ನನ್ನ ಕೆಲವು ಮಿತ್ರರ ಅಪೇಕ್ಷೆಯಂತೆ ಭಗವಾನ್ ಅಗಸ್ತ್ಯ ಮುನಿ ಪ್ರಣೀತವಾದ "ಆದಿತ್ಯ ಹೃದಯ" ಸ್ತೋತ್ರದ ಕನ್ನಡದ
ಅನುವಾದವನ್ನು ಮೂಲಕ್ಕೆ ಚ್ಯುತಿ ಬಾರದಂತೆ ಈ ಕೆಳಗೆ ಭಗವದಾಜ್ಞೆಯಂತೆ ಮಾಡಲು ಯತ್ನಿಸಿದ್ದೇನೆ.ಅದು ಮಿತ್ರರಿಗೆ
ಇಷ್ಟವಾದರೆ ನನ್ನ ಪ್ರಯತ್ನ ಸಾರ್ಥಕ.ಇದನ್ನು ಮೂರು ಕಂತಿನಲ್ಲಿ ಅಂದರೆ,ಪೀಠಿಕೆ,ಸ್ತೋತ್ರ ಮತ್ತು ಫಲಶ್ರುತಿ ಎಂಬುದಾಗಿ
ಪ್ರಕಟಿಸುತ್ತಿದ್ದೇನೆ.ಕೃಷ್ಣಾರ್ಪಣಮಸ್ತು .
ಆದಿತ್ಯ ಹೃದಯ ಸ್ತೋತ್ರ
ಪೀಠಿಕೆ:
ಸಮರದಲಿ ಬಳಲಿದಂತಿದ್ದ
ಚಿಂತಾಮಗ್ನನಾಗಿದ್ದ ರಾಮನನು
ಎದುರಿನಲ್ಲಿ ಯುದ್ಹಸಂನದ್ದನಾಗಿ
ನಿಂತ ರಾವಣನನು ಕಂಡರು(ಅಗಸ್ತ್ಯರು)
ದೇವತೆಯರ ಒಡಗೂಡಿ ಸಮರ
ವನು ವೀಕ್ಷಿಸಲು ಆಗಮಿಸಿದ್ದ
ಭಗವಾನ್ ಅಗಸ್ತ್ಯ ಮುನಿಗಳು
ರಾಮನನ್ನು ಸಮೀಪಿಸಿಂತೆನ್ದರು
ಹೇ ರಾಮ,ರಾಮ,ಮಹಾಬಾಹು ಕೇಳು
ಸನಾತನವು,ಗುಪ್ತವಾದ ಮಂತ್ರ
ಯಾವುದರಿಂದ ಸರ್ವ ಶತ್ರುಗಳ
ರಣರಂಗದಿ ಜಯಿಸಬಹುದೋ (ಆ ಮಂತ್ರ)
ಪುಣ್ಯಕರವೂ ಸರ್ವ ಶತ್ರುಗಳ
ನಾಶಕವೂ ಆದ ಆದಿತ್ಯಹೃದಯ
ನಿತ್ಯ ಜಪ ಮಾತ್ರ ವಿಜಯವು
ಮಂಗಳವು,ಅಕ್ಷಯವು ಲಭ್ಯವು.
ಸರ್ವರೀತಿಯ ಮಂಗಳಕರವು
ಸರ್ವ ಪಾಪಗಳ ನಿವಾರಕವು
ಚಿಂತೆ,ಶೋಕಗಳ ಶಮನಕಾರಿಯು
ಆಯಸ್ಸು,ಸಂಪತ್ತು ವೃದ್ಧಿಸುವುದು
ಸ್ತೋತ್ರ :
ಚಿಮ್ಮುತ್ತಿರುವ ಕಿರಣವುಳ್ಳವನು
ದೇವಾಸುರರಿಂದ ವಂದಿತನು
ವೈವಸ್ವತಸುತನು ,ಭೂಪತಿಯು
ಆದ ಸೂರ್ಯನನು ನಮಸ್ಕರಿಸು
ಸೂರ್ಯನು ಸರ್ವದೇವರಲ್ಲಿಹನು
ತೇಜಸ್ವಿ ಕಿರಣಗಳಿಂದ ಆವೃತನು
ದೇವದಾನವ ಗಣವನು ತನ್ನ
ಕಿರಣಗಳಿಂದ ಪೋಷಿಸುವವನು
ಇವನೇ ಪಿತಾಮಹನು,ವಿಷ್ಣುವು
ಶಿವನು,ಸ್ಕಂದನು,ಪ್ರಜಾಪತಿಯೂ
ಮಹೆಂದ್ರನು,ಕುಬೇರನು,ಕಾಲನು
ಯಮನು,ಚಂದ್ರನು,ವರುಣನಾದಿಯು
ಪಿತೃಗಳು,ಅಷ್ಟಾವಸುವು,ಸಾಧ್ಯನು
ಅಶ್ವಿನಿದೇವತೆಯು ,ಮರುತನು
ಅಗ್ನಿಯು,ವಾಯುವು,ಪ್ರಾಣವಾಯುವು
ಋತುಗಳ ಕರ್ತನು,ಪ್ರಭಾಕರನು
ಆದಿತ್ಯನು, ಪೃಥ್ವಿಗೊಡೆಯ ಸೂರ್ಯನು
ಗಗನ ಸಂಚಾರಿಯು,ವೃಷ್ಟಿಭೂತನು
ಸುವರ್ಣ ಸದೃಶ ಕಾಂತಿಯುಳ್ಳವನು
ಬ್ರಹ್ಮಾಂಡ ಕಾರಕನು,ಅಹರ್ನಿಶನು
ಪಚ್ಚೆಯ ಅಶ್ವಾರೋಹಿ,ಸಹಸ್ರಾಕ್ಷನು
ಸಪ್ಥಾಶ್ವ ರಥಿಯು,ನಿಶಾವರೋಹಿಯು
ಸುಖ ನೀಡಿ,ದುಃಖ ಕಳೆಯುವವನು
ಪ್ರಳಯದಿ ಪುನಃ ಜನಿಸುವವನು
ಸ್ವರ್ಣ ಮನದವನು,ಶೀತಲನು
ತಾಪ ಕಾರಕನು,ತೇಜೋಮಯನು
ಗರ್ಭದಿ ತೀಕ್ಷ್ನಾಗ್ನಿ ಸಹಿತನು,ರುದ್ರನು
ಹಿಮಾರಿಯು,ಅಸ್ತಮದಲಿ ಶಾಂತನು
ಆಕಾಶಪತಿಯು,ತಮೋಹಾರಿಯು
ಋಗ್ಯಜುಸ್ಸಾಮ ಪಾರಂಗತನು
ವೃಷ್ಟಿಕಾರಕನು,ಸಾಗರಮಿತ್ರನು
ವಿಂಧ್ಯಾಟವಿಯಲಿ ವೇಗಗಮಿತನು
ಅರಿಮರ್ಧನನು, ಮಂಡಲಿಯು
ಪೀತಾಂಬರಿಯು,ತಾಪಕಾರಕನು
ಮಹಾತೇಜಸ್ವಿಯು,ಕವಿಯು,ವಿಶ್ವನು
ಸಕಲ ಪ್ರಾಣಿಗಳಲಿ ಪ್ರೇಮಿಯು
ನಕ್ಷತ್ರ,ಗ್ರಹ,ತಾರಾಸಮೂಹಕೆ
ಒಡೆಯನು,ವಿಶ್ವೋತ್ಪತ್ತಿ ಕಾರಣನು
ತೇಜಸ್ವಿಗಳಲಿ ಮಹಾತೇಜಸ್ವಿಯೂ
ದ್ವಾದಶಾದಿತ್ಯನಾದವನಿಗೆ ನಮನ
ಪೂರ್ವದಿ ಏಳುವವಗೆ ನಮನ
ಪಶ್ಚಿಮದಿ ಜಾರುವವಗೆ ನಮನ
ಸಕಲ ಜ್ಯೋತಿಗಣದೊಡೆಯನೆ
ದಿವಿಕಾರಕನೆ ಅನಂತ ನಮನ
ಜಯಪ್ರದನು,ಮಂಗಳಕಾರಕನು
ಕಪಿಲಾಶ್ವವುಳ್ಳ ರವಿಗೆ ನಮನ
ಸಹಸ್ರ ಕಿರಣವುಳ್ಳ ಅದಿತಿಸುತ
ತೇಜೋಪುಂಗನಿಗೆ ಸನಮೋನಮಃ
ಅರಿಗೆ ರುದ್ರನು,ಇಷ್ಟ ರಕ್ಷಕನು
ವೇಗದಿ ಗಮಿಸುವ ರವಿಗೆ ನಮನ
ಕಮಲೋತ್ಪತ್ತಿ ಜನಕಗೆ ನಮನ
ಮಾರ್ತಾಂಡನಿಗೆ ಸನಮೋನಮಃ
ಬ್ರಹ್ಮೇಶ ಅಚ್ಯುತರ ಒಡೆಯನೆ
ಸೂರ್ಯನೇ,ಅಪಾರ ತೇಜಸ್ವಿಯೇ
ಜೀವಿಗಳ ಸೃಷ್ಟಿಸಿ ಕಬಳಿಸುವ
ಘೋರ ರೂಪವುಳ್ಳವನೇ ನಮನ
ತಮದ,ಹಿಮದ ನಾಶಕಾರಕನೆ
ಅಮಿತಾತ್ಮನೆ,ಶತ್ರುವಿನಾಶಕನೆ
ಕೃತಘ್ನರನು ಸಂಹರಿಸುವವನೆ
ಜ್ಯೋತಿಷಿಯರ ಜನಕನೆ ನಮನ
ಪುಟವಿಟ್ಟ ಚಿನ್ನದಂತಿರುವವನೆ
ಅಗ್ನಿಸ್ವರೂಪನೆ, ವಿಶ್ವ ಕಾರಣನೆ
ಲೋಕದ ಎಲ್ಲ ಕಾರ್ಯಗಳ ಸಾಕ್ಷಿಯೇ
ಕತ್ತಲ ನೀಗಿಸುವವನೇ ನಮನ
ಆದಿತ್ಯನು ಭೂತಗಳ ಮರ್ಧನನು
ಪುನಃ ಅವುಗಳ ಸೃಷ್ಟಿಸುವವನು
ತಾಪದಿ ಒಣಗಿಸಿ,ಸುಡುವವನು
ಮಳೆಗರಿಸಿ ಮರಳಿ ಜೀವದಾತನು
ಮಲಗಿದವರಲಿ ಜಾಗೃತನು
ಭೂತಗಳಲಿ ಪರಿನಿಷ್ಥಿತನು
ಇವನೇ ಅಗ್ನಿಹೋತ್ರವು ಮತ್ತು
ಅಗ್ನಿಹೋತ್ರುಗಳಿಗೆ ಫಲಧಾತನು
ಇವನೇ ಚತುರ್ವೇದವು,ಸಕಲ
ಯಜ್ಞಗಳು,ಯಜ್ಞ ಫಲವು ಇವನೇ
ಪೃಥ್ವಿಯಲಿ ನಡೆವ ಎಲ್ಲ ಕೃತ್ಯಕ್ಕೂ
ಈ ರವಿಯೇ ಒಡೆಯನೂ ಆಗಿದ್ದಾನೆ
ಫಲ ಶ್ರುತಿ :
ಯಾರು ಆಪತ್ಸಮಯದಿ ,ಕಷ್ಟದಿ
ಅರಣ್ಯದಿ,ಭಯ ಸಂದರ್ಭದಿ
ಆದಿತ್ಯ ಹೃದಯ ಪಠಿಸುವರೋ
ಅವರು ನಿಶ್ಚಯ ಸಂಕಟರಹಿತರು
ಹೇ ರಾಮ!ಏಕಾಗ್ರದಿಂದ ನಮಿಸು
ದೇವದೇವ ಜಗತ್ಪತಿ ರವಿಯ
ಆದಿತ್ಯ ಹೃದಯ ತ್ರಿವಾರ ಜಪಿಸಿ
ಸಮರದಲಿ ವಿಜಯಶಾಲಿಯಾಗು
ಈ ಕ್ಷಣದಲಿ ಹೇ!ಮಹಾಬಾಹೋ
ರಾವಣನ ನೀನು ವಧಿಸುತ್ತೀಯೇ
ಎಂದು ನುಡಿದರು ಅಗಸ್ತ್ಯ ಮುನಿ
ನಿರ್ಗಮಿಸಿದರು ಬಂದದಾರಿಯಲಿ
ಇದನಾಲಿಸಿದ ತೇಜಸ್ವಿ ರಾಮ
ದುಃಖ ಕಳೆದವನಾದವನಾಗಿ
ಸುಪ್ರೀತ,ಸುಪ್ರಸನ್ನ ರಾಘವನು
ಮರಳಿ ಪ್ರಯತ್ನವ ಮಾಡಿದನು
ಆಡಿತ್ಯನನು ವೀಕ್ಷಿಸಿ ,ಜಪಿಸಿ
ಅತ್ಯಂತ ಹರ್ಷವನ್ನು ಹೊಂದಿದನು
ಮೂರುಬಾರಿ ಆಚಮಿಸಿ,ಶುಚಿಹೊಂದಿ
ವೀರ್ಯವಂತ ರಾಮ ಧನು ಹಿಡಿದನು
ಸಮರಕ್ಕಾಗಿ ಪುನರಾಗಮಿಸಿದ
ರಾವಣನ ನೋಡಿ ಹರ್ಷಿತನಾದನು
ಸರ್ವಪ್ರಯತ್ನದಿಂದ ರಾವಣನನು
ಸಂಹರಿಸಲು ಧೃಡ ಚಿತ್ತನಾದನು
ಮುದಗೊಂಡ,ಅತ್ಯಂತ ಹರ್ಷಿತನಾದ
ರಾಮನ ಕುರಿತು ರವಿ ನುಡಿದನು
ಸುರಗಣದ ಮಧ್ಯೆ ಪ್ರತ್ಯಕ್ಷಗೊಂಡು
ನಿಶ್ಚಯ ರಾವಣನ ನಾಶ ಎಂದನು
ಇತಿ ಆದಿತ್ಯ ಹೃದಯ ಸ್ತೋತ್ರಂ ಸಂಪೂರ್ಣಂ
ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಇ-ಮೇಲ್:sreenivasaprasad.kv@gmail.com
No comments:
Post a Comment