Friday, January 19, 2018

Vedanta deshikar

ವೇದಾಂತ ದೇಶಿಕರು ಅಥವಾ ವೆಂಕಟನಾಥರು ಅಥವಾ ತೂಪ್ಪುಲ್ ದೇಶಿಕರು (೧೨೬೮-೧೩೭೦)  ------ಒಂದು ಪಕ್ಷಿನೋಟ 
ವೇದಾಂತ ದೇಶಿಕರು ರಾಮಾನುಜರ ನಂತರ ಬಂದ ಶ್ರೀ ವೈಷ್ಣವ ಸಿದ್ದಾಂತದ ಅತ್ಯಂತ ಮೇಧಾವಿಪ್ರವರ್ತಕರು ಹಾಗೂ ವೇದಾಂತ ಪ್ರಚಾರಕರು ಆಗಿದ್ದರು , ಅವರು ಒಬ್ಬ ಕವಿ, ದಾರ್ಶನಿಕ ಮತ್ತು
ಪ್ರಭಾವಿ ಗುರುಗಳೂ ಆಗಿದ್ದರು . ಅವರು ಕಿಡಾಂಬಿ ಅಪ್ಪುಲ್ಲಾರ್ ಅಥವಾ ಆತ್ರೇಯ ರಾಮಾನುಜಾಚಾರ್ಯ ರವರ ಶಿಷ್ಯರಾಗಿದ್ದರು . ಕಿಡಾಂಬಿ ಅಪ್ಪುಲ್ಲಾರ್ ರವರು ಸ್ವತಃ ರಾಮಾನುಜರ ಅನುಯಾಯಿ ಆಗಿದ್ದವರು . ಸ್ವಾಮೀ ದೇಶಿಕರನ್ನು ತಿರುಮಲೆ ಶ್ರೀನಿವಾಸನ ಘಂಟಾವತಾರವೆಂದೂ
ಕರೆಯುವುದುಂಟು . ಇವರು ಕಾಂಚೀಪುರದ ಸಮೀಪವಿರುವ ತೂಪ್ಪುಲ್ ನಲ್ಲಿ ಅನಂತಸೂರಿ ಮತ್ತುತೋತಾರಂಬ ಎಂಬ ದಿವ್ಯ ದಂಪತಿಗಳಿಗೆ ಜನಿಸಿದರು . ಇವರ ಬಾಲ್ಯದ ಹೆಸರು ವೇಂಕಟನಾಥ ಎಂದು. ಬಾಲ್ಯದಲ್ಲಿಯೇ ಅಪ್ರತಿಮ ಪ್ರತಿಭೆಯನ್ನು ತೋರಿದವರು . ಇವರ ವಿದ್ಯಾಭ್ಯಾಸ ಸೋದರ ಮಾವನವರಾದ ಕಿಡಾಂಬಿ ಅಪ್ಪುಲ್ಲಾರ್ ರವರಲ್ಲಿ ಆರಂಭವಾಯಿತು. ೧೭ ವಯಸ್ಸಿರುವಾಗಲೇ ಎಲ್ಲ ನಾಲ್ಕು ವೇದಗಳು , ದಿವ್ಯ ಪ್ರಬಂಧ, ಪುರಾಣ  ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದರು . ಸಂಸ್ಕೃತ ತಮಿಳ್ ಪ್ರಾಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದರು. ರಾಮಾನುಜರ ಸಿದ್ಧಾಂತದಲ್ಲಿ ಆಸಕ್ತಿ ತಳೆದ ದೇಶಿಕರು ಶ್ರೀ ವೈಷ್ಣವ ಸಿದ್ಧಾಂತದ ಪ್ರವರ್ತಕರೆನಿಸಿಕೊಂಡರು . ಅಪ್ರತಿಮ ಪಾಂಡಿತ್ಯ ಹೊಂದಿದ್ದ ದೇಶಿಕರು ನೂರಾರು ಸ್ತೋತ್ರಗಳನ್ನು, ಗ್ರಂಥಗಳನ್ನು ರಚಿಸಿ ಕವಿಸಿಂಹ ಎಂಬ ಬಿರುದಿಗೆ ಪಾತ್ರರಾದರು . ಎದುರಾಳಿಗಳನ್ನು ವಾದದಲ್ಲಿ ಸೋಲಿಸಿ ಪರಮತ ಭಂಗ ಎಂಬ ಕಾವ್ಯ ರಚಿಸಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಎತ್ತಿ ಹಿಡಿದರು. ಗ್ರಂಥ ರಚನೆಯಲ್ಲಿ ಎದುರಾದ ಸ್ಪರ್ಧೆಯನ್ನು ಎದುರಿಸಿ ಒಂದೇ ರಾತ್ರಿಯಲ್ಲಿ ಸಾವಿರ ಶ್ಲೋಕವುಳ್ಳ ಪಾದುಕಾ ಸಹಸ್ರವೆಂಬ ಸ್ತೋತ್ರ ಸಾಹಿತ್ಯವನ್ನು ರಚಿಸಿ ಅಪ್ರತಿಮರೆನಿಸಿದರು. ಆದರೂ ದುರಹಂಕಾರ  ಪಡದೆ ಎದುರಾಳಿಯನ್ನು ಹೊಗಳುತ್ತಾ ಅವರ ಕೃತಿಯನ್ನು ಆನೆಗೆ ಹೋಲಿಸಿ ಅತಿ ಶ್ರೇಷ್ಠವೆಂದು ಹೊಗಳಿ ಮೆರೆದರು .ಕವಿರತ್ನ ಕಾಳಿದಾಸನಿಗೆ ತಾನೇನೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಲು  ಕಾಳಿದಾಸನ ಮೇಘ ಸಂದೇಶಕ್ಕೆ ಪ್ರತಿಯಾಗಿ ಹಂಸ ಸಂದೇಶವೆಂಬ ಅತ್ಯುನ್ನತ ಕೃತಿಯನ್ನು ರಚಿಸಿದರು. ನಾಟಕ ರಚನೆಯಲ್ಲಿಯೂ ಕೈ ಚಳಕ ತೋರಿಸಿ ಸಂಕಲ್ಪ ಸೂರ್ಯೋದಯ ಎಂಬ ನಾಟಕವನ್ನು ರಚಿಸಿದರು. ಯಾದವಾಭ್ಯುದಯ ವೆಂಬ ಮಹಾ ಕಾವ್ಯವನ್ನೂ ರಚಿಸಿದರು. ರಾಮಾನುಜರ ಶರಣಾಗತಿ ತತ್ವವನ್ನು ಬಹುವಾಗಿ ಮೆಚ್ಚಿದ ದೇಶಿಕರು ಆ ತತ್ವ ಬಿಂಬಿಸುವ ಅಭಯಪ್ರದಾನಸಾರ ವೆಂಬ ಮಹಾಗ್ರಂಥವನ್ನೂ,  ನ್ಯಾಸ ದಶಕ , ನ್ಯಾಸ ತಿಲಕ, ನ್ಯಾಸ ವಿಂಶತಿ ಎಂಬಿತ್ಯಾದಿ ಸ್ತೋತ್ರಗಳನ್ನು  ರಚಿಸಿ ಜನಪ್ರಿಯರಾದರು . ಸುಭಾಷಿತ ಗಳ  ಸಂಗ್ರಹ ಸುಭಾಷಿತ ನೀವಿ ಎಂಬ ಕೃತಿ ರಚಿಸಿ ಮೆಚ್ಚುಗೆ ಪಡೆದರು. ಇವರ ರಚನೆಗಳು ಒಟ್ಟು ೧೨೮. ಇವುಗಳ ಪೈಕಿ ೨೮ ಸ್ತೋತ್ರಗಳು ,೫ ಕಾವ್ಯ ಗ್ರಂಥಗಳು, ಒಂದು ನಾಟಕ,೩೨ ರಹಸ್ಯ ಗ್ರಂಥಗಳು , ೧೧ವೇದಾಂತ ಗ್ರಂಥಗಳು,೧೦ ವ್ಯಾಖ್ಯಾನ ಗ್ರಂಥಗಳು,೪ ಅನುಷ್ಟಾನ ಗ್ರಂಥಗಳು, ೨೪ ತಮಿಳು ಪ್ರಬಂಧಗಳು, ಹಾಗೂ ೧೩ ಇತರ ಗ್ರಂಥಗಳನ್ನು ದೇಶಿಕರು ರಚಿಸಿ ಕವಿಸಿಂಹ ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ವೇದಾಂತ ದೇಶಿಕರು ಲಕ್ಷ್ಮಿ ಹಯಗ್ರೀವರ ಪರಮ ಭಕ್ತರು. ಅವರು ಗುರುಗಳ ಆದೇಶದಂತೆ ತಿರುವಹೀಂದ್ರಪುರದಲ್ಲಿ ಗರುಡನನ್ನು ಕುರಿತು ದೀರ್ಘ ತಪಸ್ಸು ಮಾಡಲು, ಗರುಡನು ಪ್ರತ್ಯಕ್ಷವಾಗಿ ವರವನ್ನು ಕೇಳಲು ಹಯಗ್ರೀವರ ದರ್ಶನ ವನ್ನು ಅಪೇಕ್ಷಿಸಲು ಗರುಡನು ಹಯಗ್ರೀವ ಮಂತ್ರ ಉಪದೇಶಿಸಿ ಅನುಸಂಧಾನ ಮಾಡಲು ತಿಳಿಸಲಾಗಿ ಅದರಂತೆ ದೇಶಿಕರು ಮಂತ್ರ ಜಪಿಸಲು ಹಯಗ್ರೀವರು ಪ್ರತ್ಯಕ್ಷವಾಗಿ ತನ್ನ ಮೂರ್ತಿ ಪ್ರಸಾದಿಸಿದರೆಂದೂ, ಅದನ್ನು ತಿರುವಹೀಂದ್ರಪುರದಲ್ಲಿ ಸ್ಥಾಪಿಸಿದರೆಂದು ಪ್ರತೀತಿ.
ದೇಶಿಕರು ತಮ್ಮ ಜೀವನವನ್ನು ಹೆಚ್ಚಿನ ಕಾಲ ಶ್ರೀರಂಗದಲ್ಲಿ ಕಳೆದರೂ , ಮುಸಲ್ಮಾನರ ಆಕ್ರಮಣದ ಸ್ವಲ್ಪ ಕಾಲ ಮೈಸೂರು ಮತ್ತು ತಮಿಳನಾಡು ಅಂಚಿನಲ್ಲಿರುವ ಸತ್ಯಾಗಾಲದಲ್ಲಿ ೧೨ ವರ್ಷ ಕಳೆದರೆಂದು ತಿಳಿದುಬರುತ್ತದೆ . ಶ್ರೀರಂಗದಲ್ಲಿ ಅವರು ವಾಸವಿದ್ದ ಮನೆಯನ್ನು ತಿರುಮಾಳಿಗೈ ಎಂದು ಕರೆಯುತ್ತಾರೆ. ದೇಶಿಕರ ಕುಮಾರರಾದ ವರದಾರ್ಯ ಎಂಬುವರು ತಂದೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋದರೆಂದು ತಿಳಿಯುತ್ತದೆ . ಅದೇನೇ ಆಗಲಿ ದೇಶಿಕರು ಶ್ರೀ ವೈಷ್ಣವ ಸಿದ್ಧಾಂತದ ಅಗ್ರಗಣ್ಯ ಪ್ರತಿಪಾದಕರೆನಿಸಿದರು . 
೧೦೨ ವರ್ಷ ತುಂಬು ಜೀವನ ನಡೆಸಿದ ದೇಶಿಕರು ೧೩೭೦ ರಲ್ಲಿ ಕೊನೆಯುಸಿರು ಎಳೆದರು.

ಕೆ ವಿ ಶ್ರೀನಿವಾಸ ಪ್ರಸಾದ್ 

No comments:

Post a Comment