನಯೌವನಗರ್ವಂ

ಹರತಿ ನಿಮೇಷಾತ್ಕಾಲಃ ಸರ್ವಮ್|

ಮಾಯಾಮಯಮಿದಮಖಿಲಂ ಮತ್ವಾ ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||


*ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವ ಪಡ ಬೇಡ. ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡ ಬಲ್ಲದು. ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, ಶಾಶ್ವತವಾದ ಬ್ರಹ್ಮವೆಂದರೆ ಏನೆಂಬುದನ್ನರಿತು ಅದರಲ್ಲಿ ಸೇರಿಕೋ.*


ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ|

ಕಾಲಃಕ್ರೀಡತಿ ಗಚ್ಛತ್ಯಾಯು-

ಸ್ತದಪಿ ನ ಮುಂಚತ್ಯಾಶಾವಯುಃ ||12||


*ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.*

*ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದು ಹೋಗುತ್ತದೆ. ಇದೆಲ್ಲಾ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.*


ಕಾ ತೇ ಕಾಂತಾ ಧನಗತ ಚಿಂತಾ ವಾತುಲ ಕಿಂ ತವ ನಾಸ್ತಿ ನಿಯಂತಾ|

ತ್ರಿಜಗತಿ ಸಜ್ಜನಸಂಗತಿರೇಕಾ

ಭವತಿ ಭವಾರ್ಣವತರಣೇ ನೌಕಾ ||13||


*ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ? ನಿನಗೆ ಬುದ್ದಿ ಹೇಳು ದಾರಿ ತೋರಿಸ ತಕ್ಕವರಿಲ್ಲವೇನು?*

*ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗ ಎಂಬುದೊಂದೇ ಸಂಸಾರ ಸಾಗರವನ್ನು ದಾಟಿಸ ಬಲ್ಲ ದೋಣಿಯಾಗಿರುತ್ತದೆ.*


ಜಟಿಲೋ ಮುಂಡೀ ಲುಂಚಿತಕೇಶಃ

ಕಾಷಾಯಾಂಬರಬಹುಕೃತ ವೇಷಃ|hv

ಪಶ್ಯನ್ನಪಿ ಚ ನ ಪಶ್ಯತಿ ಮೂಢಃ

ಉದರನಿಮಿತ್ತಂ ಬಹುಕೃತವೇಷಃ ||14||


*ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆ ಬೋಳಿಸಿ ಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತು ಹಾಕಿ  ಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿ ಕೊಂಡವನು.*

*ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.*

*ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.*


ಅಂಗಂ ಗಲಿತಂ ಪಲಿತಂ ಮುಂಡಂ ದಶನವಿಹೀನಂ ಜಾತಂ ತುಂಡಮ್|

ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಮ್||15||


*ವಯಸ್ಸಾದ ಮೇಲೆ ಅವಯವವು ಬಲಹೀನ ಆಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.*

*ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿ ಹೋಗಿರುತ್ತವೆ. ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.*

*ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.*


ಅಗ್ರೇ ವಹ್ನಿಃ ಪೃಷ್ಠೇ ಭಾನುಃ

ರಾತ್ರೌ ಚುಬುಕಸಮರ್ಪಿತಜಾನುಃ|

ಕರತಲಭಿಕ್ಷಸ್ತರುತಲವಾಸ-

ಸ್ತದಪಿ ನ ಮುಂಚತ್ಯಾಶಾಪಾಶಃ ||16||


*ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿ ಕೊಂಡು ಮೈಯನ್ನು ಕಾಯಿಸುತ್ತಾನೆ. ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷೆ ಪಾತ್ರೆಯ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ. ಮರದ ಬುಡದಲ್ಲಿ ಮಲಗುತ್ತಾನೆ. ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!*


ಕುರುತೇ ಗಂಗಾಸಾಗರಗಮನಂ

ವ್ರತಪರಿಪಾಲನಮಥವಾ ದಾನಮ್|

ಜ್ಞಾನವಿಹೀನಃ ಸರ್ವಮತೇನ

ಮುಕ್ತಿಂ ಭಜತಿ ನ ಜನ್ಮಶತೇನ||17||


*ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ! ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ. ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ. ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.*


ಸುರಮಂದಿರತರುಮೂಲನಿವಾಸಃ ಶಯ್ಯಾ ಭೂತಲಮಜಿನಂ ವಾಸಃ|

ಸರ್ವಪರಿಗ್ರಹಭೋಗತ್ಯಾಗಃ

ಕಸ್ಯ ಸುಖಂ ನ ಕರೋತಿ ವಿರಾಗಃ ||18||


*ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿ ಕೊಂಡು ಕೃಷ್ಣಾಜಿನವನ್ನು ಹೊದ್ದು ಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ. ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?*


ಯೋಗರತೋ ವಾ ಭೋಗರತೋ ವಾ

ಸಂಗರತೋ ವಾ ಸಂಗವಿಹೀನಃ|

ಯಸ್ಯ ಬ್ರಹ್ಮಣಿ ರಮತೇ ಚಿತ್ತಂ

ನಂದತಿ ನಂದತಿ ನಂದತ್ಯೇವ ||19||


*ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗ ರಹಿತನಾಗಿರಲಿ.*

*ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.*

*ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.*


ಭಗವದ್ಗೀತಾ ಕಿಂಚಿದಧೀತಾ

ಗಂಗಾಜಲ ಲವ ಕಣಿಕಾ ಪೀತಾ|

ಸಕೃದಪಿ ಯೇನ ಮುರಾರಿ ಸಮರ್ಚಾ ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||


*ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.*

*ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).*


ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀಜಠರೇ ಶಯನಮ್|

ಇಹ ಸಂಸಾರೇ ಬಹುದುಸ್ತಾರೇ

ಕೃಪಯಾsಪಾರೇ ಪಾಹಿ ಮುರಾರೇ ||21||


*ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.*


ಕಸ್ತ್ವಂ ಕೋsಹಂ ಕುತ ಆಯಾತಃ ಕಾ ಮೇ ಜನನೀ ಕೋ ಮೇ ತಾತಃ |

ಇತಿ ಪರಿಭಾವಯ ಸರ್ವಮಸಾರಂ ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||


*ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು. ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.*


ರಥ್ಯಾಕರ್ಪಟವಿರಚಿತಕಂಥಃ

ಪುಣ್ಯಾಪುಣ್ಯವಿವರ್ಜಿತಪಂಥಃ|

ಯೋಗೀ ಯೋಗನಿಯೋಜಿತ ಚಿತ್ತೋ ರಮತೇ ಬಾಲೋನ್ಮತ್ತವದೇವ ||23||


*ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿ ಕೊಳ್ಳುತ್ತಾನೆ. ಪಾಪ- ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ. ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದು ಕೊಳ್ಳುತ್ತಾನೆ.*


ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|

ಭವ ಸಮಚಿತ್ತಃ ಸರ್ವತ್ರ ತ್ವಂ

ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||


*ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ. ಸಹನೆಯನ್ನು ಕಳೆದ ಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿ ಕೊಳ್ಳುತ್ತೀಯೆ. ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗ ಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.*


ಶತ್ರೌ ಮಿತ್ರೇ ಪುತ್ರೇ ಬಂಧೌ

ಮಾ ಕುರು ಯತ್ನಂ ವಿಗ್ರಹಸಂಧೌ|

ಸರ್ವಸ್ಮಿನ್ನಪಿ ಪಶ್ಯಾತ್ಮಾನಂ

ಸರ್ವತ್ರೋತ್ಸೃಜ ಭೇದಜ್ಞಾನಮ್ ||25||


*ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸ ಬೇಡ.*

*ಎಲ್ಲಾವುದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.*

*ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.*


ಕಾಮಂ ಕ್ರೋಧಂ ಲೋಭಂ ಮೋಹಂ ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|

ಆತ್ಮಜ್ಞಾನವಿಹೀನಾ ಮೂಢಾ-

ಸ್ತೇ ಪಚ್ಯಂತೇ ನರಕನಿಗೂಢಾಃ ||26||


*ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.*

*ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.*


ಗೇಯಂ ಗೀತಾನಾಮಸಹಸ್ರಂ

ಧ್ಯೇಯಂ ಶ್ರೀಪತಿ ರೂಪಮಜಸ್ರಮ್|

ನೇಯಂ ಸಜ್ಜನಸಂಗೇ ಚಿತ್ತಂ

ದೇಯಂ ದೀನಜನಾಯ ಚ ವಿತ್ತಮ್ ||27||


*ಭಗವದ್ಗೀತೆಯನ್ನು, ಭಗವಂತನ ಸಹಸ್ರ ನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರ ಬೇಕು.* 


*ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರ ಬೇಕು.*

*ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರೇಪಿಸ ಬೇಕು. ದೀನ ಜನರಿಗೆ ಹಣದ ಸಹಾಯವನ್ನು ಮಾಡ ಬೇಕು.*


 ಅರ್ಥಮನರ್ಥಂ ಭಾವಯ ನಿತ್ಯಂ ನಾಸ್ತಿ ತತಃ ಸುಖಲೇಶಃ ಸತ್ಯಮ್|

ಪುತ್ರಾದಪಿ ಧನಭಾಜಾಂ ಭೀತಿಃ ಸರ್ವತ್ರೈಷಾ ವಿಹಿತಾ ರೀತಿಃ ||28||


*ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ. ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.*

*ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.*


ಪ್ರಾಣಾಯಾಮಂ ಪ್ರತ್ಯಾಹಾರಂ

ನಿತ್ಯಾನಿತ್ಯವಿವೇಕವಿಚಾರಮ್|

ಜಾಪ್ಯಸಮೇತ ಸಮಾಧಿವಿಧಾನಂ

ಕುರ್ವವಧಾನಂ ಮಹದವಧಾನಮ್ ||29||


*ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು. ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು. ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.*


ಸುಖತಃ ಕ್ರಿಯತೇ ರಾಮಾಭೋಗಃ ಪಶ್ಚಾದ್ಧಂತ ಶರೀರೇ ರೋಗಃ|

ಯದ್ಯಪಿ ಲೋಕೇ ಮರಣಂ ಶರಣಂ ತದಪಿ ನ ಮುಂಚತಿ ಪಾಪಾಚರಣಮ್ ||30||


*ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.*

*ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ. ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.*


ಗುರುಚರಣಾಂಬುಜನಿರ್ಭರಭಕ್ತಃ ಸಂಸಾರಾದಚಿರಾದ್ಭವ ಮುಕ್ತಃ|ಸೇಂದ್ರಿಯಮಾನಸನಿಯಮಾದೇವಂ ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್||31||


*ಶ್ರೀ ಗುರು ಚರಣ ಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು. ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು. ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಕೊಳ್ಳುತ್ತೀಯೆ.*


*ಭಜಗೋವಿಂದಂ ಭಜ ಗೋವಿಂದಂ*

*ಗೋವಿಂದಂ ಭಜ ಮೂಢಮತೇ* ||


||ಇತಿ ಶ್ರೀಮದ್ಜಗದ್ಗುರು ಶಂಕರಾಚಾರ್ಯವಿರಚಿತಂ ಭಜಗೋವಿಂದ ಸ್ತೋತ್ರಂ ಸಂಪೂರ್ಣಮ್||

 ಮದುವೆಯ ಈ ಸುಂದರ ಬಂಧ 

ಅನುರಾಗದ ಮರೆಯದ ಬಂಧ

ಇರಲಿ ಬಾಳು ಪೂರ್ಣ ನವಿರಾಗಿ

ಜೊತೆಯಲಿ ಸಂತೋಷ ಪೂರ್ಣ


ಆಗಿಹುದು ನಿನ್ನ ಸುಂದರ ಕನಸು 

ಸುಂದರ ಮಗಳ ಜೊತೆ ಪರಿಪೂರ್ಣ

ಸಿಹಿಕಹಿಗಳನೇಕ ಸ್ವೀಕರಿಸು ಸಮವಾಗಿ

ರೂಪಿಸು ಭವ್ಯ ಜೀವನವ ಸುತಳಿಗೆ


 ಮದುವೆ ಒಂದು ಸುಂದರ ಕನಸು

 ಕೂಡಿದಾಗ ಆಗುವುದು ಆನಂದ

 ಜೀವನ ಸಾರ್ಥಕ ಎಂಬ ಭಾವನೆ

 ರಾಘವ ಜೊತೆಗೂಡಿ ವಿಶ್ವ ಸುತ್ತು


ಹರಸುವೆ ಸಾಕಾರವಾಗಲಿ ಕನಸೆಂದು

ವಸಂತಗಳು ಹಸಿರಾಗಿರಲಿ ಫಲಭರಿತ

ಪ್ರಜ್ವಲಿಸಲಿ ಬಾಳದೀಪ ರಾಜಿಸುತ

ಇರಲಿ ಶ್ರೀನಿವಾಸನ ಕರುಣೆ ತುಂಬಾ


ರಚನೆ: ಶ್ರೀನಿವಾಸ ಪ್ರಸಾದ್. ಕೆ. ವಿ



 ಶುಭಾಶಯ ದೀಪ ರಂಜನಿಗೆ

ಜನ್ಮದಿನದ ಶುಭ ಅವಸರದಲ್ಲಿ

ತುಂಬಿಹುದನೇಕ  ಸಂವತ್ಸರಗಳು 

ಉಳಿಸುತ ಅನೇಕ ಸಿಹಿ ನೆನಪುಗಳ


ನೀಡಲಿ ನೂರಾರು ವರುಷಗಳ

ಮುದದಲಿ ಕಳೆಯೇ ಜೊತೆಯಲಿ

ಸುತಪತಿಯರೊಡಗೂಡಿ ಸಂತಸದಿ

ನೀನಾಗು ನಮ್ಮ ಮನೆಯ ಬೆಳಕಾಗಿ


ಚಿತ್ತದಲಿ ನೆನೆಯುತ ವಸಂತಕಲಾಳ

ಬಾಳು ವೈಭೋಗದಲಿ ರಾಜಶ್ರೀಯಾಗಿ

ಯುಗಗಳೇನಕದಲಿ ಯುಗ್ಜೊತೆಗೂಡಿ

ಹರಸುವೆ ಬಯಸುತ ಶ್ರೀನಿವಾಸನಲಿ


ರಚನೆ : ಶ್ರೀನಿವಾಸ ಪ್ರಸಾದ್. ಕೆ. ವಿ.

  

ಏರೋ ಶೋ ೨೦೨೧

 ಆಕಾಶದಲ್ಲಿ ಕಲರವ ಕಂಡೆ

ಲೋಹದ ಹಕ್ಕಿಗಳ ಹಾರಾಟ

ಎದೆಯಲಿ ಝಲ್ ಎನಿಸುವ

ವರ್ಣಮಯ ವಿಮಾನ ಪ್ರದರ್ಶನ


ಗಗನಕ್ಕೆ ಚಿಮ್ಮುವ ಸೂರ್ಯ ಕಿರಣ್

ತಲೆಕೆಳಗಾಗಿ ಹಾರುವ ಹೆಲಿಕಾಪ್ಟರ್

ವಜ್ರ ಆಕೃತಿ ಮೂಡಿಸುವ ತೇಜಸ್

ಹೃದಯ ನೆನಪಿಸುವ ರಚನೆಗಳು


ಮೂಡಿಬರುತ್ತಿದೆ ಚಂದನದಲಿ

ಬೆಂಗಳೂರಿನ ಏರೋಷೋ ೨೧

ನೋಡಬನ್ನಿ ಕುಳಿತು ಮನೆಯಲಿ

ಸವಿಯುತ ನೆಚ್ಚಿನ ಬಾಳೆ ಚಿಪ್ಸ್ನ.

Thursday, January 14, 2021

 ಸಂಕ್ರಾಂತಿ ೨೦ ೨೧

ಉದಯವಾಗಲಿ ಉತ್ತರಾಯಣ ಪುಣ್ಯಕಾಲ 
ಅಸ್ತಮಿಸಲಿ ಕರೋನ ಸೃಷ್ಟಿಸಿದ ಕಷ್ಟಕಾಲ 
ಹರ್ಷವೆಲ್ಲೆಡೆ ನಲಿದಾಡಲಿ ಮರಳಿ ಅನುಕಾಲ 
ಸರಿಯಲಿ ಕವಿದಿದ್ದ ಕಾರ್ಮೋಡ ಚಿರಕಾಲ 

ತೆರೆಯಲಿ ದೇವಾಲಯಗಳ ಮುಖ್ಯ ದ್ವಾರ 
ಮೊಳಗಲಿ ಘಂಟೆ ಡಮರುಘಗಳ ದುಂದುಭಿ 
ನಡೆಯಲಿ ಉತ್ಸವಗಳ ಸಂಭ್ರಮ ಅನುಕಾಲ 
ಮೂಡಲಿ ಸಂತಸ ಜನತೆಯಲ್ಲಿ ಚಿರಕಾಲ 

ಸಂಕ್ರಾಂತಿ ತರಲಿ ಹರ್ಷೋಲ್ಲಾಸ ಎಲ್ಲರಲಿ 
ಸಂಭ್ರಮಿಸೋಣ ಎಳ್ಳು ಬೆಲ್ಲವ ಮನೆಗೆ ಹಂಚಿ 
ನಲಿದಾಡಲಿ ಮಕ್ಕಳು  ನೂತನ ವಸ್ತ್ರವ ಧರಿಸಿ 
ಚಿಗುರಲಿ ಮಾವು ಬೇವು ಯುಗಾದಿಯ ಬಯಸಿ 

ಬಯಸುವೆನು ಪ್ರಾರ್ಥಿಸಿ ಆರೋಗ್ಯ ನೀಡೆಂದು 
ಸಿರಿಪತಿಯ ಚರಣಗಳಲ್ಲಿ ನಮಿಸಿ ವಂದಿಸುತ 
ಬಡತನವ ನೀಗಿಸಿ ಸಿರಿಯ ಕರುಣಿಸಿ ಎಲ್ಲರಿಗೆ 
ಶಾಂತಿ ನೆಮ್ಮದಿಯ ನೀಡೆಂದು ರಮಾಪತಿಯಲಿ 

 ರಚನೆ : ಶ್ರೀನಿವಾಸ ಪ್ರಸಾದ್