Sunday, March 30, 2014














ಯುಗಾದಿ ಮರಳಿದೆ 

ಮರಳಿದೆ ಉಗಾದಿ ಹರುಷದಿ
ಇಡುತ ಹೊಸದೊಂದು ವರ್ಷಕೆ
ಕಳೆದಿಹುದು ವಿಜಯ ಸಂವತ್ಸರ
ಬರುತಿಹುದು ಜಯ ಸಂವತ್ಸರ

ತರಲಿ ನೂತನ ಸಂವತ್ಸರ
ಎಲ್ಲರ ಬಾಳಲಿ ನವ ಹರುಷ 
ಸುಖ ಸಂಪದವ ನೀಡುತ 
ನೀಗುತ ಎಲ್ಲ ಕಷ್ಟಗಳ ನಿರಂತರ

ಸದಾನಂದ ನೀಡುತ ತಣಿಸುತ ಇಳೆಯ
ವರ್ಷಾಧಾರೆಯಿಂದ ಸದಾ ಕಾಲದಿ
ಬೆಳೆಯಲಿ ಸಸ್ಯ ಸಂಪದ ನೀಗುತ
ಹಸಿವ ಬಳಲಿಕೆ ಬಾಯಾರಿಕೆಯ

ನಡೆಸಲಿ ಯಾಗ ಯಜ್ನವ ವಿಪ್ರರು
ತಣಿಸುತ ದೇವ ದೇವತೆಯರ
ಹವಿಸ್ಸಿನಿಂದ, ಹರಸಲಿ ಅಮರರು 
ಪುತ್ರ ಪೌತ್ರ ಸಂಪತ್ ಸಂತಾನದಿ

ಮಕ್ಕಳು ನಲಿಯಲಿ ನವ ಉಡುಪಿಂದ
ಯುವಕರು ಯಶಸ್ಸನ್ನು ಗಳಿಸುತ
ವ್ರಿದ್ದರು ಮರಿಮಕ್ಕಳೊಡನೆ ಕಳೆಯಲಿ
ವರ್ಷ, ಮುಂದಿನ ವರ್ಷನಿರೀಕ್ಷೆಯಲಿ

ರಚನೆ:ಕೆ ವಿ ಶ್ರೀನಿವಾಸ ಪ್ರಸಾದ್
ಮೊಬೈಲ್:೯೮೪೪೨೭೬೨೧೬ 

Wednesday, March 26, 2014

ನಮ್ಮದೊಂದು ಕುಟುಂಬ 


                                                                                 








ನಮ್ಮದೊಂದು ಆದರ್ಶ ಕುಟುಂಬ
ಒಂದಾಗಿಯೇ ಇರುವ ಕುಟುಂಬ
ಕೂಡುವೆವು ನಾವು ಸಮಾರಂಭದಿ
ಮೆರೆಯುವೆವು ನಾವು ಒಂದೆಂದು

ನಮ್ಮ ಕುಡಿ ಗ್ರಾಮ ಕಳಲೆಯದು
ತಾತ ಶ್ರೀನಿವಾಸ ಅಯ್ಯಂಗಾರ್ಯರದು
ಸಂತತಿಯಲಿ ಬಂದಿಹರು ಏಳು ಜನ
ಸುತರು ಎರಡು ಸುತೆಯರು  ಐದು

ಕಳೆದರು ಒಂದಾಗಿ ನಾಲ್ಕು ದಶಕಗಳು
ಮೈಸೂರ ಹಳೆಯ ಹೆಂಚಿನ  ಕುಟೀರದಲಿ
ಬಿಟ್ಟಿರದೆ ಒಬ್ಬರೊಬ್ಬರ ಪ್ರೀತಿಯಲಿ
ವಿವಾಹ ನಂತರವೂ ಅನ್ಯೋನ್ಯದಲಿ

ಸುತೆಯರು ಅಲಮೇಲು ,ಚೇಚಿ
ಜಯ ,ಪದ್ಮ ,ಅಂಬಾ ,ಎಂಬೈವರು
ಸುತರು ಲಕ್ಷ್ಮೀಕಾಂತ ,ವರದರಾಜ
ಪಡೆಯುತ ಸಂಸ್ಕಾರವ ತಂದೆ ಪಥದಲಿ

ಗತಿಸಿದರು ಶ್ರೀನಿವಾಸ ಐಯ್ಯಂಗಾರ್ಯರು
೫೦ರ ದಶಕದಲಿ ಶ್ರೀಕಾಂತನ ಧ್ಯಾನದಲಿ
ಬೇರೆಯಾಯಿತು ತುಂಬಿದ ಕುಟುಂಬ
ತಮ್ಮಗಳ ಸಂಸಾರದ ಜವಾಬ್ಧಾರಿಯಲಿ

ಆದರಿಹರು ಇಂದಿಗೂ ಕುಟುಂಬದ
ಎಲ್ಲ ೩೮ ಮಂದಿ ಒಂದೆನುತ ಬಿಟ್ಟಿರದೆ
ಅವರಿಗಾದರು ೪೩ ಮಂದಿ ಮರಿಮಕ್ಕಳು
ಕೂಡಿ ಎಲ್ಲ ೮೧ ಮಂದಿ ಕುಡಿಕಳಲೆಯದು

ಸೇರಿಹೆವು ಇಂದು ಸಂತಸವ
ಹಂಚಿ ,ಕೂಡಿ ನಲಿದಾಡಲು
ಕಳಲೆ ಶ್ರೀನಿವಾಸ ಐಯ್ಯಂಗಾರ್ಯರ
ನೆನೆಯುತ ನಾವೆಲ್ಲಾ ಒಂದೆಂದು

ಬೆಳೆಯಲಿ ಕುಡಿ ನಿರಂತರದಲಿ
ನಮ್ಮ ಪೂರ್ವಜರ ನೆನೆಯುತ
ಅವರ ಕೃತಿಯ ,ಸಂಸ್ಕಾರ ,ನೀತಿಗಳ
ದಾಟಲಿ ಶತಕ ಕುಡಿ ಶ್ರೀನಿವಾಸ ಐಯ್ಯಂಗಾರ್ಯರ

ಹರುಷ ತುಂಬಲಿ ,ಸಿರಿ ಸಂಪದವ
ಕರುಣಿಸಲಿ ರಮಾಪತಿ ಶ್ರೀಕಾಂತನು
ನೀಡಲಿ ಆರೋಗ್ಯ ಸಂಪದವ ಹರಸುತ
ಎಲ್ಲರನು ಇರಲಿ ಒಂದಾಗಿ ಎಂದೆಂದೂ

ರಚನೆ:ಶ್ರೀನಿವಾಸ ಪ್ರಸಾದ್
ಮೊಬೈಲ್ :೯೮೪೪೨೭೬೨೧೬ 

ವೆಣುಪುರಿ ಕ್ಷೇತ್ರ -ಕಳಲೆ 

ಕಳಲೆ, ಮೈಸೂರು ಜಿಲ್ಲೆಯ ನಂಜನಗೂಡಿನಿಂದ ೬ ಕಿ ಮಿ ದೂರದಲ್ಲಿರುವ ಒಂದು ಗ್ರಾಮ.ಇದು ಪೌರಾಣಿಕ ಕ್ಷೇತ್ರವಷ್ಟೇ ಅಲ್ಲದೆ ಒಂದು ಐತಿಹಾಸಿಕ ಕ್ಷೇತ್ರವು ಕೂಡ. ಪೌರಾಣಿಕವಾಗಿ ಕಪಿಲಾಶ್ರಮ, ವೇಣುಪುರಿ ಎಂದು ಪ್ರಸಿದ್ದಿ.ಚಾರಿತ್ರಿಕವಾಗಿ ದಳವಾಯಿಗಳ ಊರು ಎಂದು ಖ್ಯಾತಿ. ಇಲ್ಲಿ ಬಿದಿರು ಬಹಳವಾಗಿ ಇದ್ದುದರಿಂದ ಕಳಲೆ ಎಂದು ಕರೆಯಲ್ಪಡುತ್ತದೆ.

ಹಳ್ಳಿಯಲ್ಲಿ ಇರುವ ಲಕ್ಷ್ಮಿಕಾಂತಸ್ವಾಮಿ ದೇವಾಲಯ ಬಹು ಪುರಾತನವಾದದ್ದು. ವ್ಯಾಸ ಭಾರತದ ಜನಮೇಜಯನಿಂದ ಸ್ಥಾಪಿಸಲಟ್ಟಿದ್ದಾಗಿ ಪ್ರತೀತಿ.ಕಪಿಲ ಮುನಿಗಳು ಸಗರ ಪುತ್ರರನ್ನು ಭಸ್ಮ ಮಾಡಿದ ಪಾಪ ಪರಿಹಾರಕ್ಕಾಗಿ ಇಲ್ಲಿಗೆ ಬಂದು ತಪಸ್ಸು ಮಾಡಿ ಶ್ರೀಕಾಂತನ ಅನುಗ್ರಹದಿಂದ ಪಾಪ ವಿಮೋಚನೆ ಪಡೆದರೆಂದು ಪ್ರಸಿದ್ದಿ. ಆದ್ದರಿಂದ ಕ್ಷೇತ್ರಕ್ಕೆ ಕಪಿಲಾಶ್ರಮ ಎಂಬ ಹೆಸರು ಬಂತೆಂದು ಪ್ರತೀತಿ.ತಪಸ್ಸಿನ ವೇಳೆಯಲ್ಲಿ ತಪೋಭಂಗ ಮಾಡಲೆತ್ನಿಸಿದ ಲವಣಾಸುರ ಎಂಬ ರಾಕ್ಷಸನ ಸಂಹಾರಕ್ಕೆಂದು ಕೈವಲ್ಯಾದೇವಿ ಎಂಬ ದೇವತೆಯನ್ನು ಸೃಷ್ಟಿಸಿದರೆಂದು ಇಂದಿಗೂ ಕೈವಲ್ಯಾದೇವಿಯನ್ನು ಗ್ರಾಮ ದೇವತೆಯೆಂದು ಪೂಜಿಸುತ್ತಾರೆ.

ಕಾಲಕ್ರಮದಲ್ಲಿ ದೇವಾಲಯ ಮೈಸೂರಿನ ಯದುವಂಶ ಅರಸರಿಂದ ವಿಸ್ತರಿಸಲ್ಪಟ್ಟಿತು. ಮೈಸೂರು ಹುಲಿ ಎಂದೇ ಖ್ಯಾತಿಯಾಗಿದ್ದ ಟೀಪೂ, ದೇವಾಲಯ ಸಂದರ್ಶಿಸಿ ಕೆಲವು ಸ್ವರ್ಣ ಪಾತ್ರೆಗಳನ್ನು ನೀಡಿದ್ದಾಗಿ ಹೇಳುತ್ತಾರೆ. ದೇವಾಲಯ ಬಹು ದೊಡ್ಡದಾಗಿದ್ದು ಪ್ರಾಕಾರದಲ್ಲಿ ಒಂಬತ್ತು ಸಣ್ಣ ಗುಡಿಗಳಿವೆ.ಪಟ್ಟಾಭಿ ರಾಮ, ವರದರಾಜ, ಶ್ರೀನಿವಾಸ, ಕೋದಂಡ ರಾಮ,ರಾಜಮನ್ನಾರ್, ಆಂಡಾಲ್ , ಅರವಿಂದ ನಾಯಕಿ , ವೇಣು ಗೋಪಾಲ ಇತ್ಯಾದಿ.ಪ್ರಾಕಾರದಲ್ಲಿ ೧೨ ಆಳ್ವಾರ್ಗಳ ಮೂರ್ತಿಗಳಿವೆ.ಜೀಯರ್ ಮತ್ತು ದೇಶಿಕರ ಮೂರ್ತಿಗಳಿವೆ. ದೇವಾಲಯ ಬಹಳ ದೊಡ್ಡದಾಗಿದ್ದು ಆಕರ್ಷಣೀಯವಾಗಿದೆ.

ಇದೇ ಏಪ್ರಿಲ್ ೮ ರಂದು ರಥೋತ್ಸವ ಬಹಳ ವೈಭವದಿಂದ ನಡೆಯಲಿದೆ. ಅಂದು ರಾತ್ರಿ ತೇರಡಿ ಉತ್ಸವ ನಡೆಯಲಿದೆ. ಉತ್ಸವ ಮೂರ್ತಿಯನ್ನು ಬಗ ಬಗೆಯ ಹೂವುಗಳಿಂದ ಅಲಂಕರಿಸಲಾಗುತ್ತದೆ.ವಿದ್ಯುದ್ದೀಪಗಳಿಂದ ಸಿಂಗರಿಸಲ್ಪಟ್ಟ ಚಪ್ಪರದಡಿಯಲ್ಲಿ ,ವ್ಯಾಳಿಯಲ್ಲಿ ಹಳ್ಳಿಯ ಸುತ್ತಲೂ ಉತ್ಸವ ಮಾಡಲಾಗುತ್ತದೆ.ದೇವರಿಗೆ ಶ್ರೀಕಾಂತಮುಡಿ ಎಂಬ ವಜ್ರಭರಿತ ಕಿರೀಟ ಧರಿಸಲಾಗುತ್ತದೆ.ತಮಿಳುನಾಡಿನಿಂದ ಕರೆಸಲ್ಪಡುವ ಒಲಗದವರಿಂದ ನಾದಸ್ವರ ಇಡೀ ರಾತ್ರಿ ನಡೆಯುತ್ತದೆ. ಈ ಉತ್ಸವವನ್ನು ಮೇಲುಕೋಟೆಯಲ್ಲಿ ನಡೆಯುವ ಚೆಲುವ ನಾರಾಯಣ ವೈರಮುಡಿ ಉತ್ಸವಕ್ಕೆ ಹೋಲಿಸಬಹುದು .ಹಳ್ಳಿಗೆ ಬರುವ ಭಕ್ತಾದಿಗಳಿಗೆ ಊಟ ಉಪಚಾರಗಳನ್ನು ಒದಗಿಸಲು ದಾನಿಗಳ ನೆರವಿನಿಂದ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾಂಚ್ರಾತ್ರಾಗಮರೀತ್ಯ ಪೂಜೆ ಪುನಸ್ಕಾರಗಳನು ನಡೆಸಲು ಲಕ್ಷ್ಮಿಕಾಂತ ಸೇವಾಭಿವರ್ದಿನಿ ಸಭಾ ಎಂಬ ಸಂಸ್ಥೆ ೧೯೦೬ ರಲ್ಲಿ ಶ್ರೀ ಶ್ರೀನಿವಾಸ ಅಯಂ ಗಾರ್ ಎಂಬುವರಿಂದ ಸ್ಥಾಪಿಸಲ್ಪಟ್ಟಿದ್ದು ಕಾಲಕ್ರಮದಲ್ಲಿ ಲಕ್ಷ್ಮಿಕಾಂತ ಅಯಂ ಗಾರ್ ಮತ್ತು ವರದರಾಜ ಅಯಂಗಾರ್ ಗಳಿಂದ ನಡೆಸಲ್ಪಟ್ಟು ಇದೀಗ ಹಳ್ಳಿಯವರೇ ಆದ ಸಂಪತ್ಕುಮಾರರಿಂದ ನಡೆಸಲ್ಪಡುತ್ತಿದೆ.ಭಕ್ತ ಜನರು ಇಳಿದುಕೊಳ್ಳಲು ಅನುಕೂಲವಾಗುವಂತೆ ಒಂದು ಸಭಾಂಗಣವನ್ನು ದಾನಿಗಳ ನೆರವಿನಿಂದ ಕಟ್ಟಲಾಗಿದೆ.ದಾನಿಗಳು ಮುಂದೆ ಬಂದು ಸಭೆಗೆ ಹೆಚ್ಚಿನ ನೆರವು ನೀಡಿ ಇನ್ನೂ ಹೆಚ್ಹಿನ ಉತ್ಸವ,ಸೇವೆ ಮಾಡಲು ಸಹಕರಿಸಲು ಕೋರಲಾಗಿದೆ. 
ನನ್ನ ತಾರಾ ಕುಮಾರಿ 

ಭಾವನೆಗಳ ಬಾಗಿಲು ನಯನ 
ಹುಡುಕುತಿಹುದು ಪ್ರಿಯತಮನ 
ತುಂಬಿಹುದು ಕಣ್ಣಂಚಿನಲಿ ಪ್ರೇಮ 
ತವಕಿಸುತಿಹುದು ಮನ ಕಾಣದೆ 

ಅಡಗಿಹನು ಪ್ರಿಯತಮ ಕಣ್ಣಲಿ 
ಅಂಚಿನಲಿ ಕಾಣಲು ಮಡದಿಯ 
ದುಗುಡ,ಕಾತರ ,ಮಂದಹಾಸ 
ಮರೆಯದ ಪ್ರೇಮ ನೋಟವ 

ತಾರೆಗಳ ಅಪೂರ್ವ ಮಿಲನ 
ಒಂದೆಡೆ ಕನ್ನಡದ ಕುವರ 
ತಾರೆಗಳ ರಾಜ ಶಿವರಾಜ 
ಮಗದೆಡೆ ಯುವ ತಾರೆ ಕಿಟ್ಟಿ 

ನಡುವೆ ಕಾಣುತಿಹಳು ತಾರೆ 
ತಾರೆಯರ ರಾಣಿ ರಾಘವನ 
ರಾಣಿ ಇಣುಕುತ ಕಾಣದೆ ತನ್ನ 
ಇನಿಯನ, ನನ್ನ ತಾರಾ ಕುಮಾರಿ,ಹೇಮ  

ರಚನೆ :ಕೆ ವಿ ಶ್ರೀನಿವಾಸ ಪ್ರಸಾದ್ 
ಕಳಲೆ ಲಕ್ಷ್ಮಿಕಾಂತ ಸ್ವಾಮಿ ಸ್ತುತಿ 

ವ್ಯಾಸ ಭಾರತದ ಜನಮೇಜಯನು ಅಡವಿಯಲಿ
ಸಂಚರಿಸುತಿರಲು ಕಂಡೆ ನೀನು ಬಿದಿರಿನ ಮೇಳೆಯಲಿ
ಮೆಚ್ಚಿ   ನಿನ್ನ ಸೊಬಗನು ಕಟ್ಟಿದನು ಆಲಯವನಂದು
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ 
 
ಕಾಲಕ್ರಮದಲಿ  ವಿಸ್ತರಿಸಿದರು ಆಲಯವ ಒಂದಾಗಿ
ಬೃಹದಾಕಾರದಲಿ  ಆವರಣದಲಿ ಅರವಿಂದನಾಯಕಿ
ದ್ವಾದಶ   ಆಳ್ವಾರರ   ದೇಶಿಕ ಜೀಯರ್ ರರ   ಮೂರ್ತಿಇರಿಸಿ
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
 
ಕರೆದರು  ವೆಣುಪುರಿ ಕಳಲೆ ಕಪಿಲಾಶ್ರಮ ವೆಂದು
ಸಂದರ್ಶಿಸಿದರು ಮೈಸೂರಿನ ಯದುವಂಶದರಸರು
ಮೈಸೂರಿನಹುಲಿ ಟೀಪೂ ನೀಡಿದನು ಸ್ವರ್ಣಪಾತ್ರೆಗಳ
ಕರಮುಗಿವೆ ವೇಣು ಪುರಾಧೀಶ  ಲಕ್ಷ್ಮೀ ವಲ್ಲಭನೆ
 
ನಿನಗೆ ವರ್ಶೋತ್ಸವವನು  ಮೀನಮಾಸದಲಿ ಸೇರುವರು
ಜನಜಾತ್ರೆ ಹಳ್ಳಿ ಹಳ್ಳಿಗಳಿಂದ   ನಗರ ನಗರಗಳಿಂದ
ಉದಯದಲಿ ಏರುವೆ ತೇರು ಸಂಜೆ ಪುಷ್ಪ ವ್ಯಾಳಿಯಲಿ
ನಡೆವುದು ತೇರಡಿ ಉತ್ಸವ ರಾತ್ರಿಇಡೀ ನಾದ ತರಂಗದಿ
 
ತಂದೆ ನೀ ಕರುಣಿಸುತಿರುವೆ ಭಕ್ತಜನರ ಅಭೀಷ್ಟವ
ನಿವಾರಿಸುತ ಮಕ್ಕಳ ನೋವುರುಜಿನಗಳ ಅಭಯದಿ
ನೀಡುತ ಸಿರಿ ವೃಷ್ಟಿಯ  ಮಾತೆ ಅರವಿಂದನಾಯಕಿಯಕೂಡಿ
ನಿನಗಿದೋ ಮನದಾಳದ ನಮನ ವೆಣುಪುರಿ ಲಕ್ಷ್ಮಿಕಾಂತ
 
 
ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ
ಮೊಬ: ೯೮೪೪೨ ೭೬೨೧೬
ಇ -ಮೇಲ್: sreenivasaprasad.kv@gmail.com