Friday, March 12, 2021

ಡಾಕ್ಟರ್ ಟಿ. ವಿ. ಕಸ್ತೂರಿ

ಡಾಕ್ಟರ್ ಕಸ್ತೂರಿ ಮತ್ತು ನಮ್ಮ ತಂದೆ ಕಳಲೆ ವರದರಾಜ ಅಯ್ಯಂಗಾರ್ ಆಪ್ತ ಮಿತ್ರರು .ನಮ್ಮ ತಂದೆ ೧೯೪೨ ರಲ್ಲೀ ಒಂದು ಮುದ್ರಣಾಲಯ ಸ್ಥಾಪಿಸಿದರು.ಲಗ್ನಪತ್ರಿಕೆ ಮತ್ತು ನೋಟಿಸ್ ಗಳನ್ನು ಮುದ್ರಿಸುತ್ತಿದ್ದರು.೧೯೫೨ ರಲ್ಲಿ ನಾನು ಜನಿಸಿದೆ.ಆಗ ಡಾಕ್ಟರ್ ಕಸ್ತೂರಿಯವರ ಪರಿಚಯ ನಮ್ಮ ತಂದೆಗೆ ಆಯ್ತು.ಏಕೆಂದರೆ ನನ್ನ ಮಾತಮಹ ರವರ ಮನೆಯ ಹತ್ತಿರವೇ ಡಾಕ್ಟರ್ ಮನೆಯಿತ್ತು. ಆಗಾಗ್ಗೆ ಔಷದಿಗಾಗಿ ಡಾಕ್ಟರ್ ಬಳಿ ಹೋಗಬೇಕಿತ್ತು.ಕೆಲವೇ ದಿನಗಳಲ್ಲಿ ಪರಿಚಯ ಸ್ನೇಹವಾಗಿ ತಿರುಗಿತು.ಹೀಗೆ ಆರಂಭವಾದ ಸ್ನೇಹ ಮುಂದೆ ಗಾಡವಾಯಿತು. ಕಸ್ತೂರಿಯವರು ಆಯುರ್ವೇದ ವೈದ್ಯರಾಗಿದ್ದರು.ಅವರ ಸಹಯೋಗದಲ್ಲಿ ಡಾಕ್ಟರ್ ಜೆ.ಎಸ್.ರಾಮನ್ ಅವರು ಒಂದು ಮಾಸಿಕವನ್ನು ಪ್ರಕಟಿಸುತ್ತಿದ್ದರು.ಅದು ಬೇರೆಡೆ ಮುದ್ರಣ ಆಗುತ್ತಿತ್ತು.೧೯೫೫ ರಲ್ಲಿ ತಂದೆಯವರ ಮುದ್ರಣಾಲಯದಲ್ಲಿ ಪ್ರಕಟಣೆ ಆರಂಭವಾಯಿತು. ಕಛೇರಿ ತ್ಯಾಗರಾಜ ರಸ್ತೆಯ ವೇಣುಗೋಪಾಲ ದೇವಸ್ಥಾನದ ಎದುರು ಮಹಡಿಯ ಮೇಲೆ ಒಂದು ಸಣ್ಣ ಕೊಠಡಿಯಲ್ಲಿ ಇತ್ತು.ನಾನು ಸಣ್ಣವನು ಆಗ. ಪ್ರೂಫ್ ತೆಗೆದುಕೊಂಡು ಕಚೇರಿಗೆ ಹೋಗುತ್ತಿದ್ದೆ. ಸಮೀಪದಲ್ಲಿ ನನ್ನ ಅತ್ತೆಯ ಮನೆಯಿತ್ತು.ಪ್ರೂಫ್ ಸರಿಯಾದಮೇಲೆ ಅತ್ತೆಯ ಮನೆಗೆ ಹೋಗಿ ಕಾಫಿ ಕುಡಿದು ಮರಳುತಿದ್ದೆ.ಹೀಗೆ ಡಾಕ್ಟರ್ ನಮಗೆ ಸಮೀಪವಾಗತೊಡಗಿದರು. ಕುಟುಂಬದ ವೈದ್ಯರೂ ಆದರು. ಮನೆಯಲ್ಲಿಯೇ ಔಷಧ ಆಲಾಯ ಇತ್ತು.ನಮಗೆ ಸಣ್ಣ ನೆಗಡಿಯಾದರೂ ಅವರ ಮನೆಗೆ ಹೋಗಿ ಔಷದಿ ತರುತ್ತಿದ್ದೆವು.ಅವರ ಬಳಿ ಮೂರು ಬಣ್ಣದ ಬಾಟಲ್ ಗಳಿದ್ದವು. ಒಂದು ಕೆಂಪು. ಮತ್ತೊಂದು ಹಳದಿ.ಮೂರನೆಯದು ಪಿಂಕ್.ಮೂರನ್ನು ಕಲಸಿ ಔಷದಿ ಕೊಡುತ್ತಿದ್ದರು.ರುಚಿಯಾಗಿ ಇರುತಿತ್ತು. ಕುಡಿದೊಡನೆ ನೆಗಡಿ ಮಾಯವಾಗಿರುತಿತ್ತು.ಹೀಗೆ ಔಷಧಿಗಾಗಿ ಪದೇ ಪದೇ ಅವರ ಮನೆಗೆ ಹೋಗುತ್ತಿದ್ದೆ ವು. ಡಾಕ್ಟರ್ ಮಕ್ಕಳಾದ ರಾಮಪ್ರಸಾದ್, ಶ್ರೀನಿಧಿ, ನರಸಿಂಹ ಇವರ ಸ್ನೇಹವೂ ಆಯಿತು.ಡಾಕ್ಟರ್ ಪ್ರೆಸ್ಸಿಗೆ ದಿನಕ್ಕೆ ಎರಡು ಬಾರಿ ಬರುತ್ತಿದ್ದರು.ಅವರ ಕ್ಲಿನಿಕ್ ನಜರ್ಬಾದ್ ನಲ್ಲಿ ಇತ್ತು. ಕ್ಲಿನಿಕ್ ಮುಗಿಸಿ ಹಿಂತಿರುವಾಗ ಒಮ್ಮೆ  ಮನೆಗೆ ಬರುತ್ತಿದ್ದರು.

ಡಾಕ್ಟರ್ ಕಸ್ತೂರಿ ಅವರದ್ದು ಸರಳ ಸ್ವಭಾವ.ಅವರು ಸಜ್ಜನಿಕೆಯ ವ್ಯಕ್ತಿ. ಮೃದು ಭಾಷಿ.ಅಲ್ಪ ಭಾಷಿ ಕೂಡ. ದುಡ್ಡಿನ ದುರಾಶೆ ಇಲ್ಲ.ಬಡವರ ಬಗ್ಗೆ ವಿಶೇಷ ಕಾಳಜಿ. ಅವರಾಯಿತು ಅವರ ಮೊಪೆಡ್ ಆಯಿತು. ಮೊಪೆಡ್ ಏರಿದರೆ ಪ್ರೆಸ್ ಇಲ್ಲ ನಜರ್ಬಾದ್  ಕ್ಲಿನಿಕ್. ಅವರ ಮೊಪೆಡ್ಗೆ ಗೊತ್ತಿತ್ತು.  ಕ್ಲಿನಿಕ್ನಲ್ಲಿ ಯಾವಾಗಲೂ ಜನ ಜಂಗುಳಿ. ಕೆಲವೊಮ್ಮೆ ರಾತ್ರಿ ೧೦ ಆದರೂ ಜನ ಬರುತ್ತಿದ್ದರು.ಇವರು ಆಯುರ್ವೇದ ವೈದ್ಯ ಸಂಘದ ಸಂಚಾಲಕ ಆಗಿದ್ದರಿಂದ ಅನೇಕ ವೈದ್ಯರ ಪರಿಚಯ ಇವರಿಗಿತ್ತು.ಹೀಗಾಗಿ ತಂದೆಗೆ ಅನೇಕ ವೈದ್ಯರ ಸ್ನೇಹ ಆಯಿತು.ರಾಮನ್, ಕಮಲಾ ರಾಮನ್,ನಿಖಿಲ ಕರ್ನಾಟಕದ ನಿರ್ದೇಶಕ ನರಸಿಂಹ ಮೂರ್ತಿ ಹೀಗೆ ಹಲವಾರು.ಮಂದಿ.ತಂದೆಗೆ ಆಗಾಗ ತಿರುಪತಿಗೆ ಹೋಗುವ ಅಪೇಕ್ಷೆ. ಇದ್ದಕ್ಕಿದ್ದಂತೆ ಕಸ್ತೂರಿಯವರ ಜೊತೆ ರಾತ್ರಿ ಹೊರಟು ಬಿಡುತ್ತಿದ್ದರು.ಬೆಳಿಗ್ಗೆ ದೇವರ ದರ್ಶನ ಮಾಡಿ ಸಂಜೆಗೆ ವಾಪಸ್ಸಾಗುತ್ತಿದ್ದರು.

೧೯೬೨ ರಲ್ಲಿ ನಮ್ಮ ತಂದೆಗೆ ಒಂದು ಮಹಿಳಾ ಶಾಲೆ ತೆರೆಯಬೇಕು ಎಂದು ಯೋಚನೆ ಬಂತು. ಕಸ್ತೂರಿ ಅವರಲ್ಲಿ ಹೇಳಿದರು.ತಕ್ಷಣ ಬೆನ್ನು ತಟ್ಟಿ ಸಾವಿರ ರೂಪಾಯಿ ನೀಡಿದರು. ಡಾಕ್ಟರ್ ರಾಮನ್ ಅವರನ್ನು ಸೇರಿಸಿದರು. ಹೀಗೆ ಹತ್ತಾರು ಜನರ ಬೆಂಬಲಿಗರೊಂದಿಗೆ ಶ್ರೀ ಕಾಂತ ಸಂಸ್ಕೃತಿ ಸಂಘ ಆರಂಬಿಸಿದರು. ೧೯೬೩ ರ ಲ್ಲಿ ಶ್ರೀ ಕಾಂತ ಬಾಲಿಕಾ ಪ್ರೌಢಶಾಲೆ ತೆರೆದರು. ಈ ಶಾಲೆ ಇಂದು ಹೆಮ್ಮರ ವಾಗಿ ಬೆಳೆದಿದೆ.

೧೯೬೯ ರ ಲ್ಲೀ ನಮ್ಮ ತಂದೆ ಒಂದು ಸಂಸ್ಕೃತ ದಿನ ಪತ್ರಿಕೆ ಆರಂಭಿಸಲು ಸಂಕಲ್ಪಿಸಿ ದರು.ಕಸ್ತೂರಿ ಯವರು ಮತ್ತು ಕೆಲವು ಸ್ನೇಹಿತರು ಕೂಡಿ ಹೆಸರಿಡಲು ಚರ್ಚೆ ನಡೆಸಿದರು. ಅನೇಕ ದಿನಗಳ ಚರ್ಚೆಯ ನಂತರ ಹತ್ತು ಹೆಸರು ಸೂಚಿಸ ಲ್ಪಟ್ಟವು.ಹತ್ತು ಹೆಸರನ್ನು ಕೇಂದ್ರ ಸರ್ಕಾರದ ವಾರ್ತಾ ವಿಭಾಗಕ್ಕೆ ಕಳುಹಿಸಲಾಯಿತು.ಅದರಲ್ಲಿ ಸುಧರ್ಮ ಎಂಬ ಹೆಸರಿಗೆ ಅನುಮತಿ ದೊರೆಯಿತು.ಕಸ್ತೂರಿ ಯವರೂ ತಮ್ಮ ಕಾರ್ಯಾಲಯದಲ್ಲಿ ದ್ದ ದೊಡ್ಡ ಟೇಬಲ್ ಅನ್ನು ತಂದೆಯವರಿಗೆ ಉಪಯೋಗಿಸಲು ಕೊಟ್ಟರು.

೧೯೭೩ ರಲ್ಲೀ ನಮ್ಮ ತಾಯಿಯವರಿಗೆ ಆರೋಗ್ಯ ಹದಗೆಟ್ಟಿತು.ಕಸ್ತೂರಿಯವರು ಅವರನ್ನು ರಾಮನ್ ಕ್ಲಿನಿಕ್ ನಲ್ಲಿ ಸೇರಿಸಿ ಸೂಕ್ತ ಚಿಕಿತ್ಸೆಗೆ ಏರ್ಪಾಡು ಮಾಡಿದರು. ದಿನಕ್ಕೆರಡು ಬಾರಿ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೆ ತಾಯಿಯವರು ೧೯೭೪ ರಲ್ಲಿ  ದಿವಂಗತ ರಾದರು.

೧೯೮೯ ರಲ್ಲಿ ತಂದೆಯವರಿಗೆ ಪಾರ್ಶ್ವ ವಾಯು ಹೊಡೆಯಿತು.ಕಸ್ತೂರಿಯವರು ಚಡಪಡಿಸಿ ದರು.ಅನೇಕ ವೈದ್ಯರನ್ನು ಸಂಪರ್ಕಿಸಿದರು. ಚಿಕಿತ್ಸೆ ಕೊಡಿಸಿದರು.ಆದರೆ ಫಲಕಾರಿ ಯಾಗಲಲ್ಲ.೧೯೯೦ ಆಗಸ್ಟ್ ನಲ್ಲಿ ತಂದೆ ದಿವಂಗತರಾದರು.ನಾನು ಡಾಕ್ಟರ್ ಗೆ ಚಿನ್ನದ ಉಂಗುರ ದಾನ ಕೊಡಬೇಕೆಂದು ತೀರ್ಮಾನಿಸಿ ಹನ್ನೆರಡನೆಯ ದಿನ ದಾನ ನೀಡಿದೆ.

ಹೀಗೆ ಅವರಿಬ್ಬರ ಸ್ನೇಹ ಪರಿ ಸಮಾಪ್ತ ಆಯಿತು.ಸ್ನೇಹಕ್ಕೆ ಮಾದರಿಯಾಗಿದ್ದರು.