Thursday, April 14, 2011

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೮ -ವೈರಾಗ್ಯದ ಪರಿಪೂರ್ಣತೆ

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೮  -ವೈರಾಗ್ಯದ ಪರಿಪೂರ್ಣತೆ
 
ಯಜ್ಞ ದಾನ ತಪಸ್ಸುಗಳು ಅತ್ಯಾಜ್ಯವು
ಕರ್ತವ್ಯಗಳು ಮಾಡಲೇ ಬೇಕಾದವು 
ಭಯ, ಆಯಾಸ,ಕ್ಲೇಶಕರಗಳೆಂದು 
ವರ್ಜಿಸಲಾಗದವು, ಅನುಸರಿಸಲೇಬೇಕಾದವು

ಕರ್ತವ್ಯಗಳು ಸಾತ್ವಿಕವಾಗಿ ನಿಸ್ಸಂಗ
ನಿರಪೇಕ್ಷ, ಕರ್ಮಫಲ ತ್ಯಾಗದಿಂದಿರಬೇಕು
ಪರಿಶುದ್ದ ಭಕ್ತಿ ಇಂದ  ನನ್ನನರಿಯಲು ಸಾಧ್ಯ
ಪಾರ್ಥ,ಕರ್ಮಗಳನು ನನಗರ್ಪಿಸಿ ಧ್ಯಾನದಲ್ಲಿರು

ನನ್ನ ಪ್ರಜ್ಞೆ ಬಂದಾಗ ಆತಂಕಗಳು ನಿವ್ರಿತ್ತಿಯಾಗಿ
ದಿವ್ಯ ಶಾಂತಿಯಿಂದ ಪರಮ ಪದವ ಪಡೆಯುವೆ
ಕೃಷ್ಣ ನುಡಿದ, ನನ್ನನು ಕುರಿತು ಸದಾ ಚಿಂತಿಸು
ಭಕ್ತನಾಗು, ಪೂಜಿಸು ಅಂತ್ಯದೆ ನನ್ನನು ಹೊಂದುವೆ

ಪರಿತ್ಯಜಿಸು ಎಲ್ಲ ಧರ್ಮವನ್ನು, ಶರಣಾಗು ನನಗೆ
ನಾನು ಮುಕ್ತನಾಗಿಸುವೆ ಸಕಲ ಪಾಪಗಳಿಂದ
ನನ್ನ ಸಂದೇಶವನು ಪಾಲಿಸುವ ಜೀವಿಗಳು
ಪಾಪವರ್ಜಿತರಾಗಿ ಪುಣ್ಯಲೋಕ ಪಡೆಯುವರು

ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ, ಗಾಂಡೀವಿ
ಪಾರ್ಥನಿರುವನೋ ಅಲ್ಲಿರುವುದು ನಿಶ್ಚಯವು
ಸಿರಿ,ವಿಜಯ,ಶಕ್ತಿ,ನೀತಿ,ಅಭಯ, ಧರ್ಮ
ರಕ್ಷಿಸುವೆ ಅನವರತ, ಯೋಗಕ್ಷೇಮ ವಹಿಸುತ


ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬


 

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೭-ಶ್ರದ್ಹೆಯ ಪ್ರಬೇಧಗಳು

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೭-ಶ್ರದ್ಹೆಯ ಪ್ರಬೇಧಗಳು

ಪಾರ್ಥ ಕೇಳಿದ ಶಾಸ್ತ್ರ, ಪ್ರಮಾಣಗಳು
ಸತ್ತ್ವ  , ರಾಜ ,ತಾಮಸಿ ಗಳಿಗೆ- ಯಜ್ಞ ತಪ
ದಾನ ,ಆಹಾರಗಳು ವಿಭಿನ್ನವೇ ಕೃಷ್ಣ?
ಅವುಗಳ ಪ್ರಭೇದಗಳನ್ನು ಬೋಧಿಸು

ಸಾತ್ವಿಕ ಆಹಾರವು ರಸಮಯವಾಗಿಯೂ
ಜಿಡ್ಡಿನಿಂದ ಕೂಡಿದ್ದು, ಹೃದಯಕ್ಕೆ ತಂಪಾಗಿಯು
ಆರೋಗ್ಯಕ್ಕೆ ಹಿತವಾಗಿಯೂ ಆಯುರ್ವರ್ಧಕವು
ಕೂಡಿದ್ದಾಗಿದ್ದು , ಪರಿಶುದ್ಧವಾಗಿರುತ್ತವೆ

ರಾಜಸ ಆಹಾರ ಕಹಿ, ಹುಳಿ,ಉಪ್ಪಿನಿಂದಿದ್ದು
ದುಃಖ,ಶೋಕ,ರೋಗಗಳಕಾರಕವು
ತಾಮಸ ಆಹಾರ ಹಳಸಿದ್ದಾಗಿದ್ದು   ಅನ್ಯರು
ಉಳಿಸಿದ್ದಾಗಿದ್ದು ದುರ್ವಾಸನೆಯಿಂದ ಇರುತ್ತದೆ

ಫಲಾಪೇಕ್ಷೆಯಿಲ್ಲದ ಯಜ್ನವು ಸಾತ್ವಿಕವು
ಐಹಿಕ  ಲಾಭ,ದರ್ಪದ ಯಜ್ಞ ರಾಜಸವು
ಅಶ್ರದ್ದಯಾ, ಪ್ರಸಾದ ವಿತರಣೆಯಿಲ್ಲದ್ದು ತಾಮಸ 
ನಿರಪೇಕ್ಷ, ನಿರ್ಮೋಹ ಯಜ್ನವೇ  ಶ್ರೇಷ್ಠ

ತಂದೆ, ತಾಯಿ, ಗುರು,ಹಿರಿಯರ ಉಪೇಕ್ಷಿಸುವ
ತಪಸ್ಸು ತಾಮಸವು, ಪರಮಾತ್ಮನಿಗಾಗಿಯೇ
ಮಾಡುವ ತಪಸ್ಸು ಸಾತ್ವಿಕವು, ಅಪಾತ್ರರಿಗೆ ದಾನ
ರಾಜಸ, ಸತ್ಪಾತ್ರರಿಗೆ ಫಲ ನಿರೀಕ್ಷಿಸದ ದಾನ, ಸಾತ್ವಿಕ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬

Tuesday, April 12, 2011

ರಾಮ ರಾಘವನಿಗೆ ಮಂಗಳವು

ರಾಮ ರಾಘವನಿಗೆ ಮಂಗಳವು
ಭುವಿಯಲಿ ವಿಘ್ನವಾಗಲು ಯಾಗ ತಪಗಳು
ಆಸುರೀಶಕ್ತಿ ವರ್ಧಿಸಿ ಪೀಡಿಸಲು ತಾಪಸಿಗಳ
ದೇವತೆಗಳ ಮುನಿಗಳ ಪ್ರಾರ್ಥನೆಗೊಲಿದ 
ಕೌಸಲ್ಯಾತನಯ ದಶರಥ ರಾಮನಿಗೆ ಮಂಗಳವು

ಜನಿಸಿದೆ ಅನುಜ ಲಕ್ಷ್ಮಣ ಭರತ ಶತ್ರುಘ್ನರೊಡನೆ
ಬೆಳೆದೆ ಮಾತೆ ಕೌಸಲ್ಯ, ಕೈಕೆಯೀ, ಸುಮಿತ್ರೆ
ಇವರ ಅಪ್ರತಿತಮ ಅಸಮಾನ ಪ್ರೇಮದಲಿ
ಕೌಸಲ್ಯಾ ತನಯ ದಶರಥ ರಾಮನಿಗೆ ಮಂಗಳವು

ಬಾಲ್ಯದಲೇ ಅಸಮಾನ ಶಕ್ತಿ ಗಳಿಸಿ ವಿಶ್ವಾಮಿತ್ರರ
ಯಾಗ ಸಂರಕ್ಷಣೆಮಾಡಿ, ರಕ್ಕಸರ ವಧಿಸಿ
ಜನಕಪುರಿಯಲಿ ಸ್ವಯಮ್ವರದಿ ಸೀತೆಯ ವರಿಸಿದ
ಕೌಸಲ್ಯಾ ತನಯ ದಶರಥ ರಾಮನಿಗೆ ಮಂಗಳವು

ಪಿತ್ರ್ ವಾಕ್ಯ ಪಾಲನೆಗೆ ರಾಜ್ಯ ತ್ಯಜಿಸಿ ವನಕೆ ತೆರಳಿ
ಚತುರ್ದಶ  ಸಂವತ್ಸರ ಗೆಡ್ಡೆ ಗೆಣಸು ತಿನುತಾ,
ಮೋಸದಿಂದ ಸೀತೆಯ ಅಪಹರಿಸಿದ ರಾವಣನ
ವನಚಾರಿ ವಾನರರ ಸಖ್ಯದಲಿ ಸಂಶೋದಿಸಿದೆ

ವಾನರ ಸೈನ್ಯ ಸಮೇತ ಲಂಕೆಗೆ ತೆರಳಿ ಘೋರ
ಸಮರದಿ ರಾವಣ ಕುಂಭಕರ್ಣರ  ಸಂಹರಿಸಿ
ಮಡದಿ ಸೀತೆಯ ಸಮೇತ ಮರಳಿ ಅಯೋಧ್ಯೆಗೆ
ರಾಮರಾಜ್ಯವ ನೀಡಿದ ಹನುಮ ರಾಮನಿಗೆ ಮಂಗಳವು

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 

Sunday, April 10, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೬ - ದೈವಿ ಆಸುರಿ ಸ್ವಭಾವಗಳು

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೬ - ದೈವಿ ಆಸುರಿ ಸ್ವಭಾವಗಳು
 
ಮನಸಿನ ಸ್ವಭಾವಗಳು ಎರಡು - ದೈವೀ, ಆಸುರೀ,
ದೈವೀಗುಣಗಳಿರುವುವು   ಪುಣ್ಯವಂತರಲಿ, ಸದಾ
ಪ್ರಾಣಿ ದಯೆ,ತ್ಯಾಗ,ಶಾಂತಿ,ಸರಳತೆ,ಅಹಿಂಸೆ
ಅಕ್ರೋಧ, ಸಂಯಮ,ನಮ್ರತೆ,ಕ್ಷಮೆ, ಸ್ಥೈರ್ಯ

ಗೌರವ ಕೀರ್ತಿಗಳಿಗೆ ಆಸೆಪಡದಿರುವುದು,
ದುರಾಶೆ ಇಲ್ಲದಿರುವುದು, ತೃಪ್ತಿ,ಧ್ರಿಡ ಸಂಕಲ್ಪ
ಅಭಯ, ದಿವ್ಯಜ್ಞಾನ ಪಡೆವುದು,ಸತ್ಪಾತ್ರರಿಗೆ
ದಾನ, ವೇದಾಧ್ಯಯನ, ತಪಸ್ಸು, ದೈವೀ ಗುಣಗಳು

ಕ್ರೋಧ,ಕ್ರೌರ್ಯ, ದರ್ಪ,ಅಭಿಮಾನ, ಜಂಭ
ಅಜ್ಞಾನ, ಕಾಮ, ಇಂದ್ರಿಯ ಭೋಗ, ಪ್ರತಿಷ್ಠೆ
ಅನ್ಯಾಯದಲಿ ಧನಾರ್ಜನೆ, ದುರಾಶೆ,ಅಹಂಕಾರ
ಬಲವತ್ತೆ,ಶ್ರೀಮಂತಿಕೆಗಳು,ಅಪಾತ್ರರಿಗೆ ದಾನ

ಮೋಜಿಗಾಗಿ ಯಾಗಾಚರಣೆ, ಅಸೂಯೆಗಳು
ಆಸುರೀಗುಣಗಳು. ಇಂತಹವರಿಗಿಲ್ಲ  ಮುಕ್ತಿ
ಹುಟ್ಟುವರು ಪುನಃ ಪುನಃ ಆಸುರೀ ವರ್ಗಗಳಲಿ
ಅವರೆಂದೂ ಪಡೆಯರು ನನ್ನ ಸಾಕ್ಷಾತ್ಕಾರವನು

ಆದ್ದರಿಂದ ಮಾಡಬೇಕು ಕರ್ಮ, ಶಾಸ್ತ್ರ ಪ್ರಮಾಣದಂತೆ
ದೈವಿಗುಣಗಳನು ಸಂಪಾದಿಸಿ, ಭಕ್ತಿರಸ ಪಡೆದು
ಭಗವನ್ನಾಮ ಸಂಕೀರ್ತನೆ ಮಾಡುತ ,ಅಮರ
ಮುಕ್ತಿಯ ಗುರಿಯಾಗಿಸಿ, ವರ್ಜಿಸುತ ಆಸುರೀಗುಣವ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬ 


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೫- ಪುರುಷೋತ್ತಮ ಯೋಗ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೫- ಪುರುಷೋತ್ತಮ ಯೋಗ
ಆತ್ಮ ಅವಿನಾಶಿ, ಪಡೆಯುತ್ತದೆ ಹೊಸ ದೇಹ
ಕಳೆದ ಜನ್ಮದ ಕರ್ಮದ ಗುಣಾನುಸಾರವಾಗಿ
ಪಡೆಯೇ ಪರಮ ಪದ, ಶರಣಾಗಬೇಕು,
ಮುಕ್ತನಾಗಬೇಕು, ಮೋಹ ಕಾಮ ಗರ್ವದಿ

ಪಡೆವನು ಜೀವಿ ದೇಹವನು, ಮನಸ್ಸಿನಂತೆ
ಐಹಿಕ  ಮನೋಧರ್ಮದಂತೆ, ಪ್ರಾಣಿಯಾಗಿ
ಕಾಮಿಯಾಗಿ,ಮೂರ್ಖನಾಗಿ,ವಿಕಲಾಂಗನಾಗಿ
ಸುಖಿಯಾಗಿ, ಶ್ರೀಮಂತನಾಗಿ, ತೇಜಸ್ವಿಯಾಗಿ

ಅರಿಯಬೇಕು ನನ್ನಿಂದಲೇ ರವಿಯ ತೇಜಸ್ಸು
ಚಂದ್ರನ ತಂಪು, ಅಗ್ನಿಯ ಶಾಖ, ಇರುವುದು
ಭೂಮಿ ಕಕ್ಷೆಯಲಿ ನನ್ನ ಶಕ್ತಿಯಿಂದ, ಎಲ್ಲ
ಜೀವಿಗಳ ಜಠರಾಗ್ನಿ ನಾನೇ, ಮರೆವು ನನ್ನಿಂದಲೇ

ಎಲ್ಲ ಜೀವಿಗಳು ಕ್ಷರರು, ಅಳಿಯಲೇಬೇಕು, 
ಅಕ್ಷರನಾಗಲು ಅರಿಯಬೇಕು ಪರಮಾತ್ಮನನು
ಕರೆಯುವರು ಎನ್ನನು ಪುರುಶೋತ್ತಮನೆಂದು
ಸಂದೇಹ ಬಿಟ್ಟು ನಿರತನಾಗು ಭಕ್ತಿ ಸೇವೆಯಲಿ

ವೇದಗಳ ಸಾರಾರ್ಥವು ಇದೇ, ಅಪೌರುಷ
ಗ್ರಂಥಗಳ ರಹಸ್ಯ, ಜ್ಞಾನಗಳ ಸಾರಾಂಶ ಇದೇ
ನನ್ನನರಿಯಲು ಮುಕ್ತನಾಗಬೇಕು ಪಾಪಕರ್ಮದಿ
ಪಾರ್ಥ ಇದನರಿತು ಜ್ಞಾನಿಯಾಗು, ಪೂರ್ಣನಾಗು

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬
 

Saturday, April 9, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೪ -ತ್ರಿಗುಣಗಳು

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೪   -ತ್ರಿಗುಣಗಳು
ಕೃಷ್ಣ ನುಡಿದ ,ನಾನು ಜನನದ ಮೂಲ ಬ್ರಹ್ಮ
ಎಲ್ಲ ಜೀವಿಗಳ ತಂದೆ ನಾನೇ, ಬೀಜ ನಾನೇ
ಸತ್ವ, ರಜಸ್ಸು, ತಮಸ್ಸು, ಮೂರು ಐಹಿಕ ಗುಣಗಳು,
ಎಲ್ಲ ಜೀವಿಗಳು ಬಂಧಿತರು ಮೂರುಗುಣಗಳಿಗೆ

ಸಾತ್ವಿಕ ಗುಣವು ನಿರ್ಮಲವು, ತೇಜೋಮಯವು
ಸತ್ವ ಗುಣದಿಂದ ಉಂಟಾಗುವುದು ಪರಮಾತ್ಮ ಜ್ಞಾನ
ಇರುವನು ಸದಾ  ಸುಖ ಶಾಂತಿಯಿಂದ ಸತ್ವಗುಣನು
ಪಡೆವನು ದಿವ್ಯ  ಪರಮಪದವನು ಅಂತ್ಯದಲಿ

ರಾಜಸ ಗುಣವು ಅಮಿತವಾದ ಆಸೆ ಬಯಕೆ ಜನಿತವು
ರಾಜಸಗುಣದಿಂದ ಉಂಟಾಗುವುದು ಕಾಮ್ಯ ಕರ್ಮ
ಅತಿ ಮೋಹ, ಫಲಾಪೇಕ್ಷೆ, ಬಯಕೆ, ಹಂಬಲಗಳು
ಇರಿಸುವುದದು ಮರ್ತ್ಯ ಲೋಕದಲಿ ನಿರಂತರದಿ

ತಾಮಸಗುಣವು ಭ್ರಮೆ, ಹುಚ್ಚು,ನಿದ್ರೆಯಿಂದ ಜನಿತ
ತಾಮಸಗುಣದಿಂದ ಉಂಟಾಗುವುದು ಅಜ್ಞಾನ
ಭ್ರಮಣೆ, ಕತ್ತಲು,ಜಡತ್ವ ,ಬುದ್ದಿನಾಶ, ಭ್ರಾಂತಿಗಳು
ತಳ್ಳುವುದದು ಅಧೋಗತಿಗೆ, ನಿರಂತರ ನರಕಕ್ಕೆ

ಮೂರುಗುಣಗಳ ಗೆದ್ದವನು ಪಡೆಯುವನು ಮುಕ್ತಿಯನು
ನಿರತನಾಗುವನು ಸದಾ ಪೂರ್ಣ ಭಕ್ತಿಸೇವೆಯಲಿ
ಕಾಣುವನು ಸಕಲವನು ಸಮಚಿತ್ತದಲಿ, ನಡೆಯುತ
ಚಿರಂತನ ಅವಿನಾಶಿ ಬ್ರಹ್ಮನ ಪ್ರಶಾಂತ  ನೆಲೆಯತ್ತ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೩ -ಪ್ರಕೃತಿ ಪುರುಷ ಹಾಗೂ ಪ್ರಜ್ಞೆ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೩  -ಪ್ರಕೃತಿ ಪುರುಷ ಹಾಗೂ ಪ್ರಜ್ಞೆ
ದೇಹವು ಕ್ಷೇತ್ರ, ಅದನರಿತವನೇ ಕ್ಷೇತ್ರಜ್ಞ
ಕ್ಷೇತ್ರದಲ್ಲಿರುವುದು ಪಂಚ ಮಹಾ ಭೂತಗಳು
ಪಂಚ ಇಂದ್ರಿಯಗಳು, ಪಂಚೇಂದ್ರಿಯ ವಿಷಯಗಳು
ಬಯಕೆ, ರಾಗ, ದ್ವೇಷ ,ಸುಖ, ದುಃಖ ಇತ್ಯಾದಿಗಳು

ಕ್ಷೇತ್ರಜ್ಞನಿಗಿರಬೇಕು ನಮ್ರತೆ, ಅಹಿಂಸೆ,ತಾಳ್ಮೆ
ಸಂಯಮ,ಸ್ಥೈರ್ಯ, ವೈರಾಗ್ಯ , ಸಮಚಿತ್ತತೆ
ಪರಿಶುದ್ಧ ಭಕ್ತಿ,ವಿಷಯದಲಿ ಅನಾಸಕ್ತಿ,ನಂಬಿಕೆ
ಪರಮಾತ್ಮನೇ ಸರ್ವಸ್ವ, ಸರ್ವ ವ್ಯಾಪಿ, ಸರ್ವಜ್ಞನೆಂದು

ಐಹಿಕ ಕಾರ್ಯಗಳ ಪರಿಣಾಮ, ಪ್ರಕೃತಿ ಸುಖ ದುಃಖ
ಅರಿಯಬೇಕು ದೇಹದೊಳಗಿರುವನು ಪರಮಾತ್ಮ
ಅವನು ಪ್ರಭು, ಪರಮಸ್ವಾಮಿ, ಅವನ ಆಣತಿಯೇ 
ನಿತ್ಯ ಜೀವನ, ಕರ್ಮವೆಲ್ಲವೂ ಅವನ ಪ್ರೀತ್ಯರ್ಥ

ಕಾಣಬೇಕು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ
ನಿತ್ಯ ಚೇತನ ಪರಮಾತ್ಮನನು ಸಮಾನವಾಗಿ
ದೇಹವಷ್ಟೇ ಭಿನ್ನ, ಆತ್ಮ ಒಂದೇ , ಅವಿನಾಶಿ, ನಿತ್ಯ,
 ಅಮರ ,ಗುಣಾತೀತ, ಅದೊಂದು ದಿವ್ಯ ಜ್ಯೋತಿ

ಆತ್ಮವನರಿತು ದೇಹದ ಕ್ರಿಯೆಗಳೆಲ್ಲವನು
ಆತ್ಮದ ಉನ್ನತಿಗಾಗಿ ನಡೆಸಿ, ಪರಿಶುದ್ಧ 
ಕ್ರಿಯೆಗಳಿಂದ ಐಹಿಕ ಬಂಧನಗಳನ್ನು ತ್ಯಜಿಸಿ
ಪರಮಾತ್ಮನ ಸಾಕ್ಷಾತ್ಕಾರ ಪಡೆವುದೇ ಮುಕ್ತಿ, ಮೋಕ್ಷ.

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 



 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೨ -ಭಕ್ತಿ ಸೇವೆ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೨ -ಭಕ್ತಿ ಸೇವೆ 
ಪಾರ್ಥ ಕೇಳಿದ , ಭಕ್ತಿಗೆ ಸಾಕಾರ ರೂಪವೋ,
ನಿರಾಕಾರ ಪರಬ್ರಹ್ಮ ಧ್ಯಾನವೋ, ಬಗೆ ಹೇಗೆಂದು
ನುಡಿದ ಕೃಷ್ಣ, ಯಾರು ಮನವ ಸ್ಥಿರಗೊಳಿಸಿ, ಶ್ರದ್ದಯಾ
ಪರಯಾ ಉಪಾಸಿಸುವರೋ, ಅವರೇ ಪೂರ್ಣರು

ನಾನು ಸರ್ವವ್ಯಾಪಿ, ವ್ಯಕ್ತವಲ್ಲದವನು, ನಿಶ್ಚಲನು
ಇಂದ್ರಿಯಾತೀತನು, ಗ್ರಹಿಸಲಾಗದವನೆಂಬುದು ಸತ್ಯ.
ನಿರಾಕಾರವೀ ರೂಪವನು ಮನದಲಿ ಆಳವಾಗಿ ನಿಲಿಸಿ
ಇಂದ್ರಿಯ ನಿಗ್ರಹದಿಂದ, ಪರಹಿತ ಬಯಸಿ, ಪೂಜಿಸಬೇಕು

ಮನದ ನಿಯಂತ್ರಣ ಕ್ಲೇಷಕರ ದೇಹಧಾರಿಗಳಿಗೆ,
ಅದಕಾಗಿ ಮಾಡಬೇಕು ದೇಹ ದಂಡನೆ,ಅಚಲ ಬಯಕೆ
ಉದಯಪೂರ್ವ ಏಳುವುದು,ತುಳಸಿ ಪುಷ್ಪ ಸಂಗ್ರಹಣೆ
ಸಾಕಾರರೂಪದ ಆರಾಧನೆ ,ಭಕ್ತಿಯಲಿ ಪ್ರಸಾದ ಸ್ವೀಕಾರ

ನನಗೆ ಅತ್ಯಂತ ಪ್ರಿಯನಾಗುವನು ಶತ್ರು ಮಿತ್ರರನು
ಸಮಾನ ಕಾಣುವವನು , ಮಾನಾಪಮಾನಗಳಲಿ,
ಶೀತೊಷ್ಣದಲಿ,ಕೀರ್ತಿ ಅಪಕೀರ್ತಿಗಳಲಿ ಅವಿಚಲಿತನು 
ಸದಾ ಮೌನಿಯೂ,ಅಲ್ಪತ್ರಿಪ್ತನೂ, ಸ್ಥಿರಮತಿಯೂ,ನಿರಾಸಕ್ತನು

ಯಾರು ಸಂತೋಷಿಸುವುದಿಲ್ಲವೋ, ದುಃಖರಹಿತನೋ 
ನಿಶ್ಶೋಕಿಯೋ,ಶುಭಾಶುಭ ಪರಿತ್ಯಾಗಿಯೋ
ಭಕ್ತರಂತಹವರು ನನಗೆ ಅತ್ಯಂತ ಪ್ರಿಯರು, ಅವರು
ಆಗಿಸುವರು ನನ್ನನ್ನೇ ಪರಮಗುರಿಯೆಂದು, ಆಜೀವ

ರಚನೆ:ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ
 
ಪಾರ್ಥ ನುಡಿದ, ನಿನ್ನ ಅನಂತತೆಯ ಕೇಳಿ ನಿರ್ಮೋಹನಾದೆ
ನಿನ್ನ ಅನಂತ ರೂಪವನ್ನು ನೋಡ ಬಯಸುವೆನೆಂದ
ಕೃಷ್ಣ ನೀಡಿದ ದಿವ್ಯ ದೃಷ್ಟಿಯ ವಿರಾಟ ರೂಪ ಕಾಣಲು
ದಿಗ್ಭ್ರಮೆಗೊಂಡ ಪಾರ್ಥ ಸಹಸ್ರ ಶೀರ್ಷಾ ಪುರುಷನ ಕಂಡು

ಅಸಂಖ್ಯ ಬಾಯಿಗಳು,ಚಕ್ಷುಗಳು,ಕರಗಳು,ಮುಖಗಳು
ಕಮಲಾಸನ ಬ್ರಹ್ಮ, ಶೂಲಪಾಣಿ ಶಿವ, ಎಲ್ಲ ಋಷಿಗಳು
ಬೆಂಕಿಯಂತೆ ಪ್ರಜ್ವಲಿಸುತ್ತಿರುವ ಕಣ್ಣುಗಳು,ಸಹಸ್ರ
ಆದಿತ್ಯ ಸಂಕಾಶ ,ಶಂಖ ಚಕ್ರ ಗಧಾಯುಧ ವಿಷ್ಣು ವನು 

ಭೀಷ್ಮ ದ್ರೋಣ ಆದಿ ಯೋಧರು ವಿರಾಟ ರೂಪದಲಿ
ಅಂತ್ಯಗೊಳ್ಳುವುದ ಕಂಡ ಪಾರ್ಥ ಭಯಭೀತನಾದ
ಪ್ರಭು, ನೀನೇ ವಾಯು, ಯಮ, ಅಗ್ನಿ,ಜಲ,ಚಂದ್ರ
ಪಿತಾಮಹನೂ, ಆದಿ ಅಂತ್ಯನು ನೀನೇ, ಪ್ರಣಾಮಗಳೆಂದ 

ಹೇ ವಿರಾಟ್ರೂಪಿಯೇ, ನೋಡಲಾರೆ ಭೀಕರ ರೂಪವ
ಮರಳಿ ಅನುಗ್ರಹಿಸು ನಿನ್ನ ಮೊದಲಿನ ರೂಪವ
ನುಡಿದ ಕೃಷ್ಣ, ಈ ವಿರಾಟ್ ರೂಪ ಲಭಿಸದು ಎಲ್ಲರಿಗೂ
ಯಜ್ಞ, ಅಧ್ಯಯನ, ದಾನ, ತಪಗಳಾವುದರಿಂದ ಅಲಭ್ಯ

ನನ್ನ ವಿರಾಟ್ರೂಪವನರಿಯಲು ಭಕ್ತಿ ಬೇಕು
ನನಗಾಗಿ ಕರ್ಮ ಮಾಡಬೇಕು, ಬದುಕಿನ ಪರಮ
ಗುರಿಯಾಗಿಸಬೇಕು, ಬಿಡಬೇಕು ಕಾಮ ಕ್ರೋಧ ಅಹಂ
ಜಪಿಸಬೇಕು, ಸದಾ ಅನನ್ಯ ಚಿಂತನೆಯಿಂದೆಂದ ಕೃಷ್ಣ

ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬



 

Friday, April 8, 2011

ಶ್ರೀ ಕೃಷ್ಣ ಸಂದೇಶ - ಅಧ್ಯಾಯ ೧೦-ವಿಭೂತಿ ಯೋಗ

ಶ್ರೀ  ಕೃಷ್ಣ  ಸಂದೇಶ - ಅಧ್ಯಾಯ ೧೦-ವಿಭೂತಿ ಯೋಗ

ಪಾರ್ಥ ನಾನು ಅನಾದಿ, ಸೃಷ್ಟಿ ಎಲ್ಲವೂ  ನನ್ನದೇ
ಜೀವಿಗಳ ಸೃಷ್ಟಿ ಸುವವ ನಾನು, ಅವರೆಲ್ಲ ಗುಣಗಳನು
ಮೂಡಿಸುವವ  ನಾನು, ಬುದ್ಧಿ , ಜ್ಞಾನ, ಕ್ಷಮೆ,ಮೋಹ
ದಾನ, ಕೀರ್ತಿ, ತುಷ್ಟಿ ಆದಿ ಗುಣಗಳ ಕಾರಕ ನಾನು

ಆದಿಯಲಿ ಬ್ರಹ್ಮ, ಸನಕ ಸನಂದಾದಿ ಮುನಿಗಳ
ಸಪ್ತರ್ಷಿಗಳ, ಇಂದ್ರಾದಿ ದೇವತೆಗಳ ಸೃಷ್ಟಿಸಿದೆ
ಜೀವಿಗಳಿಗಾಗಿ ಮರ್ತ್ಯ ಲೋಕ, ತೇಜಸ್ವಿ ಸೂರ್ಯ
ಚಂದ್ರ ,ನಕ್ಷತ್ರಗಳು, ಪ್ರಜಾಪತಿ, ರುದ್ರರ ಸೃಷ್ಟಿಸಿದೆ

ನಾನು ಎಲ್ಲ ಜೀವಿಗಳ ಹ್ರಿದಯದಲ್ಲಿರುವ ಪರಮಾತ್ಮ
ವೇದಗಳಲ್ಲಿ ಸಾಮವೇದ, ನಾನು ಸ್ವರ್ಗಾದಿಪತಿ ಇಂದ್ರ
ರುದ್ರರಲಿ ಪರ ಶಿವ, ಯಕ್ಷರಾಕ್ಷಸರಲಿ  ಕುಬೇರ
ಶಿಖರಗಳಲಿ ಮೇರು ,ವೃಕ್ಷ ಗಳಲಿ ಅಶ್ವತ್ಥ ನಾನು

ಸರ್ಪಗಳಲಿ ವಾಸುಕಿ, ಆಯುಧಗಳಲಿ ವಜ್ರಾಯುಧ
ಪಿತೃ ಗಳಲಿ ಅರ್ಯಮಾ, ಶಾಸನ ಪಾಲಕನಾಗಿ ಯಮ
ಪ್ರಾಣಿಗಳಲಿ ಸಿಂಹ, ಪಕ್ಷಿಗಳಲಿ ಗರುಡ, ಮೀನುಗಳಲಿ
ಮಕರ, ಪಾರ್ಥ, ನಾನೇ ಆದಿ ಮಧ್ಯ ಅಂತನು

ವಿಶ್ವದ ಎಲ್ಲ ಅಸ್ಥಿತ್ವಗಳ ಉತ್ಪಾದಕ ಬೀಜ ನಾನೇ
ಸುಂದರ, ಶ್ರೀಮಂತ ಭವ್ಯ ಸೃಷ್ಟಿ ಗಳು ನನ್ನ ತೆಜೋಂಶ 
ಅಡಗಿವೆ ಎಲ್ಲವು ನನ್ನ ವಿರಾಟ್ ಸ್ವರೂಪದಲಿ
ಪಾರ್ಥ ಅದನರಿತು ಪೂಜಿಸೆ ಭಕ್ತಿಯಲಿ ಪಡೆವೆ ಮುಕ್ತಿಯ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
  

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ

ಕೃಷ್ಣ ನುಡಿದ ಪಾರ್ಥ ನಿನಗರುಹುವೆ ರಹಸ್ಯಜ್ಞಾನ
ನನ್ನ ಪಡೆಯುವ ದಿವ್ಯಜ್ಞಾನ ಪರಮಜ್ಞಾನ
ನಾನು ಅವ್ಯಕ್ತ ವಿಶ್ವರೂಪಿ ಜೀವರೆಲ್ಲರು
ಇರುವರು ನನ್ನಲ್ಲಿ ನಾನವರಲಿ ಇಲ್ಲ

ವಿಶ್ವದ ತಂದೆ ನಾನು, ಓಂಕಾರ ನಾನು
ಚತುರ್ವೆದಗಳು ನಾನು, ಎಲ್ಲ ಯಜ್ಞಗಳು
ನಾನು, ಆಹುತಿಯು ನಾನೇ, ಆಜ್ಯ ಅಗ್ನಿ
ಹುತ ಔಷದ ನಾನೇ ,ಸೃಷ್ಟಿ ಪ್ರಳಯಗಳು ನಾನೇ

ರವಿಯ ತೇಜ ನಾನು, ವ್ರಿಷ್ಟಿಕಾರಕ ನಾನು
ಅಮೃತ ಮ್ರಿತ್ಯುಗಳು ನಾನೇ,ಸಕಲ  ಚೇತನ
ಅಚೇತನ ನನ್ನ ಸೃಷ್ಟಿ, ಕಲ್ಪಾಂತದಲಿ ಎಲ್ಲವು
ಲೀನವಾಗುವುವು ನನ್ನಲ್ಲಿ, ಸೃಷ್ಟಿ ಸುವೆ  ಪುನರಾದಿಯಲಿ

ಎಲ್ಲ ಯಜ್ಞಗಳ ಭೋಕ್ತಾರನು, ಸ್ವಾಮಿಯೂ ನಾನೇ,
ನನ್ನನು ಅನ್ಯ ಚಿಂತನೆಗಳಿಲ್ಲದೆ   ಆರಾಧಿಸೆ ಸದಾ
ಕೊಡುವೆನೆಲ್ಲವನು ಅವರಿಗೆ, ರಕ್ಷಿಸುತ ನೀಡಿದುದ,
ಆರಾಧಿಸಲು ಸಾಕೆನಗೆ ಒಂದೆಲೆ ಹೂವು ಹಣ್ಣು ನೀರು

ನನ್ನ ಭಕ್ತನಿಗೆ ನಾಶವೆಂಬುದಿಲ್ಲ, ಪಡೆಯೇ
ನನ್ನ, ವರ್ಣ ಭೇದವೂ ಇಲ್ಲ, ಬೇಕಷ್ಟೇ ಶುದ್ದ ಪ್ರೀತಿ
ಪಾರ್ಥ, ಭಜಿಸು ಎನ್ನನು ಸದಾ , ಪೂಜಿಸು
ಅನನ್ಯ ಚಿಂತನೆಯಿಂದ ,ಪಡೆಯುವೆ ಪರಮಪದ


ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ
ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ

email;sreenvasaprasad.kv@gmail.com

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೮- ಭಗವತ್ ಪ್ರಾಪ್ತಿ

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೮- ಭಗವತ್ ಪ್ರಾಪ್ತಿ
ಅಂತ್ಯ ಕಾಲದಿ   ಭಗವಂತನ ಸ್ಮರಿಸಿದರೆ
ದೊರಕುವುದು ಮುಕ್ತಿ, ಚಿರಂತನ ಸಾನಿಧ್ಯ
ದೇಹತ್ಯಾಗದಲಿ ಯಾವ ಭಾವ ತಳೆದರೆ
ಪಡೆವನು ಅದೇ ಭಾವ, ಪುನರ್ಜನ್ಮದಲಿ

ಪಾರ್ಥ ಸದಾ ಸ್ಮರಿಸು ಕೃಷ್ಣ ರೂಪವನು
ಅರ್ಪಿಸೆನಗೆ ನಿನ್ನೆಲ್ಲ ಕರ್ಮವನ್ನು ನಿರತದಲಿ
ಓಂ ಇತ್ಯಕ್ಷರ  ಜಪಿಸುತಲಿ ದೇಹ
ತ್ಯಜಿಸಿದರೆ ಪಡೆವರೆನ್ನಯ ಪರಮ ಪದವನು

ಪರಮಪದದಲಿಹುದು ನಿರಂತರ ಶಾಂತಿ
ಅಗಣಿತ ಆನಂದ, ಮರಳಿ ಜನ್ಮವಿಲ್ಲದ ಸುಖ
ಲಭ್ಯ ಪರಮ ಪದ, ಮರಣಿಸಿದರೆ ಉತ್ತರ ಅಯನದಿ 
ಶುಭ ಶುಕ್ಲ ಪಕ್ಷದಲಿ ಹಗಲಿನ ಬೆಳಕಿನಲಿ

ಅಲಭ್ಯ ಪರಮಪದ ಮರಣಿಸೆ ದಕ್ಷಿಣ ಅಯನದಿ   
ಅಶುಭ ಕೃಷ್ಣಪಕ್ಷದಲಿ ಗಾಢ  ಇರುಳಿನ ಕತ್ತಲಲಿ
ಭಕ್ತರಿಗಿದು ಅನ್ವಯವಿಲ್ಲ ಎನ್ನ ಸದಾ ಸ್ಮರಿಸೆ
ಪಾರ್ಥ, ನೀನಾಗು ಯೋಗಿ ಎಲ್ಲರಲಿ ಎನ್ನ ಕಾಣುತ

ಭಗವಂತ ಸರ್ವಜ್ಞ, ಪುರಾತನ, ನಿಯಂತ್ರಕ
ಪಾಲಿಸುವನೆಲ್ಲರನು ಸೂಕ್ಷ್ಮಾತಿ ಸೂಕ್ಷ್ಮನು
ಅಚಿಂತ್ಯ ರೂಪನು, ಆದಿತ್ಯ ವರ್ಣನು, ರವಿತೇಜನು
ಸ್ಮರಿಸು ಆತನ ನಿರಂತರ, ಪಡೆಯೇ ಪರಮಪದ

ರಚನೆ: ಕೆ.ವಿ.ಶ್ರೀನಿವಾಸ [ಪ್ರಸಾದ್
ಮೊಬ: ೯೮೪೪೨ ೭೬೨೧೬
 

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೭-ಪರಾತ್ಪರ ಜ್ಞಾನ

ಶ್ರೀ  ಕೃಷ್ಣ  ಸಂದೇಶ -ಅಧ್ಯಾಯ ೭-ಪರಾತ್ಪರ ಜ್ಞಾನ
ಯೋಗಿಯಾಗಲು ಮೊದಲರಿಯಬೇಕು ನನ್ನನು
ನುಡಿದ ಕೃಷ್ಣ ,ಆದಿ ನಾನೇ ,ಅಂತ್ಯ ನಾನೇ
ಸೂರ್ಯ ಚಂದ್ರರಲಿ ಬೆಳಕು ನಾನೇ, ವೇದದ
ಮಂತ್ರಗಳಲಿ ಓಂಕಾರ, ಪುರುಷರಲಿ ಪೌರುಷ ನಾನೇ

ಆಕಾಶದಲಿ ಶಬ್ದ, ಭೂಮಿಯ  ಪರಿಮಳ ನಾನೇ
ಅಗ್ನಿಯ ತೇಜಸ್ಸು, ತಪಸ್ವಿಗಳ ತಪಸ್ಸು ನಾನೇ
ಮೂಲ ಬೀಜ ನಾನೇ, ಶಕ್ತಿವಂತರ ಶಕ್ತಿ ನಾನೇ
ಅವ್ಯಯನು ನಾನು, ತ್ರಿಗುನಾತೀತನು ನಾನು

ನನ್ನನು ಪೂಜಿಸುವವರು ಆರ್ತಿಗಳು, ದ್ರವ್ಯ
ಆರ್ತಿಗಳು ,ಜಿಜ್ಞಾಸುಗಳು ಅಥವಾ ಜ್ಞಾನ ಅನ್ವೇಷನಿಗಳು
ಆದರೆ ನನಗೆ ಪ್ರಿಯವಾಗುವವರು ನಿಜವಾದ ಭಕ್ತರು,
ಭಕ್ತರು ಸೇರುವರು ನನ್ನನು ನಿಸ್ವಾರ್ಥದಲಿ  ಪೂಜಿಸುತ

ಬಯಕೆಗಳ ಸಿದ್ದಿಗಾಗಿ ಪೂಜಿಸುವರು ಬಗೆಬಗೆಯ
ದೇವರನು, ಅರಿಯದೆ ಎಲ್ಲ ರೂಪದಲಿ ನಾನಿರುವೆನೆಂದು
ಅನುಗ್ರಹಿಸುವೆ ಬಯಕೆಗಳ, ಆಯಾರೂಪದಲಿ,
ನಾನಿರುವೆ ಭೂತ, ವರ್ತಮಾನ, ಭವಿಷ್ಯದಲಿ ಅಮರನಾಗಿ

ನಾ ಕಾಣಿಸೆನು ಮತಿಹೀನರಿಗೆ, ಮೂಡರಿಗೆ
ಕಾಮ ಕ್ರೋಧಗಳಿಂದ ತುಂಬಿದವನಿಗೆ, ಅಜ್ಞಾನಿಗೆ
ನನ್ನನರಿತವರು ಮಾಡುವರು ಪುಣ್ಯ ಕರ್ಮವನು
ಅರಿಯುವರು ಅಂತ್ಯಕಾಲದಲ್ಲಿಯು ಪ್ರಭುವು ನಾನೆಂದು

ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ : ೯೮೪೪೨ ೭೬೨೧೬
 email;sreenivasaprasad.kv@gmail.com


 

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೬-ಧ್ಯಾನ ಯೋಗ

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೬-ಧ್ಯಾನ ಯೋಗ 
ಆತ್ಮಜ್ಞಾನಕೆ ಅವಶ್ಯ ಮನಸಿನ ನಿಗ್ರಹ
ಮನಸೆಂಬುದು ಹಿಡಿತದಲ್ಲಿರೆ ಆತ್ಮೀಯ ಬಂಧು
ಇಲ್ಲವಾದರೆ ಅದು ದುರ್ಗಮ ಶತ್ರು, ಪಾರ್ಥ
ಮನಸನ್ನು ಗೆದ್ದವನೇ ಪರಮಾತ್ಮ ಪಡೆದಂತೆ

ಯೋಗಿಯಾಗಬೇಕು ನಿಯಂತ್ರಿಸಿ ಮನವನು
ಬಯಕೆ ಗಳಿಕೆಯಿಂದ ದೂರವಿರಿಸಬೇಕು
ನೆಡಬೇಕು ಮನವ ಪರಮಾತ್ಮನಲ್ಲಿ ಅನವರತ
ಪಡೆವನಾಗ ಸಮಾಧಿ, ಚಿರಂತನ ಶಾಂತಿ, ಪರಮಾನಂದ

ಯಾರು ಪರಮಾತ್ಮನನು ಎಲ್ಲೆಲ್ಲಿಯೂ ಕಾಣುವನೋ
ಅವನಾಗುವನು ನನಗೆ ಅತ್ಯಂತ ಪ್ರಿಯನು
ಅವನಿರುವನು ಸದಾ ನನ್ನಲಿ ನಾನಿರುವೆನು ಅವನಲಿ
ಪಾರ್ಥ ಅರುಹಿದ ,ಮನಸ್ಸು ಚಂಚಲ, ನಿಗ್ರಹ ಕಠಿಣ

ನುಡಿದನಾ ಕೃಷ್ಣ, ಹೇ ಮಹಾಬಾಹೋ ಮನೋನಿಗ್ರಹ
ಕಠಿಣ , ಗೆಲಬಹುದು ಯೋಗದಿಂದ, ವ್ಯರಾಗ್ಯದಿಂದ 
ಮನದ ನಿಗ್ರಹವಲ್ಲದೆ ದುಃಸಾಧ್ಯ ಆತ್ಮ ಸಾಕ್ಷಾತ್ಕಾರ
ಅದಕ್ಕೆಂದೇ ಯೋಗಿಯು ಶ್ರೇಷ್ಠ, ತಪಸ್ವಿ ಜ್ನಾನಿಗಳಿಗಿಂತ

ಮನವಗೆಲ್ಲಲು ಶ್ರದ್ದೆಯಿರಬೇಕು, ಆಗುವನು
ನನಗೆ ಅತಿ ಪ್ರಿಯನು, ಶ್ರೇಷ್ಠ ಎನಿಸುವನು     
ಪಾರ್ಥ ನೀನಾಗು ಯೋಗಿ ಎಲ್ಲ ಸನ್ನಿವೆಶದಲಿ 
ಲಭಿಸುವುದಾಗ ಯಶವು ಆತ್ಮಸಾಕ್ಷಾತ್ಕಾರವು

ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: 9844276216 

e mail: sreenivasaprasad.kv@gmail.com
 

Thursday, April 7, 2011

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೫-ಕರ್ಮ ಯೋಗ

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೫-ಕರ್ಮ ಯೋಗ
ಬೇಕು ಭಗವಂತನ ಸಾಕ್ಷಾತ್ಕಾರಕೆ ಅಗತ್ಯ
ವಿರಕ್ತ ಕರ್ಮ ಆತ್ಮಜ್ಞಾನದ ಜೊತೆಯಲಿ ನಿಜವಾದ
ಗಾಢವಾದ ಭಕ್ತಿ ಮತ್ತು ಅಪ್ರತಿತಮ ಪ್ರೇಮ
ದೊರೆವುದಾಗ ಮಾತ್ರ ಚಿರಂತನ ಮುಕ್ತಿ

ಭಕ್ತಿ ಇಲ್ಲದ ವಿರಕ್ತ ಕರ್ಮ ನೀಡದು
ವಿಮುಕ್ತಿ,ಜನ್ಮ ಸಂಸಾರದ ಬಂಧನದಿ
ಬೇಕು ಕಾರನ್ನು ಕರ್ತ್ರಿವು ಭಗವಂತನೇ
ನಡೆವೆವು ಆತನ ನಿರ್ದೇಶನದಿ ಎಂಬ ಅರಿವು

ಮಾಡಬೇಕು ವಿರಕ್ತಿ ಕರ್ಮ ನೀರ ಮೇಲಿನ
ಗುಳ್ಳೆಯಂತೆ ತಾವರೆಯ ಮೇಲಣ ಹನಿಯಂತೆ
ಪ್ರಿಯವಾದುದನ್ನು ಪಡೆದಾಗ ಹರ್ಷವು ಅಪ್ರಿಯ
ದಿಂದ ದುಃಖವು ,ಇರದಾಗುವನು ಸ್ಥಿತಪ್ರಜ್ಞ

ಪ್ರಜ್ನಾವಾನ್ಗೆ ಇರದು ಇಂದ್ರಿಯ ಆಕರ್ಷಣೆ
ಸುಖ್ದಾಡಿ ಅಂತ್ಯದಲಿ ಸಂತೋಷ ದುಃಖ
ಪದೆವರವರು ಬ್ರಹ್ಮ ನಿರ್ವಾಣ ನಿರಂತರ ಆನಂದ
ಆತ್ಮ ಸಾಕ್ಷಾತ್ಕಾರ ಕೊನೆಯಲಿ ದೈವದರ್ಶನ

ಹೇ ಪಾರ್ಥ, ಸಕಲ ಯಜ್ಞಗಳ ತಪಸ್ಸುಗಳ
ಭೋಕ್ತ ನಾನೇ, ಸಕಲ ಲೋಕಗಳ,
ದೇವತೆಗಳ ಪರಮ ಪ್ರಭು ನಾನೇ, ಎಲ್ಲ
ಜೀವಿಗಳ ಹಿತ್ಯಷಿಯು ನಾನೇ ಎಂದರಿತು ನಡೆ.

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ್
ಮೊಬ: 9844276216
 e-mail:sreenivasaprasad.kv@gmail.com



  

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೪- ಜ್ಞಾನ ಯೋಗ

ಶ್ರೀ ಕೃಷ್ಣ  ಸಂದೇಶ-ಅಧ್ಯಾಯ ೪- ಜ್ಞಾನ ಯೋಗ 
ಆತ್ಮದಾದಿಯ ಜ್ಞಾನ,ವಿರಕ್ತ ಕರ್ಮದ ಮೂಲ
ಆತ್ಮಜ್ಞಾನಕೆ ಸಮನಿಲ್ಲ ಜಗದಲಿ ತಿಳಿ
ಆತ್ಮವರಿಯಲು ಬೇಕು ಕಾಮ ಕ್ರೋಧ ಅಹಂಗಳ
ನಿಗ್ರಹ ,ಸಮರ್ಪಿಸಬೇಕು ಭಕ್ತಿಯಲಿ ಎಲ್ಲ ಕರ್ಮ

ಆತ್ಮವರಿಯಲು ಬೇಕು ಸದ್ಗುರು ಅನುಗ್ರಹ
ದ್ರವ್ಯಮಯ ಯಜ್ಞ ಅಪ್ರಯೋಜಕ, ಶ್ರೇಷ್ಠ
ಜ್ಞಾನ ಯಜ್ಞ, ನಡೆಸುವುದದು ಆತ್ಮಜ್ಞಾನದತ್ತ
ಅರಿವಾಗುವುದು ಪರಮಾತ್ಮ ಆತ್ಮಜ್ಞಾನದಿಂದ

ಜನಿಪುದು ಆತ್ಮಜ್ಞಾನ, ತ್ಯಾಗಬಲದಿಂದ, ಕಠಿಣ 
ತಪದಿಂದ, ಶಿಸ್ತಿನ ವ್ರತಾಚರನೆಗಳಿಂದ
ವೇದಾಧ್ಯಯನದಿಂದ, ಯೋಗಾಭ್ಯಾಸದಿಂದ
ಬಗೆಬಗೆಯ ಹೋಮ ಹವನ ಯಜ್ಞಾದಿಗಳಿಂದ

ಆತ್ಮವರಿಯಲು ಮಾಡಬೇಕು ನಿಷ್ಕಾಮ ಕರ್ಮ
ನಿರಪೇಕ್ಷ ,ನಿರ್ಮೋಹ,ಸಮರ್ಪಿತ ಕರ್ಮ
ಅರಿಯಬೇಕು ಸತ್ಕರ್ಮ, ವಿಕರ್ಮ, ಅಕರ್ಮ
ತ್ಯಜಿಸಿ ವಿಕರ್ಮ, ಅಕರ್ಮ, ಮಾಡಬೇಕು ಸತ್ಕರ್ಮ

ಫಲಾಪೇಕ್ಷೆಯ ಯಜ್ಞ ನೀಡುವುದು ಫಲ ಮಾತ್ರ
ಅಕರ್ಮ ವಿಕರ್ಮದಿಂದಾಗುವುದು ಧರ್ಮನಾಶ
ಧರ್ಮದ ಪುನರುತ್ಥಾನಕ್ಕಾಗಿ ಸಜ್ಜನರ ಪಾಲನೆಗಾಗಿ
ಅವತರಿಸುವೆ ಪ್ರತಿ ಯುಗದಲಿ ಎಂದನಾ ಕೃಷ್ಣ


ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
 E-Mail:sreenivasaprasad.kv@gmail.com



 

ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ

ಭಗವದ್ಗೀತೆ ಒಂದು   ಮಹಾನ್   ಮತ್ತು  ಪವಿತ್ರ ಕೃತಿ.೧೮ ಅಧ್ಯಾಯ ಉಳ್ಳ ಈ ಕೃತಿಯನ್ನು ಓದಲು ಇಂದಿನ ಯುವಕರಿಗೆ ಸಮಯ ಮತ್ತು ಶ್ರದ್ದೆ ಕಡಿಮೆ. ಭಗವದ್ಗೀತೆಯ ಸಾರಾಂಶವನ್ನು  ಇಂದಿನ ಯುವಕರಿಗೆ ತಿಳಿಸಲು ಒಂದು ಸಣ್ಣ ಪ್ರಯತ್ನವೆಂಬಂತೆ, ಪ್ರತಿ ಅಧ್ಯಾಯದ ಶ್ಲೋಕಗಳ ಸಾರಾಂಶವನ್ನು ಕೇವಲ್ ೫ ಪದ್ಯಗಳಲ್ಲಿ   ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇದು ಭಗವದ್ಗೀತೆಯ ಮಹತ್ವವನ್ನು ಇಂದಿನ ಯುವಕರಿಗೆ ತಿಳಿಸುವಲ್ಲಿ ಯಶಸ್ವಿಯಾದರೆ ಅದು ನನ್ನ ಪ್ರಯತ್ನಕ್ಕೆ ದೊರೆತ ಯಶಸ್ಸು ಎಂದು ತಿಳಿಯುತ್ತೇನೆ. ಈ ಪ್ರಯತ್ನ ಭಗವತ್ ಪ್ರೇರಣ ಮತ್ತು ಅವನಿಗೆ ಸಮರ್ಪಿತ.ಈಗಾಗಲೇ ಎರಡು ಅಧ್ಯಾಯಗಳನು ಪ್ರಕಟಿಸಿದ್ದೇನೆ. ಮುಂದಿನ ೧೬ ಅಧ್ಯಾಯಗಳನು ದಿನಕ್ಕೆರಡು ಅಧ್ಯಾಯದಂತೆ ಪ್ರಕಟಿಸುವೆ. ಕೃಷ್ನಾರ್ಪನಮಸ್ತು.
ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ
ಕರ್ಮ ಅನಿವಾರ್ಯ, ಬೇಡ ಮೋಹವದರಲಿ
ಮಾಡು ಕರ್ಮ, ಬಯಸದೆ ಫಲ ಅದರಿಂದ
ಭಗವಂತನ ತ್ರಿಪ್ತಿಯೇ ಕರ್ಮದ ಗುರಿಯಿರಲಿ
ದೊರೆವುದಾಗ ಮುಕ್ತಿ ಕರ್ಮಾಚರಣೆಯಿಂದ

ಕರ್ಮದಲಿ ಯಗ್ನಕರ್ಮ ಅವಶ್ಯ, ತದರಿಂದ
ಬರುವುದು ಪರ್ಜನ್ಯ ಬದುಕಿಗದು ಅವಶ್ಯ
ಕಾಲ ಕಾಲಕೆ ಮಳೆ ಬೆಳೆಯ ಮೂಲ, ಬೆಳೆಯೇ 
ಬೇಕು, ಉಸಿರಿಗದು ಆಧಾರ, ಇಲ್ಲದೆ ಜೀವವಿಲ್ಲ

ಕರ್ಮ ಧರ್ಮಾನುಸಾರವಿರಬೇಕು, ರಾಗ ದ್ವೇಷ
ವ್ವರ್ಜಿತವಿರಬೇಕು ದೇವನಿಗೆ ಅರ್ಪಿಸಬೇಕು
ತನ್ನ ಧರ್ಮದಲ್ಲಿಯೇ ಇರಬೇಕು, ಫಲದಾಸೆಗೆ
ಪರಧರ್ಮ ಪಡೆಯಬಾರದು, ಭಯಂಕರವದು

ಕರ್ಮಕೆ ಕಡು ವೈರಿ  ಕಾಮ ಕ್ರೋಧ ಅಹಂಕಾರ
ಪಡೆವುವು ನೆಲೆ ಬುದ್ದಿ, ಮನಸ್ಸು, ಇಂದ್ರಿಯದಲಿ 
ಪಾರ್ಥ ನಿಗ್ರಹಿಸು ಇಂದ್ರಿಯ ಮನಸ್ಸು ಬುದ್ದಿಯನು
ನಿರತನಾಗು ಕರ್ಮದಲಿ ನಿಸ್ವಾರ್ಥದಲಿ ಅರ್ಪಿಸುತ

ಸಮರವಾಗಬೇಕು ಅಂತರಂಗದಲಿ ಎದುರಾಗುವ
ಬಾಳ ಶತ್ರುಗಳಾದ ಕಾಮ, ಕ್ರೋಧ, ಅಹಂಕಾರಗಳಿಗಾಗಿ
ಅರಿವಾಗುವುದು ಆತ್ಮದ ಸಾಕ್ಷಾತ್ಕಾರವಾಗ
ಆತ್ಮದ ಅರಿವು ಆಗುವುದು ಬಾಳ ದೀವಟಿಗೆ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
E-Mail:sreenivasaprasad.kv@gmail.com
 


 

Friday, April 1, 2011

ಕೃಷ್ಣ ಸಂದೇಶ- ಅಧ್ಯಾಯ ೨-ಗೀತಾ ಸಾರ
 
ಕೃಷ್ಣ ನುಡಿದ ಆತ್ಮ ಅವಿನಾಶಿ ,ದೇಹ ಅಮರ
ದೇಹ ಪಡೆವುದು ಜನ್ಮ, ಯೌವನ, ಮುಪ್ಪು ,ಮರಣ
ಆತ್ಮಕಿಲ್ಲ ಸಾವು, ಸಾಗುವುದದು ದೇಹದಿಂದ ದೇಹಕೆ
ಪಾರ್ಥ ಮಾಡು ಯುದ್ಧ ವೀರನಂತೆ, ದೇಹಕಾಗಿ ತಪಿಸದೆ

ಆತ್ಮ ಅಮರ, ಅದು ಪಡೆವುದು ಹೊಸ ದೇಹವನು
ಹೇಗೆ ಹಳೆಯ ಉಡುಪನು ಬದಲಿಸಿ, ಹೊಸ
ಉಡುಪು ತೊಡುವಂತೆ, ಬೇಡ ವ್ಯಸನ ತನುಗಾಗಿ
ಮಾಡು ಕರ್ಮವ ವೀರನಂತೆ, ಫಲದಾಸೆಯಿಲ್ಲದೆ

ಜನಿಸಿದವ ಅಳಿಯಲೇಬೇಕು, ಮತ್ತೆ ಜನ್ಮ ಪಡೆಯೇ
ಧರ್ಮ ತ್ಯಾಗ ಬೇಡ ,ಕರ್ಮವನ್ನಷ್ಟೇ ಮಾಡು
ನಿರಪೇಕ್ಷ ಕರ್ಮ ಮಾಡುವುದು ಪಾಪಮುಕ್ತ
ಅರ್ಪಿಸೆನಗೆ, ಎಂದ ಕೃಷ್ಣ, ಪಾಪ ಪುಣ್ಯ, ಕರ್ಮ ಬಿಡದೆ

ಆಸೆ ದುಃಖಕೆ  ಮೂಲ, ಕಳಚು ಎಲ್ಲ ಆಸೆಗಳ
ರಾಗ, ಭಯ, ಕ್ರೋಧ ವರ್ಜಿತನು ಮುನಿಯಾಗುವನು
ಮುನಿಗಿರಬೇಕು ಮನೋ ನಿಗ್ರಹ, ಲಭಿಸುವುದಾಗ
ಚಿರಂತನ ಶಾಂತಿ, ಅಲೌಕಿಕ ಆನಂದ, ನಿರಂತರ ಮುಕ್ತಿ

ಬೇಡ ನಾನು ನನ್ನದೆಂದು, ಜಗತ್ತು ಈಶ್ವರನದು
ಇರುವುವೆವು ಆತನ ಆಶ್ರಯದಲಿ, ಪಡೆ ತೃಪ್ತಿ
ಭಗವಂತ ನೀಡಿದುದರಲಿ, ಪರ ಮೋಹ ಬೇಡ
ದೊರೆವುದಾಗ ಚಿರಂತನ ಶಾಂತಿ, ಆನಂದ ,ಮುಕ್ತಿ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬
E-Mail:sreenivasaprasad.kv@gmail.com