Friday, September 4, 2015

ಜಗದ್ಗುರು ಕೃಷ್ಣ ವಂದನೆ
ವಸುದೇವ ಸುತ ಕಂಸ ಚಾಣೂರ ಮರ್ದನ
ದೇವಕಿಯ ಪ್ರೀತಿಯ ತನುಜ ಕೃಷ್ಣನಿಗೆ ವಂದನೆ
ಅತಸೀ ಪುಷ್ಪ ಕೂಡಿದ ಹಾರ ಗೆಜ್ಜೆ ಶೋಭಿತ
ರತ್ನ ಭರಿತ ಕಂಕಣ ತೊಟ್ಟ ಕೃಷ್ಣನಿಗೆ  ವಂದನೆ
ಪೂರ್ಣ ಚಂದ್ರ ಕಾಂತಿಯಂತಿರುವ ಲೋಲುಕ
ಕುಂಡಲ ಧರಿಸಿರುವ ಕೃಷ್ಣ ನಿನಗಿದೋ ವಂದನೆ
ಮಂದಾರಪುಷ್ಪದ ಸುಗಂಧ ಕೂಡಿದ ಮಂದಹಾಸ
ಚತುರ್ಭುಜ ಹೊಂದಿದ ಕೃಷ್ಣ ನಿನಗಿದೋ ವಂದನೆ
ಕಮಲಸದೃಶ ಕಣ್ಣುಳ್ಳ ನೀಲ ಜೀಮೂತದಂತೆ
ಯಾದವಶಿರೋರತ್ನ ಕೃಷ್ಣ ನಿನಗಿದೋ ವಂದನೆ
ರುಕ್ಮಿಣಿವಲ್ಲಭ ಪೀತಾಂಬರ ತುಳಸಿ ಧರಿಸಿರುವ
ಸುಗಂಧ ಲೇಪಿತ ಕೃಷ್ಣ ನಿನಗಿದೋ ವಂದನೆ
ಗೋಪಿಕೆಯರ ಆಲಿಂಗನದಿಂದ ಕೆಂಪಾದ ವಕ್ಷ
ಲಕ್ಷ್ಮಿಯ ಹೃದಯ ವಲ್ಲಭ ಕೃಷ್ಣ ನಿನಗೆ ವಂದನೆ
ಶ್ರೀವತ್ಸ ವನಮಾಲ ವಿರಾಜಿತ ಮುರಳಿ ಲೋಲ
ಶಂಕ ಚಕ್ರ ಧರಿಸಿರುವ ಕೃಷ್ಣ ನಿನಗಿದೋ ವಂದನೆ
ಕೃಷ್ಣನ ಅಷ್ಟಕ ಪದ್ಯ ಉದಯದಲ್ಲಿ ಜಪಿಸುವರಿಗೆ
ಕೋಟಿ ಜನ್ಮದಲಿ ಉಂಟಾದ ಪಾಪ ನಶಿಸುತ್ತದೆ
-ಕೆ  ವಿ  .ಶ್ರೀನಿವಾಸ ಪ್ರಸಾದ್

Saturday, August 1, 2015

 
 
ನಿನಗಿದೋ ನನ್ನ ಆತ್ಮೀಯ ಸಂತಾಪದ ಶ್ರದ್ದಾಂಜಲಿ
 
 
 
 
 
 
 
 
 
ದುಃಖಿತನಾಗಿರುವೆ ನಿನ್ನ ಅಕಾಲ ಅಗಲಿಕೆಯಿಂದ
ಅಂಬಾ ಅತ್ತೆ, ನನ್ನ ತಂದೆಯ ಪ್ರೀತಿಯ ತಂಗಿ
ಹಾಗೂ ನನ್ನೊಲುಮೆಯ ಮಡದಿಯ ತಾಯಿಯೂ
ನಿನಗಿದೋ ನನ್ನ ಆತ್ಮೀಯ ಸಂತಾಪದ ಶ್ರದ್ದಾಂಜಲಿ
ಮನ್ಮಥನಾಮ ಸಂವತ್ಸರದ ದಕ್ಷಿಣಾಯನದ
ಗ್ರೀಷ್ಮ ಋತುವಿನ ಶುಕ್ಲ ಪಕ್ಷದ ದಶಮಿಯ
ಶುಭ ಭಾನುವಾರ ಬೆಳಗಿನ ಜಾವದ ೩ ಘಂಟೆಗೆ
ಅಸ್ತಂಗತಳಾದೆ ಘಾಢ  ನಿದ್ರೆಯಲಿ ತಿಳಿಸದೆ
ನೀನಾಗಿದ್ದೆ ನಮಗೆ, ನನ್ನ ತಂದೆಯ ಮಕ್ಕಳಿಗೆ
ಅತ್ತೆಯಷ್ಟೇ ಅಲ್ಲದೆ ಪ್ರೀತಿಯ ತಾಯಿಯಾಗಿ
ಆರು ವರುಷ ತಾಯಿಯ ಮರಣಾನಂತರ
ನಡೆಸಿದೆ ಮೂರು ಹೆಣ್ಣು ಮಕ್ಕಳ ಮದುವೆಯ
ಮರೆವೆವು ನಿನ್ನ ಆ ಕ್ಲಿಷ್ಟ ದಿನಗಳ ಸಹಾಯವ
ತಂದೆಗೆ ಬೆಂಬಲವಾಗಿ ನಿಂತ ಆ ಕಷ್ಟದ ದಿನಗಳ
ನಿನ್ನೆಯವರೆವಿಗೂ ನೀನಾಗಿದ್ದೆ ಮಾರ್ಗದರ್ಶಿ
ಕಂಬನಿಮಿಡಿವೆವು ನಿನ್ನ ಅಕಾಲ ಅಗಲಿಕೆಯಿಂದ
ನೀಡಲಿ ಶಕ್ತಿಯನು  ಭಗವಂತನು ಎಲ್ಲರಿಗೂ
ನಿನ್ನ ಅಪಾರ ಬಂಧು ವರ್ಗಕ್ಕೂ ಸುತಸುತೆಯರಿಗೂ
ಅಗಲಿಕೆಯ ವಿರಹವನು ಹಾಗೂ ಬರಲಿರುವ 
ದಿನಗಳ ಸಮಸ್ಯೆಯನು ದುಃಖ ಭರಿಸುವ ಶಕ್ತಿಯನು
ರಚನೆ; ಕೆ.ವಿ ಶ್ರೀನಿವಾಸ ಪ್ರಸಾದ್

Friday, June 5, 2015

ದುಬೈ ಪ್ರವಾಸ ಪರಿಚಯ

ಮೊದಲ ದಿನ 

ಬಹು ದಿನದ ಕನಸಿನ ದುಬೈ ಪ್ರವಾಸ ಮೇ ೨೭ ರಂದು ಬೆಳಿಗ್ಗೆ ೭ ಘಂಟೆಗೆ ಜೆಟ್ ವಿಮಾನ ಹತ್ತುವುದರ ಮೂಲಕ ಆರಂಭವಾಯಿತು .ಜೊತೆಯಲ್ಲಿ ಮಡದಿ, ಮಗ , ಸೊಸೆ ಪ್ರಯಾಣಿಸಿದರು . ಇಬ್ಬರಿಗೆ ವಿಮಾನದಲ್ಲಿ ಕಿಟಕಿಯ ಪಕ್ಕದ ಸೀಟು ದೊರೆಯಿತು. ನೋಟ ಸುಂದರವಾಗಿತ್ತುಡೆಲ್ಲಿ ಮೂಲಕ ಹೋಗಿದ್ದರಿಂದ ದುಬೈ ತಲುಪಿದಾಗ ಮಧ್ಯಾನ್ಹ ೨ ಘಂಟೆ ಆಗಿತ್ತು.ಆಡಿ ಕಾರಿನಲ್ಲಿ ಹೋಟೆಲ್ ತಲಪಿದೆವು ಸಂಜೆ ೬ ರವರೆವಿಗೆ ಮಲಗಿ ವಿಶ್ರಾಂತಿ ಪಡೆದೆವು .ಸಂಜೆ ೬-೩೦ ಗೆ ಕ್ರೂಇಸೆ ಭೋಜನಕ್ಕಾಗಿ ಹೊರಟೆವು ಅದು ಒಂದು ಸಣ್ಣ ಹಡಗು . ಎರಡು ಅಂತಸ್ತು . ಸಮುದ್ರದ ಹಿಂದಿನ ನೀರನ್ನುಉಪಯೋಗಿಸಿ ಒಂದು ಕಾಲುವೆ ನಿರ್ಮಾಣ ವಾಗಿದೆ. ಅದರಲ್ಲಿ ೨ ಘಂಟೆಗಳ ಕಾಲ ಸಂಚಾರ .ಮೊಂಬತ್ತಿ ಬೆಳಕಲ್ಲಿ ಊಟ . ಸಸ್ಯಾಹಾರಿಊಟವು ಏರ್ಪಾಡಾಗಿತ್ತು . ಸುಮಾರು ೧೦೦ ಜನಕ್ಕೆ ಅವಕಾಶವಿತ್ತು. ಊಟ ಆರಂಭವಾದಮೇಲೆ ನೃತ್ಯ ಕಾರ್ಯಕ್ರಮವಿತ್ತು. ಅದರಲ್ಲಿಒಂದು ಅರೇಬಿಕ್ ನೃತ್ಯ ಮತ್ತು ಒಂದು ಕುದುರೆ ನೃತ್ಯ ಇತ್ತು. ತುಂಬಾ ಚೆನ್ನಾಗಿತ್ತು ನೃತ್ಯ . ಮಕ್ಕಳು ಹಾಗೂ ಮುದುಕರೂ ಸಮನಾಗಿ ಆನಂದಿಸಿದರು . ರಾತ್ರಿ ಅಲ್ಲಿಯ ಸಮಯ ೧೧ ಘಂಟೆಗೆ ರೂಮನ್ನು ತಲಪಿದೆವು . 

 ದುಬೈ ಪ್ರವಾಸದ ಎರಡನೆಯ ದಿನ

ನಗರ ಪ್ರದಕ್ಷಿಣೆ ಬೆಳಿಗ್ಗೆ ೮-೩೦ ಘಂಟೆಗೆ ನಿಶ್ಚಯವಾಗಿತ್ತು . ಉಪಾಹಾರ ಮುಗಿಸಿ ಬಂದೆವು . ನಂತರ ಬೇರೆ ಬೇರೆ ಹೋಟೆಲ್ನಿಂದ ವ್ಯಕ್ತಿ ಗಳನ್ನು ಕಲೆಹಾಕಿ ಹೊರಟಾಗ ೧೦ ಘಂಟೆ ಆಗಿತ್ತು. ಮೊದಲು ದುಬೈ ಮ್ಯೂಸಿಯಂ ನೋಡಿದೆವು . ದುಬೈ ಬೆಳೆದ ರೀತಿಯನ್ನು ಸುಂದರವಾಗಿ ಬಿಂಬಿಸಿದ್ದರು . ೧೯೩೬ ರಲ್ಲಿ ದುಬೈ ಒಂದು ಸಣ್ಣ ಮೀನುಗಾರರ ಹಳ್ಳಿಯಾಗಿತ್ತು . ಎಲ್ಲಿ ನೋಡಿದರೂ ಸಣ್ಣ ಸಣ್ಣ ಗುಡಿಸಲುಗಳು . ಚಿಕ್ಕ ದೋಣಿಗಳು . ಆಗಿನ ಚಟುವಟಿಕೆ ಎಂದರೆ ಕುಸುರಿ ಕೆಲಸ , ಮೀನು ಮಾರಾಟ ದೋಣಿ ರಿಪೇರಿ ಚಿನ್ನದ ಕೆಲಸ ಸಾಂಭಾರು ಪದಾರ್ಥಗಳ ಮಾರಾಟ . ಆಗೊಮ್ಮೆ ಈಗೊಮ್ಮೆ ವಿದೇಶಿಯರು ಬರುತ್ತಿದ್ದರು . ಗುಡಿಸಲುಗಳ ಮಾದರಿಯನ್ನು ಯತಾವತ್ತಾಗಿ ಸಂರಕ್ಷಿಸಿದ್ದಾರೆ . ಆಗಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಯುಧಗಳು ಮೀನಿನ ಬಲೆಗಳು ಪಾತ್ರೆ ಪದಾರ್ಥಗಳು ವೇಷ ಭೂಷಣಗಳನ್ನು ಸಂರಕ್ಷಿಸಲಾಗಿದೆ . ನಂತರ ಚಿನ್ನದ ಮಾರುಕಟ್ಟೆ ನೋಡಿದೆವು . ಕೆಲವರು ಚಿನ್ನ ಖರೀದಿಸಿದರು . ದಾರಿಯಲ್ಲಿ ಅನೇಕ ಬಹು ಮಹಡಿ ಕಟ್ಟಡಗಳನ್ನು ನೋಡಿದೆವು . ದುಬೈ ಸಂಸ್ಥಾನದ ಸುಲ್ತಾನನ ಅರಮನೆಯನ್ನು ವೀಕ್ಷಿಸಿದೆವು . ಪಾಮ್ ದ್ವೀಪಕ್ಕೆ ತೆರಳಿದೆವು .ಸುಮಾರು ಒಂದು ಕಿ. ಮೀ . ಉದ್ದದ ಸಮುದ್ರ ತಳದ ಸುರಂಗದಲ್ಲಿ ಚಲಿಸಿದೆವು. ಪಾಮ್ ದ್ವೀಪದ ವಿಶೇಷವೆಂದರೆ ಅಲ್ಲಿ ಪಾಮ್ ಮಾದರಿಯಲ್ಲಿ ವಸತಿ ಗೃಹಗಳನ್ನು ಕಟ್ಟಲಾಗಿದೆ . ಪ್ರತಿ ಕಟ್ಟಡಕ್ಕೂ ಪ್ರತ್ಯೇಕ ಬೀಚ್ ಗಳಿವೆ . ಇದು ಇಡೀ ದುಬೈನಲ್ಲಿ ಅತ್ಯಂತ ಶ್ರೀಮಂತ ಪ್ರದೇಶ . ಇಲ್ಲಿ ಅಂತರಾಷ್ಟ್ರೀಯ ಶ್ರೀಮಂತರು ವಾಸವಾಗಿದ್ದಾರೆ .ನಂತರ ಮರೀನಾ ಸಮುದ್ರ ದಂಡೆಗೆ ಹೋದೆವು . ದಡದಲ್ಲಿ ಬಹು ಮಹಡಿ ಕಟ್ಟಡಗಳನ್ನು ಕಟ್ಟಲಾಗಿದೆ . ತಿರುಚು ಕಟ್ಟಡವು ಒಂದು . ನಂತರ ಸಮೀಪದ ವಿಶ್ವದ ಅತ್ಯಂತ ಶ್ರೀಮಂತ ಹೋಟೆಲ್ ಎನಿಸಿದ ಬುರ್ಜ್ ಅಲ್ ಅರಬ್ ಜುಮೈರಹ್ ಅನ್ನು ಹೊರಗಿನಿಂದ ನೋಡಿದೆವು . ಇಲ್ಲಿ ೨೦೦ ಶ್ರೀಮಂತ ಸೂಟ್ ಗಳಿವೆ . ಈ ಕಟ್ಟಡವನ್ನು ಸಮುದ್ರ ಮಧ್ಯದಲ್ಲಿ ಕಟ್ಟಲಾಗಿದೆ .ಇಲ್ಲಿಗೆ ಪ್ರವೇಶ ಅತ್ಯಂತ ಕಠಿಣ . ಒಂದು ಸೇತುವೆಯ ಮುಖಾಂತರ ಪ್ರವೇಶ ಮಧ್ಯಾನ್ಹ ೨-೩೦ ಘಂಟೆಗೆ ರೂಂಗೆ ಹಿಂದಿರುಗಿದೆವು . ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು . 
 ೫ ಘಂಟೆಗೆ ಮತ್ತೆ ನಗರ ವೀಕ್ಷಣೆಗೆ ಹೊರಟೆವು . ಸಂಜೆ ೫-೩೦ ರ ವೇಳೆಗೆ ದುಬೈನ ಪ್ರಖ್ಯಾತ ಬುರ್ಜ್ ಖಲೀಫಾ ಕಟ್ಟಡವನ್ನು ತಲಪಿದೆವು ಇದು ವಿಶ್ವದ ಅತಿ ಎತ್ತರದ ಕಟ್ಟಡ . ೧೬೬ ಅಂತಸ್ತುಗಳನು ಹೊಂದಿದೆ .ಕಟ್ಟಡ  ಕಟ್ಟಲು ೨೦೦೫ ರಲ್ಲಿ ಆರಂಭಿಸಿದರು . ೨೦೦೯ ರಲ್ಲಿ ಕಟ್ಟಡ ಮುಗಿಯಿತು ೨೦೧೦ ರಲ್ಲಿ ಕಟ್ಟಡ ಉದ್ಘಾಟಿಸಲಾಯಿತು ೧೨೪ ನೇ ಅಂತಸ್ತಿನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ೧೨೪ ನೆ ಮಹಡಿ ತಲಪಲು ಎಲಿವೇಟರ್ ಇದೆ. ಇದರಲ್ಲಿ ಕೇವಲ ಒಂದು ನಿಮಿಷದಲ್ಲಿ ೧೨೪ ನೇ ಮಹಡಿ ತಲುಪಬಹುದು. ಇದು ವಿಶ್ವದ ಅತ್ಯಂತ ವೇಗದ ಎಲಿವೇಟರ್ . ಕೆಳಗಿನ ಅಂತಸ್ತಿನಲ್ಲಿ ದುಬೈ ಮಾಲ್ .ನೃತ್ಯ  ಚಿಲುಮೆ ಹಾಗು ವಿಶಾಲವಾದ ಪಾರ್ಕ್ ಇದೆ . ಈ ಕಟ್ಟಡ ಕಟ್ಟಲು ೪೦೦೦೦ ಕಾರ್ಮಿಕರು ಸತತ ೫ ವರ್ಷ ಶ್ರಮಪಟ್ಟಿದ್ದಾರೆ .ದುಬೈ ಮಾಲ್ ವಿಶ್ವದ ಅತಿ ದೊಡ್ಡ ಮಾಲ್ . ಸುಮಾರು ೨೦೦೦ ಅಂಗಡಿಗಳಿವೆ . ಇಲ್ಲಿ ಒಂದು ಮೀನಾಗಾರವು ಇದೆ .ಸುಮಾರು ೧೦೦೦ ಬಗೆಯ ಮೀನುಗಳಿವೆ .ದುಬೈ ಮಾಲ್ ಹೊರಗಡೆ ನೃತ್ಯ ಚಿಲುಮೆ ಇದೆ. ಪ್ರತಿ ಅರ್ಧ ಘಂಟೆಗೊಮ್ಮೆ ಒಂದು ಸಂಗೀತ ಆಧರಿಸಿ ಚಿಲುಮೆ ಯನ್ನು ಬಿಡಲಾಗುತ್ತದೆ ನೋಡಲು ಅತಿ ರಮಣೀಯ . ಚಿಲುಮೆ ಮೂರು ನಿಮಿಷ ಮಾತ್ರ ಇರುತ್ತದೆ . ನೋಡಲು ನೂರಾರುಮಂದಿ ಸೇರುತ್ತಾರೆನಗರಪ್ರದಕ್ಷಿಣೆ ಮುಗಿದಾಗ ೧೦-೩೦ ಆಗಿತ್ತು. ನಂತರ ಕಾಮತ್ ಹೋಟೆಲ್ನಲ್ಲಿ ಊಟ  ಮುಗಿಸಿ ವಸತಿ ಗೃಹಕ್ಕೆ ಮರಳಿದೆವು .

ದುಬೈ ಪ್ರವಾಸ ಮೂರನೆಯ ದಿನ

ಹೊರಗಡೆ ಪ್ರಖರವಾದ ಬಿಸಿಲು ರೂಮಿನ ಒಳಗಡೆ ತಣ್ಣನೆಯ ವಾತಾವರಣ ಹೊರಗೆ ಹೋಗಲು ಮನಸ್ಸಾದರೂ ಹೇಗೆ ಬಂದೀತು ಆದರೆ ಸುಮ್ಮನೆಕೂರಲು ಆಗದು . ತಿಂಡಿ ಮುಗಿಸಿ ಹೋಟೆಲ್ ನವರು ಉಚಿತವಾಗಿ ಏರ್ಪಡಿಸಿದ್ದ ಬಸ್ನಲ್ಲಿ ಜೆ ಬಿ ಆರ್ ಬೀಚ್ ಗೆ ೧೦-೩೦ ಘಂಟೆಗೆ ಹೋದೆವು .ಬಿಸಿಲು ಅತಿ ಆಗಿದ್ದರು ಸಮುದ್ರ ನೋಡಿದೊಡನೆ ಉತ್ಸಾಹ ಚಿಲುಮೆಯಂತೆ  ಚಿಮ್ಮಿತು ನೀರಿನೆಡೆಗೆ ಓಡಿದೆವು . ಈ ಬೀಚ್ ಸೂರ್ಯಸ್ನಾನ ಮಾಡಲುಸಮರ್ಪಕವಾಗಿದೆ. ಅನೇಕ ವಿದೇಶಿಯರು ಸೂರ್ಯಸ್ನಾನ ಮಾಡುವ ದೃಶ್ಯ ಕಂಡು ಬಂದಿತು ಸುಮಾರು ೨ ಘಂಟೆ ಇಲ್ಲಿ ಕಳೆದೆವು ಅಲ್ಲಿಯೇ ಇದ್ದ ಸುಂದರಉದ್ಯಾನವನದ ಮೂಲಕ ಹಾದು ನಮ್ಮ ವಾಹನದತ್ತ ನಡೆದು ರೂಂ ತಲಪಿದೆವು .
ಮಧ್ಯಾನ್ಹ ೩ ಘಂಟೆಗೆ ಮರಳಿನ ದಿಬ್ಬದತ್ತ ಲ್ಯಾಂಡ್ ಕ್ರೂಸರ್ ಎಂಬ ವಾಹನದಲ್ಲಿ ತೆರಳಿದೆವು ಮೊದಲನೆಯ ಸುತ್ತಿನಲ್ಲಿ ಬೈಕ್ ನಲ್ಲಿ ಮರಳಿನಲ್ಲಿ ಗಾಡಿಓಡಿಸುವುದು . ನಮಗಂತೂ ಧೈರ್ಯವಿರಲಿಲ್ಲ ಆದರೆ ಮಗ ಸೊಸೆ ಧೈರ್ಯ ಮಾಡಿದರು . ರೋಮಾಂಚನಕಾರಿಯಾಗಿತ್ತು . ಮಗ ವಾಪಸ್ಸು ಬರುವವರೆವಿಗೆನಮ್ಮ ಎದೆ ಹೊಡೆದು ಕೊಳ್ಳುತಿತ್ತು . ಸುಮಾರು ೧. ಘಂಟೆ ಗಾಡಿ ಓಡಿಸಿದರು .ಎರಡನೆಯ ಸುತ್ತು ಲ್ಯಾಂಡ್ ಕ್ರೂಸರ್ ನಲ್ಲಿ ೪ ಮತ್ತು ಇತರ ಇಬ್ಬರು ಒಟ್ಟು ೬ ಮಂದಿ ಮರಳಿನ ದಿಬ್ಬದತ್ತ ಹೊರಟೆವು . ಬಹಳ ರೋಮಾಂಚನಕಾರಿಪ್ರಯಾಣ ಏರು ಪೇರು ಗಳಲಿ ವಾಹನ ಓಡಿಸುವುದು ಬಹಳ ಕಷ್ಟ ಆದರೆ ಚಾಲಕ ಬಹಳ ಅನುಭವಸ್ಥ ತುಂಬಾ ಚೆನ್ನಾಗಿ ಸುರಕ್ಷಿತವಾಗಿ ವಾಹನ ಚಲಾಯಿಸಿದಆ ಅನುಭವ ವರ್ಣಿಸಲು ಅಸಾಧ್ಯ ಅನುಭವಿಸಿಯೇ ತಿಳಿಯಬೇಕು . ಮೂರನೆಯ ಸುತ್ತು ಒಂಟೆಯ ಮೇಲೆ ಸವಾರಿ . ಎಲ್ಲರೂ ಒಂಟೆ ಸವಾರಿ ಮಾಡಿದೆವು . ನಂತರ ಬಳಿಯಲ್ಲಿ ಇದ್ದ  ಕ್ಯಾಂಪ್ ನಲ್ಲಿ ಚಂದ್ರನ ಬೆಳಕಿನಲ್ಲಿ ಅರೇಬಿಕ್ ನೃತ್ಯ ನೋಟ . ಕೆಳಗೆ ಹಾಸಿಗೆಹಾಸು ದಿಂಬುಗಳು ಒರಗಿಕೊಳ್ಳಲು . ಬಳಿಯಲ್ಲಿ  ರದಾಯಿಕ ಚುಟ್ಟ . ಕುಡಿಯಲು ಬಗೆ ಬಗೆ ಪಾನೀಯಗಳು ಅನುಭವಿಸುವವರಿಗೆ ಸ್ವರ್ಗ ಗೇಣುದ್ದ .ಆದರೆ ನಮಗೆ ಸ್ವರ್ಗದ ಅನುಭವ ಮರೀಚಿಕೆ . ನೃತ್ಯ ವನ್ನಷ್ಟೇ ನೋಡಿದೆವು . ರೋಮಾಂಚಕ ನೃತ್ಯ . ಪ್ರಸಿದ್ಧ ಬೆಲ್ಲಿ  ನೃತ್ಯ ಮೈ ಚಳಿ ಬಿಟ್ಟು ನರ್ತಿಸಿದ ಚೆಲುವೆಯರು . ಅಲ್ಲಿಯೇ ರಾತ್ರಿ ಭೋಜನಏರ್ಪಾಡಾಗಿತ್ತು ಸಸ್ಯಾಹಾರಿ ಊಟವೂ ಇತ್ತು . ನಮಗಷ್ಟು ಊಟ ರುಚಿಸಲಿಲ್ಲ ರಾತ್ರಿ ೧೦ ಘಂಟೆಗೆ ರೂಂಗೆ ವಾಪಸ್ಸಾದೆವು . ಸ್ವಲ್ಪ ಮಳೆಯೂ ಬಂದಿದ್ದರಿಂದವಾತಾವರಣ ಹಿತವಾಗಿತ್ತು . ಹಾಸಿಗೆ ನೋಡಿದೊಡನೆ ನಿದ್ದೆ ಅಪ್ಪಿಗೊಂಡಿತ್ತು .

ದುಬೈ ಪ್ರವಾಸದ ನಾಲ್ಕನೆಯ ದಿನ

ನನಗೇಕೆ ದುಬೈ ಮೇಲೆ ಅಷ್ಟೊಂದು ಪ್ರೀತಿ ಎಂದು ಆಶ್ಟರ್ಯ ಆಗಿರಬಹುದು . ಇದೊಂದು ಪ್ರಪಂಚದ ಅದ್ಭುತ . ಮಾನವ ಅಸ್ಸಾಧ್ಯವಾದುದನ್ನು ಸಾಧಿಸಿತೋರಿಸಿದ್ದಾನೆ . ಮರುಭೂಮಿಯಲ್ಲಿ ಕಾಲಿಡುವುದೇ ಕಷ್ಟ ಅಂತದ್ದರಲ್ಲಿ ಬಹುಮಹಡಿ ಕಟ್ಟಡ ಎಂದರೆ ಅದ್ಭುತವೇ ಸರಿ . ದುಡ್ಡೊಂದಿದ್ದರೆ ಸಾಲದು ಮನಸ್ಸೂಬೇಕು ಹಾಗಾಗಿ ದುಬೈ ನೋಡಬೇಕೆಂಬ ಬಯಕೆ ಇತ್ತು . ನೋಡಿದ ಮೇಲೆ ಮೆಚ್ಚಲೇ ಬೇಕಿನಿಸಿತು . ಅಂತಹ ಪವಾಡ ಗಳಲ್ಲಿ ಮಂಜಿನ ಮನೆಯೂ ಒಂದು .ಬೆಳಿಗ್ಗೆ ೧೦-೩೦ ಗೆ ಮಂಜಿನ ಅರಮನೆಯತ್ತ ಹೊರಟೆವು ಮಂಜಿನ ಮನೆ ಪ್ರವೇಶಿಸುವುದು ಸುಲಭವಲ್ಲ . ಅದಕ್ಕೆ ಬೇಕಾದ ಉಡುಪುಗಳು ತೊಡಲೇಬೇಕುಹಾಗಾಗಿ ನಾವು ಕೂಡ ಉಚಿತವಾಗಿ ಕೊಟ್ಟ ಜಾಕೆಟ್, ಸಾಕ್ಸ್, ಕೈ ಚೀಲ, ಬೂಟು ತೊಟ್ಟೆವು . ಅದ್ಭುತ .ಒಳಗೆ ಪ್ರವೇಶಿಸುತ್ತಿದ್ದಂತೆ ನಡುಕ ಆರಂಭವಾಯಿತುಮಾಲ್ ಆಫ್ ಎಮಿರೇಟ್ಸ್ ಎಂಬಲ್ಲಿ ೨೨೫೦೦ ಚದರ ಮೀಟರ್ ವಿಸ್ತಾರವಾದ ಪ್ರದೇಶದಲ್ಲಿ ಈ ಮನೆಯನ್ನು ನಿರ್ಮಿಸಿದ್ದಾರೆ . ಇಲ್ಲಿ ೮೫ ಮೀಟರ್ ಎತ್ತರದಮಂಜಿನ ಬೆಟ್ಟ ರಚಿಸಲಾಗಿದೆ. ಇಲ್ಲಿ ಸ್ಕೀಯಿಂಗ್ ಮಕ್ಕಳ ಆಟ ಚಲಿಸುವ ಗೋಳ ಮುಂತಾದ ಮಂಜಿನ ಆಟಗಳಿಗೆ ಸೌಕರ್ಯ ನಿರ್ಮಿಸಲಾಗಿದೆ . ನಾವಂತೂಬಿಲ್ಕುಲ್ ಖುಷಿಅದೆವು  ಮಂಜನ್ನು ಎರಚಾಡಿದೆವು ಉರುಲಾಡಿದೆವು ಜಾರುಬಂಡೆ ಆಡಿದೆವು ಇತರ ಆಟಗಳಿಗೆ ಪ್ರತ್ಯೇಕ ದರವಿದ್ದಿದ್ದರಿಂದ ಆಡಲಿಲ್ಲ ಅಂತೂ೨ ಘಂಟೆಗಳ ಕಾಲ ಅಲ್ಲಿ ಕಳೆದೆವು ಪೆಂಗ್ವಿನ್ ಪ್ರದರ್ಶನವನ್ನು ನೋಡಿದೆವು ೭ ಪೆಂಗ್ವಿನ್ ತಮ್ಮ ಚಮತ್ಕಾರ ತೋರಿಸಿದವು . ಕೈ ಕಾಲು ಬೆಂಡಾಗತೊಡಗಿತು .ಹೊರಗೆಬಂದಾಗ ೪ ಘಂಟೆ ಆಗಿತ್ತು ಅಲ್ಲಿಯೇ ಹೋಟೆಲ್ ಒಂದರಲ್ಲಿ ಊಟ ಮಾಡಿದೆವು ನಂತರ ಮೋನೋ ರೈಲ್ ನಲ್ಲಿ ಪಾಮ್ ದ್ವೀಪದ ಸುತ್ತ ಒಂದು ಸುತ್ತುಹೋಗಿಬಂದೆವು ನಂತರ ಸ್ಮರಣಿಕೆಗಳನ್ನು ಖರೀದಿಸಿ ರೂಂಗೆ ಬಂದಾಗ  ರಾತ್ರಿ ೧೦ ಘಂಟೆ ಆಗಿತ್ತು . ವಿಶ್ರಾಂತಿಗೆ ತೆರಳಿದೆವು .

ದುಬೈ ಪ್ರವಾಸದ ೫ನೇ ಹಾಗೂ ಕೊನೆಯ ದಿನ.

ಬೆಳಿಗ್ಗೆ ೧೧ ಘಂಟೆಗೆ ವಿಮಾನ ನಿಲ್ದಾಣದಲ್ಲಿ ರಿಪೋರ್ಟ್ ಮಾಡಿಕೊಳ್ಳ ಬೇಕಿತ್ತು ಹಾಗಾಗಿ ೧೦ ಘಂಟೆಗೆಲ್ಲ ತಿಂಡಿ ಮುಗಿಸಿ ಹೊರಟೆವು ಮತ್ತದೇ ಆಡಿ ಕಾರ್ .ವಿಮಾನ ೧ ಘಂಟೆಗೆ ಹೊರಟು ೫-೩೦ ಘಂಟೆಗೆ ಅಂದರೆ ಸ್ಥಳೀಯ ಗಡಿಯಾರದಲ್ಲಿ ೭ ಘಂಟೆಗೆ ಡೆಲ್ಲಿ ವಿಮಾನ ನಿಲ್ದಾಣ ತಲಪಿತು ಧುರಾಧೃಷ್ಟ ವಶಾತ್ ನಮ್ಮಲಗೇಜ್ ದುಬೈ ನಲ್ಲೇ ಉಳಿದಿತ್ತು . ನಿಲ್ದಾಣದಲ್ಲಿ ದೂರು  ದಾಖಲಿಸಿ ಬೆಂಗಳೂರು ನಿಲ್ದಾಣದತ್ತ ಓಡಿದೆವು ತಲಪುವ ವೇಳೆಗೆ ಕೊನೆಯ ಕರೆಯೂ ಬಂದಾಗಿತ್ತುವಿಮಾನ ೯ ಘಂಟೆಗೆ ಡೆಲ್ಲಿ ಬಿಟ್ಟು ರಾತ್ರಿ ೧೨ ಘಂಟೆಗೆ ಬೆಂಗಳೂರು ತಲಪಿತು . ಮನೆ ತಲಪಿದಾಗ ರಾತ್ರಿ ೨ ಘಂಟೆ . ಅಂತೂ ದುಬೈ ಪ್ರವಾಸ ಕೊನೆಗೊಂಡಿತ್ತು

Tuesday, April 7, 2015

ಜನುಮದ ಗೆಳತಿಗೆ ಶುಭಾಶಯ

ಜನುಮದ ಗೆಳತಿಯೇ ನಿನಗೆ ಶುಭಾಶಯ
ತುಂಬಿದ ಅರವತ್ತು ವರ್ಷದ ಅವಸರದಿ
ನಡೆದೆ ಜೊತೆ ಜೊತೆಯಲಿ ೩೪ ವರುಷ
ನಾ ಮರೆಯಲಾರೆ ನಿನ್ನ ದೀರ್ಘ ಒಡನಾಟ
ಅನುರಾಗ ಅರಳಿಸಿದೆ ಪ್ರೇಮ ಬಂಧನದಿ
ಅನುಸರಿಸಿದೆ ಜೀವನದ ಕಷ್ಟ ಸುಖದಲಿ
ಮೂಡಿಸಿದೆ ವಿಶ್ವಾಸ ನನ್ನ ಸಿಹಿ ಕಹಿಯಲಿ
ಸಾಂತ್ವನವ ನೀಡುತ ನನ್ನ ಕಷ್ಟದ ದಿನಗಳಲಿ
ಜೊತೆಯಾದೆ ಜವಾಬ್ದಾರಿಯಲಿ ಬೆಂಬಲಿಸಿ
ನಡೆಸಿ ವಿವಾಹ ಎರಡು ತಂಗಿಯರ ತಮ್ಮನ
ತಂದೆ ರುಜಿನದಲಿ ಮಲಗಿರಲು ನೀನಾದೆ
ಆಸರೆ ಅವರಿಗೆ ನನ್ನ ಅನುಪಸ್ಥಿತಿಯಲಿ
ವಿವಾಹದಾರಂಭದಲಿ ಇರಲಿಲ್ಲ ರೇಡಿಯೋ
ಉಟ್ಟಬಟ್ಟೆಯಲಿ ನಡೆದೆ ಹುಬ್ಬಳ್ಳಿಗೆ ಧೈರ್ಯದಿ
ನಡೆಸಿದೆ ಸಂಸಾರ ಸಂತಸದಿ ತಿಂಗಳ ಸಂಬಳದಿ
ಉಳಿಸಿದೆ ಸಿರಿಯ ಮುಂದಿನ ದಿನಗಳಿಗಾಗಿ
ಆಯಿತೆರಡು ಕುಡಿಗಳು ಬೆಳೆಸಿದೆ ಪ್ರೀತಿಯಲಿ
ಉಣಿಸುತ ಪ್ರೇಮ ಪಾಠವ ವಿದ್ಯೆ ಜೊತೆಯಲಿ
ಬೆಳೆದರು ಮಕ್ಕಳು ತಾಯಿಯ ಮಮತೆಯಲಿ
ಪಡೆದರು ದೊಡ್ಡ ವಿದ್ಯೆಯ ಉದ್ಯೋಗವನು
ನಾ ಮಲಗಿರೆ ಅನಾರೋಗ್ಯದಿ ನಿಂತೆ ಜೊತೆಯಲಿ
ಹಗಲಿರುಳೆನ್ನದೆ ನೆರಳಾಗಿ ನಡೆದೆ ಬೆಂಬಲಿಸುತ
ಮನೆಯೊಂದನು ಕಟ್ಟಲು ಚಿಂತಿಸಲು ಇತ್ತೆ ಹಸ್ತ
ಪ್ರತಿದಿನ ಪಯಣಿಸುತ ದೂರವ ಕಟ್ಟಡ ನಿರ್ಮಾಣಕೆ
ನಡೆಸಿದೆ ಎರಡು ಮಕ್ಕಳ ವಿವಾಹ ಸಮಾರಂಭ
ಎಣಿಸದೆ ಅನಾರೋಗ್ಯವನೂ ಸಂಭ್ರಮಿಸುತ
ಜನಿಸಿದಳು  ಮೊಮ್ಮಗಳು ನಿನ್ನ ಆರೈಕೆಯಲಿ
ಬೆಳೆಸಿದೆ ಮೊಮ್ಮಗಳ ಐದುಮಾಸ ಮಮತೆಯಲಿ
ನಿನಗಿದೋ ಶುಭಾಶಯ ತುಂಬಿದ ಆರು ದಶಕದಿ
ಕಳೆದೆ  ಮೂರು ದಶಕಗಳ ಒಲವಿನ ಒಡನಾಟದಿ
ಹರಸಲಿ ರಮಾಪತಿಯು ದೀರ್ಘಆಯುರಾರೋಗ್ಯ
ಸಂಭ್ರಮಿಸಲು ಮೊಮ್ಮಕ್ಕಳು ಮಕ್ಕಳು ಪತಿಯೊಡನೆ
ರಚನೆ : ಕೆ.ವಿ. ಶ್ರೀನಿವಾಸ ಪ್ರಸಾದ್

Tuesday, March 17, 2015

 
 

 
 
 
 
 
 
 
 
 
 
ದಿಯಾ ನನ್ನ ಪ್ರೀತಿಯ ಮೊಮ್ಮಗಳು 
 
ನಗು ನಗುತಾ ನೀ ಬಂದೆ ಮಾಘ ಮಾಸದಿ
ನಗುವಿನಲೆ ಮನಸೆಳೆದೆ ಮೊದಲ ದಿನವೇ
ಮನಮರೆತೆ ನಿನ್ನ ಆ ನಗುವಲಿ ಅಳುವಲಿ
ನಿನ್ನ ನಗುವಿಗೆ ನಾ ಸೋತೆ ಹೇ ಮೊಮ್ಮಗಳೇ
ನಿನ್ನ ಆ ಕೇಕೆ ನಗು ,ಮೋಹಕ ಮುದ್ದು ಮುಖ
ಮಾತಾಡಲು ಸವರಿಸುವ ನಿನ್ನ ನಾಲಿಗೆ ತುಟಿ
ಸ್ಪಂದಿಸುವ ನಿನ್ನ ಅರಳಿರುವ ಕಪ್ಪು ಕಂಗಳು
ಮರೆಯಲಾರೆ ಗಾಢ ನಿದ್ರೆಯಲು ಆ ನಿನ್ನ ಮುಖ

ನಿನ್ನ ಬಗೆ ಬಗೆಯ ಸುಂದರ ಉಡುಪು ವಿನ್ಯಾಸ
ನೀ ಮೆಚ್ಚುವ ನನ್ನ ಬಣ್ಣ ಬಣ್ಣದ ಟೀ ಅಂಗಿಗಳು
ನಿನ್ನ ಗೆಜ್ಜೆಯ ನಿನಾದ ಆ ನಗುವಿನ ಹುಂಕಾರ
ನೀನಾದೆ ನನ್ನ ಪ್ರೀತಿಯ ಮೊಮ್ಮಗಳು ಎಂದಿಗೂ
ಮಗಳು ಹೇಮಾ ಆದಳು ಸನಿಹ ೨೭ ವರುಷದಿ
ನೀನಾದೆ ಸನಿಹ ಕೇವಲ ೨ ತಿಂಗಳಲಿ  ನಗುವಿಂದ
ಗೆದ್ದೆ ,ಕದ್ದೆ ಹೃದಯವ ಮುದ್ದಾದ ನೋಟದಲಿ
ಅಗಲಿರಲಾರದಂತಾಗಿದೆ  ಅರೆ ಕ್ಷಣವು ನಿನ್ನ ಬಿಟ್ಟು
ನೀನಾಗು ಮಿನಗುವ ತಾರೆ ಮುಂದಿನ ವರುಷದಲಿ
ಎರಡು ಕುಟುಂಬಗಳ ಒಲವಿನ ಗೆಲುವಿನ ತಾರೆ
ಓದಿನಲಿ ರೂಪದಲಿ ಸಿರಿತನದಲಿ ಲಾವಣ್ಯದಲಿ
ಇರಲಿ ಶ್ರೀಕಾಂತನನುಗ್ರಹ ಎಂದಿಗೂ ಅನವರತ
_ರಚನೆ :ಶ್ರೀನಿವಾಸ ಪ್ರಸಾದ್ , ನಿನ್ನ ತಾತ

Friday, January 23, 2015

ಬರುತಿಹರು ಭಾರತಕೆ ......

ಬರುತಿಹರು ಭಾರತಕೆ ಬರಾಕ್ ಒಬಾಮ
ಭಾಗಿಯಾಗಲು ಗಣರಾಜ್ಯ ದಿನದಂದು
ಮಾಡಿಹರು ಮೋದಿ ಆಗಮಿಸಲು ಮೋಡಿ 
ಒಪ್ಪಿಹರು ವೀಕ್ಷಿಸಲು ಉತ್ಸವವ ದೀರ್ಘದಲಿ
........................... ಬರುತಿಹರು ಭಾರತಕೆ
ಹರಿಯುತಿಹುದು ಹಣದ ಹೊಳೆ ಭಾರತಕೆ
ಆದರದು ಸಿಗಬಾರದು ಕಾಗೆ ಹದ್ದುಗಳ ಕೈಯಲಿ
ಆಗದು ಅಭಿವೃದ್ದಿ ಮೋದಿಯ ಕನಸಿನಂತೆ
ಸಿಕ್ಕಿದರೆ ಹಣ ದುರಾಶೆಯ ವ್ಯಕ್ತಿಗಳ ಹಸ್ತದಲಿ
...................ಬರುತಿಹರು ಭಾರತಕೆ
ಬೆಸೆಯಲಿದೆ ಬಲವಾಗಿ ಭಾರತದ ಬಾಂದವ್ಯ
ರಕ್ಷಣೆ ಕೈಗಾರಿಕೆ ಪ್ರವಾಸದಾದಿ ಕ್ಷೇತ್ರದಲಿ
ನಲಿದಿಹರು ಭಾರತೀಯರು ವಿಶ್ವದೆಲ್ಲೆಡೆ ಕಂಡು
ಕಾಣರಿಯದ ಮೋದಿ ಒಬಾಮ ನಡುವಣ ಸ್ನೇಹವ
........... ಬರುತಿಹರು ಭಾರತಕೆ
ಸಫಲವಾಗಲಿ ಮೋದಿ ಕಂಡ ವಿದೇಶಿ ನೀತಿ
ಫಲಿಸಲಿ ಅವರ ವಿದೇಶಗಳೊಡನೆಯ ಸ್ನೇಹ
ಕಾಣಲಿ ಅಭಿವೃದ್ದಿ ಭಾರತ ಪ್ರದಾನಿ  ಕಂಡಂತೆ
ಆಗಲಿ  ಬಲಶಾಲಿ ವಿಶ್ವಾದ್ಯಂತ ಎಲ್ಲ ಕ್ಷೇತ್ರದಲಿ 
........... ಬರುತಿಹರು ಭಾರತಕೆ
ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್


Sunday, January 11, 2015

ನಾನಾದೆ ತಾತ ......

ಇಳಿದಿಹಳು ಧರೆಗೆ ಮೊಮ್ಮಗಳು
ಜಯ ಸಂವತ್ಸರದ ಪುಷ್ಯ ಶುಕ್ಲ ಚೌತಿ
ಗುರುವಾರ ಶುಭ ಶ್ರವಣ ನಕ್ಷತ್ರದಲಿ
ಡಿಸೆಂಬರ್ ಮಾಸದ ೨೫ ರಂದು
ಮೂಡಿಹುದು ಸಂತಸ ಸಂಭ್ರಮವು
ನಮ್ಮೆರಡು ಕುಟುಂಬದಲಿ ವಂಶದಲಿ
ಮಗಳನು ಕೊಟ್ಟ ವಾಲ್ಮೀಕಿ ವಂಶಜರಲಿ
ಮಗಳನು ಹಡೆದ ನಡಾದುರ್ ವಂಶದಲಿ
ಆಗಿಹಳು ಮೊಮ್ಮಗಳು ಸೇತುವೆ ನಡುವಲಿ
ಮೂಡಿಸುತ ಪ್ರೇಮ ಪಾಶವ ಪ್ರೀತಿಯ
ಅರಳಿಸುತ ಸಂತಸವ ಎಲ್ಲ ಬಂಧುಗಳಲಿ
ತನ್ನ ಮುದ್ದು ಮಂದಹಾಸ ಮುಗುಳ್ನಗೆಯಲಿ
ಮಿಂಚಿಹುದು ಮಗಳ ಮುಖದಲಿ ಮಂದಹಾಸ
ಹೇಮ ಆಗಿಹಳು ಮಗಳು ದಿಯಾ ಮುಖ ನೋಡಿ
ಮೆರೆದಿಹಳು ಹೆಮ್ಮೆಯಿಂದಲಿ ತಾಯಾದನೆಂದು
ಮರೆತಿಹಳು ಕಳೆದ ಒಂಬತ್ತು ತಿಂಗಳ ನೋವೆಲ್ಲ
ನಲಿದಿಹರು ಅಳಿಯ ರಾಘವರು ಬೀಗುತ
ತಂದೆಯಾದೆನು ಸುಂದರ ಮಗಳಿಗೆ ಎಂದು
ಕುಣಿದಿಹೆನು ನಾನು ತಾತನಾದನೆಂದು
ಆಗಿಹೆನು ಯುವಕ ಮೊಮ್ಮಗಳ ನಗುವಿನಲಿ
 
-----ಕೆ.ವಿ. ಶ್ರೀನಿವಾಸ ಪ್ರಸಾದ್
ಮರಳಿ ಮರಳಿ ಬರುತಿದೆ ಸಂಕ್ರಾಂತಿ

ಸಂಕ್ರಾಂತಿ ಬರುತಿದೆ ಮರಳಿ ಮರಳಿ 
ತರಲೆಂದು ವರ್ಷ ಪೂರ್ತಿ ಸಂತಸವ
ಪ್ರವೇಶಿಸುವನು ಆದಿತ್ಯ ಮಕರ ರಾಶಿ
ಉದಯಿಸುವುದು ಉತ್ತರಾಯಣ ಮರಳಿ
ರೈತರಿಗಿದು ಸುಗ್ಗಿ ಸಂಭ್ರಮದ ಪರ್ವ
ಸಮ್ರಿದ್ದಿ ಸಂತಸ ಸಲ್ಲಾಪ ಸಡಗರ
ಕೂಡಿ ಎಲ್ಲರು ಉಕ್ಕಿಸುವರು ಹುಗ್ಗಿಯ
ಹಂಚಿ ಸವಿಯುವರು ಸಿಹಿ ಸಿಹಿ ಊಟವ
ಸಿಂಗರಿಸುವರು ಬಣ್ಣದಿ ಹಸು ಕರುಗಳ
ತೊಡುವರು ಮನೆ ಮಂದಿ ಹೊಸ ಬಟ್ಟೆಯ
ಒಡ ಹುಟ್ಟಿದವರ ಕರೆದು ಕಲೆತು ಪೂಜಿಸಿ
ಹಿರಿಯರ ತಂದೆ ತಾಯಿಯರ ಬಂಧುಗಳ
ಎಳ್ಳು ಬೆಲ್ಲವ ಬೆರೆಸಿ ಮನೆ ಮಂದಿಯರು
ಸವಿಯುವರು ನುಡಿಯುತ ಸವಿ ಮಾತ
ಹರಸುತ ಎಲ್ಲೆಡೆ ಸಂತಸ ಸುಖ ಸಮ್ರಿದ್ದಿಯ
ನೆರವಾದ ಎಲ್ಲ ಮಂದಿ ಪ್ರಾಣಿ ಸಸ್ಯ ವನಗಳ
ನನಗಾಗಿಹುದು ಜಯ ಸಂವತ್ಸರದ ಸಂಕ್ರಾಂತಿ
ದ್ವಿಗುಣ ಸಂಭ್ರಮದ ಸಂತಸದ ಸಂಕ್ರಾಂತಿ
ಆಗಮಿಸಿಹರು ಲಕ್ಷ್ಮಿಯರು ಈರ್ವರು ಮನೆಗೆ
ಸೊಸೆ ರಾಜಶ್ರೀ ಮತ್ತು ಮೊಮ್ಮಗಳು ದಿಯಾಶ್ರೀ

-----ಕೆ.ವಿ. ಶ್ರೀನಿವಾಸ ಪ್ರಸಾದ್