Saturday, April 9, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ
 
ಪಾರ್ಥ ನುಡಿದ, ನಿನ್ನ ಅನಂತತೆಯ ಕೇಳಿ ನಿರ್ಮೋಹನಾದೆ
ನಿನ್ನ ಅನಂತ ರೂಪವನ್ನು ನೋಡ ಬಯಸುವೆನೆಂದ
ಕೃಷ್ಣ ನೀಡಿದ ದಿವ್ಯ ದೃಷ್ಟಿಯ ವಿರಾಟ ರೂಪ ಕಾಣಲು
ದಿಗ್ಭ್ರಮೆಗೊಂಡ ಪಾರ್ಥ ಸಹಸ್ರ ಶೀರ್ಷಾ ಪುರುಷನ ಕಂಡು

ಅಸಂಖ್ಯ ಬಾಯಿಗಳು,ಚಕ್ಷುಗಳು,ಕರಗಳು,ಮುಖಗಳು
ಕಮಲಾಸನ ಬ್ರಹ್ಮ, ಶೂಲಪಾಣಿ ಶಿವ, ಎಲ್ಲ ಋಷಿಗಳು
ಬೆಂಕಿಯಂತೆ ಪ್ರಜ್ವಲಿಸುತ್ತಿರುವ ಕಣ್ಣುಗಳು,ಸಹಸ್ರ
ಆದಿತ್ಯ ಸಂಕಾಶ ,ಶಂಖ ಚಕ್ರ ಗಧಾಯುಧ ವಿಷ್ಣು ವನು 

ಭೀಷ್ಮ ದ್ರೋಣ ಆದಿ ಯೋಧರು ವಿರಾಟ ರೂಪದಲಿ
ಅಂತ್ಯಗೊಳ್ಳುವುದ ಕಂಡ ಪಾರ್ಥ ಭಯಭೀತನಾದ
ಪ್ರಭು, ನೀನೇ ವಾಯು, ಯಮ, ಅಗ್ನಿ,ಜಲ,ಚಂದ್ರ
ಪಿತಾಮಹನೂ, ಆದಿ ಅಂತ್ಯನು ನೀನೇ, ಪ್ರಣಾಮಗಳೆಂದ 

ಹೇ ವಿರಾಟ್ರೂಪಿಯೇ, ನೋಡಲಾರೆ ಭೀಕರ ರೂಪವ
ಮರಳಿ ಅನುಗ್ರಹಿಸು ನಿನ್ನ ಮೊದಲಿನ ರೂಪವ
ನುಡಿದ ಕೃಷ್ಣ, ಈ ವಿರಾಟ್ ರೂಪ ಲಭಿಸದು ಎಲ್ಲರಿಗೂ
ಯಜ್ಞ, ಅಧ್ಯಯನ, ದಾನ, ತಪಗಳಾವುದರಿಂದ ಅಲಭ್ಯ

ನನ್ನ ವಿರಾಟ್ರೂಪವನರಿಯಲು ಭಕ್ತಿ ಬೇಕು
ನನಗಾಗಿ ಕರ್ಮ ಮಾಡಬೇಕು, ಬದುಕಿನ ಪರಮ
ಗುರಿಯಾಗಿಸಬೇಕು, ಬಿಡಬೇಕು ಕಾಮ ಕ್ರೋಧ ಅಹಂ
ಜಪಿಸಬೇಕು, ಸದಾ ಅನನ್ಯ ಚಿಂತನೆಯಿಂದೆಂದ ಕೃಷ್ಣ

ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬



 

No comments:

Post a Comment