Thursday, June 28, 2018


ಸರ್ವತಂತ್ರ ಸ್ವತಂತ್ರ , ತಾರ್ಕಿಕ  ಸಿಂಹ ವೇದಾಂತ ದೇಶಿಕರು----ಒಂದು ವೈಜ್ಞಾನಿಕ ನೋಟ

ಸ್ವಾಮಿ ದೇಶಿಕರು ಕೇವಲ ಒಬ್ಬ ಹಿರಿಯ ಕವಿ, ದಾರ್ಶನಿಕ , ವೇದಾಂತಿ ಅಷ್ಟೇ ಆಗಿರದೇ ಒಬ್ಬ ದೊಡ್ಡ ವಿಜ್ಞಾನಿಯೂ , ಗಣಿತ ಶಾಸ್ತ್ರಜ್ಞರೂ ಆಗಿದ್ದರೆಂಬುದು ವಿಶೇಷ . ವಿಜ್ಞಾನದ ನಾಲ್ಕು ಅಂಗಗಳಾದ ಗಣಿತ,ಭೂಗೋಳ,ವೈದ್ಯ ಮತ್ತು ಭೌತಶಾಸ್ತ್ರ ಗಳಲ್ಲಿಯೂ ಯೂ ಪ್ರತಿಭೆ ಹೊಂದಿದ್ದರು ಎಂಬುದಕ್ಕೆ ಅವರ ಕಾವ್ಯಗಳೇ ಸಾಕ್ಷಿ. ಆದರೆ ಅವರು ತಮ್ಮ ಪ್ರತಿಭೆಯನ್ನು ಕೇವಲ ಆಧ್ಯಾತ್ಮಿಕಕ್ಕೆ ಮೀಸಲಾಗಿಸಿದ್ದರೆ ವಿನಹ ಜೀವನೋಪಾಯಕ್ಕೆ ಉಪಯೋಗಿಸಲಿಲ್ಲ. ದೇಶಿಕರ ಕೃತಿಗಳಾದ ತತ್ವಮುಕ್ತಾಕಾಲಾಪ , ಸುಭಾಷಿತ ನೀವಿ ಮತ್ತು ಪಾದುಕಾ ಸಹಸ್ರ ಅವರ ಗಣಿತ ಜ್ಞಾನಕ್ಕೆ  ಸಾಕ್ಷಿ . ಗಣಿತ ವಿಜ್ಞಾನದಲ್ಲಿ ಅವರಿಗಿದ್ದ ಪ್ರತಿಭೆ ಈ ಕೃತಿಗಳ ಲ್ಲಿ ಕಾಣಸಿಗುತ್ತದೆ .ವ್ಯಾಸ,ವೃತ್ತ ,ಮುಂತಾದ ಗಣಿತ ಪದಗಳನ್ನು ಗ್ರಂಥದುದ್ದಕ್ಕೂ ಉಪಯೋಗಿಸಿದ್ದಾರೆ .  ಈ ಕೃತಿಗೆ ೨೦ ಬಗೆಯ ವ್ಯಾಖ್ಯಾನಗಳು  ದೊರಕಿವೆ . ಇಲ್ಲಿ ಕೃಷಿ ಪದ್ಧತಿಗಳ ಬಗ್ಗೆಯೂ ವಿವರಣೆ ನೀಡಲಾಗಿದೆ .ನೇಗಿಲು ಸಣ್ಣ ಪ್ರಮಾಣದ ಉಳಿಮೆಗೆ ಸರಿಯೇ ವಿನಹ ದೊಡ್ಡ ಪ್ರಮಾಣದ ಕೃಷಿಗೆ ಯಂತ್ರಗಳು ಅವಶ್ಯ ಎಂದು ಬಣ್ಣಿಸಿದ್ದಾರೆ .  ಕೃಷಿಗಾಗಿ ಪ್ರಾಣಿಹಿಂಸೆಯನ್ನು ದೇಶಿಕರು ವಿರೋಧಿಸಿದ್ದರು  . ದೇಶಿಕರು ಸೌಂದರ್ಯೋಪಾಸಕರೂ ಆಗಿದ್ದರು   ಅಧಿಕರಣ ಸಾರಾವಳಿಯಲ್ಲಿ  ಸೌಂದರ್ಯ ವರ್ಧಕಗಳ ಬಗ್ಗೆ ವಿವರಣೆ ನೀಡಿದ್ದಾರೆ. ಸೌಂದರ್ಯ ಸಾಧನೆಗಳು ಹೇಗಿರಬೇಕೆಂದು ದೇಶಿಕರು ವಿವರಿಸಿದ್ದಾರೆ . ಉಪಸ್ಕಾರ ಅಂದರೆ ಸೌಂದರ್ಯ ವರ್ಧಕಗಳು ಪರಿಮಳದಿಂದ ಕೂಡಿರಬೇಕು, ಇವುಗಳನ್ನು ನುರಿತ ಕಾರ್ಯಕರ್ತರು ತಯಾರಿಸಬೇ ಕು ,ಉಜ್ವಲವಾಗಿರಬೇಕು, ಶುದ್ಧವಾಗಿರಬೇಕು ಎಂದು ಅಧಿಕರಣ ಸಾರಾವಳಿಯಲ್ಲಿ ತಿಳಿಸಿದ್ದಾರೆ.  ವೈದಿಕ ಗಣಿತದ ಸಂಖ್ಯಾ ಕೋಡ್ ಗಳು ಅನಿಪುಣಪದ್ಧತಿ ಯಲ್ಲಿನ ೮ ನೇ ಶ್ಲೋಕ ಮತ್ತು ಇತರ ಶ್ಲೋಕಗಳಲ್ಲಿ  ವಿವರಿಸಲ್ಪಟ್ಟಿವೆ  . ಅಂತೆಯೇ ಸರ್ವಾರ್ಥ ಸಿದ್ಧಿ ಎಂಬ ಗ್ರಂಥದಲ್ಲಿ ಶ್ಲೋಕಗಳನ್ನು ವಿಮರ್ಶಿಸಿದಾಗ ಎರಡನೆಯ ವ್ಯಾಖ್ಯಾನದಲ್ಲಿ  ಗಣಿತ ವಿಜ್ಞಾನವನ್ನು ಪ್ರತಿಪಾದಿಸಲಾಗಿದೆ .ವೇದಾಂತ ದೇಶಿಕರು ವೇದ ಗಣಿತ ವಿಜ್ಞಾನದ ಜ್ಞಾನವನ್ನು ತಲಪಿಸುವಲ್ಲಿ ದಿಟ್ಟತನದಿಂದ ಪ್ರಯತ್ನಿಸಿದ್ದಾರೆ .
ಶಬ್ದ ಸಾಹಿತ್ಯದಲ್ಲಿ ಅನಾಗ್ರಮ್ ಎಂಬ ಪದ್ಧತಿ ಬಹಳವಾಗಿ ಉಪಯೋಗದಲ್ಲಿದೆ . ಅನಾಗ್ರಮ್ ಎಂದರೆ ಕೆಲವು ಪದಗಳನ್ನು ಉಪಯೋಗಿಸಿ ರಚಿಸಿದ ವಾಕ್ಯವನ್ನು ಅದೇ ಪದಗಳನ್ನು ಪುನರ್ಜೋಡಿಸಿ ಮತ್ತೊಂದು ವಾಕ್ಯ ರಚಿಸುವುದು . ಈ ಕಲೆಯನ್ನು ಕವಿಸಿಂಹರೆಂದೇ ಖ್ಯಾತರಾದ  ದೇಶಿಕರು ಕರಗತಮಾಡಿಕೊಂಡಿದ್ದರು . ಇದನ್ನು ತಮ್ಮ ಬಹುತೇಕ ಎಲ್ಲ ಗ್ರಂಥಗಳಲ್ಲಿಯೂ ಉಪಯೋಗಿಸಿದ್ದಾರೆ . ಉದಾಹರಣೆಗೆ ಇಂಗ್ಲಿಷ್ ಭಾಷೆಯಲ್ಲಿ eat cool  shop  curd  ಎಂಬುದು school poured cat ಎಂಬುದರ ಅನಾಗ್ರಮ್ .ಇದೆ ರೀತಿ ೩೨ ಅಕ್ಷರದ ಅನಾಗ್ರಮ್ ಪಾದುಕಾ ಸಹಸ್ರದಲ್ಲಿ ಅನೇಕವಾಗಿ ಸಿಗುತ್ತವೆ ಪ್ರಾಯಶಃ ಇಷ್ಟು ಉದ್ದದ ವಾಖ್ಯಗಳು ಬೇರೆ ಸಾಹಿತ್ಯದಲ್ಲಿ ಸಿಗಲಾರದೇನೋ . ಉದಾಹರಣೆಗೆ स्थिरागसा सदाराध्या विहता कलता मता .सत्पादुके सरासा मा  रन्गराजपदं नय ಈ ಶ್ಲೋಕದ ಅನಾಗ್ರಮ್ ಇಂತಿದೆ .स्थिता समयराजत्या गतरामादके गवि  दुरहमसाम् संनतादा साध्यातापकरा सरा ಇಲ್ಲಿ ಮೊದಲಿನ ಶ್ಲೋಕದ ೩೨ ಅಕ್ಷರ ಗಳನ್ನು  ಪುನರ್ಜೋಡಿಸಿ ಎರಡನೆಯ ಶ್ಲೋಕ ರಚಿಸಲಾಗಿದೆ . ಇಂತಹ ಅನೇಕ ಕವಿ ಸಮಯವನ್ನು ದೇಶಿಕರ ಕೃತಿಗಳಲ್ಲಿ ನೋಡಬಹುದು.
ದೇಶಿಕರನ್ನು ಸಾಕ್ಷಾತ್ ರಂಗನಾಥನೇ ಸರ್ವತಂತ್ರ ಸ್ವತಂತ್ರ ಎಂದು ಕರೆದಿದ್ದಾರೆಂಬುದು ಪ್ರಸಿದ್ಧಿ   . ತಂತ್ರ ಎಂದರೆ ಎಲ್ಲ ಬಗೆಯ ವಿಜ್ಞಾನದ ಅರಿವು ಎಂದು ತಿಳಿಯಲ್ಪಡುತ್ತದೆ . ಪ್ರಖ್ಯಾತ ಅಪ್ಪಯ್ಯ ದೀಕ್ಷಿತರು ಸರ್ವತಂತ್ರ ಸ್ವತಂತ್ರ ಎಂಬ ಬಿರುದಿಗೆ ಈ ರೀತಿ ವ್ಯಾಖ್ಯಾನ ನೀಡಿದ್ದಾರೆ .
सर्वेषु तन्त्रेषु सिद्धन्तेषु न्यायवैशेषिक पूर्वोत्तरमीमांसासान्ख्य  योग शैव वैष्णवादिषु स्वतन्त्रस्य स्वेच्छया कन्चिदर्थं स्थापयितुं समर्थः .ಎಂದು ಕೊಂಡಾಡಿದ್ದಾರೆ  ಆದರೆ  ದೇಶಿಕರು ಅಂದಿನ ದಿನದಲ್ಲಿ ಎಲ್ಲ ವಿಜ್ಞಾನ ಮತ್ತು ತಂತ್ರ ಜ್ಞಾನವಲ್ಲದೆ ಸಕಲ  ಕಲೆಗಳನ್ನೂ ಕರಗತ ಮಾಡಿಕೊಂಡಿದ್ದರು. ಅವರಿಗೆ ಶಿಲ್ಪ ಶಾಸ್ತ್ರದ ಬಗ್ಗೆಯೂ ಅರಿವಿತ್ತು. ಅವರಿಗೆ ಒಬ್ಬ ಶಿಲ್ಪಿಯು ಸವಾಲೆಸಗಿದಾಗ ಅವರು ತಮ್ಮದೇ ಆದ ಲೋಹದ ಮೂರ್ತಿಯನ್ನು ತಯಾರಿಸಿದರೆಂದೂ, ಆದರೆ ತೃಪ್ತನಾಗದ ಶಿಲ್ಪಿಯು ದೋಷಹುಡುಕಲು ಯತ್ನಿಸಿದಾಗ, ಸವಾಲನ್ನು ಸ್ವೀಕರಿಸಿದ ದೇಶಿಕರು ಶಿಲ್ಪಿಯು ನಿರ್ಮಿಸಿದ್ದ ಪೀಠದಲ್ಲಿ ದೋಷ ತಿಳಿಸಿ ತಾವು ರಚಿಸಿದ ಮೂರ್ತಿಯನ್ನು ಪೀಠದಲ್ಲಿ ಅಡಕಗೊಳಿಸಿದರೆಂದೂ ತಿಳಿದುಬರುತ್ತದೆ .ಈ ಮೂರ್ತಿಯ ವಿಶೇಷ ವೆಂದರೆ ಮೂರ್ತಿ ಸಲಕ್ಷಣದಿಂದ ಕೂಡಿದ್ದು ಎರಡು ಕೈಗಳಲ್ಲೂ  ಉಂಗುರದ ಬೆರಳುಗಳಲ್ಲಿ ಪವಿತ್ರ, ಶಿಖೆಯನ್ನು ಗಂಟುಹಾಕಿರುವ ವಿವಿಧತೆ ,ಎಡಗೈಯಲ್ಲಿ ದೇಶಿಕರ ಮೆಚ್ಚಿನ ಕೃತಿ  ಶ್ರೀಭಾಷ್ಯ ಪುಸ್ತಕ ಇತ್ಯಾದಿಗಳು ಅಂದಿನ ದಿನಗಳಲ್ಲಿ ಇದ್ದ ಸಾಂಪ್ರದಾಯಿಕ ರೀತಿಗಳನ್ನು ತಿಳಿಸುತ್ತದೆ. ಈ ವಿಗ್ರಹವನ್ನು ಇಂದಿಗೂ ತಿರುವಹೀಂದ್ರಪುರದ ದೇವಾಲಯದಲ್ಲಿ ಕಾಣಬಹುದು .ಹಾಗೆಯೇ ಕೆಲವು ಗಾರೆ ಕೆಲಸದವರು ಭಾವಿಯೊಂದನ್ನು ನಿರ್ಮಿಸಲು ಸವಾಲು ಒಡ್ಡಿದಾಗ ದೇಶಿಕರು ಷಟ್ಕೋಣ ವುಳ್ಳ ಭಾವಿ ನಿರ್ಮಿಸಿದರೆಂದೂ, ಇಂದಿಗೂ ತಿರುವಹೀಂದ್ರಪುರದಲ್ಲಿ ಈ ಭಾವಿಯನ್ನು ಕಾಣಬಹುದಾಗಿದೆ .   ಅವರದೇ ಕೃತಿಯಾದ ಭೂಗೋಳ ನಿರ್ಣಯ ಗ್ರಂಥ ನ್ಯೂಟನ್ನಸಾಪೇಕ್ಷ  ಚಲನಾ ನಿಯಮಕುರಿತಾಗಿ ೧೩ ನೇ ಶತಮಾನದಲ್ಲಿಯೇ ದೇಶಿಕರು ಅರಿತಿದ್ದರು ಎಂಬುದಕ್ಕೆ ಸಾಕ್ಷಿ ಅವರ ಕೃತಿಯಾದ ಯಾದವಾಭ್ಯುದಯದ ೧೮ ನೇ ಸರ್ಗದ ೧೮ ನೇ ಶ್ಲೋಕದಲ್ಲಿ ಇದರ ಬಗ್ಗೆ ವಿವರಿಸಿದ್ದಾರೆ.   ಇದೆ ಕೃತಿಯಲ್ಲಿ  ರೇಡಿಯೋ ತರಂಗಾಂತರ ಗುರುತಿಸುವಿಕೆ ಬಗ್ಗೆ ತಿಳಿಸಿದ್ದಾರೆ .ಇದನ್ನು ಇಂದಿನ ವಿಜ್ಞಾನಿಗಳು RFID (radio frequency identification )  ತಂತ್ರ  ಎಂದು ಬಣ್ಣಿಸುತ್ತಾರೆ. ಉದಾಹರಣೆಗೆ ಯಾದವಾಭ್ಯುದಯದ ೧೧ನೇ ಸರ್ಗ ೩೩ ನೇ ಶ್ಲೋಕದಲ್ಲಿ ಹೀಗೆ ವರ್ಣಿಸಿದ್ದಾರೆ .
गतागतार्थं हरिवाहिनीनां सेतुञ्च योगेन बबन्ध सिन्धो चकार दिक्कालविमूदतां यः प्रत्यर्थिनां चक्रधर प्रभावात्
ಚಕ್ರಧರ ಎಂದರೆ ಗುರುತುಹೊಂದಿರುವವನು  ಎಂದು . ಚಕ್ರಧರ ಎಂದರೆ ವಿಷ್ಣು ಎಂತಲೂ ಇನ್ನೊಂದರ್ಥ ಚಕ್ರ ಚಿನ್ಹೆ ಹೊಂದಿರುವವನು ಎಂದೂ ಆಗುತ್ತದೆ  ಇದನ್ನೇ ಸ್ವಯಂ ಚಾಲಿತ ನಿಯಂತ್ರಣ ಅಂದರೆ remote access control ಎಂದು ಇಂದಿನ ತಂತ್ರಜ್ಞರು ಕರೆಯುತ್ತಾರೆ . ದೇಶಿಕರು ಹೀಗೆ ಅರಿತೋ ಅರಿಯದೆಯೋ ತಮ್ಮ ಗ್ರಂಥಗಳಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ವಾದ .
ದೇಶಿಕರು ಸವಿಸ್ತಾರವಾಗಿ ತಮ್ಮ ಕೃತಿಗಳಲ್ಲಿ ಇಂದ್ರಿಯ ಗ್ರಹಿಕೆ ಅಥವಾ ಭ್ರಮ ಗ್ರಹಿಕೆ ಯ ಬಗ್ಗೆ ತಿಳಿಸಿದ್ದಾರೆ . ಇದನ್ನು ಇಂದಿನ ವಿಜ್ಞಾನಿಗಳು sense perception  ಎಂದು ಕರೆಯುತ್ತಾರೆ . ದೇಶಿಕರು  ಶತ  ಶತಮಾನಗಳ ಹಿಂದೆಯೇ ಇದನ್ನು ಅರಿತಿದ್ದರು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ . ಭ್ರಮೆ ಗ್ರಹಿಕೆ, ಅದರ ಗ್ರಹಣ  ಮತ್ತು ನಿರಸನದ ಬಗ್ಗೆ ತಮ್ಮ ಕೃತಿಗಳಲ್ಲಿ ಅಂದಿನ ದಿನದಲ್ಲಿಯೇ ವಿವರಣೆ ನೀಡಿದ್ದಾರೆ ಎಂದರೆ ಅವರ ಜ್ಞಾನ ಎಷ್ಟರ ಮಟ್ಟಿಗೆ ಇತ್ತೆಂಬುದು ಅರಿವಾಗುತ್ತದೆ . ಇಂದಿನ ದಿನಗಳಲ್ಲಿ ಭ್ರಮೆ ಭೂತಾಕಾರವಾಗಿ ಬೆಳೆಯುತ್ತಿದ್ದು ಪರಿಣಾಮವಾಗಿ ಬುದ್ಧಿ ಭ್ರಂಶರಾಗಿ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚಾಗಿ ಕಾಣ  ಸಿಗುತ್ತವೆ . ದೇಶಿಕರು ಇದನ್ನು ಸವಿಸ್ತಾರವಾಗಿ ವಿವರಿಸಿ ಅದರ ನಿರಸನಕ್ಕೆ ಉಪಾಯಗಳನ್ನು ಸೂಚಿಸಿದ್ದಾರೆ ಎಂದರೆ ದೇಶಿಕರ ವೈಜ್ಞಾನಿಕ ದೃಷ್ಟಿ ಎಷ್ಟಿತ್ತೆಂಬುದಕ್ಕೆ ಸಾಕ್ಷಿಗಳಾಗಿವೆ . ದೇಶಿಕರು ತಮ್ಮ ತತ್ವ ಠೀಕಾದಲ್ಲಿ ಲಾಕ್ಷಣಿಕ ಪ್ರವಚನ ವಿಶ್ಲೇಷಣೆಯ (semantic discourse analysis )ಬಗ್ಗೆ ಬೆಳಕು ಚೆಲ್ಲಿದ್ದಾರೆ .
ದೇಶಿಕರ ಮತ್ತೊಂದು ಮಹಾಕಾವ್ಯ ಪಾದುಕಾ ಸಹಸ್ರ . ಒಂದೇ ರಾತ್ರಿಯಲ್ಲಿ ಸಾವಿರ ಶ್ಲೋಕಗಳನ್ನು ರಚಿಸಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಮೆರೆದಿದ್ದಾರೆ . ಈ ಗ್ರಂಥವನ್ನು ವಿಶ್ಲೇಷಿಸಿದ ಆಧುನಿಕ ವಿಜ್ಞಾನಿಗಳು ಇದೊಂದು ಕಠಿಣ  ಗಣಿತ ಸಮಸ್ಯೆಗಳನ್ನು ಪರಿಹರಿಸಬಲ್ಲ ಮಹಾನ್ ಗ್ರಂಥ ಎಂದು ವಿವರಿಸಿದ್ದಾರೆ . ೮ x ೮ ವಿಸ್ತಾರವುಳ್ಳ ೬೪ಕೋಶಗಳುಳ್ಳ ಚೆಸ್ ಹಲಗೆಯಲ್ಲಿ ನೈಟ್ಸ್ ಪ್ರವಾಸ ಎಂಬುದು ಬಹಳ ಕ್ಲಿಷ್ಟವಾದ ಸರಿಕೆ (move ).. ಇದರ ಪ್ರಕಾರ ಹಲಗೆಯ ಮೇಲೆ ಸೈನಿಕನ ಚಲನೆಯು ಅತಿ ಮುಖ್ಯ. ಇದರಂತೆ ಸರಿಕೆಯಲ್ಲಿ ಪ್ರತಿಯೊಂದೂ ಕೋಶಗಳೂ ಒಮ್ಮೆ ಸೈನಿಕನಿಂದ ತಲಪಲ್ಪಡುತ್ತವೆ . ಕೊನೆಯ ಕೋಶ ದಿಂದ ಮೊದಲ ಕೋಶ ವನ್ನು ನೈಟ್ಸ್ ಪ್ರವಾಸದಲ್ಲಿ ತಲಪಲು ಸಾಧ್ಯವಾದರೆ ಆಟ  ಮುಗಿದಂತೆ . ಇಲ್ಲದಿದ್ದರೆ ಅದು ಅಪೂರ್ಣ ಎಂದೇ . ಈ ಸಮಸ್ಯೆಗೆ ಸುಮಾರು ೩೦೦ ವರ್ಷಗಳ ಹಿಂದೆ ಪರಿಹಾರ ಕಂಡು ಹಿಡಿಯಲಾಗಿತ್ತು . ಆದರೆ ಸ್ವಾಮಿ ದೇಶಿಕರು ೧೩ ನೇ ಶತಮಾನದಲ್ಲಿಯೇ ತಮ್ಮ ಪಾದುಕಾಸಹಸ್ರದ ೯೨೯ ಮತ್ತು ೯೩೦ ನೇ ಶ್ಲೋಕಗಳಲ್ಲಿ ಪದ್ಯ ರೂಪದಲ್ಲಿ ಈ ನೈಟ್ಸ್ ಪ್ರವಾಸಕ್ಕೆ ಪರಿಹಾರ ಸೂಚಿಸಿದ್ದಾರೆ ಎಂಬುದು ಪರಿಶೋಧದಿಂದ ತಿಳಿಯುತ್ತದೆ .ಇದನ್ನು ಚದುರಂಗ ತುರಂಗ ಬಂದಂ ಎಂದು ವರ್ಣಿಸಲಾಗಿದೆ
ಭೂಗೋಳ ನಿರ್ಣಯದ ೯ ಸೂತ್ರಗಳಲ್ಲಿ ಗ್ಲೋಬ್ , ಬ್ರಹ್ಮಾಂಡ , ಅಖಿಲ ಬ್ರಹ್ಮಾಂಡ ಗಳ  ಬಗ್ಗೆ ವಿವರಣೆ ನೀಡುವ ಮೂಲಕ ದೇಶಿಕರು  ತಮ್ಮ ಭೌಗೋಲಿಕ ವಿಜ್ಞಾನದ ಬಗ್ಗೆ ಇರುವ ಜ್ಞಾನವನ್ನು ತಿಳಿಯಪಡಿಸಿದ್ದಾರೆ .ದೇಶಿಕರು ಮುಟ್ಟದ ವಿಷಯವಿಲ್ಲ . ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ೭೦೦ ವರ್ಷಗಳೇ ಬೇಕಾಯಿತು . ಈಗ ೧೦ ವರ್ಷದಿಂದ ಪರಿಶೋಧನೆ ಆರಂಭಗೊಂಡಿದೆ .ಕೆಲವು ವಿಜ್ಞಾನಿಗಳು ದೇಶಿಕರ ಗ್ರಂಥಗಳನ್ನುಈ ದೃಷ್ಟಿಯಲ್ಲಿ  ಅಧ್ಯಯಿಸಲು ಆರಂಭಿಸಿದ್ದಾರೆ
ದೇಶಿಕರು ತಮ್ಮ ಪಾದುಕಾಸಹಸ್ರದಲ್ಲಿ ಗೂಢಲಿಪೀಕರಣ (encryption )ಮತ್ತು ಅಸಂಕೇತೀಕರಣ (decryption ) ಬಗ್ಗೆಯೂ ವಿವರಿಸಿದ್ದಾರೆ. ಇದು ಇಂದಿನ ಗಣಕ ಯಂತ್ರ ಕಾರ್ಯಕ್ರಮದಲ್ಲಿ ಬಹಳ ಉಪಯುಕ್ತವಾಗಿದೆ . ದೇಶಿಕರು ಒಳ್ಳೆಯ ಪಾಕ ಪ್ರವೀಣರೂ ಆಗಿದ್ದರು. ಅವರು ರಚಿಸಿರುವ ಆಹಾರ ನಿಯಮ ಎಂಬ ಗ್ರಂಥ ಉತ್ತಮವಾದ ಮತ್ತು ಆರೋಗ್ಯಕರವಾದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ವಿವರಿಸುತ್ತದೆ.ವೈದ್ಯರಾಗಿ ಹೇಗೆ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ವಿಸ್ತಾರವಾಗಿ ತಿಳಿಸಿದ್ದಾರೆ.
ದೇಶಿಕರ ಬಗ್ಗೆ ಅವರ ಕೃತಿಗಳ ಬಗ್ಗೆ ಹೇಳಲು ಒಂದೆರಡು ಪುಟಗಳು ಸಾಲದು . ನುಡಿದಷ್ಟೂ ಮುಗಿಯದಂತಹುದು. ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ .ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು.

ಕೆ.ವಿ. ಶ್ರೀನಿವಾಸ ಪ್ರಸಾದ್