Tuesday, June 26, 2012









ನಮನ ಕೋಟಿ ನಮನ 

(ಶಷ್ಟ್ಯಬ್ಧಿಪೂರ್ತಿ ಉತ್ಸವದ  ಸಂದರ್ಭದಲ್ಲಿ ರಚಿಸಿದುದು)


ಜನಿಸಿದೆ ಆರು ದಶಕಗಳ ಹಿಂದೆ
ತಂದೆತಾಯಿಯ ಪ್ರೀತಿಯ ಕುವರನಾಗಿ
ತಾತ ಅಜ್ಜಿಯರ ಮುದ್ದಿನ ಮೊಮ್ಮಗನಾಗಿ
ಅತ್ತೆ ಐವರ ಲಲನೆ ಪಾಲನೆಯಲಿ


ಕಳೆದೆ ಬಾಲ್ಯವ ಆನಂದದಲಿ, ಬಾಲ
ಸಖರೊಡನೆ,ಅತ್ತಂಗ,ಅಮ್ಮಂಗರ ಜೊತೆ
ಕಲಿತೆ ಪಾಠವ ಸದ್ಗುರು ಅನುಗ್ರಹದಿ
ವೇದಗಳ ಕಲಿತೆ ದೊಡ್ದಪ್ಪಂದಿರಲಿ


ಆಶಿಸಿದರು ತಂದೆ ಆಗೆಂದು ಇಂಜನಿಯರ್
ಇರಲಿಲ್ಲ ತಾಯಿ ಅದನೋಡಿ ಆನಂದಿಸೆ
ಬಯಸಿದರು ತಂದೆ ಆಗೆಂದು ಜಿಲ್ಲಾಧಿಕಾರಿ
ದೈವ ಬಯಸಿತು ಆಗೆಂದು ಬ್ಯಾಂಕ್ ಅಧಿಕಾರಿ


ತಂದೆ ಆದೇಶಿಸೆ ವರಿಸಿದೆ ಅತ್ತೆಸುತೆಯ
ಆದಳು ಜೀವನ ಸಖಿ ಅಂಬಾಸುತೆ ವಸಂತ
ಚಿಗುರಾದವು ಎರಡು ಎಳೆಗಳು,ತಾತನ
ಪ್ರೀತಿಯ ಮೊಮ್ಮಕ್ಕಳಾಗಿ,ಕುಡಿಯಾಗಿ ವಂಶಕೆ


ನೀಡಿದೆ ತಂದೆಗೆ ಸ್ನೇಹಹಸ್ತ ಅವರ ಕಾರ್ಯಕೆ
ಸಭೆಗಳಲಿ,ಮುದ್ರಣಾಲಯ,ಶಾಲೆಗಳಲಿ
ಪತ್ರಿಕೆಯಲಿ,ಕುಟುಂಬ ಜವಾಭ್ದಾರಿಯಲಿ
ಆಯಿತು ತಂಗಿಯರ ವಿವಾಹ ತಂದೆ ದಾರಿಯಲಿ


ನೆರವಾದೆ ಅನುಜಗೆ ಜೀವನ ಆಯ್ಕೆಯಲಿ
ಅವನ ಆಯ್ಕೆಯ ಸತಿಯ ವಿವಾಹದಲಿ
ಸಾರ್ಥಕವೆನಿಸಿದೆ ಕಳೆದ ಆರು ದಶಕಗಳು
ಗಳಿಸಿದೆ ಸತ್ಕೀರ್ತಿಯ ಬ್ಯಾಂಕ್ ಉದ್ಯೋಗದಲಿ


ಬ್ಯಾಂಕ್ ಉದ್ಯೋಗದಲಿ ನೆರವಾದೆ,ಉದ್ದಿಮೆ
ಕೈಗಾರಿಕೆಗಳ ಸ್ಥಾಪನೆ,ಪೋಷಣೆಯಲಿ
ನೆರವಾದೆ ವಿದ್ಯಾಲಯದ ಟ್ರಸ್ಟಿಯಾಗಿ
ಬಡ ಹೆಣ್ಣುಮಕ್ಕಳ ವಿದ್ಯಾವ್ಯಾಸಂಗದಲಿ


ತೀರಿಸಿರುವೆ ತಂದೆತಾಯಿಯರ ಪಿತೃ ಋಣ
ನಡೆಸಿ ಅವರ ಅಂತಿಮ ಕ್ರಿಯೆಯ ಶಾಸ್ತ್ರ ವಿಧದಿ
ನೀಡಿರುವೆ ಅವರ ಮುಕ್ತಿಗೆ ಪಿಂಡ ತರ್ಪಣವ
ಗಯೆಯಲಿ,ಬದರಿ,ಕಾಶಿ,ಗಂಗೆಸಂಗಮದಲಿ


ಬಯಸಲಿಲ್ಲ ಫಲವ,ಮಾಡಿದೆ ಕರ್ತವ್ಯವ
ಶ್ರೀ ಕೃಷ್ಣ ಸಂದೇಶದಂತೆ ಸಾತ್ವಿಕತ್ವದಲಿ
ಪ್ರೀತಿಯ ನಮನ ನನ್ನೆಲ್ಲ ಬಂಧುಗಳಿಗೆ
ಸಖರಿಗೆ,ಅತ್ತೆಯರಿಗೆ,ಅಜ್ಜಿಯರಿಗೆ


ನಮನ ಅತ್ತಂಗ,ಅಮ್ಮಂಗ,ಗೆಳೆಯರಿಗೆ
ಗುರುಗಳಿಗೆ,ಒಲವಿನ ಸತಿಸುತಸುತೆಗೆ
ಅಳಿಯರಿಗೆ,ಬೀಗರಿಗೆ,ಜೊತೆಸಾಗಿದ
ಬಂಧುಬಾಂಧವರಿಗೆ,ನೆರವಾದ ಶ್ರೀಯಃ ಪತಿಗೆ


ತೆರಳುತಿಹೆನು ವಾನಪ್ರಸ್ತ್ಹಕೆ,ಕಳೆಯೇ
ಉಳಿದೆರಡುದಿನಗಳ ಹರಿ ಸ್ಮರಣೆಯಲಿ
ಆಶೀರ್ವದಿಸಿ ದಾರಿ ಸುಗಮವಿರಲೆಂದು
ಕೋಟಿನಮನ,ನಿಮಗೆಲ್ಲರಿಗೂ ವಂದನೆಗಳು


ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್ 


No comments:

Post a Comment